ಮುಖದ ಅಂದ ಹೆಚ್ಚಿಸುವಲ್ಲಿ ತುಟಿಯ ಪಾತ್ರ ಮುಖ್ಯ. ತುಟಿಯ ಸಂರಕ್ಷಣೆ ತುಂಬಾ ಅಗತ್ಯ. ಅದರಲ್ಲೂ ಚಳಿಗಾಲದಲ್ಲಿ ಚರ್ಮ ಬಿರುಕು ಬಿಡುವುದು ಸಹಜ. ಈ ಕಾಲದಲ್ಲಿ ತುಟಿಯು ಒಣಗುವುದಲ್ಲದೇ, ಒಡೆದು ರಕ್ತ ಬರುತ್ತದೆ. ಎಷ್ಟೇ ಲಿಪ್ಸ್ಟಿಕ್, ಲಿಪ್ ಬಾಮ್ ಹಚ್ಚಿದರೂ ಶಮನವಾಗುವುದಿಲ್ಲ. ಕೆಮಿಕಲ್ ಬಳಸಿ ತಯಾರಿಸಿದ ವಸ್ತುಗಳನ್ನು ಲೇಪಿಸುವುದರಿಂದ ತುಟಿಯ ಬಣ್ಣ ಮಾಸುತ್ತದೆ. ಇದಕ್ಕೆ ನೈಸರ್ಗಿಕ ಚಿಕಿತ್ಸೆ ಇದೆ.
- ಹೆಚ್ಚಾಗಿ ಹಣ್ಣಿನ ರಸ ಅಥವಾ ನೀರನ್ನು ಸೇವಿಸಬೇಕು. ದೇಹದಲ್ಲಿ ನೀರಿನ ಅಂಶ ಕಡಿಮೆ ಇದ್ದರೆ ತುಟಿ ಒಡೆಯುವ ಸಾಧ್ಯತೆ ಹೆಚ್ಚು.
- ಪದೇ ಪದೆ ನಾಲಿಗೆಯಿಂದ ತುಟಿಯನ್ನು ಸ್ಪರ್ಶಿಸಬಾರದು. ತಕ್ಷಣಕ್ಕೆ ಇದು ಪರಿಹಾರ ಎನಿಸಬಹುದೇ ಹೊರತು, ತುಟಿ ಒಡೆಯುವುದಕ್ಕೆ ಹೆಚ್ಚು ಸಹಾಯ ಮಾಡುತ್ತದೆ.
- ಪ್ರತಿ ರಾತ್ರಿ ತುಟಿಗಳಿಗೆ ಗ್ಲಿಸರಿನ್ ಮತ್ತು ಜೇನುತುಪ್ಪ ಮಿಶ್ರಣವನ್ನು ಲೇಪಿಸಿ 15 ನಿಮಿಷ ಬಿಟ್ಟು ನೀರಿನಿಂದ ತೊಳೆದರೆ ತುಟಿಯ ಚರ್ಮ ಮೃದುವಾಗುತ್ತದೆ.
- ನಿಂಬೆರಸ ಮತ್ತು ಅರಿಶಿನದ ಪೇಸ್ಟ್ ತಯಾರಿಸಿ ತುಟಿಗಳಿಗೆ ಲೇಪಿಸಬೇಕು. 20 ನಿಮಿಷದ ನಂತರ ತಣ್ಣೀರಿನಿಂದ ತೊಳೆಯಬೇಕು. ಇದು ಸತ್ತ ಜೀವಕೋಶಗಳನ್ನು ಹೊರಹಾಕಿ ತುಟಿಯ ಹೊಳಪನ್ನು ಹೆಚ್ಚಿಸುತ್ತದೆ.
- ಹಾಲಿನ ಕ್ರೀಂ, ಗುಲಾಬಿ ದಳ ಮತ್ತು ಜೇನುತುಪ್ಪ ಮಿಶ್ರಣ ಮಾಡಿ ತುಟಿಗಳಿಗೆ ಲೇಪಿಸಿದರೆ ತುಟಿಯ ಹೊಳಪು ಹೆಚ್ಚುತ್ತದೆ.
- ಎರಡು ಗಂಟೆಗಳಿಗೊಮ್ಮೆ ಬೆಣ್ಣೆ ಮತ್ತು ತುಪ್ಪವನ್ನು ತುಟಿಗಳಿಗೆ ಸವರುತ್ತಾ ಬಂದರೆ ಚರ್ಮ ಮೃದುವಾಗುವುದಲ್ಲದೇ ಕಾಂತಿಯುಕ್ತವಾಗುತ್ತದೆ.
- ಪೆಟ್ರೋಲಿಯಂ ಜೆಲ್ಲಿ ರಹಿತ ಲಿಪ್ಬಾಮ್ಗಳನ್ನು ಹಾಗೂ ಹರ್ಬಲ್ ಲಿಪ್ಬಾಮ್ಗಳನ್ನು ಬಳಸಬಹುದು.
- ಬಾದಾಮಿ ಎಣ್ಣೆ ಮತ್ತು ಜೇನುತುಪ್ಪದ ಮಿಶ್ರಣವನ್ನು ಪ್ರತಿದಿನ ರಾತ್ರಿ ಹಚ್ಚಿದರೆ ತುಟಿ ಒಡೆಯುವುದಿಲ್ಲ ಹಾಗೂ ಮೃದುವಾಗುತ್ತದೆ.
- ಪಾರ್ಟಿಗಳಿಗೆ ಹೋದಾಗ ಡ್ರೆಸ್ಗೆ ಹೋಲುವಂಥ ಬಣ್ಣ ಬಣ್ಣದ ಲಿಪ್ಸ್ಟಿಕ್ ಬಳಸುವುದು ಸಹಜ. ಆದರೆ ಇದನ್ನು ಮಲಗುವ ಮುನ್ನ ಆಲಿವ್ ಎಣ್ಣೆ ಅಥವಾ ಕೊಬ್ಬರಿ ಎಣ್ಣೆಯನ್ನು ಬಳಸಿ ತೆಗೆಯಬೇಕು. ನಂತರ ಬಾದಾಮಿ ಎಣ್ಣೆ ಸವರಬೇಕು. ಈ ಎಣ್ಣೆ ಲಿಪ್ಸ್ಟಿಕ್ನಲ್ಲಿರುವ ರಾಸಾಯನಿಕಗಳನ್ನು ತೆಗೆದು ತುಟಿಗಳನ್ನು ಸ್ವಚ್ಛ ಮಾಡುತ್ತದೆ.
- ಹಾಲಿನ ಕೆನೆಯನ್ನು ತುಟಿಗಳಿಗೆ ಸವರಿ ಐದು ನಿಮಿಷದ ನಂತರ ತೊಳೆದರೆ ತುಟಿಯ ಕಪ್ಪು ನಿವಾರಣೆಯಾಗುತ್ತದೆ.
- ಸ್ಟ್ರಾಬೆರಿ, ಕಿತ್ತಲೆ ಹಣ್ಣು ಅಥವಾ ದಾಳಿಂಬೆ ಹೂವಿನ ದಳದಿಂದ ಪ್ರತಿದಿನ ತುಟಿಗಳ ಮೇಲೆ ಮಸಾಜ್ ಮಾಡುತ್ತಿದ್ದರೆ ತುಟಿಗಳ ಕಪ್ಪು ಮಾಸುತ್ತದೆ.
- ಐಸ್ಕ್ಯೂಬ್ಗಳಿಂದ ಮಸಾಜ್ ಮಾಡುವ ಮೂಲಕವೂ ತುಟಿಯ ತೇವಾಂಶ ಕಾಪಾಡಬಹುದು.
- ಮೈನಾಶ್ರೀ ಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics