ಚಳಿಗಾಲ ಬಂತು ಅಂದ್ರೆ ತಲೆಕೂದಲಿಗೂ ನೋವು! ಈ ವೇಳೆ ಉದುರುವಿಕೆ ಹಾಗೂ ಹೊಟ್ಟಿನ ಸಮಸ್ಯೆ ಹೆಚ್ಚಾಗುತ್ತೆ. ಮೇಲ್ನೋಟಕ್ಕೆ ಇದು ಸಾಮಾನ್ಯ ಸಮಸ್ಯೆಯಾಗಿ ಕಂಡರೂ ಒಣಗಿದ ಹಾಗೂ ತುರಿಕೆಯ ಸಮಸ್ಯೆ ಎದುರಿಸುತ್ತಿರುವರಿಗೆ ತಲೆ ಕೆಡಿಸಿಕೊಳ್ಳುವಂತೆ ಮಾಡಿಬಿಡುತ್ತದೆ. ಚರ್ಮ ಒಣಗುವುದಕ್ಕೆ ವಾತಾವರಣ ತಣ್ಣಗಾಗುವುದು ಹಾಗೂ ತೇವಾಂಶದಲ್ಲಿನ ವ್ಯತ್ಯಾಸ ಕಾರಣ. ಹೀಗಾಗಿ, ಚಳಿಗಾಲದಲ್ಲಿ ಚರ್ಮದ ಮೇಲೆ ಬಿಳಿ ಹೊಟ್ಟು ಕಾಣಿಸುತ್ತದೆ. ಕೂದಲಿನ ಬುಡ ದುರ್ಬಲಗೊಳ್ಳುತ್ತದೆ.
ಹೊಟ್ಟಿಗೇನು ಮದ್ದು?
ಮೊದಲು ತಲೆಯ ಶುಚಿತ್ವ ಕಾಪಾಡುವುದು ಮೊದಲ ಕೆಲಸ.ಆ್ಯಂಟಿ ಡ್ಯಾಂಡ್ರಫ್ ಶಾಂಪೂಗಳ ಬಳಕೆಯಿಂದ ಕೇವಲ ಸಣ್ಣ ಪ್ರಮಾಣದಲ್ಲಿ ಮಾತ್ರವೇ ಹೊಟ್ಟಿನ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ. ಗಮನಾರ್ಹ ವಿಚಾರವೆಂದರೆ, ಬೇಸಿಗೆಗಾಲದಲ್ಲಿ ಬಳಕೆ ಮಾಡುವಂಥ ಬಹುತೇಕ ಶಾಂಪೂಗಳು ಚಳಿಗಾಲದಲ್ಲಿ ಬಳಕೆಗೆ ಸೂಕ್ತವಲ್ಲ. ಚಳಿಗಾಲದಲ್ಲಿ ಕಡಿಮೆ ಸಾಂದ್ರತೆ ಇರುವ ಹಾಗೂ ತೇವಾಂಶ ಒದಗಿಸಬಲ್ಲ ಶಾಂಪೂ ಬಳಕೆ ಮಾಡಬೇಕಾಗುತ್ತದೆ. ತೈಲ ಹಾಗೂ ಮೊಟ್ಟೆಯ ಬಿಳಿಭಾಗ ಕೂಡಾ ಚಳಿಗಾಲದಲ್ಲಿ ಕೂದಲಿನ ಆರೈಕೆಗೆ ನೆರವಾಗುತ್ತದೆ. ಮದರಂಗಿ ಹಾಗೂ ಬಿಸಿನೀರಿನ ಬಳಕೆಯಿಂದ ದೂರವಿರಿ.
ಕಾರಣಗಳು ಅನೇಕ
ತಲೆಹೊಟ್ಟು ಅನೇಕ ರೀತಿಯಲ್ಲಿ ಕಾಡುತ್ತದೆ. ಅದರ ಮೇಲೊಂದು ನೋಟ...
ಸೆರ್ಬೊಹೆಕ್ ಡರ್ಮಟೈತಿಸ್
ಇದು ಕೇವಲ ತಲೆಯ ಭಾಗವನ್ನಷ್ಟೇ ಅಲ್ಲ, ಕಣ್ಣಿನ ಹುಬ್ಬು, ಮೂಗಿನ ಬದಿಭಾಗಗಳಲ್ಲಿ ಕಿವಿಯ ಹಿಂಭಾಗದಲ್ಲಿ, ತೊಡೆಯ ಸಂಧುಗಳಲ್ಲಿ ಹಾಗೂ ಕಂಕುಳಿನಲ್ಲೂ ಕಾಣಿಸಿಕೊಳ್ಳುತ್ತದೆ.
ಸೋರಿಯಾಸಿಸ್
ಈ ಚರ್ಮದ ಸಮಸ್ಯೆಯು ಡೆಡ್‌ಸ್ಕಿನ್ ಸೆಲ್‌ನಿಂದಾಗಿ ಕಾಣಿಸಿಕೊಳ್ಳುತ್ತದೆ. ತಲೆ ಭಾಗದಲ್ಲಿನ ಸೊರಿಯಾಸಿಸ್ ಕೆಂಪು ಬಣ್ಣಕ್ಕೆ ತಿರುಗಿ ಹಣೆ ಹಾಗೂ ಕುತ್ತಿಗೆ ಮತ್ತು ಬೆನ್ನಿನ ಭಾಗದವರೆಗೂ ಹರಡುತ್ತದೆ.
ಫಂಗಲ್ ಇನ್ಫೆಕ್ಷನ್
ಮಲಸೇಝಿಯಾ ಎಂಬ ಫಂಗಸ್ ವಯಸ್ಕರರ ತಲೆಯ ಎಣ್ಣೆಯ ಅಂಶವನ್ನು ಬಳಸಿಕೊಂಡು ಬೆಳೆಯುತ್ತದೆ. ಇದು ಅಷ್ಟೇನೂ ಹಾನಿಕಾರ ಅನಿಸದೇ ಇದ್ದರೂ ಫಂಗಸ್ ಹೆಚ್ಚಾದಂತೆ ತುರಿಕೆ ಹೆಚ್ಚಾಗಿ, ಹೊಟ್ಟು ವೃದ್ಧಿಸುವಂತೆ ಮಾಡುತ್ತದೆ.
ಎಕ್ಜೇಮಾ
ಈ ಗುಣಲಕ್ಷಣ ಕಾಣಿಸಿಕೊಂಡಲ್ಲಿ ತಲೆಯ ಭಾಗದ ಚರ್ಮ ಬಹುಬೇಗನೆ ತೇವಾಂಶ ಕಳೆದುಕೊಂಡು ಕೆಂಬಣ್ಣಕ್ಕೆ ತಿರುಗುತ್ತದೆ. ಮುಖ, ಕಿವಿ, ಎದೆ ಹಾಗೂ ಇತರ ಭಾಗಗಳಲ್ಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ತಲೆ ಹೊಟ್ಟು ಹಾಗೂ ತುರಿಕೆ ಹೆಚ್ಚಾದಲ್ಲಿ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ.
- ಡಾ. ಶಾಹಿದ್ ಶಂಶೀರ್ (080-23568290)