ಟ್ರಾನ್ಸ್‌ಫರ್!
ಈ ಪದ ಕೇಳಿದರೆ ಸರ್ಕಾರಿ ನೌಕರರು ಖುಷಿಪಡುವುದಕ್ಕಿಂತ ಹೆಚ್ಚು ಬೆಚ್ಚಿ ಬೀಳುತ್ತಾರೆ. ಮೇಲಿಂದ ಮೇಲೆ ವರ್ಗಾವಣೆಯಾಗುವ ನೌಕರರು ನಮ್ಮಲ್ಲಿ ಅನೇಕರು. ಆದರೆ, ಮನೆಯನ್ನು ವರ್ಗಾವಣೆ ಮಾಡಲಾದೀತೇ?
ಬ್ಯಾಚುಲರ್ ಆದರೆ ಪರ್ವಾಗಿಲ್ಲ. ಸಂಸಾರಸ್ಥರು ಆಗಿದ್ದರೆ? ರೇಲ್ವೆ ಎಂಜಿನ್ ಬೋಗಿಯನ್ನು ಎಳೆದುಕೊಂಡು ಹೋಗುವಂತೆ ಸಂಸಾರವೆಂಬ ನೊಗದ ಜೊತೆಗೆ ಎಲ್ಲ ವಸ್ತುಗಳನ್ನೂ ಎಳೆದುಕೊಂಡು ಹೋಗುವುದು ಇದೆಯೆಲ್ಲ ಆ ನರಕಯಾತನೆ ಯಾರಿಗೂ ಬೇಡ.
ಇಂಥ ಅನೇಕ ಸಂದರ್ಭಗಳನ್ನು ಈಗಾಗಲೇ ಸರ್ಕಾರಿ ನೌಕರರು ಮಾತ್ರವಲ್ಲ, ಖಾಸಗಿ ಕಂಪನಿಗಳ ಕೆಲಸಗಾರರೂ ಅನುಭವಿಸಿದ್ದಾರೆ. ಹೀಗೆ ಅನಿವಾರ್ಯವಾಗಿ ಮನೆ ಬದಲಿಸಬೇಕಾದ ಸಂದರ್ಭಗಳಲ್ಲಿ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡರೆ ಕೆಲಸ ಸುಲಭವಾಗುತ್ತದೆ.
- ನೀವು ಬದಲಿಸಬೇಕಾದ ಮನೆ ಮಕ್ಕಳ ಸ್ಕೂಲಿಗೆ ಮತ್ತು ಕಚೇರಿಗೆ ಹತ್ತಿರವಾಗುವಂತಿರಲಿ.
- ನೀವು ಹೋಗಲಿರುವ ಸ್ಥಳದ ಗ್ಯಾಸ್ ಕನೆಕ್ಷನ್ ಹತ್ತಿರದಲ್ಲಿದೆಯೋ, ದೂರದಲ್ಲಿದೆಯೋ ಎಂಬುದನ್ನು ತಿಳಿದುಕೊಳ್ಳಿ. ನಂತರ ತಕ್ಷಣ ಅಲ್ಲಿಗೆ ಹೋಗಿ ಅರ್ಜಿ ಹಾಕಿ.
- ನೀವು ಪದೇಪದೇ ಟ್ರಾನ್ಸ್‌ಫರ್ ಆಗುವ ನೌಕರಿಯಲ್ಲಿದ್ದರೆ ಮನೆ ಬದಲಿಸುತ್ತಲೇ ಇರಬೇಕಾಗುತ್ತದೆ. ಹೀಗಾಗಿ ಹಿಂದಿನ ಸಲ ಮನೆ ಬದಲಿಸುವಾಗ ಬಳಸಿದ ಕರ್ಟೈನ್ ಬಾಕ್ಸ್, ಪೆಟ್ಟಿಗೆ, ಸೂಟ್‌ಕೇಸ್, ಪ್ಯಾಕ್ ಮಾಡಲು ಬೇಕಾದ ಸಾಮಗ್ರಿಗಳನ್ನು ತೆಗೆದು ಜೋಪಾನವಾಗಿಡಿ. ಏಕೆಂದರೆ, ಮುಂದೆಯೂ ಈ ಸಾಮಗ್ರಿಗಳ ಅಗತ್ಯ ಎದುರಾಗಬಹುದು. ಆಗ ಅನಗತ್ಯ ಹುಡುಕಾಟ ತಪ್ಪುತ್ತದೆ. ಪ್ರತಿ ಸಲ ಮನೆ ಬದಲಿಸುವಾಗ ಹೊಸದಾಗಿ ಖರೀದಿಸುವ ಪ್ರಮೇಯ ಇರಲ್ಲ.
- ಮನೆ ಬದಲಿಸುವಾಗ ನಿಮ್ಮ ಪರಿಚಿತರಿಗೆ, ಬ್ಯಾಂಕಿಗೆ, ಡಾಕ್ಟರ್‌ಗೆ, ಕ್ರೆಡಿಟ್ ಕಾರ್ಡ್ ಕಂಪನಿ, ಶೇರ್ ಕಂಪನಿಯವರಿಗೆ ವಿಷಯ ತಿಳಿಸಿ, ಬದಲಾದ ಹೊಸ ವಿಳಾಸ ನೀಡಿ.
- ಒಂದು ವೇಳೆ ನಿಮ್ಮ ಸಾಮಾನುಗಳು ಲಾರಿ/ ಟ್ರಕ್ಕಿನಲ್ಲಿ ಹೋಗುವುದಿದ್ದರೆ, ಬಿಸಿಲು, ಮಳೆಯಿಂದ ರಕ್ಷಣೆ ಪಡೆಯಲು ಹುಡ್ ಅಥವಾ ತಾಡಪತ್ರೆ ಇರುವ ಲಾರಿ ವ್ಯವಸ್ಥೆ ಮಾಡಿ. ಅಷ್ಟೇ ಅಲ್ಲ, ಪ್ರತಿಷ್ಠಿತ ಟ್ರಾನ್ಸ್‌ಪೋರ್ಟ್ ಕಂಪನಿಯ ವಾಹನಗಳಲ್ಲಿ ಸಾಮಾನು ಸಾಗಿಸಿ. ನಿಮ್ಮ ವಸ್ತುಗಳಿಗೆ ವಿಮೆ ವ್ಯವಸ್ಥೆ ಇದ್ದರೆ ಉತ್ತಮ.
- ಫ್ರಿಡ್ಜ್, ಟಿವಿ, ಬೀರು, ಗ್ಲಾಸ್ ಐಟಮ್ಮುಗಳನ್ನೆಲ್ಲಾ ಜಾಗರೂಕತೆಯಿಂದ ಪ್ಯಾಕ್ ಮಾಡಿ. ಸಾಗಾಟ ವೇಳೆ ಒಂದಕ್ಕೊಂದು ತಾಗಿ ಒಡೆದು ಹೋಗುವ ಸಾಧ್ಯತೆ ಇದೆ.
- ಸೂಟ್‌ಕೇಸ್‌ಗಳು, ಮಂಚ, ಕುರ್ಚಿ, ಫ್ರಿಡ್ಜ್, ಟಿವಿ ಬಾಕ್ಸ್‌ಗಳ ಮೇಲೆ ನಿಮ್ಮ ಹೊಸ ಮನೆಯ ವಿಳಾಸ ಬರೆಯಿರಿ. ಜತೆಗೆ ನೀವು ಹೋಗಲಿರುವ ಕಂಪನಿಯ ಫೋನ್ ನಂಬರ್ ಅನ್ನೂ ನಮೂದಿಸಿ. ಒಂದು ವೇಳೆ ನಿಮ್ಮ ಯಾವುದೇ ಸಾಮಾನು ಬಿಟ್ಟು ಹೋಗಿದ್ದಲ್ಲಿ, ಇಲ್ಲವೇ ರಸ್ತೆಯ ಮಧ್ಯೆ ಎಲ್ಲಾದರೂ ಬಿದ್ದು ಹೋಗಿ, ಯಾವುದಾದರೂ ಒಳ್ಳೆಯ ವ್ಯಕ್ತಿಗೆ ಸಿಕ್ಕರೆ ಅಂಥವರು ಮರಳಿಸಲು ಅನುಕೂಲವಾಗುತ್ತದೆ.
- ನೀವು ಹೋಗಲಿರುವ ಕ್ಷೇತ್ರದ ಪೊಲೀಸ್ ಸ್ಟೇಷನ್ ಹೆಸರು, ವಿಳಾಸ ಮತ್ತು ಫೋನ್ ನಂಬರ್ ಅಗತ್ಯವಾಗಿ ತಿಳಿದುಕೊಂಡಿರಿ.
- ಹೊಸ ಮನೆಯ ಹತ್ತಿರದಲ್ಲಿರುವ ಡಾಕ್ಟರ್, ಆಸ್ಪತ್ರೆ, ಬ್ಯಾಂಕ್, ತರಕಾರಿ ಮಂಡಿ, ಕಿರಾಣಿ ಅಂಗಡಿ, ವಿದ್ಯುತ್ ಮೆಕಾನಿಕ್, ಡ್ರೈಕ್ಲೀನರ್, ಹಾಲಿನ ಬೂತ್ ಇತ್ಯಾದಿಗಳ ಬಗ್ಗೆ ಮಾಹಿತಿ ಕಲೆಹಾಕಿ.
- ಹೊಸ ಸ್ಥಳದಲ್ಲಿ ನಿಮ್ಮ ಸಂಬಂಧಿಕರು ಅಥವಾ ಪರಿಚಯಸ್ಥರು ಯಾರಾದರೂ ಇದ್ದಲ್ಲಿ, ಅವರಿಗೆ ನಿಮ್ಮ ಮನೆಯ ವಿಳಾಸ ಮತ್ತು ಫೋನ್ ನಂಬರ್ ಅಗತ್ಯವಾಗಿ ಕೊಡಿ.
- ಮನೆ ಬಿಟ್ಟು ಬರುವಾಗ ನೆರೆಹೊರೆಯವರಿಗೆ ಮರೆಯದೇ ಹೇಳಿಬನ್ನಿ. ಜತೆಗೆ ಅವರಿಗೆ ನಿಮ್ಮ ಹೊಸ ಮನೆಯ ವಿಳಾಸವನ್ನೂ ಕೊಟ್ಟಿರಿ. ಇದರಿಂದ ಹಳೇ ಮನೆಗೆ ಬಂದ ಅಂಚೆ, ವಿಮೆ, ಕೊರಿಯರ್‌ಗಳನ್ನು ಅವರು ನಿಮಗೆ ಕಳುಹಿಸುವ ವ್ಯವಸ್ಥೆ ಮಾಡುತ್ತಾರೆ.
- ಎಂ.ಬಿ. ನಾಯಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics