ಅವಳ ಮುಖದಲ್ಲಾದ್ರೆ ಮೇಕಪ್ ನಿಲ್ಲುತ್ತದೆ. ನನ್ದು ಒಂದು ಗಂಟೆಯೊಳಗೇ ಹೋಗುತ್ತೆ ಅನ್ನೋದು ನಿಮ್ಮ ಅವಾಗಾವಾಗಿನ ಕಂಪ್ಲೇಂಟ್ ತಾನೇ? ಪರಿಮಳನ ಮೇಕಪ್ ಅಂತೂ ಅಷ್ಟೂ ಪರ್ಫೆಕ್ಟ್. ಅದೇನೇನ್ ಹಚ್ತಾಳೇನೋ ಅನ್ನೋ ಕುತೂಹಲನೂ ನಿಮ್ಮದಲ್ವಾ?
ಇಂದಿನ ದಿನಗಳಲ್ಲಿ ಕಂಪನಿಗಳು ಸೌಂದರ್ಯವರ್ಧಕ ಸಾಮಗ್ರಿಗಳ ಕಿಟ್ ಅನ್ನೇ ತಯಾರಿಸಿ ಮಾರುಕಟ್ಟೆಗೆ ಬಿಟ್ಟಿವೆ. ಆದರೂ ನಿಮ್ಮ ಇಷ್ಟದ, ನಿಮಗೊಪ್ಪುವ ಅಲಂಕಾರ ಸಾಮಗ್ರಿಗಳ ನಿಮ್ಮದೇ ಕಿಟ್ ತಯಾರಿಸಿಟ್ಟುಕೊಂಡರೆ ಹೆಚ್ಚು ಕಂಫರ್ಟೇಬಲ್ ಅಲ್ಲವೇ? ನಿಮ್ಮ ಮೇಕಪ್ ಕಿಟ್‌ನಲ್ಲಿ ಏನೇನಿರಬೇಕು ಎಂಬ ಬಗ್ಗೆ ಇಲ್ಲಿವೆ ಕೆಲ ಟಿಪ್ಸ್...
ಮೊದಲಿಗೆ ಕಾಸ್ಮೆಟಿಕ್ಸ್ ಇಡಲು ಬಾಕ್ಸ್ ಇಲ್ಲವೇ ಪೌಚ್ ಒಂದನ್ನು ಖರೀದಿಸಿ. ಇದರಿಂದ ಹೊರ ಹೋದಾಗ ಒಂದೊಂದು ವಸ್ತುವಿಗೂ ವ್ಯಾನಿಟಿ ಬ್ಯಾಗ್‌ನ ತುಂಬಾ ಗಂಟೆಗಟ್ಟಲೆ ಹುಡುಕುವುದು ತಪ್ಪುತ್ತದೆ. ಹಳೆಯ, ಉಪಯೋಗಿಸದ ಲಿಪ್‌ಸ್ಟಿಕ್, ಪೌಡರ್ ಇನ್ನೂ ಏನೇನು ವರ್ಷಗಟ್ಟಲೆಯಿಂದ ತೆಪ್ಪಗೆ ಬಿದ್ದಿವೆಯೋ ಒಮ್ಮೆ ಅವನ್ನು ಎಸೆದುಬಿಡಿ. ಇನ್ನು ಹೊಸ ಪೌಚ್‌ಗೆ ಹೊಸ ಮೇಕಪ್ ಸಾಮಗ್ರಿಗಳನ್ನು ಸಂಗ್ರಹಿಸಲು ಆರಂಭಿಸಿ...
ಫೌಂಡೇಶನ್
ಪ್ರತಿ ಕಂಪನಿಯ ಫೌಂಡೇಶನ್ ಮೇಲೆ ಯಾವ ಚರ್ಮದ ಬಣ್ಣಕ್ಕೆ ಹೊಂದುತ್ತದೆ ಎಂದು ಬರೆದಿರುತ್ತದೆ. ನಿಮ್ಮ ಚರ್ಮದ ಬಣ್ಣಕ್ಕೆ ಹೊಂದುವ ಫೌಂಡೇಶನ್ ಕೊಂಡುಕೊಳ್ಳಿ. ಜೊತೆಗೆ ನಿಮ್ಮದು ಎಣ್ಣೆ ಚರ್ಮವಾಗಿದ್ದರೆ ದ್ರವ ರೂಪದ ಫೌಂಡೇಶನ್ ಒಳ್ಳೆಯದು. ತುಂಬ ಬೆವರುವವರಾದರೆ ಬೆವರಿಗೆ ಕರಗದ ಫೌಂಡೇಶನ್ (ಸ್ವೆಟ್ ರೆಸಿಸ್ಟೆಂಟ್) ಕೊಳ್ಳಬಹುದು.
ಕನ್ಸೀಲರ್
ಮುಖದಲ್ಲಿ ಕಲೆಗಳು, ಮೊಡವೆ ಇದ್ದರೆ, ಕಣ್ಣ ಸುತ್ತ ಕಪ್ಪು ವರ್ತುಲ ಇದ್ದರೆ ಇಲ್ಲವೇ ವಯಸ್ಸಿನ ನೆರಿಗೆಗಳು ಇದ್ದರೆ ಅವನ್ನೆಲ್ಲ ಮುಚ್ಚಲು ಇರುವುದೇ ಕನ್ಸೀಲರ್. ನಿಮ್ಮ ಬಣ್ಣಕ್ಕೆ ಸರಿಯಾಗಿ ಹೊಂದುವ ಕನ್ಸೀಲರ್‌ನ್ನು ಆರಿಸಿ ಕೊಳ್ಳಿ.
ಬ್ಲಶ್
ಕೆನ್ನೆ ಮತ್ತು ಗಲ್ಲಕ್ಕೆ ತುಸು ಕೆಂಪು ಬಣ್ಣವನ್ನು ನಯವಾಗಿ ಸವರಿದರೆ ಅದು ನಿಮ್ಮ ಚೆಂದವನ್ನು ಹೆಚ್ಚಿಸಬಲ್ಲದು.
ಐ ಲೈನರ್ಸ್
ಹೆಣ್ಣುಮಕ್ಕಳ ಸೌಂದರ್ಯದಲ್ಲಿ ಪ್ರಮುಖ ಪಾತ್ರ ವಹಿಸುವುದೇ ಕಣ್ಣುಗಳು. ಅವನ್ನು ಹೆಚ್ಚು ಆಕರ್ಷಕವಾಗಿ, ದೊಡ್ಡದಾಗಿ ಕಾಣುವಂತೆ ಮಾಡುವಲ್ಲಿ ಐ ಲೈನರ್ಸ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ. ವಾಟರ್‌ಪ್ರೂಫ್ ತೆಗೆದುಕೊಂಡರೆ ಹೆಚ್ಚು ಕಾಲ ಕಣ್ಣಿನಲ್ಲಿ ಹರಡದೆ ಇರುತ್ತದೆ.
ಕಾಂಪ್ಯಾಕ್ಟ್ ಪೌಡರ್
ಫೌಂಡೇಶನ್ ಅನ್ನು ಸರಿಯಾಗಿ ಕೂರಿಸುವಲ್ಲಿ ಕಾಂಪ್ಯಾಕ್ಟ್ ಪೌಡರ್‌ಗಳು ಕೆಲಸ ಮಾಡುತ್ತವೆ. ಜೊತೆಗೆ ಮುಖಕ್ಕೆ ಹೊಳಪು ನೀಡುತ್ತವೆ. ಚರ್ಮದ ಬಣ್ಣ ಮತ್ತು ಗುಣದ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಿ.
ಲಿಪ್‌ಸ್ಟಿಕ್/ ಲಿಪ್‌ಗ್ಲಾಸ್
ಇಡೀ ದಿನ ಉಳಿಯುವಂಥ ಹೆಚ್ಚು ಗಾಢವಲ್ಲದ ಬಣ್ಣದ ಲಿಪ್‌ಸ್ಟಿಕ್ ಆಯ್ದುಕೊಳ್ಳಿ. ಈಗೆಲ್ಲ ಲಿಪ್‌ಗ್ಲಾಸ್ ಕೂಡಾ ಲಿಪ್‌ಸ್ಟಿಕ್‌ನೊಂದಿಗೇ ಬರುತ್ತದೆ. ಇಲ್ಲದಿದ್ದಲ್ಲಿ ಪ್ರತ್ಯೇಕವಾಗಿ ಕೊಳ್ಳಬಹುದು. ಇದು ತುಟಿಯನ್ನು ಹೊಳೆಯುವಂತೆ ಮಾಡುತ್ತದೆ.
ಇಲ್ಲಿಗೆ ನಿಮ್ಮ ಸೌಂದರ್ಯದ ಕಿಟ್ ರೆಡಿ. ಇನ್ನೇಕೆ ತಡ? ಸುಂದರವಾಗಿ ಅಲಂಕರಿಸಿಕೊಂಡು ಆತ್ಮವಿಶ್ವಾಸದ ಹೆಜ್ಜೆ ಇಡಿ.