ಅಲಂಕಾರವನ್ನು ನಮ್ಮಿಷ್ಟಕ್ಕೆ ತಕ್ಕಂತೆ ಮಾಡಿಕೊಳ್ಳಬಹುದು. ಇದಕ್ಕೆ ತಕ್ಕುನಾದ ಅಲಂಕಾರಿಕ ವಸ್ತುಗಳನ್ನು ನಾವೇ ತಯಾರಿಸಿಕೊಳ್ಳಬಹುದು. ಇಲ್ಲವೆ ಬೇರೆಡೆಯಿಂದ ತಂದು ಮನೆಯನ್ನು ಸುಂದರವಾಗಿಸಬಹುದು. ಇಂತಹ ವಿಶೇಷ ಅಲಂಕಾರದಲ್ಲಿ ಸುಪ್ರಸಿದ್ಧರು ಚೀನಾದವರು.
ಚೀನಾ ಕಾಗದ ಮೂಲಕ ಬೆಳಕಿನ ಲಾಂದ್ರಗಳನ್ನು (ದೀಪಗಳನ್ನು) ಸ್ವತಃ ಸಿದ್ಧಪಡಿಸಿಕೊಳ್ಳಬಹುದು. ಮನೆಗಳನ್ನು ಹಾಗೂ ಪ್ರವಾಸಿ ತಾಣಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬೆಳಕಿನ ಸಂಯೋಜನೆ ಮೂಲಕ ಅಲಂಕರಿಸಬಹುದು. ಬೆಳಕೆಂದರೆ ಯಾರಿಗೆ ಇಷ್ಟವಾಗುವುದಿಲ್ಲ? ವಿವಿಧ ಬಣ್ಣಗಳ ವಿದ್ಯುದ್ದೀಪಗಳು ಜನರನ್ನು ಹೆಚ್ಚಾಗಿ ಆಕರ್ಷಿಸುತ್ತಿವೆ. ಮದುವೆ, ಹಬ್ಬ ಹಾಗೂ ಶುಭ ಸಮಾರಂಭಗಳು ವಿದ್ಯುದ್ದೀಪಾಲಂಕಾರವಿಲ್ಲದೆ ನಡೆಯುವುದಿಲ್ಲ.
ಇಂದು ವೈವಿಧ್ಯಮಯ ವಿದ್ಯುದ್ದೀಪಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಆದರೆ, ಅವುಗಳ ಬೆಲೆ ಮಧ್ಯಮ ವರ್ಗದವರ ಕೈಗೆಟುಕದಂತಿರುತ್ತದೆ. ದುಬಾರಿ ದೀಪಾಲಂಕಾರ ಸಾಧ್ಯವಾಗದ ಜನರು ಹಾಗೂ ಸಣ್ಣಪುಟ್ಟ ಸಂತಸದ ಕ್ಷಣಗಳನ್ನು ಬೆಳಕಿನ ಮೂಲಕ ಆಚರಿಸಿ ಸಂಭ್ರಮಿಸಲು, ಕೇವಲ ಕಾಗದ- ಬಣ್ಣಗಳ ಮೂಲಕ ಬೆಳಕಿನ ಲಾಂದ್ರಗಳನ್ನು ತಯಾರಿಸಬಹುದು.
ಪ್ರವಾಸ ತಾಣಗಳಿಗೆ ಇನ್ನಷ್ಟು ಮೆರುಗು ನೀಡಲು ಈ ವೈವಿಧ್ಯಮಯ ಕಾಗದ ಲಾಂದ್ರಗಳನ್ನು ಬಳಸಬಹುದು. ಪ್ರವಾಸವೆಂದರೆ ಮೋಜು, ಮಸ್ತಿ. ಈ ಮೋಜು ಮಸ್ತಿಗಳ ನಡುವೆ ಕೆಲವು ಕಾಲ ಸಂಭ್ರಮದ ಕ್ಷಣಗಳಿಗೆ ದೀಪಾಲಂಕಾರ ಮತ್ತಷ್ಟು ಖುಷಿ ನೀಡುತ್ತದೆ. ಮನೆಯಲ್ಲಿ ದಿಢೀರನೆ ಪಾರ್ಟಿ ಏರ್ಪಡಿಸಿದರೆ ಅಲಂಕಾರದ ಚಿಂತೆ ಕಾಡುತ್ತದೆ. ಆ ಸಮಸ್ಯೆಗೂ ಇದೇ ಪರಿಹಾರ. ಶುಭ ದಿನಗಳ ಆಚರಣೆ ಹೇಗೆಂದು ತಲೆಕೆಡಿಸಿಕೊಳ್ಳುವ ಅಗತ್ಯವೂ ಇಲ್ಲ. ಪ್ರವಾಸ ತಾಣಗಳನ್ನು ಬಣ್ಣ ಬಣ್ಣದ ದೀಪಗಳ ಮೂಲಕ ಆಲಂಕರಿಸುವುದು ಇಂದು ಸುಲಲಿತ. ಚೀನಾ ಕಾಗದದ ಲಾಂದ್ರ, ವಿವಿಧ ಬಣ್ಣಗಳು ಹಾಗೂ ಬಣ್ಣ ಅಚ್ಚಲು ಅಗತ್ಯವಿರುವ ಬ್ರಷ್- ಇಲ್ಲಿ ಬೇಕಾಗಿರುವ ವಸ್ತುಗಳಷ್ಟೇ.
ತಯಾರಿಸುವ ವಿಧಾನ
ಮೊದಲು ಕಾಗದದ ಲಾಂದ್ರವನ್ನು ತೆಗೆದುಕೊಳ್ಳಿ. ನಂತರ ತಮಗಿಷ್ಟವಾದ ಬಣ್ಣವನ್ನು ಆಯ್ಕೆಮಾಡಿಕೊಂಡು ಕಲಾತ್ಮಕತೆಗೆ ತಕ್ಕಂತೆ ಚಿತ್ರ ಬಿಡಿಸಿ, ಲಾಂದ್ರದ ಮೇಲಿನಿಂದ ಕೆಳಗಿನವರೆಗೂ ಬಣ್ಣ ಹಚ್ಚಬೇಕು. ಬಣ್ಣಗಳ ಆಯ್ಕೆ ಅತಿ ಮುಖ್ಯ. ಬೇಗ ಒಣಗುವಂಥ ಬಣ್ಣಗಳನ್ನು ಬಳಸಬೇಕು. ಬಣ್ಣ ಹಚ್ಚಿದ ಬಳಿಕ ಅವುಗಳನ್ನು ಸ್ವಲ್ಪ ಸಮಯ ಒಣಗಲೂ ನೇತು ಹಾಕಬೇಕು.
- ಪಾವನಾ ಎಚ್.ಎಸ್.