ಮಹಿಳೆ-ಮನೆ-ಬದುಕು

ಕಚ್ಚೇರಿ!

'ನಿರ್ಮಲಾ, ಯಾಕೆ ಮಂಕಾಗಿದ್ದಿ? ಏನಾಯ್ತು?'
'ಆಫೀಸಿನಲ್ಲಿ ಅವನ ಹಿಂಸೆ ಜಾಸ್ತಿ ಆಗಿದೆ ಕಣೆ. ದಿನವೂ ಪೀಡಿಸ್ತಾನೆ. ಕಣ್ಣಿಗೆ ಬಿದ್ದರೆ ಸಾಕು, ಆಫೀಸ್ ಬಾಯ್ ಕೈಲಿ ಹೇಳಿಕಳಿಸ್ತಾನೆ' ಎಂದು ಅಸಮಾಧಾನ ತೋಡಿಕೊಂಡಳು.
'ಥೂ, ನಿನ್ನ ಈ ನಾಚಿಕೆ ಸಂಕೋಚ ಕಂಡೇ ಅವನು ಹಾಗಾಡೋದು. ಅಲ್ವೆ, ಹೊರಗೆ ದುಡೀಲೇಬೇಕು ಅಂತ ಇರೋವಾಗ ಧೈರ್ಯವಾಗಿರ್ಬೇಕು. ಯಾರೇ ಬಿಡ್ತಾರೆ? ಲಕ್ಷಣವಾಗಿದ್ದಿ. ನನ್ನ ಗಂಡನಿಗೆ ಮಾತ್ರ ನಾನು ಹೆಣ್ಣು ಅಂತ ತಿಳ್ಕೋ ಸಾಕು. ಆಫೀಸಲ್ಲಿ ನೀನೂ ಒಬ್ಬ ಗಂಡ್ಸು ಅನ್ಕೊ. ತಗ್ಗಿ ಬಗ್ಗಿದರೆ ಸವಾರಿ ಮಾಡಿಬಿಡ್ತಾರೆ. ಇಂಥವರ ಮುಂದೆ ಮಾತು, ರೀತಿ ಎಲ್ಲ ಕತ್ತೆ ಒದ್ದ ಥರಾ ಇರಬೇಕು. ನೋಡಯ್ಯ ನಾನು ಬಂದಿರೋದು ನನ್ನ ಮನೆ ಕಷ್ಟಕ್ಕೆ. ನಿನಗಿಂಥ ತೆವಲುಗಳಿದ್ರೆ ಅದಕ್ಕೆ ಬೇರೆ ಹುಡುಕ್ಕೋ. ಇಷ್ಟಕ್ಕೂ ಹೆಚ್ಚಂದ್ರೆ ಕೆಲಸದಿಂದ ಕಿತ್ ಹಾಕ್ತೀಯ ತಾನೇ? ಆಯ್ತು ಹೋಗು. ಇಂಥ ಕಡೆ ಇದ್ದೆ, ಅಲ್ಲಿ ಹೀಗೆ ಬಲವಂತ ಮಾಡಿದ. ಅದಕ್ಕೆ ಬಿಟ್ಟು ಬಂದೆ ಅಂತ ಎಲ್ಲ ಕಡೆ ನಿನ್ನ ಹೆಸರು ಹೇಳ್ತೀನಿ ಬಿಡು ಅನ್ನಬೇಕು'
'ಅಬ್ಬ ನಿನ್ನ ಮಾತುಗಳು ಕೇಳ್ತಾ ಇದ್ರೆ ಮೈಯಲ್ಲಿ ಶಕ್ತಿ ಬರ್ತಾ ಇದೆ. ಅಂದ ಹಾಗೆ ನಿನಗೆ ಇಂಥ ಸಂದರ್ಭಗಳು ಬಂದಿಲ್ವಾ?'
ನಕ್ಕುಬಿಟ್ಟೆ. 'ನಕ್ಕರೆ ಏನರ್ಥ? ಬಾಯಿಬಿಟ್ಟು ಹೇಳು. ನೀನು ನನಗಿಂತ ಲಕ್ಷಣವಾಗಿದ್ದಿ.'
'ನಾನೂ ತುಂಬಾ ಎದುರಿಸಿದ್ದೀನಿ ಕಣೆ. ಇವತ್ತಿಗೂ ನನಗೆ ಕಿರುಕುಳ ಇದೆ ಅಂದರೆ ನಂಬ್ತೀಯಾ? ನಾನು ಹೆದರಲ್ಲ. ಹೆದರಿಸ್ತೀನಿ. ಬೇಸರವಾಗುತ್ತೆ. ಲವಲವಿಕೆಯಿಂದಿದ್ದ ಜೀವ ಈಗೀಗ ಯಾಕೋ ನಿರ್ಲಿಪ್ತವಾಗಿದೆ.' ನಿಟ್ಟುಸಿರಿಟ್ಟು ಮುಂದುವರಿಸಿದೆ, 'ಮೊನ್ನೆ ಹಳೆ ಸಹೋದ್ಯೋಗಿ ಸಿಕ್ಕಿದ್ದ. ಹಿಂದಿನಂತೆಯೇ ಭುಜ ಕುಣಿಸಿಕೊಂಡು ಮಾತನಾಡೋದು. ಒಂದು ಕಾಲದಲ್ಲಿ ಅಸಹ್ಯ ಬರುವ ಹಾಗೆ ಪ್ರೀತಿ ಪ್ರೀತಿ ಅಂತ ಪ್ರಾಣ ತಿಂತಿದ್ದ. 'ಈ ಪ್ರಪಂಚದಲ್ಲಿ ನಾಯಿಹಂದಿಗಳನ್ನಾದ್ರೂ ಪ್ರೀತಿಸ್ತೀನಿ. ನಿನ್ನ ಪ್ರೀತಿಸಲಾರೆ ಮಾರಾಯ' ಅಂತ ಮುಖ ತಿರುವಿದರೂ ಜಗ್ಗಿರಲಿಲ್ಲ. ಕೆಲವು ಎಮ್ಮೆ ಚರ್ಮದವು ಯಾವ ರೀತಿ ಹೇಳಿದರೂ ಅರ್ಥ ಮಾಡಿಕೊಳ್ಳಲು ಅಸಮರ್ಥವಾಗಿರುತ್ವೆ. ಇವನಿರಲಿ, ಅವನು, ಆ ಖ್ಯಾತ ವಿಮರ್ಶಕ ಎಂದೂ ಹತಾಶನಾಗದೆ ಸಂಜೆ ಆಫೀಸ್ ಬಿಡುವುದನ್ನೇ ಕಾಯುತ್ತಾ, ಸ್ಕೂಟರ್ ಹಿಡಿದು ನಿಲ್ಲುತ್ತಿದ್ದ. 'ಮನೆವರೆಗೂ ಡ್ರಾಪ್ ಮಾಡಲೇ? ಇದೊಂದು ಸೌಭಾಗ್ಯ ಒದಗಿಸಿಕೊಡಿ ದಯವಿಟ್ಟು' ಎಂದು ಕೈ ಮುಗಿದು ಕೇಳುತ್ತಿದ್ದ. ಸಾಹಿತ್ಯ ಭಾಷೆಯಲ್ಲೇ 'ದಯವಿಟ್ಟು ಆ ತೊಂದರೆ ತಗೋಬೇಡಿ. ನನಗಿದು ವಾಕಿಂಗ್ ಸಮಯ. ತಾವಿನ್ನು ಹೋಗಬಹುದು'ಎಂದು ಮುಂದೆ ಹೋದ ಮೇಲೆ, 'ಅಯ್ಯೋ ನಾನೊಂದು ಪೆದ್ದು, ಆಟೋ ಚಾರ್ಜ್ ಉಳಿಸಬಹುದಿತ್ತು' ಅನಿಸುತ್ತಿದ್ದರೂ ಇಲ್ಲಸಲ್ಲದ್ದು ಎಂದೂ ಮೈಗೆಳೆದುಕೊಳ್ಳಲಿಲ್ಲ.
ಅವನು ಬಹಳ ಹುಡುಗೀರನ್ನ ಹೀಗೆ ಪಟಾಯಿಸಕ್ಕೆ ನೋಡ್ತಿದಾನೆ ಅಂತ ಗೊತ್ತಿತ್ತು ಬಿಡು. ಎಷ್ಟೋ ವರ್ಷಗಳಾದ ಮೇಲೆ ಅವನಾಕೆ, ಅವನು ಒಂದು ಸಮಾರಂಭದಲ್ಲಿ ಎದುರುಗೊಂಡರು. ಅವನದೇ ಸ್ಪೀಚ್ ಇತ್ತು. ಅವನಾಕೆ ಹತ್ತಿರ ಬಂದು 'ನಿಮಗೆ ಕೈ ಮುಗೀತೀನಿ. ನೀವು ಈಗಲೂ ಹಾಗೇ ಇದೀರಿ. ಇವರ್ನ ಮಾತಾಡಿಸಬೇಡಿ. ಈಗೀಗ ಸ್ವಲ್ಪ ಸರಿ ಹೋಗ್ತಾ ಇದಾರೆ' ಎಂದು ಅಲವತ್ತುಕೊಂಡಾಗ ನನಗೆ ನಗು ಬಂತು. 'ಈಗೀಗ' ಎಂದರೆ ಇನ್ನೂ ಸಂಪೂರ್ಣ ಸುಧಾರಿಸಿಲ್ಲ ಎಂದಗಾಯ್ತು. ವಯಸ್ಸಿನ ಪರಿವೆ ಯಾಕಿಲ್ಲ ಇವರಿಗೆ? ಪಾಪ, ಹೆಂಡತಿಗೆ ಈ ವಯಸ್ಸಿನಲ್ಲಿ ಗಂಡನ ಕಾಯುವ ಕೆಲಸ ಎಷ್ಟು ಕಷ್ಟ? ಗಂಡನಿಗೆ ಹೇಳಲಾಗದ್ದು ಕಂಡವರಿಗೇ ಹೇಳಬೇಕಾದರೆ..?
ಇನ್ನೊಬ್ಬನಿದ್ದ. ಹುಡುಗೀರು ಅಂದ್ರೆ ಏನು ಬೇಕಾದ್ರೂ ಮಾತಾಡಬಹುದು ಎಂಬ ಧೋರಣೆಯವನು. ಬಾಯಿಬಿಟ್ಟರೆ ಪಾರುಪತ್ಯ ತಗೊಂಡು ನೇರವಾಗಿ ಏಕವಚನದ ಜೊತೆಗೆ 'ಚಿನ್ನಾ' ಅಂತಾನೇ ಶುರು ಹಚ್ಕೋತಿದ್ದ. ಅವನ ನಾಲಿಗೆಗೆ ತುಕ್ಕು ತರಿಸಿದ್ದು ನಾನೇ. ಒಂದಿಬ್ಬರು ಆಟೋ ಡ್ರೈವರ್‌ಗಳ ಕೈಲಿ ಅವನ ಮನೆಯ ಲ್ಯಾಂಡ್‌ಲೈನ್‌ಗೆ ಕಾಲ್ ಮಾಡಿಸಿ, ಅವನ ಹೆಂಡತಿಗೆ 'ಚಿನ್ನಾ' ಬಳಸಿದೆ ನೋಡು, ಅವನ ಸದ್ದೇ ಉಡುಗಿ ಹೋಯ್ತು.
ಇನ್ನು ನನ್ನ ಮೊದಲ ಬಾಸ್ ಏನು ಕಡಿಮೆ ಇಲ್ಲ. ನಾನು ಗೋರ್ಕಲ್ಲ ಮೇಲೆ ಮಳೆ ಸುರಿದಂಗೆ ಇದ್ದಾಗ ಯಾರೋ ಮಲೆಯಾಳಿಗಳನ್ನ ಕರೆಸಿ ನಾನು ಕೂರುವ ಕುರ್ಚಿಗೆ ನಿಂಬೆಹಣ್ಣು ಕಟ್ಟಿ ಊದಿನಕಡ್ಡಿ ಸಹಿತ ಪೂಜಿಸಿದ್ದ ಪುಣ್ಯಾತ್ಮ. ನಾನು ಹೆದರಿ ಕಾರಣ ಕೇಳಿದ್ದಕ್ಕೆ ಏನಂದ ಗೊತ್ತಾ? 'ನಿನ್ನಲ್ಲಿ ಶಕ್ತಿದೇವತೆ ಇದ್ದಾಳೆ ಅಂತ ತಿಳೀತು ತಾಯಿ. ಅದಕ್ಕೆ ಈ ಪೂಜೆ' ಅಂದ. ಆ ಕ್ಷಣಕ್ಕೆ ಬೀಗಿದೆ. ದೇವಿಯ ಹಾಗೆ ಅವತರಿಸಿ, 'ಮಗು ನೀನು ಕಂಡಕಂಡವರ ಮೇಲೆ ಹೀಗೆ ಕಣ್ಣಿಟ್ಟರೆ ಬೀದಿಪಾಲಾಗ್ತಿ ನೋಡು' ಅಂದೆ. ಆತ ತೆಪ್ಪಗಾಗಿ ಹೋದ.'
ಹೆಣ್ಣಿಗೆ ಧೈರ್ಯ ಇರಬೇಕು ಕಣೆ. ಸಂಸಾರ ಎಂಬ ನೊಗ ಹೊತ್ತ ಮೇಲೆ ಪಥ ಜರುಗಲು ದುಡೀಬೇಕು. ಯಾವ ಹೆಣ್ಣೂ ಮೋಜುಮಸ್ತಿಗಾಗಿ ದುಡಿಯಲು ಬರುವುದಿಲ್ಲ. ಬಹಳ ಹೆಣ್ಣು ಮಕ್ಕಳಿಗೆ ಮನೆಯಲ್ಲಿ ಕಷ್ಟವಿರತ್ತೆ. ಅಥವಾ ಫ್ಯೂಚರ್ ಪ್ಲಾನ್ ಅಂತ ಇರತ್ತೆ. ಹಾಗೆ ಬರೋರಿಗೆ ನಾನು ಹೇಳೋದು ಸುರಕ್ಷಿತವಾಗಿ ಮನೆ ಮುಟ್ಟುವ ಗಟ್ಟಿ ನಿರ್ಧಾರ ತೆಗೆದುಕೊಂಡು ಮನೆ ಬಿಡಿ. ಇಲ್ಲಿ ನಮ್ಮ ಹೊಣೆಗಾರಿಕೆ ನಮ್ಮದೇ. ಯಾರು ಯಾರನ್ನೂ ರಕ್ಷಿಸುವುದಿಲ್ಲ. ಯಾರು ಯಾರಿಗೋ ಹೇಳಿಕೊಂಡು ತಪ್ಪು ಮಾಡಬಾರದು. ಸಹಾಯಕ್ಕೆ ಬಂದಂತೆ ತೋರುವವರು ಅವರಿಗೆ ದಕ್ಕದವಳು ನನಗಾದರೂ ದಕ್ಕುವಳೇ ನೋಡ್ತಾರೆ. ಇಂಥ ವಿಚಾರವನ್ನು ಯಾರಿಗಂಥ ಹೇಳಕ್ಕಾಗುತ್ತೆ? ಕೆಲವು ಪರಿಹಾರಗಳು ನಮ್ಮ ಕೈಲೇ ಇರುತ್ತೆ. ಆಗಲೇ ಹೇಳಿದೆನಲ್ಲ, ನೀನು ಬದಲಾಗಬೇಕು ನಿಮ್ಮಿ ತಿಳೀತಾ?'   
'ಅರ್ಥ ಆಯ್ತು ಕಣೆ. ಇನ್ನು ಆಫೀಸ್‌ನಲ್ಲಿ ನಾನೊಂದು ಗಂಡು ಅಷ್ಟೆ. ಸರೀನಾ?' ನಕ್ಕಳು.

- ಭಾಗ್ಯ ಕೃಷ್ಣಮೂರ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ

ಕೋಟಿ ಕೋಟಿ ಲೂಟಿ: ಅರಣ್ಯ ಇಲಾಖೆ ಮಾಜಿ ಅಧಿಕಾರಿಗೆ ಕೋರ್ಟ್ ಶಾಕ್; ಬರೋಬ್ಬರಿ 1.38 ಕೋಟಿ ದಂಡ, 3 ವರ್ಷ ಜೈಲು ಶಿಕ್ಷೆ..!