ಈ ಮಹಿಳೆಯರು ಧಾರಾವಾಹಿಗೆ ಧಾರಾಳ ಮನಸ್ಸು ಕೊಡುತ್ತಾರೆ. ಆದರೆ, ನಿತ್ಯ ಖರ್ಚುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಗಂಡನ ಜೇಬಿದೆಯಲ್ಲ ಎಂದು ಸುಮ್ಮನಾಗುತ್ತಾರೆ. 'ಮನಿ' ಮಾಡಬೇಕೆಂಬ ಮನಸ್ಸಿದ್ದರೆ ಮನೆಯಲ್ಲೇ ಮಾಡಬಹುದು. ಸುಲಭದ ಕೆಲಸಗಳೂ ಉತ್ತಮ ಸಂಪಾದನೆ ತಂದುಕೊಡುತ್ತವೆ. ಅದಕ್ಕೆ ಸ್ಯಾಂಪಲ್‌ಗಳು ಇಲ್ಲಿವೆ...
ಗೊಂಬೆ ಕೈ ಹಿಡಿಯುತ್ತೆ!
ಸಿದ್ಧವಸ್ತುಗಳನ್ನು ಬಳಸಿ ಆಟಿಕೆ, ಗೊಂಬೆಗಳನ್ನು ಮನೆಯಲ್ಲೇ ಆರಾಮವಾಗಿ ತಯಾರಿಸಬಹುದು. ಪ್ಲಾಸ್ಟಿಕ್, ಫೈಬರ್‌ಗಳು ಹಾನಿಕಾರಕ ಎಂದು ಕಚ್ಚಾವಸ್ತುಗಳಿಂದ ತಯಾರಿಸಿದ ಆಟಿಕೆಗಳಿಗೆ ಜನ ಹೆಚ್ಚಾಗಿ ಅವಲಂಬಿತರಾಗುತ್ತಿದ್ದಾರೆ. ಕೈತುಂಬಾ ಆದಾಯ ತರಬಲ್ಲ ಕೆಲಸವಿದು.
ಪೆನ್ನಿನ ಇಂಕಿನಲ್ಲಿ ಹಣವಿದೆ!
ಬರವಣಿಗೆ ಮೂಲಕವೂ ಹಣ ಗಳಿಸಬಹುದು. ಬಿಡುವಿನ ವೇಳೆಯಲ್ಲಿ ಲೇಖನ, ಕಥೆ, ಕವನ ಬರೆಯುವ ಹವ್ಯಾಸ- ಹುಚ್ಚು ನಿಮಗಿರಬೇಕಷ್ಟೇ. ಇದು ಸ್ವಲ್ಪವೂ ತ್ರಾಸವಿಲ್ಲದೆ ಮಾಡಬಹುದಾದ ಕೆಲಸ. ಇಂದು ಹಲವು ಪತ್ರಿಕೆ, ಮ್ಯಾಗಜಿನ್‌ಗಳಲ್ಲಿ ಯೋಗ್ಯ ಬರಹಗಳಿಗೆ ಬೇಡಿಕೆ ಇದೆ. ಗಳಿಕೆ ಸ್ವಲ್ಪವೇ ಆದರೂ ಹೆಸರು ತಂದುಕೊಡುವುದಂತೂ ಸತ್ಯ.
ತುಳಸಿ ಕಲ್ಯಾಣ
ಮನೆ ಮುಂದಿನ ತುಳಸಿಯೂ ನಿಮ್ಮ ಬದುಕನ್ನು ಕಲ್ಯಾಣಗೊಳಿಸುತ್ತದೆ. ತುಂಡರಿಸಿದಷ್ಟೂ ಹೆಚ್ಚು ಚಿಗುರುವ ತುಳಸಿಯಿಂದ ಮಾಲೆ ಕಟ್ಟಿ ಹಣ ಗಳಿಸಬಹುದು. ಮೊಳದ ಲೆಕ್ಕದಲ್ಲಿ ಕ್ಷಣಾರ್ಧದಲ್ಲಿ ಮಾರಾಟವಾಗುವ ಮಾಲೆಗಳು ಇಂದು ಹಲವರ ಬದುಕನ್ನು ರೂಪಿಸಿವೆ. ಜತೆಗೆ ಆರೋಗ್ಯಕರ ಗಾಳಿ ಮನೆಮಂದಿಗೆಲ್ಲ. ಹಾಗೆಯೇ ಮಲ್ಲಿಗೆ ಮತ್ತಿತರೆ ಹೂವು ಬೆಳೆದೂ ದುಡ್ಡು ಮಾಡಬಹುದು.
ಬದುಕೊಂದು ಕಲಾಕೃತಿ
ಸೃಜನಶೀಲತೆಯಿದ್ದರೆ ಮನೆಯಲ್ಲೇ ಕಲಾಕೃತಿಗಳನ್ನು ನಿರ್ಮಿಸಬಹುದು. ಕಚ್ಚಾವಸ್ತುಗಳಿಂದ ಮಾಡಿದ ಕಲಾಕೃತಿಗಳಿಗೆ ಬಹು ಬೇಡಿಕೆ ಇದೆ. ಮನೆಯಲ್ಲೇ ಸಿಗುವ ವಸ್ತುಗಳನ್ನು ಬಳಸಿ ಒಂದಷ್ಟು ಕೌಶಲ್ಯ ಸ್ಪರ್ಶಿಸಿದರೆ ಉತ್ತಮ ಕಲಾಕೃತಿ ಸಿದ್ಧ. ಅಂದದ ಕಲಾಕೃತಿಗಳಿಗೆ ಜನ ಕಣ್ಣುಮುಚ್ಚಿ ಹಣ ನೀಡುತ್ತಾರೆ.
ಎಂಥ 'ಯೋಗ' ಬಂತು!
ಇಂದಿನ ಒತ್ತಡದ ಬದುಕಿನಲ್ಲಿ ಎಲ್ಲರಿಗೂ ಯೋಗ, ಧ್ಯಾನ ಅತಿಮುಖ್ಯ. ಆ ವಿದ್ಯೆಗೆ ಎಷ್ಟು ದುಡ್ಡು ಕೊಟ್ಟಾದರೂ ಸೇರುವವರಿದ್ದಾರೆ. ಆರೋಗ್ಯ ಇಂದು ಎಲ್ಲರಿಗೂ ಮುಖ್ಯ. ನೀವೊಂದು ಯೋಗ ಕೋರ್ಸ್ ಮುಗಿಸಿಕೊಂಡಿರೆಂದರೆ ಮನೆಯಲ್ಲೇ ಯೋಗಕೇಂದ್ರ ತೆರೆಯಬಹುದು.
ಪಾಠ ಮಾಡಿ ಬನ್ನಿ...
ಮನೆಪಾಠದಿಂದಲೇ ಸಂಸಾರವನ್ನು ಮ್ಯಾನೇಜ್ ಮಾಡುತ್ತಿರುವ ಮೇಡಂಗಳನ್ನು ಇಂದು ಎಲ್ಲೆಡೆ ಕಾಣಬಹುದು. ಅವರನ್ನು ನೀವೂ ಅನುಸರಿಸಿ. ಗುರುವೆಂಬ ಗೌರವದೊಂದಿಗೆ ಖರ್ಚಿಗೆ ಒಂದಷ್ಟು ದುಡ್ಡೂ ಸಿಗುತ್ತದೆ. ಹೆಚ್ಚು ಓದಿಕೊಂಡಿದ್ದರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ಕ್ಲಾಸ್‌ಗಳನ್ನು ನಡೆಸಬಹುದು.
ಸಂಗೀತ, ನೃತ್ಯ ಪಾಠ
ನೀವು ಸಂಗೀತ ಪಂಡಿತೆಯಾಗಿದ್ದರೆ ಮ್ಯೂಸಿಕ್ ಕ್ಲಾಸ್ ಆರಂಭಿಸಿ. ಭರತನಾಟ್ಯ ಅಥವಾ ಇನ್ನಾವುದೋ ನೃತ್ಯ ಕಲಾವಿದೆಯಾಗಿದ್ದಲ್ಲಿ ನೃತ್ಯ ಶಾಲೆಯನ್ನು ಮನೆಯಲ್ಲೇ ತೆರೆಯಿರಿ. ಇದು ನಿಮಗೆ ಹೆಚ್ಚು ಹೆಸರನ್ನು ತಂದುಕೊಡುವ ಕಾಯಕ.
ಟೈಲರಿಂಗ್
ಮೂರ್ನಾಲ್ಕು ತಿಂಗಳ ತರಬೇತಿ ಪಡೆದರೆ ಹೊಲಿಗೆ ಕೆಲಸ ಸಲೀಸು. ಆ ಏರಿಯಾದ ಒಂದಷ್ಟು ಬಟ್ಟೆಗಳು ನಿಮ್ಮ ಬಳಿ ಬರುವುದು ಗ್ಯಾರೆಂಟಿ. ಪರಿಚಿತರ ಬಳಿ ಬಟ್ಟೆಯನ್ನು ತಮಗೆ ಬೇಕಾದಂತೆ ಹೇಳಿ ಹೊಲಿಸಿಕೊಳ್ಳಬಹುದು ಎಂಬುದು ಗಿರಾಕಿಗಳ ಆಲೋಚನೆ. ಸುತ್ತಮುತ್ತಲಿನವರೊಂದಿಗೆ ಸ್ನೇಹವೂ ಗಟ್ಟಿಯಾಗಿ, ಕೈತುಂಬ ಕಾಸೂ ಗಿಟ್ಟುತ್ತದೆ.
ಬದುಕುವ 'ಕಲೆ'
ಚೆನ್ನಾಗಿ ರಂಗೋಲಿ ಹಾಕುವ ನಿಮ್ಮ ಕೈಗಳಿಗೆ ಚಿತ್ರಕಲೆಯೂ ತಿಳಿದಿದ್ದರೆ ಕುಂಚಕ್ಕೆ ಕೆಲಸ ಕೊಡಿ. ವರ್ಣಚಿತ್ರಗಳು, ತೈಲಚಿತ್ರಗಳಿಗೆ ಬೇಡಿಕೆ ಹೆಚ್ಚುಂಟು. ನಿಮ್ಮ ಅನುಭವವನ್ನೋ, ಕನಸನ್ನೋ ಕ್ಯಾನ್ವಾಸಿನ ಮೇಲೆ ಸುರಿದು ಒಳ್ಳೆಯ ಆಕೃತಿಗೆ ಜನ್ಮ ಕೊಡಿ. ಪೇಂಟಿಂಗ್ ಕೂಡ ಬದುಕಿನ ಬಣ್ಣವನ್ನು ಬದಲಿಸುತ್ತದೆ.
-ಮಂಜುನಾಥ್ ಎಲ್.ಕೆ.