ಬೆಳಕು ಮನೆಗೆ ಅತಿಮುಖ್ಯ. ಅಂಧಕಾರವನ್ನು ಹೊಡೆದೊಸಿ, ಮನೆಯ ಅಂದವನ್ನು ತೆರೆದಿಡುತ್ತದೆ. ಸೂರಿನ ಬಾಹ್ಯ ಮತ್ತು ಆಂತರಿಕ ಸೌಂದರ್ಯ ವರ್ಧನೆಗೆ ಬೆಳಕು ಮಾಧ್ಯಮ. ಹಾಗೆಯೇ, ಬೆಳಕಿಲ್ಲದಿದ್ದರೆ ಮನೆಯ ಹೊರಗೂ ಸ್ಮಶಾನವಾಗಿ ಕಾಣಬಹುದು.
ಮನೆಯ ಹೊರಗಿನ ಬೆಳಕು, ಬಾಹ್ಯ ಸೌಂದರ್ಯದ ಪ್ರತಿನಿಧಿ. ಉದ್ಯಾನವಿದ್ದರಂತೂ ಆ ಮನೆಯ ಹೊರಭಾಗದ ಸೊಬಗು ಹೇಳತೀರದು. ಇಂಥ ನೈಸರ್ಗಿಕ ಗೆಟಪ್ಪಿನ ಮಧ್ಯೆ ಲೈಟಿಂಗ್ ವ್ಯವಸ್ಥೆಯೂ ಇದ್ದರೆ ಅದನ್ನು 'ಇಂದ್ರನವನ ಅಲ್ಲ' ಎನ್ನಲಾದೀತೆ?
ವಾಲ್ ಲೈಟಿಂಗ್
ಈ ಬಗೆಯ ಲೈಟಿಂಗ್‌ಗಳನ್ನು ಮನೆಯ ಹೊರಗಿನ ಭಾಗದ ಗೋಡೆಗೆ ಅಂಟಿಸಬೇಕು ಅಥವಾ ಗೋಡೆಗೆ ಫಿಕ್ಸ್ ಮಾಡಬೇಕು. ಟೀ, ಕಿತ್ತಳೆ, ದೇಗುಲದ ಗೋಪುರ, ವೃತ್ತಾಕಾರ ಸೇರಿದಂತೆ ನಾನಾ ಬಗೆಯ ವೆರೈಟಿ ಇದರಲ್ಲಿ ಲಭ್ಯ. ಮಳೆಗಾಲ, ಬೇಸಿಗೆಯಲ್ಲಿ ಹೆಚ್ಚು ಬಾಳಿಕೆ ಬರುವಂತೆ ಲೈಟಿಂಗ್ ಅಳವಡಿಸಿದರೆ ಸೂಕ್ತ.
ಹ್ಯಾಂಗಿಂಗ್ ಲೈಟ್
ನೇತಾಡುವ ಲೈಟ್ ವ್ಯವಸ್ಥೆಯ ಮುಖ್ಯ ಲಾಭವೆಂದರೆ ಸುತ್ತಲೂ ಇದು ಬೆಳಕು ಸೂಸುತ್ತದೆ. ಆದರೆ, ಮನೆ ರೂಪಿಸುವಾಗಲೇ ಈ ಯೋಜನೆ ನಿಮ್ಮಲ್ಲಿದ್ದರೆ ಚೆನ್ನ. ಮನೆಯ ಹೊರಗಡೆ ನಡೆದಾಡುವಾಗ ಅದು ತಲೆಗೆ ತಾಗದಂತೆ ಸ್ವಲ್ಪ ಎತ್ತರದಲ್ಲಿದ್ದರೆ ಚೆನ್ನ. ಸ್ಟೀಲ್, ಗ್ಲಾಸ್, ಪಿಂಗಾಣಿ ಸೇರಿದಂತೆ ನಾನಾ ಬಗೆಯ ಲೈಟ್‌ಗಳು ಸಿಗುತ್ತವೆ. ನಿಮ್ಮ ಮನೆಗೆ ಯಾವುದು ಸೂಕ್ತ ಅದನ್ನು ಅಳವಡಿಸಿ.
ಲ್ಯಾಂಪ್ ಪೋಸ್ಟ್
ಇದು ಹೆಚ್ಚು ಸ್ಟೈಲಿಷ್. ಮನೆಯ ಕಾಂಪೌಂಡ್‌ಗೆ ಹೇಳಿಮಾಡಿಸಿದ್ದು. ಉದ್ಯಾನಕ್ಕೂ ಇದೇ ರೀತಿಯ ಲ್ಯಾಂಪ್ ಪೋಸ್ಟ್ ಲೈಟ್ ಬಳಸುವುದುಂಟು. ಈ ಬಗೆಯ ಲೈಟ್‌ಗಳನ್ನು ಗೋಡೆಗೆ ಫಿಕ್ಸ್ ಮಾಡಲಾಗದು. ಬದಲಾಗಿ ಕಾಂಪೌಂಡ್ ಮೇಲ್ಭಾಗದಲ್ಲಿ ಮಾತ್ರ ಫಿಕ್ಸ್ ಮಾಡಬಹುದು.
ಲ್ಯಾಂಡ್‌ಸ್ಕೇಪ್ ಲೈಟಿಂಗ್
ಇದು ಸ್ವಲ್ಪ ದುಬಾರಿ. ಅಲ್ಲದೆ, ಇದು ಹೆಚ್ಚು ಬಳಕೆಯಾಗುವುದು ವಿಶೇಷ ಸಂದರ್ಭಗಳಲ್ಲಷ್ಟೇ. ಹೆಚ್ಚೂಕಡಿಮೆ ಟೇಬಲ್ ಫ್ಯಾನ್‌ನಂತೆ. ಅಂದರೆ ಎತ್ತರವಾಗಿರುತ್ತದೆ. ಎಲ್ಲಿ ಬೇಕಾದರೂ ಇಡಬಹುದು.