ಮಹಿಳೆ-ಮನೆ-ಬದುಕು

ಭಟ್ಟ ಬಯಲು

ಮನೆ ಮಧ್ಯದಲ್ಲೇ ಆಕಾಶಕ್ಕೆ ತೆರೆದುಕೊಂಡ ಅಂಗಳ. ಅಲ್ಲೇ ಉದ್ಯಾನ. ಇಡೀ ಮನೆಯ ಬಿಸಿ ಗಾಳಿ ಈ ತೆರೆದ ಮಾಡಿನ ಮೂಲಕ ಹೊರಗಿಣುಕುತ್ತದೆ. ಮನೆಯೆಲ್ಲ ಹುಡುಕಾಡಿದರೂ ಎರಡು- ಮೂರು ಗೋಡೆಗಳು. ಬೇಸಿಗೆಯ ದಿನಗಳಲ್ಲೂ ಹೊದ್ದು ಮಲಗುವಷ್ಟು ತಂಪಾದ ವಾತಾವರಣ.
ಇದು ಧಾರವಾಡದ ವಿಶೇಷ ಮನೆ. ಇಲ್ಲಿನ ಹೊಯ್ಸಳ ನಗರದ ಪರಿಸರವಾದಿ, ಚಿಂತಕ ಡಾ. ಪ್ರಕಾಶ ಭಟ್ಟರ ಈ ಮನೆ ಹಲವು ಅಚ್ಚರಿಗಳ ಗುಡಿ.
ಮನೆಗೆ ಭಟ್ಟರು ಇಟ್ಟ ಹೆಸರು 'ಬಯಲು'. ಜಗುಲಿಗೆ ಖಾಸಗಿತನ ಬೇಕಾಗಿಲ್ಲ. ಹಾಗಾಗಿ ಮೂರು ಗೋಡೆಗಳಂತೆ. ಒಂದು ಗೋಡೆ ಹಾಗೂ ಬಾಗಿಲಿನ ಖರ್ಚು ಇಲ್ಲಿ ಉಳಿತಾಯ. ಈ ಜಗುಲಿಯ ಮಧ್ಯದಲ್ಲಿ ಮಿನಿಪಾರ್ಕು. ಅಡುಗೆ ಮನೆ, ದೇವರಕೋಣೆಗಳಿಗೂ ಬಾಗಿಲಿಲ್ಲ. ಜಗುಲಿ ಮೇಲೆ ಸ್ಟ್ರಕ್ಚರಲ್ ಸ್ಟೀಲ್ ಬಳಸಿ ಮೇಲಿಂದ ಶಾಹಾಬಾರ್ ಪಾಟಿಕಲ್ಲಿನ ಮಾಡು ಇದೆ. ಉಳಿದ ಕೋಣೆಗಳ ಮಾಡಿಗೆ ಹಾಲೋ ಬ್ಲಾಕ್ ತಂತ್ರಜ್ಞಾನದ ಉಪಯೋಗ.
ಮನೆಯ ಮುಂಭಾಗಕ್ಕೆ ಕೆಂಪು ಜಂಬಿಟ್ಟಿಗೆ ಬಳಸಿ ಒಳಗೂ ಹೊರಗೂ ಪ್ಲಾಸ್ಟರ್ ಇಲ್ಲದ ಸ್ವಾಭಾವಿಕ ಫಿನಿಶ್ ಇದೆ. ಮನೆಯ ಎಲ್ಲ ಕೋಣೆಗಳಿಗೆ ಕಡಿಮೆ ಖರ್ಚಿನ ಶಹಾಬಾದ್ ಕಲ್ಲಿನ ನೆಲ. ಏಣಿಯ ಹಾಗೂ ಗ್ಯಾಲರಿಯ ರೇಲಿಂಗಿಗೆ ನೀಲಗಿರಿ ಎಳೆಗಳ ಬಳಕೆ.
ಹಾಗೆಯೇ, ಮೊದಲನೇ ಮಹಡಿಯ ಗೋಡೆಗೆ ಹಳ್ಳಿಗಳ ಮನೆಗಳಲ್ಲಿರುವಂತೆ ಕೈಯಲ್ಲೇ ಪ್ಲಾಸ್ಟರಿಂಗ್ ಅಗಿದೆ. ಪಿವೋಟಲ್ ಹಿಂಜಿಸ್ ಮೇಲೆ ತಿರುಗುವ ಬಾಗಿಲು. ಮನೆಯ ಸುತ್ತಲೂ ಗೋಡೆಗಳನ್ನು ಮಳೆ ಬಿಸಿಲಿನಿಂದ ರಕ್ಷಿಸಲು ಮಾಡಿಗೆ ಎರಡು ಅಡಿಗೂ ಮಿಕ್ಕಿ ಓವರ್‌ಹ್ಯಾಂಗ್ ಮಾಡಲಾಗಿದೆ. ಮನೆಯ ವಿಸ್ತೀರ್ಣ ಸುಮಾರು 1650 ಚದರ ಅಡಿ ಇದ್ದು, ಬರೀ ಏಳು ಲಕ್ಷ ರುಪಾಯಿ ವೆಚ್ಚದಲ್ಲಿ ಅದ್ಭುತವಾಗಿ ನಿರ್ಮಿಸಲಾಗಿದೆ.
'ಮನೆ ನಿರ್ಮಾಣದಲ್ಲಿ ಹೊಸ ತಂತ್ರಜ್ಞಾನಗಳನ್ನು ಬಳಸುವಾಗ ಅವು ಹೊಸತು ಎಂಬ ಕಾರಣಕ್ಕೆ ಮಡಿವಂತಿಕೆಯಿಲ್ಲ. ಅದರ ಬದಲು ಸಾಧ್ಯವಿದ್ದಲ್ಲೆಲ್ಲ ಪರ್ಯಾಯ ತಂತ್ರಜ್ಞಾನದಿಂದ ವ್ಯವಸ್ಥಿತವಾಗಿ ಕಡಿಮೆ ಖರ್ಚಿನಲ್ಲಿ ಸರಳ, ಸುಂದರವಾಗಿ ಈ ಮನೆ ನಿರ್ಮಾಣವಾಗಿದೆ. ಯಾರದೋ ದೊಡ್ಡ ಮನುಷ್ಯರ ಗೃಹ ಪ್ರವೇಶಕ್ಕೆ ಹೋಗಿ ಅಲ್ಲಿನ ತಂತ್ರಗಳನ್ನೇ ಅಳವಡಿಸಿ ಮನೆ ನಿರ್ಮಿಸಬೇಕು. ನಮಗೆ ಅಗತ್ಯ ಇಲ್ಲದಿದ್ದರೂ ಚೆಂದ ಕಾಣುವ ಮನೆ ನಿರ್ಮಾಣದ ಕನಸು ಕಾಣುವುದು ಬೇಡ. ಯಾರೋ ಸೂಚಿಸಿದರೆಂದು ಕಡಿಮೆ ಖರ್ಚಿನಲ್ಲಿ ಮನೆ ನಿರ್ಮಾಣಕ್ಕೆ ಮುಂದಾಗಬೇಡಿ' ಎಂದು ಹೇಳುವ ಪ್ರಕಾಶ ಭಟ್ಟರಿಗೆ ಮನೆ ಕಟ್ಟುವುದು ಕನಸೇ ಇರಲಿಲ್ಲವಂತೆ.
'ಮನೆ ಕಟ್ಟುವುದು, ಆಸ್ತಿ ಮಾಡುವುದು ಈ ರೀತಿಯ ಆಸೆಗಳ ವಲಯದಿಂದ ಹೊರಗೆ ಇದ್ದವನು ನಾನು' ಎಂದು ಮಾತು ಆರಂಭಿಸಿದ ಅವರು, 'ಆಧುನಿಕ ಮನೆಗಳನ್ನು ಕಟ್ಟುವಲ್ಲಿ ಎಲ್ಲರೂ ಮಾಡಿದ್ದನ್ನೇ ಮಾಡುವ ರೀತಿಯಿಂದ ಬೇಸರವಾಗುತ್ತಿತ್ತು. ಮನೆ ಕಟ್ಟುವುದು ಹೀಗಲ್ಲ ಅಂತ ಅನಿಸುತ್ತಿತ್ತು. ಸೌಂದರ್ಯವಿಲ್ಲದ, ಬೇಸಿಗೆಯಲ್ಲಿ ಕಾದು ಕೆಂಡವಾಗುವ ಮನೆಗಳು ತಪ್ಪು ಅಂತ ಗೊತ್ತಾಗುತ್ತಿತ್ತು'.
'ಭಿನ್ನ ರೀತಿಯಲ್ಲಿ ಪರಿಸರಕ್ಕೆ ಹೊಂದಿಕೊಳ್ಳುವ ಮನೆಗಳನ್ನು ಕಟ್ಟುವ ತಂತ್ರಜ್ಞಾನದ ಬಗ್ಗೆ ಓದಿದ್ದೆ. ಕಟ್ಟಿದರೆ ಹಾಗೇ ಕಟ್ಟಬೇಕು ಅಂದುಕೊಂಡಿದ್ದೆ. ಆದರೂ ಮನೆಕಟ್ಟುವ ವಿಚಾರ ಹರಳುಗಟ್ಟಿರಲಿಲ್ಲ. ಆರೇಳು ವರ್ಷಗಳ ಹಿಂದೆ ಪಾಂಡಿಚೇರಿ ಸಮೀಪದ ಅರೋವಿಲ್‌ಗೆ ಹೋಗಿ ವಸತಿ ಉಳಿಯುವ ಪ್ರಸಂಗ ಬಂತು. ಅಲ್ಲಿಯ ಮನೆಗಳನ್ನು ನೋಡಿ ಪ್ರಭಾವಿತನಾದೆ. ಪ್ರತಿಯೊಂದು ಕಟ್ಟಡದ ತಾಜಾತನ ಮನಸ್ಸಿಗೆ ಬಂತು. ತಿರುಗಿ ಇಡೀ ಕುಟುಂಬದೊಟ್ಟಿಗೆ ಅರೋವಿಲ್‌ಗೆ ಹೋಗಿ ಉಳಿದು ಬಂದೆ. ಮನೆಯ ಎಲ್ಲರೂ ಸಿದ್ಧ ಮಾದರಿಯಿಂದ ಬೇರೆಯಾಗುವ ಮನಸ್ಸು ಮಾಡಿದೆವು' ಎಂದರು.
ಎಂಜಿನಿಯರ್‌ಗಳಲ್ಲಿ ಬಹಳ ಜನ ಹೊಸ ವಿಚಾರಗಳಿಗೆ ಮುಕ್ತರಿರುವುದಿಲ್ಲ. ಪ್ರಯೋಗಗಳನ್ನು ನಿರಾಕರಿಸುತ್ತಾರೆ. ಪುಣ್ಯಕ್ಕೆ ಧಾರವಾಡದಲ್ಲಿ ದೀಪಕ್ ಹಿರೇಮಠ ಎಂಬ ವಾಸ್ತು ಶಿಲ್ಪಿ ಫ್ರೆಶ್ ಆಗಿ ವಿಚಾರ ಮಾಡಲು ಸಿದ್ಧರಿದ್ದರು. ಎಲ್ಲರ ಶ್ರಮದ ಫಲವಾಗಿ ಮನೆ ನಿರ್ಮಾಣವಾಗಿ ತಂಪಾಗಿ ಬದುಕುತ್ತಿದ್ದೇವೆ. ಮನೆಗೆ ಮಳೆ ನೀರು ಕೊಯ್ಲು ಹಾಗೂ ಸೌರಶಕ್ತಿ ಬಳಕೆಯೂ ಇದೆ ಎನ್ನುತ್ತಾರೆ ಪ್ರಕಾಶ ಭಟ್.

- ಚಿತ್ರ-ಲೇಖನ: ಬಸವರಾಜ ಹಿರೇಮಠ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ಸತ್ತವರಿಂದಲೂ ವೋಟಿಂಗ್, SIR ಉಪಯೋಗಗಳ ಕುರಿತು ಚೆನ್ನಿತ್ತಲಾರನ್ನು ಕೇಳಿ': ರಾಹುಲ್ ಗಾಂಧಿಗೆ ಸುರೇಶ್ ಗೋಪಿ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ