ಬಟ್ಟೆಯಲ್ಲಡಗಿದೆ ಸೌಂದರ್ಯ
ತುಂಬಾ ದಪ್ಪಗಿದ್ದೀರಾ? ನೋಡಲು ತೆಳ್ಳಗೆ ಕಾಣಬೇಕೆಂಬ ಆಸೆಯೇ? ಇದು ಯಾವ ಪುಡಿಯ ಅಡ್ವರ್ಟೈಸ್‌ಮೆಂಟ್ ಅಂದ್ಕೋಬೇಡಿ. ಹಾಕುವ ಬಟ್ಟೆಗಳಲ್ಲೇ ಸಾಧ್ಯವಾದಷ್ಟು ತೆಳ್ಳಗೆ ಕಾಣುವುದು ಹೇಗೆ? ಇಲ್ಲಿವೆ ಕೆಲ ಸಲಹೆ-
ಪ್ಯಾಂಟ್‌ಗಳನ್ನು ಹಾಕುವಾಗ ನಿಮ್ಮ ಅಳತೆಗಿಂತ ಸ್ವಲ್ಪ ಉದ್ದವೇ ಇರುವ ಪ್ಯಾಂಟ್ ಆಯ್ಕೆ ಮಾಡಿಕೊಳ್ಳಿ. ನಮಗಿಂತಾ ಪ್ಯಾಂಟ್‌ಗಳು ಗಿಡ್ಡವಿದ್ದರೆ ಕಾಲುಗಳು ಗಿಡ್ಡ ಕಾಣಿಸುತ್ತವೆ. ಕಾಲುಗಳು ಉದ್ದ ಕಂಡರೆ ನಾವೂ ಉದ್ದ ಕಾಣುತ್ತೇವೆ.
ದೇಹಕ್ಕೆ ಹೊಂದುವಂಥ ಸರಿಯಾದ ಫಿಟಿಂಗ್‌ನ ಪ್ಯಾಂಟ್ ಧರಿಸಿ. ತುಂಬಾ ಟೈಟ್ ಅಲ್ಲದಿದ್ದರೂ ದೊಗಳೆ ಪ್ಯಾಂಟ್ ಬೇಡ. ಇದು ದೇಹಕ್ಕೆ ಫೆಮಿನೈನ್ ಲುಕ್ ಕೊಡುತ್ತದೆ.
ಬೂಟ್ ಕಟ್ ಇಲ್ಲವೇ ಬುಡದಲ್ಲಿ ಅಗಲವಾಗಿರುವಂಥ ಪ್ಯಾಂಟ್ ಧರಿಸಿ. ದಪ್ಪಗಿರುವವರಿಗೆ ಮೂಲಂಗಿ ಕಟ್ ಪ್ಯಾಂಟ್ ಬೇಡವೇ ಬೇಡ. ಇದರಿಂದ ಕಾಲಿನ ಬುಡ ತೆಳ್ಳಗೆ ಕಂಡು, ಸೊಂಟದ ಭಾಗ ಅಗಲವಾಗಿ ಕಾಣುತ್ತದೆ. ಹಾಗಾಗಿ ತೊಡೆ ದಪ್ಪ ಎನಿಸಿ ದಪ್ಪ ಕಾಣುವಿರಿ.
ಹೊಸ ಸ್ಟೈಲ್ ಟ್ರೈ ಮಾಡುವ ಆಸೆಯಾದರೆ ಗೆಜ್ಜೆ ಕಟ್ಟುವ ಕಾಲಿನ ಭಾಗಕ್ಕಿಂತಾ 6 ಇಂಚು ಮೇಲೆ, ಗಂಟಿನ ಕೆಳಗಿನ ಅಗಲ ಭಾಗಕ್ಕಿಂತಾ ಕೆಳಗೆ ಇರುವಂಥ ಸ್ಕರ್ಟ್ ಇಲ್ಲವೇ ಪ್ಯಾಂಟ್ ಧರಿಸಿ.
ಸ್ಕರ್ಟ್ ಧರಿಸುವಾಗಲೂ ಅತಿ ಟೈಟಾದವು ಬೇಡ. ಬೊಜ್ಜನ್ನು ತೋರಿಸದ ಆದರೆ ಹೆಚ್ಚು ಸಡಿಲವಲ್ಲದ ಸ್ಕರ್ಟ್ ಧರಿಸಿ. ಸೊಂಟದ ಬೊಜ್ಜನ್ನು ಮರೆ ಮಾಚಲು ಲೋ ವೆಸ್ಟ್ ಸ್ಕರ್ಟ್‌ಗಳು ಉತ್ತಮ.
ಸಲ್ವಾರ್ ಹೊಲಿಸುವಾಗಲೂ ಅಷ್ಟೆ. ಮೈಗಂಟುವ ಬಟ್ಟೆಗಳು ಅನಗತ್ಯ ಬೊಜ್ಜನ್ನು ರಾಚುವಂತೆ ಮಾಡಿದರೆ, ಅಗಲವಾದ ಬಟ್ಟೆ ಏನನ್ನೋ ಮರೆ ಮಾಚಲು ಯತ್ನಿಸುತ್ತಿದ್ದೀರೆಂದು ಸಾರುತ್ತವೆ. ಜತೆಗೆ ಅಗಲ ಬಟ್ಟೆ ಮತ್ತಷ್ಟು ಕುಳ್ಲಿಗೆ ಕಾಣುವಂತೆ ಮಾಡುತ್ತವೆ. ಹೀಗಾಗಿ ಫಿಟ್ ಎನಿಸಬೇಕು ಆದರೆ, ಟೈಟ್ ಆಗಿರಬಾರದು. ಅಂಥ ಅಳತೆ ಕೊಡಿ.