ಎಲ್ಲರಿಗಿಂತ ಭಿನ್ನವಾಗಿ ಮನೆ ಕಟ್ಟಬೇಕು ಎಂಬ ಆಸೆ ಎಲ್ಲರಿಗೂ ಇರುತ್ತೆ. ಆದರೆ, ಅದಕ್ಕೆಲ್ಲ ಕೈಯಿಂದ ಸಿಕ್ಕಾಪಟ್ಟೆ ಖರ್ಚು ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಇಷ್ಟೆಲ್ಲ ಖರ್ಚು ಮಾಡಿದರೂ ಕೆಲವೊಮ್ಮೆ ನಾವು ಅಂದುಕೊಂಡಂತೆ ಮನೆ ಅಂದವಾಗಿರುವುದಿಲ್ಲ. ಹಾಗೆಂದು ಹೇಗೆ ಬೇಕೋ ಹಾಗೆ ಮನೆಯ ಅಂದವನ್ನು ಮಾಡುವಂತಿಲ್ಲ. ವಿಶೇಷವಾಗಿ ಮನೆಯ ಒಳವಿನ್ಯಾಸವನ್ನ.
ಹೊರಗಿನ ಅಂದಕ್ಕಿಂತ ಹೆಚ್ಚಾಗಿ ಒಳಗಿನ ವಿನ್ಯಾಸಕ್ಕೆ ಹೆಚ್ಚು ಒತ್ತು ಕೊಡುತ್ತಾರೆ. ಅದು ಈಗ ಸಾಮಾನ್ಯ ಎಂಬಂತಾಗಿದೆ. ಆದರೆ, ಒಳವಿನ್ಯಾಸ ಎಲ್ಲರನ್ನು ಆಕರ್ಷಿತಗೊಳ್ಳಬೇಕಾದರೆ, ಅಲ್ಲಿರುವ ವಸ್ತುಗಳಿಗಿಂತಲೂ ಗೋಡೆಗಳೇ ಹೆಚ್ಚು ಪ್ರಾಮುಖ್ಯ ವಹಿಸುತ್ತವೆ.
ಇತ್ತೀಚಿನ ದಿನಗಳಲ್ಲಿ ಗೋಡೆಗೆ ಬಣ್ಣ ಹಚ್ಚುವುದಕ್ಕಿಂತ ಮನೆ ಕಟ್ಟುವಾಗಲೇ ಗೋಡೆಯನ್ನು ವಿನ್ಯಾಸಗೊಳಿಸುವ ಕಾರ್ಯ ನಡೆಯುತ್ತಿದೆ. ಒಂದು ವೇಳೆ ಗೋಡೆಯನ್ನು ಮೊದಲೇ ವಿನ್ಯಾಸಗೊಳಿಸದಿದ್ದಲ್ಲಿ, ಮನೆಯ ನಿರ್ಮಾಣ ಸಂಪೂರ್ಣವಾದ ನಂತರ ಗೋಡೆಗೆ ವಿವಿಧ ವಸ್ತುಗಳಿಂದ ವಿನ್ಯಾಸಗೊಳಿಸುವ ತಂತ್ರಗಾರಿಕೆ ಈಗಿನ ಎಂಜಿನಿಯರ್ ಮಾಡುತ್ತಿದ್ದಾರೆ.
ಅಷ್ಟೇ ಅಲ್ಲ, ಗೋಡೆಯ ವಿನ್ಯಾಸ ಹಾಗೂ ಬಣ್ಣಕ್ಕೆ ತಕ್ಕಂತೆ ಪೀಠೋಪಕರಣಗಳನ್ನು ಹೊಂದಿಸಲಾಗುತ್ತದೆ. ಜತೆಗೆ 3ಡಿ ವಿನ್ಯಾಸಿತ ಗೋಡೆಯ ರೂಪವನ್ನೂ ಎಂಜಿನಿಯರ್‌ಗಳು ರೂಪಿಸುತ್ತಿದ್ದಾರೆ. ಅಂದರೆ, ಗೋಡೆಯ ಮೇಲೆ 3ಡಿಯಂತೆಯೇ ಭಾಸವಾಗುವ ಬಣ್ಣವನ್ನು ಲೇಪಿಸಿ ಆಕರ್ಷಣೆಯಾಗುವಂತೆ ಮಾಡುತ್ತಿದ್ದಾರೆ.
3ಡಿ ಗೋಡೆಯಲ್ಲಿ ಸಾಂಪ್ರದಾಯಿಕ, ಕಲಾತ್ಮಕ ಸೇರಿದಂತೆ ನಾನಾ ನಮೂನೆ ವಿನ್ಯಾಸದ ಕಲೆಗಳನ್ನು ರೂಪಿಸಲಾಗುತ್ತಿದೆ. ಈ ಗೋಡೆಗೆ ತಕ್ಕಹಾಗೆ ಪೀಠೋಪಕರಣಗಳನ್ನು ಅದರ ಹತ್ತಿರದ ಇಡಲಾಗುತ್ತದೆ. ಅಷ್ಟೇ ಅಲ್ಲ, ಅದಕ್ಕೆ ತಕ್ಕುನಾದ ಹೂವಿನ ಕುಂಡವನ್ನೂ ಅಲಂಕಾರಕ್ಕೆಂದು ಬಳಸಲಾಗುತ್ತದೆ. ಅಂದರೆ 3ಡಿ ಗೋಡೆಗೆ ಇವೆಲ್ಲವೂ ಮತ್ತಷ್ಟು ಮೆರುಗು ನೀಡುವುದು ಇದರ ಪ್ರಮುಖ ಉದ್ದೇಶ.
ಯಾವ ಗೋಡೆಗೆ ಉತ್ತಮ?
3ಡಿ ಗೋಡೆಯನ್ನು ಮನೆ ಹಾಲ್‌ಗೆ ಅಳವಡಿಸಿದಂತೆ ಮನೆಯ ಇತರ ಭಾಗಗಳಿಗೂ ಅಳವಡಿಸಬಹುದು. ಮುಖ್ಯವಾಗಿ ಬೆಡ್ ರೂಂ ಮತ್ತು ಬಾತ್ ರೂಂಗೆ. ಇಲ್ಲಿಯೂ ಗೋಡೆಗೆ ಬಣ್ಣ ಬಳಿಯುವ ಬದಲು ಅದರ ಮೇಲ್ಭಾಗಕ್ಕೆ ಫೈಬರ್ ಅಥವಾ ಉತ್ತಮ ಗುಣಮಟ್ಟದ ಪ್ಲಾಸ್ಟಿಕ್ ಬಳಸಿ ವಿವಿಧ ಬಗೆಯ ವಿನ್ಯಾಸಗೊಳಿಸಲಾಗಿರುತ್ತದೆ. ಹೆಚ್ಚಾಗಿ ನೀಲಿ, ಕಂದು, ಚಾಕೊಲೇಟ್ ಮತ್ತು ಬಿಳಿ ಬಣ್ಣದ 3ಡಿ ಗೋಡೆ ಬೆಡ್‌ರೂಂಗೆ ಉತ್ತಮ.
ಇತ್ತೀಚೆಗೆ ಪರಿಸರಸ್ನೇಹಿ 3ಡಿ ಗೋಡೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಅಂದಹಾಗೆ, ಈ ಪರಿಸರಸ್ನೇಹಿ 3ಡಿ ಗೋಡೆಯನ್ನು ಸಕ್ಕರೆಯನ್ನು ತೆಗೆದ ನಂತರ ಉಳಿದ ಕಬ್ಬಿನ ಜಲ್ಲೆಯಿಂದಲೂ ರೂಪಿಸಬಹುದಂತೆ. ಇದನ್ನು ಅಮೆರಿಕ ಮೂಲದ ವಾಲ್ ಆರ್ಟ್ 3ಡಿ ಎಂಬ ಕಂಪನಿಯು ಸಾಬೀತು ಕೂಡ ಮಾಡಿದೆ. ಅಷ್ಟೇ ಅಲ್ಲ, ವಿವಿಧ ದೇಶಗಳಲ್ಲಿ ಈ ಕಂಪನಿಯು ಈಗಾಗಲೇ ಇಂಥ ಪರಿಸರಸ್ನೇಹಿ 3ಡಿ ಗೋಡೆಯನ್ನೂ ಅಳವಡಿಸಿದೆ.
ಬರೀ ಮನೆಗಳಿಗೆ ಮಾತ್ರವಲ್ಲ, ಹೋಟೆಲ್, ರೆಸ್ಟೋರೆಂಟ್ ನೂತನ ಬಗೆಯ ಮನೆಗಳು ಸೇರಿದಂತೆ ಹಲವೆಡೆ ಈ ರೀತಿಯ 3ಡಿ ಗೋಡೆಗಳನ್ನು ಅಳವಡಿಸಿ ಆಕರ್ಷಣೆ ಮಾಡಲಾಗುತ್ತಿದೆ.
- ಬ್ರಹ್ಮಾನಂದ ಎನ್. ಹಡಗಲಿ