ಈ ನೆಲವನ್ನು ಮೆಟ್ಟಬೇಕೋ, ಮುಟ್ಟಿ ನಮಸ್ಕರಿಸಬೇಕೋ ತಿಳಿಯುತ್ತಿಲ್ಲ. ಈಗ ನೆಲವೆಂದರೆ ಅಷ್ಟು ನೆಗೆದು ಹಾರುವ ಖುಷಿ. ಟೈಲ್ಸ್, ವೆಟ್ರಿಫೈಡ್ ಟೈಲ್ಸ್, ಮಾರ್ಬಲ್ಸ್, ಗ್ರಾನೈಟ್, ಕಡಪ... ಹೀಗೆ ಅದರ ಹತ್ತಾರು ಅವತಾರಗಳ ಚಮತ್ಕಾರ ಮನೆಯನ್ನು ಮಿನುಗುವಂತೆ ಮಾಡಿದೆ.
ಕಾಲಕ್ಕೆ ತಕ್ಕಂತೆ ನೆಲದ ಶೈಲಿಯಲ್ಲೂ ವಿನ್ಯಾಸ ವಿಸ್ತರಣೆ ಆಗುತ್ತಲೇ ಹೋಗಬೇಕು. ಇವುಗಳ ಪೈಕಿ ಹಾರ್ಡ್‌ವುಡ್ ಫ್ಲೋರಿಂಗ್ ಕೂಡ ಒಂದು. ಮನೆಗೆ ಆಂತರಿಕ ವಿನ್ಯಾಸ ಎಷ್ಟು ಮುಖ್ಯವೋ ಅಷ್ಟೇ ಈ ನೆಲಹಾಸು ವಿನ್ಯಾಸ ಕೂಡ.
ಅದರಲ್ಲಿ ಇತ್ತೀಚೆಗೆ ಹಾರ್ಡ್‌ವುಡ್ ಫ್ಲೋರಿಂಗ್ ಕೂಡ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಆದರೆ, ಅದನ್ನು ಅಳವಡಿಸುವ ಕುರಿತು ಕೆಲವು ಸಂಶಯಗಳು ಜನರನ್ನು ಕಾಡುತ್ತಿವೆ. ಅದಕ್ಕೆ ಸ್ಕ್ವೇರ್ ಫೂಟ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಗೌರವ್ ಸರಾಫ್ ಕೆಲ ಪರಿಹಾರ, ಸಲಹೆಗಳನ್ನು ನೀಡಿದ್ದಾರೆ.
ನೈಜ ಪರಿಸರ ಸ್ನೇಹಿಯಲ್ಲ
ಹಾರ್ಡ್‌ವುಡ್ ಫ್ಲೋರ್‌ಗಳು ನಿಜವಾದ ಮರವಲ್ಲ. ಅವು ಪರಿಸರ ಸ್ನೇಹಿಯಲ್ಲ. ಮೇಲ್ಭಾಗ ಪದರ ದೃಢವಾಗಿರುತ್ತದೆ. ಈ ಪದರದಡಿ ಪ್ಲೈವುಡ್‌ನಿಂದ ತಯಾರಿಸಲಾದ ಹಲವು ಪದರಗಳಿರುತ್ತವೆ. ಇವುಗಳನ್ನು ಲಂಬ ರೀತಿಯಲ್ಲಿ ಜೋಡಿಸಲಾಗಿರುತ್ತದೆ. ತೇವ, ಬಿಸಿಯಿಂದ ಉಂಟಾಗುವ ಬೆಂಡಾಗುವ ಕ್ರಿಯೆಗೆ ಉತ್ತಮ ಪ್ರತಿರೋಧ ನೀಡುವಂತೆ ಇದನ್ನು ರೂಪಿಸಲಾಗಿದೆ.
ಹಾರ್ಡ್‌ವುಡ್ ಪ್ಲೋರಿಂಗ್ ಅನ್ನು ಸೂಕ್ತವಾಗಿ ನಿರ್ವಹಿಸಿದರೆ ಹೊಳಪು ಬರುವಂತೆ ಮಾಡಬಹುದು. ಜತೆಗೆ ದಶಕಗಳವರೆಗೆ ಅದನ್ನು ಬದಲಿಸಬೇಕಿಲ್ಲ. ಇದರಿಂದ ಇತರೆ ಫ್ಲೋರಿಂಗ್‌ಗಳಿಗೆ ಹೋಲಿಸಿದರೆ ಮರದ ಫ್ಲೋರಿಂಗ್ ಹೆಚ್ಚು ಪರಿಸರಸ್ನೇಹಿ ಮತ್ತು ಕಡಿಮೆ ಬೆಲೆಯ ಅತಿ ಹೆಚ್ಚಿನ ಬಾಳಿಕೆ ಬರುವಂಥದ್ದಾಗಿದೆ.
ಶುಭ್ರಗೊಳಿಸುವಾಗ ಎಚ್ಚರ
ಹಾರ್ಡ್‌ವುಡ್ ಫ್ಲೋರ್‌ಗಳನ್ನು ಒದ್ದೆಯಾದ ಬಟ್ಟೆಗಳಿಂದ ಒರೆಸಲಾಗದು. ಡ್ರೈ ಮ್ಯಾಪಿಂಗ್ (ಕಸ ಗುಡಿಸುವುದು ಅಥವಾ ವ್ಯಾಕ್ಯೂಮ್ ಕ್ಲೀನ್ ಮಾಡುವುದು) ಮತ್ತು ಡ್ಯಾಂಪ್ ಮ್ಯಾಪಿಂಗ್ (ಒದ್ದೆ ಬಟ್ಟೆಯಿಂದ ಒರೆಸುವುದು) ಈ ಎರಡನ್ನು ಬಳಸಿ ಶುದ್ಧಗೊಳಿಸಬಹುದು. ಒರೆಸುವ ಬಟ್ಟೆಯಿಂದ ಬರುವ ಹೆಚ್ಚಿನ ನೀರನ್ನು ನೆಲದ ಮೇಲೆ ಯಾವ ಕಲ್ಮಶವೂ ಉಳಿಯದಂತೆ ಪೂರ್ಣವಾಗಿ ಒರೆಸಬೇಕು. ಧೂಳು ತುಂಬಿದ ಸ್ಥಳದಲ್ಲಿ ದಿನಕ್ಕೊಮ್ಮೆ ಒದ್ದೆ ಬಟ್ಟೆಯಿಂದ ಒರೆಸುವುದನ್ನು ಶಿಫಾರಸು ಮಾಡಲಾಗುತ್ತದೆ.
ಕಿಚನ್‌ಗೆ ಉತ್ಕೃಷ್ಟ ಆಯ್ಕೆ
ಹಾರ್ಡ್‌ವುಡ್ ಫ್ಲೋರಿಂಗ್ ಮತ್ತು ನೀರು ಪರಸ್ಪರ ಸರಿಹೊಂದುವುದಿಲ್ಲ ಎಂಬ ಯೋಚನೆ ಇರುವುದರಿಂದ ಬಹುತೇಕರು ಅಡುಗೆ ಮನೆಗಳಲ್ಲಿ ಮರದ ಫ್ಲೋರಿಂಗ್ ಅಳವಡಿಸಲು ಇಷ್ಟಪಡುವುದಿಲ್ಲ. ಆದರೆ ಅಡುಗೆಮನೆಗಳಿಗೆ ಹಾರ್ಡ್‌ವುಡ್ ಫ್ಲೋರಿಂಗ್ ಉತ್ಕೃಷ್ಟ ಆಯ್ಕೆ. ಅದು ಕೇವಲ ಸುಂದರವಾಗಿರುವುದೇ ಅಲ್ಲದೇ ಎಲ್ಲ ಅಡುಗೆಮನೆಯ ಜೋಡಣೆಗಳೊಂದಿಗೆ ಸುಲಭವಾಗಿ ಹೊಂದಿಕೊಳ್ಳುತ್ತದೆ.
ನಿರ್ವಹಣೆ
ಹಾರ್ಡ್‌ವುಡ್ ಫ್ಲೋರ್‌ಗಳಿಗೆ ಅತಿಯಾದ ನಿರ್ವಹಣೆ ಬೇಕು. ಇತರೆ ಫ್ಲೋರ್ ಕವರಿಂಗ್‌ಗಳಲ್ಲದೇ ಹಾರ್ಡ್‌ವುಡ್ ಫ್ಲೋರಿಂಗ್‌ಗಳನ್ನು ಕಡಿಮೆ ಪ್ರಯತ್ನದೊಂದಿಗೆ ಹೊಸದಾಗಿ ಕಾಣುವಂತೆ ಇಟ್ಟುಕೊಳ್ಳಬಹುದು. ಬಹುತೇಕ ಫ್ಯಾಕ್ಟರಿ ಫಿನಿಶ್ಡ್ ಫ್ಲೋರ್‌ಗಳಿಗೆ ಯಾವುದೇ ಪಾಲಿಶ್ ಅಥವಾ ವ್ಯಾಕ್ಸ್ 10 ವರ್ಷಗಳವರೆಗೆ ಬೇಕಾಗಿರುವುದಿಲ್ಲ. ಆದ್ದರಿಂದ ಇದು ಅತ್ಯಂತ ಕಡಿಮೆ ನಿರ್ವಹಣೆಯ ಆಯ್ಕೆ.
ಅಳವಡಿಸುದು ಕಷ್ಟದಾಯಕ
ಎಂಜಿನಿಯರ್ಡ್ ಹಾರ್ಡ್‌ವುಡ್ ಫ್ಲೋರಿಂಗ್ ಅನ್ನು ಮನೆಗೆ ಅಳವಡಿಸುವುದು ಸ್ವಲ್ಪ ಕಷ್ಟ. ಎಂಜಿನಿಯರ್ಡ್ ಹಾರ್ಡ್‌ವುಡ್ ಅನ್ನು ಮನೆಯ ಯಾವುದೇ ಭಾಗದಲ್ಲಿ ಅಳವಡಿಸಬಹುದು. ಹೀಗೆ ಅಳವಡಿಸುವಾಗ ಕೆಳಭಾಗ ಹಾನಿಯಾಗದಂತೆ ನೋಡಿಕೊಳ್ಳಬೇಕು.
- ಭಾಗ್ಯಗೌಡ