ಮನೆಯ ಹತ್ತಿರ ಆಡಲು ಸ್ಥಳವಿಲ್ಲದ, ಅಕ್ಕಪಕ್ಕದ ಮಕ್ಕಳ ಪರಿಚಯವಿರದ ಇಂದಿನ ದಿನಗಳಲ್ಲಿ ಮಕ್ಕಳಿಗೆ ಟಿವಿ ಟೈಂ ಪಾಸ್ ವಸ್ತು. ಬಟನ್ ಒತ್ತಿದರೆ ಸಾಕು, ಮಕ್ಕಳಿಗಾಗಿಯೇ ನೂರಾರು ಚಾನೆಲ್‌ಗಳು ನೂರಾರು ಕಾರ್ಯಕ್ರಮಗಳು. ಇಡೀ ದಿನ ಟಿವಿ ಮುಂದೆ ಕುಳಿತುಕೊಳ್ಳುವುದರಿಂದ ಮಕ್ಕಳಲ್ಲಿ ಅನೇಕ ಸ್ವಾಸ್ಥ್ಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಸ್ಥೂಲಕಾಯ
ಟಿವಿ ವೀಕ್ಷಣೆಯ ಪ್ರತಿ ಗಂಟೆಯಲ್ಲೂ ಶೇ.2ರಷ್ಟು ಸ್ಥೂಲಕಾಯ ವೃದ್ಧಿಯಾಗುತ್ತದೆ. ಲೆಪ್ಟಿನ್ ಮತ್ತು ಗ್ರೆಲಿನ್ ಎಂಬ ಹಾರ್ಮೋನ್ ಹಸಿವನ್ನು ಹೆಚ್ಚಿಸುತ್ತದೆ. ಆದರೆ ಚಟುವಟಿಕೆ ಕಡಿಮೆ ಇರುವುದರಿಂದ ಮಕ್ಕಳು ಏನು ತಿನ್ನುತ್ತಾರೋ ಅದರ ಕ್ಯಾಲೋರಿ ಬರ್ನ್ ಆಗುವುದಿಲ್ಲ. ಮಕ್ಕಳು ಸ್ಥೂಲಕಾಯದವರಾಗುವುದರಿಂದ ಅವರಲ್ಲಿ ಹೈಪರ್‌ಟೆನ್ಷನ್, ಹೃದಯ ಸಂಬಂಧಿ ರೋಗಗಳು, ಸೊಂಟ ನೋವು ಜೀವನಪರ್ಯಂತ ಕಾಡುವ ಸಂಭವವಿರುತ್ತದೆ.
ನಿದ್ರಾಹೀನತೆ
ಟಿವಿಯಿಂದ ಬಿಡುಗಡೆಯಾಗುವ ಕಿರಣಗಳು ಮೆಲಟೋನಿನ್ ವೃದ್ಧಿಸುವುದನ್ನು ತಡೆಯುತ್ತದೆ. ಈ ಹಾರ್ಮೋನ್ ಮನುಷ್ಯನ ನಿದ್ರೆಗೆ ಸಹಕಾರಿ. ಹೀಗಾಗಿ ಅತಿಯಾಗಿ ಟಿವಿ ನೋಡುವ ಮಕ್ಕಳು ನಿದ್ರಾಹೀನತೆಯಿಂದ ಬಳಲುತ್ತಾರೆ. ನಿದ್ದೆ ಹಾಗೂ ವ್ಯಾಯಾಮ ಆಗದೇ ಇದ್ದಾಗ ದೈಹಿಕ ಬೆಳವಣಿಗೆಯ ಮೇಲೂ ಅಡ್ಡ ಪರಿಣಾಮ ಉಂಟಾಗುತ್ತದೆ.
ಏಕಾಗ್ರತೆಯ ಕೊರತೆ
ಟಿವಿಯ ಅತಿಯಾದ ಅವಲಂಬನೆ ಮೆದುಳಿನ ಸೆಲ್‌ಗಳಿಗೆ ಹಾನಿಯುಂಟು ಮಾಡುತ್ತದೆ. ಇದರಿಂದ ಮಕ್ಕಳಲ್ಲಿ ತೀವ್ರ ಚಡಪಡಿಸುವಿಕೆ, ವ್ಯವಹಾರ ಸಮಸ್ಯೆಗಳು ಕಂಡುಬರುತ್ತವೆ. ಏಕಾಗ್ರತೆ ಇಲ್ಲದೆ ಓದಿನಲ್ಲಿ ಹಿಂದೆ ಬೀಳುತ್ತಾರೆ. ಇದರಿಂದ ಕೀಳರಿಮೆ ಭಾವನೆ ಬೆಳೆಯುತ್ತದೆ. ಸದಾ ಒಂಟಿಯಾಗಿರುವುದರಿಂದ ಬೆರೆತು ಆಡಲು ಕಷ್ಟವಾಗುತ್ತದೆ.
ತಲೆನೋವು
ಬಹಳ ಹೊತ್ತಿನವರೆಗೆ ಟಿವಿ ನೋಡುವುದರಿಂದ ಕಣ್ಣು ವಿಪರೀತ ಒತ್ತಡಕ್ಕೊಳಗಾಗುತ್ತದೆ. ದೃಷ್ಟಿದೋಷ ಉಂಟಾಗಬಹುದು. ಮಾನಸಿಕ ದಣಿವು ಹಾಗೂ ನಿದ್ರಾಹೀನತೆಯಿಂದ ಮೈಗ್ರೇನ್ ಉಂಟಾಗುತ್ತದೆ.
ಪರಿಹಾರ
ಮಕ್ಕಳ ಟಿವಿ ವೀಕ್ಷಣೆಗೆ ಸಮಯ ನಿಗದಿ ಮಾಡಿ. ಯಾವ ಯಾವ ಕಾರ್ಯಕ್ರಮಗಳು ಮಕ್ಕಳಿಗೆ ಮನರಂಜನೆ, ಮಾಹಿತಿ ನೀಡುತ್ತವೆ ಎಂಬುದನ್ನು ಪಟ್ಟಿ ಮಾಡಿ. ಇಂಥದ್ದನ್ನೇ ನೋಡಿ, ನಿಮ್ಮ ಸಲುವಾಗಿಯೇ ತಯಾರಿಸಿದ್ದು ಎಂದು ಮನನ ಮಾಡಿಕೊಡಿ. ವಾಯುವಿಹಾರಕ್ಕೆ ಕರೆದುಕೊಂಡು ಹೋಗಿ. ಮಕ್ಕಳೊಂದಿಗೆ ಆಟವಾಡಿ. ನಾಟಕ, ನೃತ್ಯ, ಹಾಡು, ಚಿತ್ರಕಲೆ ಹೀಗೆ ಅವರಿಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ತೊಡಗಿಸಿ. ಹೊರಗೆ ಆಡಲು ಒಳ್ಳೆಯ ಗೆಳೆಯರು ಸಿಕ್ಕಿದರೆ ಮನೆಯೊಳಗೆ ಕುಳಿತು ಟಿವಿ ನೋಡುವುದನ್ನು ಯಾವ ಮಕ್ಕಳೂ ಬಯಸುವುದಿಲ್ಲ.
- ಎಂ.ಬಿ. ನಾಯಕ ಹಾಸನ