ಮಹಿಳೆ-ಮನೆ-ಬದುಕು

ಮುನಿಯಮ್ಮ

ಜಾನು ಆರು ವರ್ಷದ ಹುಡುಗಿ. ಆಕೆ ಎಷ್ಟು ತುಂಟಿಯೋ ಅಷ್ಟೇ ಹಠ ತುಂಬಿಕೊಂಡ ಮುದ್ದು ಗೊಂಬೆ. ಈಕೆಗೆ ಕೋಪ ಯಾವಾಗಲೂ ಮೂಗಿನ ತುದಿಯಲ್ಲೇ...

ಜಾನು ಆರು ವರ್ಷದ ಹುಡುಗಿ. ಆಕೆ ಎಷ್ಟು ತುಂಟಿಯೋ ಅಷ್ಟೇ ಹಠ ತುಂಬಿಕೊಂಡ ಮುದ್ದು ಗೊಂಬೆ. ಈಕೆಗೆ ಕೋಪ ಯಾವಾಗಲೂ ಮೂಗಿನ ತುದಿಯಲ್ಲೇ. ಈ ಕೋಪ ಅನ್ನೋದನ್ನ ಅದು ಯಾರು ಸೃಷ್ಟಿಸಿದರೋ ಏನೋ, 'ಎಲ್ಲರ ಮನೆ ದೋಸೆನೂ ತೂತೆ' ಅನ್ನೋ ಹಾಗೆ ಕೋಪ ಇಲ್ಲದ ಮನೆ ಯಾವುದೂ ಇಲ್ಲ ಅನ್ನಿಸುತ್ತೆ. ಜಾನೂ ಮನೇನೂ ಈ ಕೋಪದಿಂದ ಹೊರತಾಗಿಲ್ಲ.
'ಜಾನೂ ಟೈಮ್ ಆಯ್ತು ಎದ್ದೇಳು, ಸ್ಕೂಲಿಗೆ ಹೋಗ್ಬೇಕು ಲೇಟಾಗಿದೆ' ಅಡುಗೆ ಮನೆಯಲ್ಲಿ ತಿಂಡಿ ಮಾಡುತ್ತಿದ್ದ ಅಮ್ಮ ಕೂಗುತ್ತಿದ್ದಾಳೆ, ಜಾನುವಿಗೆ ಕುಂಭಕರ್ಣ ನಿದ್ದೆ. ಅಮ್ಮ ಮತ್ತೆ 10 ನಿಮಿಷ ಬಿಟ್ಟು ಕರೆದರೂ ಜಾನು ಮಾತ್ರ ಕೋಣೆಯಿಂದ ಹೊರ ಬರುವುದೇ ಇಲ್ಲ. ಇತ್ತಕಡೆ ಅಪ್ಪನ ಸುಪ್ರಭಾತ ಶುರುವಾಯಿತು, 'ಅಮ್ಮ ಮಗಳು ರಾತ್ರಿಯೆಲ್ಲಾ ಟಿವಿ ನೋಡ್ಕೊಂಡು ಲೇಟಾಗ್ ಮಲಗ್ತೀರ, ಬೆಳಗ್ಗೆ 7.30ಕ್ಕೆ ಎದ್ದು ಎಗರಾಡ್ತೀರ. ನಿಮ್ಹತ್ರ ಇನ್ನು ಎಷ್ಟ್ ಹೆಣಗಾಡ್ಬೇಕೋ'. ಅಲ್ಲಿಗೆ ಅಮ್ಮನ ಕೋಪಕ್ಕೆ ತುಪ್ಪ ಸುರಿದಂತಾಗುತ್ತದೆ.
ತನ್ನೆಲ್ಲಾ ಕೋಪವನ್ನು ತಿಂಡಿ ಮಾಡುತ್ತಿದ್ದ ಪಾತ್ರೆಯ ಮೇಲೆ ತೋರಿಸುವ ವೇಳೆಗೆ, ಜಾನು ಎದ್ದು ಬರುತ್ತಾಳೆ. ಕಣ್ಣನ್ನೂ ಸರಿಯಾಗಿ ತೆರೆದಿರುವುದಿಲ್ಲ. ಅತ್ತಕಡೆ ಒಲೆ ಮೇಲೆ ಒಗ್ಗರಣೆ ಸೀಯುತ್ತಿದೆ, ಇತ್ತಕಡೆ ಯಜಮಾನ ತನಗೂ ಮನೆಗೂ ಏನೂ ಸಂಬಂಧವಿಲ್ಲದಂತೆ ಕೂತಿದ್ದಾನೆ, ಮಧ್ಯದಲ್ಲಿ ಮಗಳು ಹಠಹಿಡಿದು ಕೂತಿದ್ದಾಳೆ. ಅಮ್ಮನ ತಲೆ ಸಿಡಿದುಹೋದ್ದರಿಂದ ಇದ್ದಬದ್ದ ಕೋಪವನ್ನೆಲ್ಲ ಸೇರಿಸಿ ಮಗಳನ್ನು ದರದರ ಎಳೆದುಕೊಂಡು ಹೋಗಿ ಬಚ್ಚಲಿಗೆ ಬಿಟ್ಟಳು. ಆ ಸಿಟ್ಟಿನ ಭರದಲ್ಲೇ ಮಗಳಿಗೆ ಸ್ನಾನ ಮಾಡಿಸಿದಳು. ಒಂದೇ ಕೈನಲ್ಲಿ ಆಕೆಯನ್ನು ಅಮ್ಮ ಎಳೆದು ತಂದು ದೇವರ ಮುಂದೆ ನಿಲ್ಲಿಸಿ 'ಕೈ ಮುಗಿ' ಎಂದು ಜೋರಾಗಿ ಗದರುತ್ತಾಳೆ. ಮಗಳಿಗೋ ಅಮ್ಮನಿಗಿಂತ ಐದು ಪಟ್ಟು ಜಾಸ್ತಿ ಹಠ, ಕೋಪ. ಕೈ ಮುಗಿಯದಿದ್ದರೆ ಏಟು ಬೀಳುತ್ತದೆ ಎಂದು ತಿಳಿದಿದ್ದರೂ 'ನಾನು ಮುಗಿಯುವುದಿಲ್ಲ' ಎನ್ನುತ್ತಾಳೆ. ಅಪ್ಪನ ಸುಪ್ರಭಾತ ಇನ್ನೂ ನಿಂತಿರಲಿಲ್ಲ. ಅಮ್ಮ ಎಷ್ಟು ಅಂತ ಸಿಟ್ಟು ತಡುಕೋತಾಳೆ ಹೇಳಿ 'ಹೋಗಿ ಬಾಕ್ಸ್‌ಗಾದ್ರೂ ಹಾಕಿ, ಸುಮ್ನೆ ಕೂತ್ಕೊಂಡ್ ವಟ ವಟ ಅನ್ನೋದಲ್ಲ' ಅಂತ ಗಂಡನನ್ನ ಅಡುಗೆಮನೆಗೆ ಕಳುಹಿಸ್ತಾಳೆ.
ಅಮ್ಮನ ಕೋಪ ಮಿತಿ ಮೀರುತ್ತದೆ. ಮಗಳಿಗೆ ಎರಡೇಟು ಬಿಟ್ಟು 'ಎಲ್ಲ ನಿನ್ನಿಂದನೇ, ಬೇಗ ಎದ್ದೇಳು ಅಂದ್ರೆ ಎದ್ದೇಳಲ್ಲ. ಬೆಳಗ್ಗೆ ಬೆಳಗ್ಗೆನೆ ಎಲ್ಲರ ಮೂಡು ಹಾಳ್ಮಾಡ್ತಾಳೆ.' ಜಾನು ಅಳಲು ಶುರು. ಮತ್ತೆ ಏಟು. ಅಳುವೂ ಜಾಸ್ತಿಯಾಗುತ್ತದೆ. ಇನ್ನೂ ಜೋರಾಗಿ ಏಟು ಬಿದ್ದು ಬಾಯ್ಮುಚ್ಚು ಅಂದಲ್ಲಿಗೆ ಅಳು ನಿಲ್ಲುತ್ತದೆ. ಅಪ್ಪ ಊಟದ ಬ್ಯಾಗ್ ರೆಡಿ ಮಾಡಿರುತ್ತಾರೆ. ಅಂತೂ ಇಂತೂ ಮಗಳನ್ನು ಶಾಲೆಗೆ ತಯಾರಿ ಮಾಡುವ ಕೆಲಸ ಮುಗಿಯುತ್ತದೆ. ಅಪ್ಪ ಬೈಕ್ ಸ್ಟಾರ್ಟ್ ಮಾಡುತ್ತಾರೆ, ಮಗಳನ್ನು ಕಳಿಸುವ ಆ ಕ್ಷಣದಲ್ಲಿ ಅಮ್ಮನಿಗೆ ಅಷ್ಟು ಪ್ರೀತಿ ಎಲ್ಲಿಂದ ಬರುತ್ತದೋ ಗೊತ್ತಿಲ್ಲ... ಪ್ರೀತಿಯಿಂದ ಒಂದು ಮುತ್ತನ್ನು ಕೊಟ್ಟು ಕಳುಹಿಸುತ್ತಾಳೆ. ಆ ಪ್ರೀತಿ ಮಗಳು ಹೋಗುವವರೆಗೆ ಮಾತ್ರ. ಒಳಗೆ ಬಂದ ತಕ್ಷಣ ಮನೆಯ ಅವತಾರವನ್ನು ಕಂಡು ಮತ್ತದೇ ಕೋಪ. ಇದಿಷ್ಟೂ ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿ ನಡೆಯುವ ಕತೆ. ಕೋಪಕ್ಕೆ ಅರ್ಥವಾದರೂ ಏನಿರುತ್ತದೆ?

ಅಂದು ನಾನು, ಅಪ್ಪ ಬಸ್ಸಿನಲ್ಲಿ ಮೂಡುಬಿದಿರೆಗೆ ಹೋಗುತ್ತಿದ್ದೆವು. ಅದಾಗಲೇ ಮಧ್ಯರಾತ್ರಿ ಎರಡೂವರೆ. ಸಕಲೇಶಪುರದಿಂದ 7-8 ಕಿ.ಮೀ. ಚಲಿಸಿದ ಬಸ್ಸು ಇದ್ದಕ್ಕಿದ್ದಂತೆ ನಿಂತಿತು. ನಿದ್ದೆ ಮಾಡುತ್ತಿದ್ದ ನಾವು ದಢಾರನೆ ಎದ್ದು ಏನಾಯಿತು ಎಂದು ಕಿಟಕಿಯಿಂದ ಇಣುಕಿದರೆ, ಆಂಜನೇಯನ ಬಾಲ ಬೆಳೆದ ಹಾಗೆ ವಾಹನಗಳ ಸಾಲು. ಇದಕ್ಕೆ ಕಾರಣವೇನೆಂದರೆ ಮತ್ತದೇ 'ಕೋಪ'. ಖಾಸಗಿ ಬಸ್ ಚಾಲಕ ಸರ್ಕಾರಿ ಬಸ್‌ಗೆ ಕಲ್ಲು ಹೊಡೆದ ಕಾರಣ ಸರ್ಕಾರಿ ಬಸ್ಸನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ್ದ. ಕೊನೆಗೆ ಪೊಲೀಸ್ ಬಂದು ಎಲ್ಲವನ್ನು ಸರಿಪಡಿಸಿ ಬಸ್ ಹೊರಟಿದ್ದು 4.30ಕ್ಕೆ. ಒಬ್ಬ ಚಾಲಕನ ಕೋಪಕ್ಕೆ ಬಲಿಯಾಗಿದ್ದು ಸಾವಿರಾರು ಜನರ ಸಮಯ. ಇನ್ನು, ನನ್ನ ಕೋಪಕ್ಕಂತೂ ಅದೆಷ್ಟೋ ಹಾಳೆಗಳು, ಪೆನ್ನುಗಳು, ಪೆನ್ಸಿಲ್‌ಗಳು, ಗಾಜಿನ ಲೋಟಗಳು ಬಲಿಯಾಗಿವೆ. ಈ ಕೋಪ ಅತಿರೇಕಕ್ಕೇರಿ ಒಂದಿಬ್ಬರು ಸ್ನೇಹಿತರನ್ನೂ ಕಳೆದುಕೊಂಡದ್ದಾಗಿದೆ.
ಮನಃಶಾಸ್ತ್ರಜ್ಞರು ಹೇಳುವಂತೆ, 'ಬೇರೆಯವರು ನಮಗೆ ಇಷ್ಟವಿಲ್ಲದ ರೀತಿಯಲ್ಲಿ ಯಾವಾಗ ನಡೆದುಕೊಳ್ಳುತ್ತಾರೋ ಆಗ ಕೋಪ ಸಾಮಾನ್ಯ'. ಹಾಗಾದರೆ ಈ ಕೋಪಕ್ಕೆ ಪರಿಹಾರ? ಬೇರೆಯವರು ನಾವು ಬಯಸಿದ ಹಾಗೆಯೇ ಇರಬೇಕೆಂದುಕೊಳ್ಳುವುದು ತಪ್ಪಾಗುತ್ತದೆ. ಅದರ ಬದಲು ಅವರ ಪಾಡಿಗೆ ಅವರಿರಲಿ ನಮ್ಮ ಪಾಡಿಗೆ ನಾವಿರೋಣ. ಆದರೆ, ಜತೆಯಲ್ಲಿದ್ದಾಗ ಚೆನ್ನಾಗಿರೋಣ ಎಂದುಕೊಂಡು ಸುಮ್ಮನಾಗಬೇಕಷ್ಟೆ.

ಕೋಪ ನಿಗ್ರಹಕ್ಕೆ ಟಿಪ್ಸ್
-    ಮನದಲ್ಲಿ ಸದಾ ಪ್ರೀತಿ ತುಂಬಿಕೊಂಡಿರಿ.
-    ಎದುರಿನ ವ್ಯಕ್ತಿ ಎಷ್ಟೇ ಒರಟಾಗಿ ಮಾತನಾಡಿಸಿದರೂ, ತಾಳ್ಮೆಯಿಂದ ನಗುತ್ತಾ ಪ್ರತಿಕ್ರಿಯಿಸಿ.
-    ಕೂಡಲೇ ಯಾವುದೇ ನಿರ್ಧಾರವನ್ನು ಕೈಗೊಳ್ಳಬೇಡಿ.
-    ನಿಮ್ಮಿಂದ ಯಾವುದೇ ತಪ್ಪು, ಇನ್ನೊಬ್ಬರಿಗೆ ತೊಂದರೆ ಆಗದಂತೆ ಇರಿ.

- ದೀಪ್ತಿ ಜೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು

'ದೆಹಲಿ ಪೊಲೀಸರು ಟಾಸ್ ಗೆದ್ದು, ಮೊದಲು ಬ್ಯಾಟಿಂಗ್ ಮಾಡಲಿ': ಪಾಕಿಸ್ತಾನ ಮಾಜಿ ಕ್ರಿಕೆಟಿಗನ ಪೋಸ್ಟ್ ವೈರಲ್​!

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CEC ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಪ್ರತಿಭಟನೆ ವೇಳೆ 2 ಪೊಲೀಸರಿಗೆ ಕಲ್ಲೇಟು!

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP