ಇದೊಂದು ಸಿನಿಮಾ ಕಥೆ. ಒಬ್ಬ ಹುಡುಗ, ಒಬ್ಬಳು ಹುಡುಗಿ, ಇಬ್ಬರು ಸ್ನೇಹಿತರು. ಹುಡುಗಿ ತನಗರಿವಿಲ್ಲದೇ ಆತನನ್ನು ಪ್ರೀತಿಸುತ್ತಾಳೆ. ಅವನ ಎಲ್ಲಾ ಬೇಕು ಬೇಡಗಳಿಗೆ ಸ್ಪಂದಿಸುತ್ತಾಳೆ. ಅವನ ನಗುವಲ್ಲಿ ತನ್ನ ನೋವನ್ನು ಮರೆಯುತ್ತಾಳೆ. ಆದರೆ, ಅವನಿಗೆ ಇದರ ಅರಿವೇ ಇರದಂತೆ ತನ್ನ ಬೇರೆ ಗೆಳತಿಯರೊಂದಿಗೆ ಮೋಜು ಮಾಡುವುದರಲ್ಲಿ ಕಾಲ ಕಳೆಯುತ್ತಿರುತ್ತಾನೆ. ಕೊನೆಗೆ ಆಕೆ ಬೇರೊಬ್ಬನನ್ನು ಮದುವೆಯಾಗುವ ಅನಿವಾರ್ಯತೆಗೆ ಸಿಲುಕಿ ಆ ಸಿದ್ಧತೆಯಲ್ಲಿ ತೊಡಗುತ್ತಾಳೆ. ಮದುವೆಗೆ ತನ್ನ ಸ್ನೇಹಿತನನ್ನೂ ಆಹ್ವಾನಿಸಿರುತ್ತಾಳೆ. ಇವಳು ಬೇರೆಯವನ ಪತ್ನಿಯಾಗುವುದು ಸ್ನೇಹಿತನ ಮನದಲ್ಲಿ ಗಾಯವುಂಟುಮಾಡುತ್ತದೆ. ಮದುವೆಯಾಗುವ ಆಕೆಯ ನಿರ್ಧಾರವನ್ನು ಬದಲಿಸುವಂತೆ ಆಕೆಯನ್ನು ಬೇಡುತ್ತಾನೆ.
ಕಟ್... ಕಟ್...
ಇನ್ನು ನಿರ್ದೇಶಕನ ಮರ್ಜಿಯಂತೆ ಕಥೆಯನ್ನು ಬದಲಿಸಬಹುದು. ಹುಡುಗಿ ಗೆಳೆಯನನ್ನೇ ಮದುವೆಯಾದರೆ ಸುಖಾಂತ ಅಂತಲೂ, ನಿಶ್ಚಯಿಸಿದ ವರನನ್ನು ಮದುವೆಯಾದರೆ ದುಃಖಾಂತವೆಂತಲೂ ಚಿತ್ರೀಕರಿಸಬಹುದು. ಎರಡೋ ಮೂರೋ ಗಂಟೆಗಳ ಸಿನಿಮಾ ಮುಗಿದು ಪ್ರೇಕ್ಷಕ ಏಳುವಾಗ ನಗು ಮುಖದಲ್ಲೋ, ದಳದಳನೆ ಇಳಿವ ಕಣ್ಣೀರೊರೆಸಿಕೊಳ್ಳುತ್ತಲೋ ಮನೆ ಸೇರಬಹುದು.
ಆದರೆ, ರಿಯಲ್ ಲೈಫ್ ಎನ್ನುವುದು ರೀಲ್ ಲೈಫ್‌ನಂತೆ ಇಷ್ಟು ಸುಲಭದಲ್ಲಿ ಮುಗಿಯುವುದಿಲ್ಲ. ಸಿನಿಮಾದಲ್ಲಿ ಸುಖಾಂತವೆನಿಸಿದ್ದು ಇಲ್ಲಿ ದುಃಖಾಂತವಾಗಿರುತ್ತದೆ ಎಂಬುದೇ ಸತ್ಯ. ಏಕೆಂದರೆ ಸಮಸ್ಯೆ ಪ್ರಾರಂಭವಾಗುವುದು ಇಲ್ಲಿಂದಲೇ...
ಪತ್ರಿಕೆಗಳಲ್ಲಿ ಆಗೀಗ ಓದುತ್ತೇವೆ. ಮದುವೆಯ ದಿನ ಮದುಮಗ ನಾಪತ್ತೆ, ಮದುಮಗಳು ಪ್ರೀತಿಸಿದವನೊಂದಿಗೆ ಹೋದಳು.. ಹೀಗೇ.. ಎಲ್ಲಾ ಸರಿ. ಅವರ ಜೀವನ ಅವರ ನಿರ್ಧಾರ ಎಂದೇ ಒಪ್ಪಿಕೊಳ್ಳೋಣ. ಆದರೆ, ಮದುವೆ ಎಂಬುದು ಏಕಾಏಕಿ ಇಂದು ನಿಶ್ಚಯಿಸಿ ನಾಳೆ ಆಗಿ ಬಿಡುವುದಿಲ್ಲವಲ್ಲ. ಮದುವೆಯ ದಿನ ಎಲ್ಲರನ್ನೂ ಬಿಟ್ಟು ತಾವು ಪ್ರೀತಿಸಿದವರೊಂದಿಗೆ ಹೋಗುವವರು ಇದನ್ನು ಮೊದಲೇ ಏಕೆ ಮಾಡುವುದಿಲ್ಲ. ಅಪ್ಪ, ಅಮ್ಮ, ಆಪ್ತೇಷ್ಟರು ತಮ್ಮ ಜೀವಿತದ ಸುಂದರ ಗಳಿಗೆಯ ಕ್ಷಣಗಣನೆಯಲ್ಲಿದ್ದಾಗ ಅವರನ್ನು ಇದ್ದಕ್ಕಿಂದಂತೇ ನೋವಿನ ಮಡುವಿಗೆ ನೂಕಿ ಹೋಗುವುದು ಸರಿಯೇ?
ಏಕೆಂದರೆ, ನಿಮ್ಮ ಒಂದು ತಪ್ಪು ಹೆಜ್ಜೆ ನಿಮ್ಮ ಕುಟುಂಬದವರ ಜೊತೆ ಜೊತೆಗೆ ಇನ್ನೊಂದು ಮನೆಯವರ ಮೇಲೂ ಜೀವಮಾನವಿಡೀ ಮರೆಯದಂಥ ಪರಿಣಾಮವನ್ನುಂಟುಮಾಡುತ್ತದೆ. ಇದ್ದಕ್ಕಿದ್ದಂತೆ ತಮ್ಮ ತಪ್ಪೇನು ಇಲ್ಲದೆ ಬಂದೆರಗುವ ಈ ಆಘಾತದಿಂದಾಗಿ ಅವರ ಆತ್ಮಗೌರವಕ್ಕೆ ಕುಂದುಂಟಾಗಬಹುದು. ದುರ್ಬಲ ಮನಸ್ಸಿನವರಾದರೆ ಇದರಿಂದ ನೊಂದು ಆತ್ಮಹತ್ಯೆಯಂಥ ಕೆಲಸಕ್ಕೂ ಕೈ ಹಾಕಬಹುದು. ನಿಮ್ಮ ಸುಖದ ಸೌಧದ ತಳಪಾಯದಲ್ಲಿ ಯಾರದೋ ಬದುಕಿನ ಸಮಾಧಿ ಕಾಣಿಸಿಕೊಳ್ಳಬಹುದು.
ಯುವಕ- ಯುವತಿ ಪ್ರೀತಿಸುವುದು ತಪ್ಪಲ್ಲ. ಪ್ರೀತಿಸಿದವನೊಡನೇ ಕೊನೆಯವರೆಗೆ ಬದುಕಬೇಕು ಎಂಬ ಆಸೆಯೂ ತಪ್ಪಲ್ಲ. ನಿಮ್ಮ ಈ ನಿರ್ಧಾರ ಯಾವ ಕಾಲಕ್ಕೂ ಬದಲಾಗದು ಎಂದಾಗಿದ್ದಲ್ಲಿ ಮೊದಲೇ ಮನೆಯವರನ್ನು ಒಪ್ಪಿಸುವ ಪ್ರಯತ್ನ ಮಾಡಿ. ಅವರ ಒಪ್ಪಿಗೆ ಸಿಗುವಂತಿಲ್ಲ ಮತ್ತು ನಿಮ್ಮ ನಿರ್ಧಾರದಿಂದ ನೀವು ಹಿಂದೆ ಸರಿಯುವವರಲ್ಲ ಎಂದಾದರೆ ಒತ್ತಾಯದ ಮದುವೆಯ ಬಗೆಗಿನ ನಿಮ್ಮ ಅಭಿಪ್ರಾಯವನ್ನು ಖಡಾಖಂಡಿತವಾಗಿ ಹೇಳಿ.
ಮದುವೆ ಎನ್ನುವುದು ಜೀವನದ ಸುಂದರ ಕ್ಷಣ. ಇದು ಕೇವಲ ಹೆಣ್ಣಿಗೂ ಗಂಡಿಗೂ ಆಗುವಂಥದ್ದಲ್ಲ. ಇದರೊಂದಿಗೆ ಎರಡು ಮನೆತನಗಳ ಬೆಸುಗೆ ಕೂಡಾ ತಳುಕು ಹಾಕಿಕೊಂಡಿರುತ್ತದೆ. ಜೀವಮಾನವಿಡೀ ಆ ಸವಿ ನೆನಪುಗಳು ಮರುಕಳಿಸಿದಾಗ ಸಂತಸದ ಅಲೆ ತಾನಾಗಿಯೇ ಉಕ್ಕುತ್ತದೆ. ಅದನ್ನು ಹಾಗೆಯೇ ನೆನಪಿಟ್ಟುಕೊಳ್ಳುವ ದಿನವಾಗಿ ಇರುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ನೀವೇನಂತೀರಾ?
- ಅನಿತಾ ನರೇಶ್ ಮಂಚಿ