ಮಹಿಳೆ-ಮನೆ-ಬದುಕು

ಸಂಸಾರ ಸೋಜಿಗ

ನನ್ನ ಸ್ನೇಹಿತೆ ಬಹಳ ದಿನಗಳ ನಂತರ ರೈಲಿನಲ್ಲಿ ಸಿಕ್ಕಿದಳು. ಅವಳ ಮಗಳ ಮದುವೆಯಾಗಿ ಆರೆಂಟು ತಿಂಗಳಾಗಿತ್ತು. ಮಗಳು ಹೇಗಿದ್ದಾಳೆಂದು ಕೇಳಿದೆ. 'ಚೆನ್ನಾಗಿದ್ದಾಳೆ ಏನೂ ಸಮಸ್ಯೆಯಿಲ್ಲ' ಎಂದಳು.
ಎರಡು-ಮೂರು ದಶಕಗಳ ಹಿಂದೆ ಅಕ್ಕ-ತಂಗಿಯರ ಮದುವೆ ಬಾಣಂತನ ಎಲ್ಲದಕ್ಕೂ ಹೆಗಲು ಕೊಡುತ್ತಿದ್ದರು ಗಂಡುಮಕ್ಕಳು. ಅವರಿಗೆ ಸಹಕರಿಸುತ್ತಿದ್ದರು ಅವರ ಪತ್ನಿಯರು. ಎಲ್ಲೋ ಬೆಳೆದ ಹೆಣ್ಣು ಮಗಳು ಬೇರೊಂದು ಮನೆ ಸೇರಿ ಆ ಮನೆಯವರೆಲ್ಲರನ್ನೂ ತನ್ನವರನ್ನಾಗಿಸಿಕೊಂಡು ಜೀವನದ ಸಾರ್ಥಕತೆ ಪಡೆಯುತ್ತಿದ್ದ ಪರಿ ಸೋಜಿಗ. ಆದರೆ ಇಂದು ಕ್ಷುಲ್ಲಕ ಕಾರಣಗಳು ಡೈವೋರ್ಸ್ ಮಟ್ಟಕ್ಕೆ ಹೋಗುತ್ತಿವೆ. ಹೆಣ್ಣು ಮಕ್ಕಳ ಬದುಕಿನಲ್ಲಿ ಬರುವ ಸಣ್ಣಪುಟ್ಟ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವಲ್ಲಿ ತಾಯಂದಿರ ಪಾತ್ರವೇನು? ನನ್ನ ಸ್ನೇಹಿತೆ ಹೇಳಿದ ಮಾತು ನನಗೆ ಬಹುವಾಗಿ ಹಿಡಿಸಿತು.
ಮದುವೆಯಾಗಿ ಹೋದ ಹೊಸತರಲ್ಲಿ ಅಡುಗೆಯ ಬಗ್ಗೆ ಕೇಳಲು ಮಗಳಿಂದ ಫೋನ್ ಬಂದರೆ 'ನೀನು ಫೋನ್ ಮಾಡಬೇಕಾದ್ದು ನನಗಲ್ಲ. ನಿಮ್ಮ ಅತ್ತೆಗೆ. ಅವರ ಅಡುಗೆಗಳನ್ನು ಕಲಿತುಕೋ. ಅವರು ಮಾಡಿದಂತೆ ಮಾಡು' ಎನ್ನುತ್ತಿದ್ದಳಂತೆ. ಇದು ಎಲ್ಲಿಯವರೆಗೆ ಎಂದರೆ ಅವಳ ಗಂಡ 'ಎಲ್ಲಾ ನಮ್ಮ ಅಮ್ಮ ಮಾಡುವ ಅಡುಗೆಯನ್ನೇ ಮಾಡುತ್ತೀಯ. ನಿಮ್ಮಮ್ಮ ಮಾಡುವುದನ್ನೂ ಮಾಡು' ಎಂದು ಹೇಳುವ ತನಕ. ಹಾಗೆ ನಿತ್ಯ ಅತ್ತೆಯೊಂದಿಗೆ ಮಾತನಾಡುವುದನ್ನು ಕಲಿಸಿದಳು.
ಇನ್ನೊಮ್ಮೆ, ಊರಿನಲ್ಲಿ ಉತ್ಸವ ಇರುವುದೆಂದೂ 5-6 ದಿನದ ಮಟ್ಟಿಗೆ ಬರಬೇಕೆಂದೂ ಅವರ ಅತ್ತೆ ಫೋನ್ ಮಾಡಿದ್ದರಂತೆ. ಅಷ್ಟು ದಿನ ಹೇಗೆ ಹೋಗುವುದೂ ಎಂದು ರಾಗ ಎಳೆದ ಮಗಳಿಗೆ- 'ಹೇಗೆ ಎಂದರೆ? ರಜದ ಅನುಕೂಲ ಮಾಡಿಕೊ. ಮುಂದಿನ ತಿಂಗಳು ಇಲ್ಲಿಗೆ ಬರಬೇಕೆಂದಿದ್ದೆಯಲ್ಲಾ ಬರಬೇಡ. ಅವರ ಆಚರಣೆ, ರೀತಿ-ನೀತಿ ಅಭ್ಯಾಸ ಮಾಡಿಕೊ. ಹೀಗೇ ಒಂದೆರಡು ವರ್ಷ ಹೊಂದಿಕೊಂಡರೆ ಆಯ್ತು. ಆಮೇಲೆ ಅಭ್ಯಾಸವಾಗಿ ಬಿಡುತ್ತದೆ' ಎಂದರಂತೆ.
ಹೀಗೆ ಹೆಮ್ಮೆಯಿಂದ ಹೇಳುತ್ತಾ 'ನಾನೇನೋ ನನ್ನ ಮಗಳನ್ನು ತಿದ್ದಿ ದಾರಿಗೆ ತಂದೆ. ಸೊಸೆಗೆ ಹೇಳಲಾಗುತ್ತೋ ಇಲ್ಲವೋ' ಎನ್ನುವಾಗ ತಾನು ಅತ್ತೆ- ಮಾವನ ಮನೆಗೆ ಬಂದಷ್ಟೇ ದಿನ ತನ್ನ ಗಂಡನೂ ತನ್ನ ತಾಯಿ ಮನೆಗೆ ಬರಬೇಕೆಂದು ವಿತಂಡವಾದ ಮಾಡುವ ಹುಡುಗಿಯರು ನೆನಪಾದರು. ಇತ್ತೀಚೆಗೆ ಬಹಳಷ್ಟು ಮನೆಗಳಲ್ಲಿ ಆಗುತ್ತಿರುವ ರಾದ್ಧಾಂತ ಇಬ್ಬರ ಕಣ್ಮುಂದೆ ಇತ್ತು. ಸಮಸ್ಯೆಗೆ ಪರಿಹಾರ ಎಲ್ಲೋ ಒಂದುಕಡೆ ಇದೆ ಎನಿಸಿ ಗೆಳತಿಗೆ ಕೈಬೀಸಿ ಹೊರಟೆ. ಎಲ್ಲಾ ಹೆಣ್ಣುಮಕ್ಕಳಿಗೂ ಹೀಗೇ ಯೋಚಿಸುವ ತಾಯಂದಿರಿದ್ದರೆ ಇಂದು ಆಗುತ್ತಿರುವ ಅನೇಕ ವಿಚ್ಛೇದನಗಳು ಇಲ್ಲವಾಗುತ್ತವೆ. ಮುಂದೆ ತಮಗೂ ಅದೇ ಪರಿಸ್ಥಿತಿ ಬರುವುದನ್ನು ಅರಿತರೆ 'ರಾಹುಕೇತುಗಳು', 'ಹಳೇ ಫರ್ನಿಚರ್ಸ್‌' ಎಂಬ ಪದಗಳು ಇಲ್ಲವಾಗುತ್ತವೆ.

- ಸೀತಾ ಎಸ್. ನಾರಾಯಣ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್