ಇಷ್ಟದ ಸೂರು ಸಿಗೋದು ಕಷ್ಟ. ಸಿಕ್ಕರೂ ಅದರಲ್ಲಿ ಕಷ್ಟಪಟ್ಟು ಇರೋದು ಇನ್ನೂ ಜಟಿಲ. ಹೀಗಾಗಿ ಕಟ್ಟಿಸಿದ ಮನೆ ಖರೀದಿ ಮಾಡಿರುತ್ತೀರಿ. ಇಲ್ಲವೇ ನಿಮ್ಮ ತಂದೆ, ಅಜ್ಜನೋ ಕಟ್ಟಿಸಿದ್ದ ಮನೆಯಲ್ಲಿ ವಾಸವಾಗಿರುತ್ತೀರಿ. ಆದರೆ, ಆ ಮನೆಯೊಳಗಿನ ವಿನ್ಯಾಸ ನಿಮಗೆ ಇಷ್ಟವಾಗದೇ ಇರಬಹುದು. ಹೀಗಾಗಿ ಒಳವಿನ್ಯಾಸವನ್ನು ಸ್ವಲ್ಪ ಬದಲಾವಣೆ ತರುವ ಉದ್ದೇಶವನ್ನು ನೀವು ಹೊಂದಿರಬಹುದು. ಆದರೆ ಹಾಗೆ ಮಾಡಲು ಭಯ. ವಿಟಮಿನ್ 'ಎಂ' (ಮನಿ) ಕೊರತೆಯಾದರೆ ಎಂಬ ಆತಂಕ.
ಹೌದು. ಮನೆ ಕಟ್ಟುವಾಗ ಆಗಲೀ ಅಥವಾ ಮರುವಿನ್ಯಾಸ ಮಾಡುವಾಗ ಆಗಲೀ ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಹಣ ವ್ಯಯವಾಗುತ್ತದೆ. ಹೀಗಾಗಿ ಈ ಉಸಾಬರಿಯೇ ಬೇಡವೆಂದು ಹಲವರು ಸುಮ್ಮನಾಗಿ ಬಿಟ್ಟಿರುತ್ತಾರೆ. ಆದರೆ ನೀವು ಅಂದುಕೊಂಡಂತೆ, ಹಾಕಿಕೊಂಡ ಬಜೆಟ್‌ನಲ್ಲಿ ಮನೆ ನವೀಕರಣ ಮಾಡಬಹುದು. ಆದರೆ, ಷರತ್ತುಗಳು ಅನ್ವಯಿಸುತ್ತವೆ...!
ಪ್ರಾಥಮಿಕ ತಯಾರಿ
ನೀವು ವಿನ್ಯಾಸಕಾರರನ್ನು ಭೇಟಿ ಮಾಡುವ ಮೊದಲು ಹಲವು ವಿಷಯಗಳನ್ನು ಮೊದಲೇ ಸ್ಪಷ್ಟವಾಗಿಸಿಕೊಂಡು ತೆರಳಬೇಕು. ನಿಮ್ಮ ಬಜೆಟ್ ಎಷ್ಟು ಹಾಗೂ ಅದನ್ನು ಯಾವ ರೀತಿ ಬಳಸಬೇಕೆಂದಿದ್ದೀರಿ ಎಂಬುದು ಸ್ಪಷ್ಪವಾಗಿರಲಿ. ಮನೆಯ ಸೌಂದರ್ಯ ಹೇಗಿರಬೇಕು? ಸಮಕಾಲೀನವೋ, ಅತ್ಯಾಧುನಿಕವೋ ಇಲ್ಲವೇ ಸಂಪ್ರದಾಯವೋ ಎಂಬುದನ್ನು ನಿರ್ಧರಿಸಿ. ಇದರಿಂದ ನಿಮ್ಮ ಹಣ ಉಳಿತಾಯವಾಗುದಲ್ಲದೇ ಮನೆಯನ್ನು ಸ್ಟೈಲಿಶ್ ಆಗಿಯೂ ಅಂದಗೊಳಿಸಬಹುದು. ನಂತರ ಅದಕ್ಕೆ ಯಾವ ಬಣ್ಣ ಬಳಸಬೇಕು. ಕಡು ಬಣ್ಣವೋ, ಅಥವಾ ತಿಳಿ ಬಣ್ಣವೋ ಎಂಬ ಬಗ್ಗೆ ಮೊದಲೇ ಚಿಂತಿಸಿಟ್ಟುಕೊಳ್ಳಿ.
ಪೂರ್ವ ತಯಾರಿ
ಕೆಲವು ನಿಯತಕಾಲಿಕೆಗಳ ಮೇಲೆ ಕಣ್ಣಾಡಿಸುವುದರಿಂದ ಮನೆ ವಿನ್ಯಾಸದ ಬಗ್ಗೆ ತಿಳಿವಳಿಕೆ ಹಾಗೂ ಐಡಿಯಾಗಳು ಹೊಳೆಯುತ್ತವೆ. ಇದರಿಂದ ನಿಮ್ಮ ಮನೆಗೆ ಏನು ಅವಶ್ಯಕವಾಗಿ ಬೇಕು ಎಂದು ವಿನ್ಯಾಸಕಾರನಿಗೆ ತಿಳಿಸಲು ಸಹಕಾರಿಯಾಗಲಿದೆ. ಕೆಲವು ಉದಾಹರಣೆಗಳನ್ನು ಹಾಗೂ ಚಿತ್ರಗಳನ್ನು ವಿನ್ಯಾಸಕಾರನಿಗೆ ತೋರಿಸಿದಲ್ಲಿ ಅದೇ ರೀತಿಯ ರಚನೆ ಮಾಡಿಸಿಕೊಳ್ಳಬಹುದು. ಸಣ್ಣ ಬಜೆಟ್ ಆಗಿದ್ದರೆ ಎಲ್ಲ ರೀತಿಯ ಸೌಕರ್ಯಗಳನ್ನು ನಿರೀಕ್ಷಿಸಲು ಸಾಧ್ಯವೇ ಎಂಬ ಮಾಹಿತಿ ನಿಮ್ಮ ಕೈಯಲ್ಲಿಯೇ ಸಿಗುತ್ತದೆ. ಅಲ್ಲದೆ ಇರುವ ಹಣದಲ್ಲೇ ಸೃಜನಾತ್ಮಕವಾಗಿ ಮನೆಯನ್ನು ಮರು ವಿನ್ಯಾಸ ಮಾಡಿ ಹೊಸ ಲುಕ್ ಪಡೆದುಕೊಳ್ಳಬಹುದು.
ಸಮಯದ ಬಗ್ಗೆ ಗಮನ
ಮನೆಯನ್ನು ಮರುವಿನ್ಯಾಸಗೊಳಿಸುವಾಗ ಹೆಚ್ಚು ಸಮಯ ಬೇಕು. ಅವಸರವಾಗಿ ಮಾಡುತ್ತೇವೆಂದರೆ ಸಾಧ್ಯವಿಲ್ಲ. ಇಷ್ಟೇ ಸಮಯ ನಿಗದಿಪಡಿಸುವುದು ಕೂಡ ಕಷ್ಟದಾಯಕ. ಯಾಕೆಂದರೆ, ಕುಸುರಿ ಕೆಲಸ, ಒಳವಿನ್ಯಾಸಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅವಸರ ಮಾಡಿದರೆ ಕೊನೆಯಲ್ಲಿ ಬರುವ ಬಿಲ್ ತುಟ್ಟಿಯಾಗಬಹುದು ಜೋಕೆ.
ವಿನ್ಯಾಸಕಾರನ ಆಯ್ಕೆ
ವಿನ್ಯಾಸಕಾರನ ಆಯ್ಕೆಯೂ ಇಲ್ಲಿ ಅಷ್ಟೇ ಮುಖ್ಯ. ಎಲ್ಲವನ್ನೂ ನೀವೇ ಮಾಡುತ್ತೀರಿ ಎಂದರೆ ಆಗದು. ಹೀಗಾಗಿ ನಿಮ್ಮ ಸ್ನೇಹಿತರ ಬಳಿ ಚರ್ಚೆ ಮಾಡಿ ಉತ್ತಮ ವಿನ್ಯಾಸಕಾರನನ್ನು ಆಯ್ಕೆ ಮಾಡಿಕೊಳ್ಳಿ. ವಿನ್ಯಾಸಕಾರ ಸಿಕ್ಕ ಮೇಲೆ ಆತನ ಜತೆ ಬಜೆಟ್ ಹಾಗೂ ಏನು ಬೇಕೆಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಿ. ಜತೆಗೆ ನಿಮ್ಮ ಜೀವನ ಶೈಲಿ ಬಗ್ಗೆಯೂ ವಿವರಿಸಿ. ಇದರಿಂದ ಆತ ವಿನ್ಯಾಸ ಮಾಡುವಾಗ ಇವುಗಳನ್ನೆಲ್ಲ ಗಣನೆಗೆ ತೆಗೆದುಕೊಳ್ಳಲು ಅನುಕೂಲವಾಗುತ್ತದೆ. ಯಾವುದೇ ಕಾರಣಕ್ಕೂ ಗ್ಲಾಸ್ ಸಲಕರಣೆಗಳು ಮತ್ತು ಹೆಚ್ಚು ಮೌಲ್ಯದ ರಗ್‌ಗಳನ್ನು ಬಳಸಲು ಸಲಹೆ ಕೊಡಬೇಡಿ. ಇದು ಬೇಗ ನಾಶವಾಗುವ ಸಾಧ್ಯತೆ ಹೆಚ್ಚು. ಮರುಬಳಕೆ, ಪರಿಸರಸ್ನೇಹಿ ಅಂಶಗಳಿದ್ದರೆ ಚೆನ್ನ.
ವಿನ್ಯಾಸಕಾರರನ್ನು ನಂಬಿ...
ನೀವೇ ಆಯ್ಕೆಮಾಡಿಕೊಂಡ ವಿನ್ಯಾಸಕಾರನನ್ನು ಮೊದಲು ನೀವು ನಂಬಿ. ಆತನಿಗೆ ಪೂರ್ಣ ಸ್ವಾತಂತ್ರ್ಯ ಕೊಡಿ. ಅವನು ತೆಗೆದುಕೊಂಡ ಪ್ರತಿ ನಿರ್ಧಾರವನ್ನು (ಅನಗತ್ಯವಾಗಿ) ಪ್ರಶ್ನಿಸುತ್ತಾ ಕೂರಬೇಡಿ. ಬೇಕಿದ್ದರೆ ಏನು ಎಂದು ಕೇಳಿ ತಿಳಿದುಕೊಳ್ಳಿ. ಆತನ ಕೆಲಸಕ್ಕೆ ಅನುಕೂಲ ಮಾಡಿಕೊಟ್ಟು ವಿನ್ಯಾಸ ಪೂರ್ಣಗೊಳಿಸಲು ಬಿಡಿ. ಸೃಜನಾತ್ಮಕತೆ ಹೊರಬರಬೇಕಾದರೆ ಸ್ವಾತಂತ್ರ್ಯ ಬೇಕಾಗುತ್ತದೆ.
-ಆದರ್ಶ ಎಸ್. ಅಂಚೆ
adianche@gmail.com