ಕೈ ಬಿಡುವ ಆಪ್ಷನ್ ಹುಡುಗರಿಗೇ ಏಕೆ? ನಾವೇಕೆ ಬಿಡಬಾರದು ಎಂಬುದು ಅವಳ ಪಾಲಿಸಿ. ಹೀಗಾಗಿ ಬಟ್ಟೆ ಬದಲಿಸಿದ ರೀತಿ ಬಾಯ್‌ಫ್ರೆಂಡ್‌ಗಳನ್ನು ಬದಲು ಮಾಡುವುದು ಅವಳಿಗೆ ಹವ್ಯಾಸವಾಗಿಬಿಟ್ಟಿತ್ತು. ಜೀವನ ತೀರಾ ಚಿಕ್ಕದು, ಎಷ್ಟು ಸಾಧ್ಯವೋ ಅಷ್ಟು ಎಂಜಾಯ್ ಮಾಡಿ ಬಿಡಬೇಕೆಂಬುದು ಅವಳ ವಾದ.
ಆಕೆಯ ಸಂಪ್ರದಾಯಸ್ಥ ಕುಟುಂಬದಿಂದ ಬಂದವಳು. ಊರಿನಲ್ಲಿ ಅಪ್ಪ-ಅಮ್ಮ, ಅಜ್ಜ-ಅಜ್ಜಿ ಅಣತಿಯಂತೆ ನಡೆದುಕೊಂಡು ಒಳ್ಳೆ ಹುಡುಗಿ ಎಂಬ ಬಿರುದು ಹೊಂದಿದ್ದಳು. ಊರಿನವರಿಂದಲೂ ಇದ್ದರೆ ಇಂಥ ಹೆಣ್ಣು ಮಗಳು ಹುಟ್ಟಬೇಕೆಂಬ ಹೆಗ್ಗಳಿಕೆಯ ಮಾತು ಕೇಳಿದ್ದಳು. ವಿದ್ಯಾಭ್ಯಾಸಕ್ಕಾಗಿ ಬೆಂಗಳೂರು ಎಂಬ ಶಹರಕ್ಕೆ ಕಾಲಿಟ್ಟಳು. ಇರಲು ಒಂದು ಪಿಜಿ ಗೊತ್ತು ಮಾಡಿದಳು.
ಕಾಲೇಜಿನಲ್ಲಿ ನಾಲ್ಕೈದು ಹುಡುಗರು ತನ್ನ ಹಿಂದೆ ಬಿದ್ದಿದ್ದಾರೆ ಎಂದು ನಿಧಾನವಾಗಿ ಅರಿವಾಯಿತು. ಇಲ್ಲಿಂದಲೇ ಶುರುವಾಗಿದ್ದು ಅವಳ ಆಟ. ಸುಂದರಿ, ರಸ್ತೆ ಮೇಲೆ ನಡೆಯುತ್ತಿದ್ದರೆ ಒಮ್ಮೆ ಎಲ್ಲರೂ ತಿರುಗಿ ನೋಡಿಕೊಂಡು ಹೋಗುವಷ್ಟು ಸೌಂದರ್ಯ ಇತ್ತು. ಈ ಅಂದವೇ ಅಹಂ ತಂದುಕೊಟ್ಟಿತು. ನಾನು ಏನು ಮಾಡಿದರೂ ಸರಿ ಎಂಬ ಉಡಾಳತನವನ್ನು ಬೆಳೆಸಿತು. ಮೊದಲು ಸಹಪಾಠಿಯೊಬ್ಬನೊಡನೆ ಪ್ರೇಮ ಅಂಕುರಿಸಿತು. ಕೆಲವೇ ತಿಂಗಳು ಜತೆಗಿದ್ದಿದ್ದು. ಜಗಳವಾಡಿ ಮೊದಲ ಪ್ರೇಮವನ್ನು ಅಲ್ಲೇ ಚಿವುಟಿದಳು. ಏಕೆಂದರೆ, ಆಕರ್ಷಕ ರೂಪಿಗೆ ಆಕರ್ಷಣೆಗಳೂ ಬಹಳ. ನಂತರ ಇನ್ನೊಬ್ಬನ ಸ್ನೇಹ, ಪ್ರೀತಿ, ಅವನ ಜತೆ ಸುತ್ತಾಟ. ಆತನನ್ನೂ ಬಿಟ್ಟಳು.
ಮೂರನೇ ಬಾಯ್‌ಫ್ರೆಂಡ್ ತುಂಬಾ ಸೌಮ್ಯ ಸ್ವಭಾದವ. ಇವಳು ಕಾಲ ತುದಿಯಲ್ಲಿ ತೋರಿಸಿದ್ದನ್ನು ತಲೆ ಮೇಲೆ ಹೊತ್ತು ಮಾಡುತ್ತಿದ್ದ. ಈ ಮೊದಲಿನವರು ಹೀಗಿರಲಿಲ್ಲ ಎಂದೇನಲ್ಲ. ಈಕೆ ಕೇಳಿದ್ದೆಲ್ಲ ಗ್ರಾಂಟೆಡ್. ಆದರೆ ಇವನಷ್ಟು ಸೂಕ್ಷ್ಮ ಸ್ವಭಾವದವರಲ್ಲ. ಮೊದಮೊದಲಿಗೆ ಮೂರನೆಯವ ಹಿಡಿಸಿದರೂ ನಂತರ ಬೋರ್ ಬರಲಾರಂಭಿಸಿದ. ಅಷ್ಟರಲ್ಲಿ ಓದು ಮುಗಿದಿತ್ತು. ಮನೆಯಲ್ಲಿ ಗಂಡನ್ನು ಗೊತ್ತು ಮಾಡಿದ್ದರು. ಆತ ಸ್ಥಿತಿವಂತ ಸಹ. ಸ್ವಂತ ಉದ್ಯೋಗ ನಡೆಸುತ್ತಿದ್ದ. ಸಾಕಷ್ಟು ಆಸ್ತಿ, ಕೈ, ಕಾಲುಗಳಿಗೆ ಆಳುಗಳು. ಸರಿ ಇನ್ನೇನು ಬೇಕು? ಇವನ ಕೈ ಬಿಟ್ಟಳು. ಮನೆ ಸೇರಿ ಮದುವೆ ಆದಳು.
ಇಲ್ಲಿ ಶುರುವಾಯ್ತು ಹೊಸ ಪ್ರಾಬ್ಲಂ. ಇಷ್ಟು ದಿನ ಈಕೆ ಹೇಳುತ್ತಿದ್ದ ಹಾಗೆ ಕೇಳುತ್ತಿದ್ದ 3 ಬಾಯ್‌ಫ್ರೆಂಡ್‌ಗಳ ರೀತಿ ಗಂಡ ಇರಲೇ ಇಲ್ಲ. ತನ್ನ ಸೌಂದರ್ಯಕ್ಕೆ ಕಾಲ ಕೆಳಗೆ ಬಿದ್ದಿರುತ್ತಾನೆ ಎಂಬ ಕಲ್ಪನೆಯೂ ಉಲ್ಟಾ ಹೊಡೆದಿತ್ತು. ಮನೆಯಲ್ಲಿ ಎಲ್ಲ ಸೌಕರ್ಯವಿತ್ತು. ಹೊರ ಹೋಗಬೇಕೆಂದರೆ ಕಾರೂ ಇತ್ತು. ಆದರೆ ತಾನು ಹಾಕಿದ ಗೆರೆ ದಾಟಕೂಡದು. ಹೆಣ್ಣು ಮಕ್ಕಳಿಗೇಕೆ ಉದ್ಯೋಗ ಎಂಬ ಧೋರಣೆ ಅವನದಾಗಿತ್ತು. ಇವಳಿಗೆ ಸಿಗಬೇಕಿದ್ದ ಪ್ರೀತಿಯಲ್ಲಿ ಕೊರತೆ ಇತ್ತು. ಇದು ಆಕೆಯನ್ನು ಸಾಕಷ್ಟು ಡಿಪ್ರೆಶನ್‌ಗೆ ದೂಡಿತು. ಆಗ ಶುರುವಾಗಿದ್ದೇ ವೈಮನಸ್ಸು.
ಛೆ! ಮೊದಲನೆಯವ ನನ್ನನ್ನು ಹೇಗೆ ನೋಡಿಕೊಳ್ಳುತ್ತಿದ್ದ. ನನ್ನ ಒಂದು ಫೋನ್ ಕಾಲ್, ಮೆಸೇಜ್‌ಗಾಗಿ ಹಾತೊರೆಯುತ್ತಿದ್ದ. ಒಂದು ದಿನ ಮಾತನಾಡಿಸಿಲ್ಲವಾದರೆ ಚಡಪಡಿಸುತ್ತಿದ್ದ. ಅಂಥವನನ್ನು ಕಾಲಿನಿಂದ ಒದ್ದು ಬಂದೆ. ಇನ್ನು ಎರಡನೆಯವನಿಗೆ ರಾತ್ರಿ ಎಷ್ಟು ಹೊತ್ತಿಗೇ ಫೋನ್ ಮಾಡಿ ಇಂಥದ್ದು ಬೇಕೆಂದರೆ ಸಾಕು. ಎಷ್ಟೇ ಕಷ್ಟವಾದರೂ 20 ಕಿ.ಮೀ. ದೂರದಿಂದ ತಂದು ಕೊಡುತ್ತಿದ್ದ. ಅವನನ್ನೂ ಬಿಟ್ಟೆ. ಮೂರನೆಯವನಂತೂ ನನಗೆ ಆರೋಗ್ಯ ಹದಗೆಟ್ಟು ಹಾಸಿಗೆ ಹಿಡಿದಾಗ ತನ್ನ ರೂಂಗೆ ಕರೆತಂದು ನಾಲ್ಕು ದಿನ ಸೇವೆ ಮಾಡಿ ಹುಷಾರು ಮಾಡಿದ್ದ. ಆದರೆ ಈಗ ಗಂಡ ಇದಾವುದನ್ನೂ ಕೇರೇ ಮಾಡಲ್ಲ. ಆರಾಮಿಲ್ಲದಿದ್ದರೆ ಮನೆಯಲ್ಲಿರುವ ಕೆಲಸದವಳ ಜತೆ ಕಳುಹಿಸುತ್ತಾನೆ. ಇಲ್ಲವೇ ಫ್ಯಾಮಿಲಿ ಡಾಕ್ಟರನ್ನೇ ಮನೆಗೆ ಕರೆಸಿ ಚಿಕಿತ್ಸೆ ಕೊಡಿಸುತ್ತಾನೆ ವಿನಾ ನಿನಗೆ ಈಗ ಹೇಗಿದೆ? ಏನು ಬೇಕು, ಇಂಥ ಯಾವ ಮಾತುಗಳನ್ನೂ ಆಡುವುದಿಲ್ಲ.
ಇದೇ ಯೋಚನೆಯಲ್ಲಿ ಗಂಡನ ಜತೆ ದಿನಾ ಜಗಳ, ಹೊಡೆದಾಟ ಶುರುವಾಗಿ ಮುಂದೊಂದು ದಿನ ಆತನನ್ನೂ ಬಿಟ್ಟು ಮನೆಗೆ ಬಂದು ಕೂತಿದ್ದಾಳೆ. ಎಲ್ಲರನ್ನೂ 'ಕೈ' ಬಿಟ್ಟು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾಳೆ.
- ಆದರ್ಶ ಎಸ್. ಅಂಚೆ
adianche@gmail.com