ಮಹಿಳೆ-ಮನೆ-ಬದುಕು

ಹಳೇಕೋಟೆ ಮನೆಯ ಹೊಸ ಲುಕ್ಕು

ಬೆಳ್ತಂಗಡಿಯ ಹಳೇಕೋಟೆಯ ಸತ್ಯಸಾಯಿ ಮಂದಿರದ ಬಳಿ ಸುಂದರವಾದ ಒಂದು ತಾರಸಿಮನೆ. ಅದರ ಹೆಸರು 'ಸಾಯಿಚಂದ್ರಪ್ರಭಾ'.

ಬೆಳ್ತಂಗಡಿಯ ಹಳೇಕೋಟೆಯ ಸತ್ಯಸಾಯಿ ಮಂದಿರದ ಬಳಿ ಸುಂದರವಾದ ಒಂದು ತಾರಸಿಮನೆ. ಅದರ ಹೆಸರು 'ಸಾಯಿಚಂದ್ರಪ್ರಭಾ'. ಈ ಮನೆಯ ಒಡೆಯರು ಸಿ.ಎಚ್. ಪ್ರಭಾಕರ್. ಮನೆಗೆ ಬರುವ ದಾರಿಯ ಇಕ್ಕಡೆಗಳಲ್ಲೂ ನೇರಳೆ, ಬಾಳೆ ಮುಂತಾದ ಹಸಿರು ವೃಕ್ಷಗಳ ಸಾಲು ನಮ್ಮನ್ನು ಸ್ವಾಗತಿಸುತ್ತಿದ್ದರೆ, ಅಂಗಳಕ್ಕೆ ಕಾಲಿರಿಸಿದರೆ ಅಲ್ಲಿ ಕಲ್ಲು ಹಾಸಿದೆ ಎಂದು ಅರಿವಾಗದಷ್ಟು ಹಸಿರು ಹಚ್ಚಡ ಹೊದಿಸಿದ ಅಲಂಕಾರಿಕ ಹುಲ್ಲಿದೆ.
ಅಂಗಳದ ನಾಲ್ಕೂ ಕಡೆ ಮನಕ್ಕೆ ಮುದ ನೀಡುವ, ಆರೋಗ್ಯದಾಯಕವಾದ ಸಾಲು ಸಾಲು ತುಳಸಿ ಗಿಡಗಳಿವೆ. ವೈವಿಧ್ಯಮಯ ಹೂ ಗಿಡಗಳಿಂದಾಗಿ ಅಂಗಳ ಶೋಭಾಯಮಾನವಾಗಿದೆ. ಇನ್ನೊಂದು ವಿಶೇಷವೆಂದರೆ ಮನೆಯ ಹೊರಗಡೆ 37 ಡಿಗ್ರಿ ಉಷ್ಣಾಂಶ ಕುದಿಯುತ್ತಿದ್ದರೂ ಈ ಮನೆಯ ಒಳಗೆ ಹವಾನಿಯಂತ್ರಿತ ಕೊಠಡಿಯಂತೆ ತಂಪೋ ತಂಪು.
ಇದಕ್ಕೆ ಕಾರಣ ಹಸಿರು ವಿನ್ಯಾಸ ಎನ್ನುತ್ತಾರೆ ಪ್ರಭಾಕರ್. ಮೂಲತಃ ಕೇರಳದ ಚಂದ್ರಗಿರಿಯ ಪ್ರಭಾಕರ್ ತಂದೆ ಪೊಲೀಸ್ ಇಲಾಖೆಯಲ್ಲಿದ್ದರು. ವರ್ಗಾವಣೆ ಹೊಂದುತ್ತ ಬೆಳ್ತಂಗಡಿಗೆ ಬಂದು ನೆಲೆಸಿದವರು. ಪದವೀಧರರಾದ ಪ್ರಭಾಕರ್ ಉತ್ತಮ ಕ್ರೀಡಾಪಟು ಮಾತ್ರವಲ್ಲ ದೈವದತ್ತ ಪ್ರತಿಭೆಯಿಂದ ಚಿತ್ರ ಕಲಾವಿದರಾದವರು.
ಸಾಯಿಭಕ್ತರಾದ ಅವರು ಸತ್ಯಸಾಯಿ ಬಾಬಾ ಚೆನ್ನೈಯಲ್ಲಿ ನಡೆಸಿದ ಅತಿರುದ್ರ ಮಹಾಯಾಗದ ಯಜ್ಞ ಮಂಟಪವನ್ನು ಕರಾವಳಿ ಶೈಲಿಯಲ್ಲಿ ತೆಂಗಿನ ಗರಿ, ಬಾಳೆನಾರು, ಅಡಕೆ ಗೊನೆ ಇತ್ಯಾದಿ ಬಳಸಿ ಚಿತ್ತಾಕರ್ಷಕವಾಗಿ ರಚಿಸಿದವರು. ಒಂದು ವರ್ಷದ ಹಿಂದೆ ರಚನೆಯಾದ ಅವರ ಬೆಳ್ತಂಗಡಿಯ ಮನೆಗೆ ವಿನ್ಯಾಸ ಮಾಡಿಕೊಟ್ಟದ್ದು ಸ್ವತಃ ಬಾಬಾ ಅವರೇ!
ಬಳಿಕ ಸಭಾಮಂಟಪಗಳು ವೇದಿಕೆಗಳು ಯಾಗಶಾಲೆಗಳು ಇತ್ಯಾದಿಗಳನ್ನೆಲ್ಲ ರಮಣೀಯವಾಗಿ ರಚಿಸುತ್ತಿರುವ ಪ್ರಭಾಕರ್ ತಮ್ಮ ಮನೆಯಂಗಳವನ್ನು ತಾವೇ ವಿನ್ಯಾಸಗೊಳಿಸಿದ್ದಾರೆ. ಅಂಗಳಕ್ಕೆ ಟೈಲ್ಸ್ ಬಳಸದೆ ಕಲ್ಲು ಹಾಸಿ ಹುಲ್ಲಿನ ವಿನ್ಯಾಸ ಮಾಡಿದ್ದಾರೆ.
ಬೇವು, ತುಳಸಿ, ದೊಡ್ಡಪತ್ರೆಯಂಥ ಆರೋಗ್ಯಕಾರಿ ಗಿಡಗಳು; ದಾಸವಾಳದ ಇಪ್ಪತ್ತೊಂದು ಜಾತಿ; ಗುಲಾಬಿ, ಮಲ್ಲಿಗೆ, ಸಂಪಿಗೆ, ಕ್ರೋಟನ್, ಶಂಖಪುಷ್ಪ, ಕೇಪುಳ ಮುಂತಾದ ಬಗೆಬಗೆಯ ಹೂಗಿಡಗಳು ನಲಿಯುತ್ತಿವೆ. ಜತೆಗೆ ಬಸಳೆ, ತೊಂಡೆಯಂಥ ತರಕಾರಿಗಳು ಮಾವು, ಚಿಕ್ಕುವಿನಂಥ ಹಣ್ಣಿನ ಗಿಡಗಳಿವೆ. ನೆರಳಿಗಾಗಿಯೇ ಎರಡೂ ಬದಿಗಳಲ್ಲಿ ಒತ್ತೊತ್ತಾಗಿ ನೆಟ್ಟ ಬಾಳೆ ಗಿಡಗಳಿವೆ.
ಈ ವಿನ್ಯಾಸದ ವೈಖರಿ ಅನೇಕರ ಮನ ಗೆದ್ದ ಫಲವಾಗಿ ಹಲವರಿಗೆ ಇಂಥದೇ ಅಂಗಳ ವಿನ್ಯಾಸ ಪ್ರಭಾಕರ್ ರೂಪಿಸಿಕೊಟ್ಟಿದ್ದಾರೆ. ಆದರೆ ಹಣಕ್ಕಾಗಿ ಅಲ್ಲ, ಸೇವಾ ಮನೋಭಾವ. ಗಿಡಗಳಿಗೆ ಪೈಪ್‌ನಲ್ಲಿ ನಿತ್ಯ ನೀರು ಹಾಕುವುದು ಪ್ರಭಾಕರ್ ಅವರೇ. ಇಟ್ಟಿಗೆಯಿಂದ ಕಲಾತ್ಮಕ ಹೂಗಿಡಗಳ ಕುಂಡಗಳನ್ನೂ ಅವರು ತಯಾರಿಸುತ್ತಾರೆ.

- ಪ. ರಾಮಕೃಷ್ಣ ಶಾಸ್ತ್ರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!