ಮಹಿಳೆ-ಮನೆ-ಬದುಕು

ಕ್ಲೀನ್ ಕಿಚನ್

ಸ್ಟವ್ ಮೇಲೆ ಎಣ್ಣೆ ಜಿಡ್ಡು. ಕಟ್ಟೆ ತುಂಬಾ ನೀರೇ ನೀರು. ಸಿಂಕ್ ಭರ್ತಿ ಪಾತ್ರೆಗಳು. ಗೋಡೆಯೆಲ್ಲಾ ಕಪ್ಪು ಕಪ್ಪು... ಅಡುಗೆಮನೆಯೆಂಬುದು ಗೃಹಿಣಿ ಮನಸ್ಸಿನ ಕನ್ನಡಿ. ಆಕೆ ಖುಷಿಯಾಗಿದ್ದಾಳೆಂದರೆ ಅಡುಗೆ ಮನೆಯೂ ಫಳ ಫಳ. ಹಾಗಂತ ಮನೆಯ ಮುಖ್ಯ ಭಾಗವಾದ ಅಡುಗೆ ಮನೆಯನ್ನು ಸ್ವಚ್ಛವಾಗಿಡೋದು ಅಷ್ಟೇನೂ ಸಮಯ ತೆಗೆದುಕೊಳ್ಳೋದಿಲ್ಲ.
ಸ್ವಚ್ಛವಾಗಿಸುವಾಗ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಒಳಿತು. ಇದಕ್ಕೆ ಕೆಲವು ಸಲಹೆಗಳಿವೆ...

  • ಅಡುಗೆಯಾದ ಮೇಲೆ ಒದ್ದೆ ಬಟ್ಟೆಯಲ್ಲಿ ಸ್ಟೌವ್ ಒರೆಸಿಡಿ. ನಂತರ ಒಣಗಿದ ಬಟ್ಟೆಯಿಂದ ಸ್ವಚ್ಛಗೊಳಿಸಿ. ಅಡುಗೆಯಾದ ತಕ್ಷಣ ಒರೆಸಿಬಿಟ್ಟರೆ ಅದು ಅಂಟುವುದಿಲ್ಲ. ಆ ಬಟ್ಟೆಯನ್ನು ಹಾಗೆಯೇ ಇಡಬೇಡಿ. ಅದನ್ನೂ ತಕ್ಷಣವೇ ತೊಳೆದು ಒಣ ಹಾಕಿ. ಇಲ್ಲದಿದ್ದಲ್ಲಿ ಅದೇ ಅಡುಗೆಮನೆಯ ಅಂದ ಕೆಡಿಸುತ್ತದೆ.
  • ಸ್ಟವ್ ಅಡಿ ಭಾಗ ಆಗಾಗ ಒರೆಸುತ್ತಿರಿ. ಇಲ್ಲವಾದಲ್ಲಿ ಅಲ್ಲಿ ತುಕ್ಕು ಹಿಡಿಯುತ್ತದೆ.
  • ಹಾಲು ಉಕ್ಕಿದಾಗ ಸಾಮಾನ್ಯವಾಗಿ ಕೆನೆ ಅಲ್ಲಿಯೇ ಉಳಿದು, ಪುನಃ ಸ್ಟವ್ ಹಚ್ಚಿದಾಗ ಕರಿಯಾಗುತ್ತದೆ. ಹಾಲು ಉಕ್ಕದಂತೆ ಹೆಚ್ಚು ಗಮನಹರಿಸಿ. ಮೊದಲು ದೊಡ್ಡ ಉರಿಯಲ್ಲಿ ಹಾಲು ಕಾಯಿಸಿ, ನಂತರ ಉರಿಯನ್ನು ಸಣ್ಣ ಮಾಡಿ. ಅಕಸ್ಮಾತ್ ಹಾಲು ಉಕ್ಕಿತೋ, ಸ್ಟವ್ ಅನ್ನು ತಕ್ಷಣ ಒರೆಸಿಬಿಡಿ.
  • ಹಾಲು ಅಥವಾ ಇತರೆ ಜಿಡ್ಡಿನ ಪದಾರ್ಥಗಳನ್ನು ಒರೆಸಲೆಂದೇ ಬೇರೆ ಬಟ್ಟೆ ಬಳಸಿ. ಇಲ್ಲವೇ ಮೊದಲು ಪೇಪರ್ ಅಥವಾ ಟಿಶ್ಯೂ ಪೇಪರ್‌ನಿಂದ ಜಿಡ್ಡು ತೆಗೆದುಕೊಳ್ಳಿ. ಆಗ ಬಟ್ಟೆ ಒಗೆಯುವುದೂ ಕಷ್ಟವಾಗದು.
  • ತರಕಾರಿ ಹೆಚ್ಚುವಾಗ ಸಿಪ್ಪೆ, ಕೊಳೆತ ಭಾಗವನ್ನು ಹಾಕಲು ಬೇರೆ ತಟ್ಟೆ ಅಥವಾ ಬಟ್ಟಲು ಇಟ್ಟುಕೊಳ್ಳಿ. ನೆಲದ ಮೇಲೆ ಸಿಪ್ಪೆ ಹಾಕಿದರೆ ಗಲೀಜಾಗುತ್ತದೆ. ಅದರಲ್ಲೂ ಬೆಂಡೆಕಾಯಿಯಂಥ ತರಕಾರಿಯ ಲೋಳೆ ಉಳಿದು ಜಾರಿ ಬೀಳುವ ಸಾಧ್ಯತೆಯೂ ಇದೆ. ಸಿಪ್ಪೆ ಹಾಗೂ ಬೇಡದ ತರಕಾರಿಯನ್ನು ಗಿಡದ ಬುಡಕ್ಕೆ ಹಾಕಿ.
  • ತಿಂಡಿ ಕರಿಯುವಾಗ, ತುಪ್ಪ ಇನ್ನಿತರೆ ಜಿಡ್ಡು ಪದಾರ್ಥಗಳಿಂದ ಸ್ವೀಟ್ ತಯಾರಿಸುವಾಗ ಸ್ಟವ್ ಸುತ್ತಲೂ ಪೇಪರ್ ಹಾಕಿಕೊಳ್ಳಿ. ಕೆಲಸ ಮುಗಿದ ಮೇಲೆ ಆ ಪೇಪರ್ ಅನ್ನು ಬಿಸಾಡಿದರೆ ಆಯಿತು. ಸ್ಟವ್ ಸುತ್ತ ಹಾರಿದ ಎಣ್ಣೆ ಅಂಶವನ್ನೂ ತಕ್ಷಣವೇ ಕ್ಲೀನ್ ಮಾಡಿಬಿಡಿ.
  • ಪದಾರ್ಥ ಮಾಡುವಾಗ ಸ್ಟವ್ ಅನ್ನು ಅದೇ ಪಾತ್ರೆಯ ಮೇಲಿಟ್ಟರೆ ಒಳಿತು. ಅಥವಾ ಬೇರೆ ತಟ್ಟೆ ಮೇಲಿಡಿ. ಸ್ಟವ್ ಮೇಲಿಟ್ಟರೆ ಕಲೆ ಕ್ಲೀನ್ ಮಾಡೋದು ಕಷ್ಟ. ಮಾಡುವಾಗಲೇ ಕೇರ್‌ಫುಲ್ ಆಗಿದ್ದರೆ, ಕೆಲಸ ಕಡಿಮೆ. ಸೌಟನ್ನು ತೊಳೆದಿಡಿ. ಇಲ್ಲದಿದ್ದರೆ ನುಸಿ, ನೊಣಗಳು ಹೆಚ್ಚುತ್ತವೆ.
  • ಆದಷ್ಟು ಊಟ ಮಾಡಿ ಕಡಿಮೆಯಾದ ಪದಾರ್ಥಗಳನ್ನು ಕುದಿಸಿ ಚಿಕ್ಕ ತಪಾಲೆಗೆ ಹಾಕಿದರೆ ಪಾತ್ರೆ ಶುಭ್ರವಾಗಿ ಕಾಣುತ್ತದೆ. ಕುದಿಯುವಾಗ ಗುಳ್ಳೆಗಳಿಂದಾಗಿ ಸ್ವಲ್ಪ ಬದಿಗೆ ಅಂಟಿಕೊಳ್ಳುತ್ತದೆ. ಅದನ್ನು ಒದ್ದೆ ಕೈಯಲ್ಲಿ ಸ್ವಚ್ಛಗೊಳಿಸಿ. ಮಜ್ಜಿಗೆ ಪಾತ್ರೆಯನ್ನೂ ತೆಗೆದಿಡುವಾಗ ಸುತ್ತಲೂ ಅಂಟಿಕೊಂಡಿರುವುದನ್ನು ಒಮ್ಮೆ ಒರೆಸಿಡಿ. ಮಜ್ಜಿಗೆ ಪಾತ್ರೆಯನ್ನು ಆಗಾಗ್ಗೆ ಚೆನ್ನಾಗಿ ತೊಳೆಯಿರಿ. ಇಲ್ಲದೆ ಹೋದಲ್ಲಿ ವಾಸನೆ ಬರುತ್ತದೆ.
  • ತಿಂಗಳಿಗೊಮ್ಮೆ ಅಡುಗೆಕೋಣೆಯ ನೆಲಗೋಡೆಯನ್ನು ಸೋಪಿನ ಪುಡಿ ಹಾಕಿ ತೊಳೆದು, ಒರೆಸಿ.
  • ಧಾನ್ಯ, ಇತರೆ ಸಾಮಾನುಗಳನ್ನು ಇಡುವ ಜಾಗಕ್ಕೆ ಪೇಪರ್ ಅನ್ನು ಹೊರಗೆ ಕಾಣದಂತೆ ಒಳಸಿದರೆ ಶುಭ್ರಗೊಳಿಸಲು ಸುಲಭ. ಅದನ್ನು ಎತ್ತಿ ಅಲ್ಲಿ ಒರೆಸಿದರಾಯಿತು. ತಿಕ್ಕಿ ತೊಳೆಯಬೇಕಿಲ್ಲ.
  • ಕಸವನ್ನು ಬುಟ್ಟಿಗೇ ಹಾಕಿ. ಪಾತ್ರೆ ನೆನೆಸಿಡಿ. ಶುಭ್ರಗೊಳಿಸಲು ಸುಲಭ. ಬೇಸಿನ್ ಕಟ್ಟಿಕೊಳ್ಳುವುದೂ ಇಲ್ಲ.
  • ರಾತ್ರಿ ಬೇಸಿನ್‌ಗೆ ಸ್ವಲ್ಪ ಸೋಪಿನ ಪುಡಿ, ಫಿನಾಯಿಲ್ ಹಾಕಿ ತಿಕ್ಕಿ ಬೆಳಗ್ಗೆ ತೊಳೆಯಿರಿ. ಕೊಳಕು ವಾಸನೆ ಹಾರಿ ಹೋಗುತ್ತದೆ.
  • ಕೈ ಜಿಡ್ಡು ಅಥವಾ ಒದ್ದೆಯಾಗಿರುವಾಗ ಫ್ರಿಡ್ಜ್, ಕಬೋರ್ಡ್ ಅಥವಾ ಒಗ್ಗರಣೆ ಡಬ್ಬಿ ಮುಟ್ಟಬೇಡಿ. ಇತರೆ ವಸ್ತುಗಳನ್ನು ಬಳಸುವಾಗ ಕೈ ಡ್ರೈ ಆಗಿರಲಿ.
  • ಧವಸ, ಧಾನ್ಯಗಳನ್ನು ತುಂಬಿಟ್ಟ ಡಬ್ಬಗಳ ಮುಚ್ಚುಳವನ್ನು ಆಗಾಗ ತೊಳೆಯುತ್ತಿರಿ. ಒಗ್ಗರಣೆ ಡಬ್ಬದ ಸ್ವಚ್ಛತೆ ಕಡೆಗೂ ಗಮನ ಹರಿಸಿ.
  • ತೊಳೆದ ಪಾತ್ರೆಗಳನ್ನು ಒರೆಸಿಡಿ. ನೀರಿದ್ದರೆ, ಕೆಳಗೆಲ್ಲ ಗಲೀಜಾಗುತ್ತದೆ.
  • ಎಣ್ಣೆ ಬಟ್ಟಲು ಹಾಗೂ ಡಬ್ಬಗಳನ್ನು ಆಗಾಗ ತೊಳೆಯುತ್ತಿರಿ. ಇಲ್ಲದಿದ್ದಲ್ಲಿ ಕರಿ ಕಟ್ಟುತ್ತದೆ.
  • ಮಿಕ್ಸಿ ಜಾರಿನ ಹಿಂದೆ ತೊಳೆದು ಬಿಸಿಲಲ್ಲಿ ಆರಲು ಇಡಿ. ಇಲ್ಲವಾದಲ್ಲಿ ಅಲ್ಲಿ ಗುಳ ಕಟ್ಟಿದಂತಾಗುತ್ತದೆ.
  • ಬಳಸಿದ ಪಾತ್ರೆಯನ್ನು ಯಾವುದೇ ಕಾರಣಕ್ಕೂ ಹಾಗೆಯೇ ಇಡಬೇಡಿ. ಒಮ್ಮೆ ತೊಳೆದು ಒರೆಸಿಡಿ. ಇಲ್ಲದೇ ಹೋದಲ್ಲಿ ಪಕ್ಕದ ಪಾತ್ರೆಗಳೂ ಕೊಳಕಾಗುವ ಸಾಧ್ಯತೆಗಳಿರುತ್ತವೆ.
  • ಚಾಕು, ಚಾಪರ್‌ಗಳನ್ನು, ಮೆಟ್ಟುಕತ್ತಿಯನ್ನು (ಈಳಿಗೆ ಮಣೆ) ಆಗಾಗ ತೊಳೆದು, ಒರೆಸಿಡಿ.
  • ಫ್ರಿಡ್ಜ್ ಅನ್ನು ಸದಾ ಸ್ವಚ್ಛಗೊಳಿಸುತ್ತಿರಿ. ಬೇಡದ ವಸ್ತುಗಳನ್ನು ಎಸೆಯಿರಿ.
- ಕೃಷ್ಣವೇಣಿ ಪ್ರಸಾದ್ ಮುಳಿಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ