ಮನೆ ಎಂದ ಮೇಲೆ ಅದಕ್ಕೆ ಒಪ್ಪುವಂತೆ ಓರಣ ಮಾಡುವುದು ಮಾನಿನಿಯರಿಗೆ ಎಲ್ಲಿಲ್ಲದ ಖುಷಿ. ಮಾರುಕಟ್ಟೆ ಅಥವಾ ಅಂಗಡಿ ಕಡೆ ಹೋದರೆ ಸಾಕು. ಕಣ್ಣಿಗೆ ಬಿದ್ದಿದ್ದೆಲ್ಲ ಖರೀದಿಸಬೇಕೆಂಬ ತುಡಿತ, ಆಸೆ ಸಹಜವಾಗಿಯೇ ಅವರಲ್ಲಿರುತ್ತೆ. ಅಡುಗೆ ಮನೆಗೆ ಮಾತ್ರವಲ್ಲ, ಕೋಣೆಯೂ ಸೇರಿದಂತೆ ಅಲಂಕಾರಿಕ ವಸ್ತುಗಳ ಖರೀದಿಗೆ ಮುಂದಾಗುತ್ತಾರೆ.
ಹೀಗಾಗಿ ಸೂರನ್ನು ಸುಂದರವಾಗಿ ಕಾಣಿಸಲು ಸಾಮಾನ್ಯವಾಗಿ ಕುರ್ಚಿ, ಸೋಫಾವೂ ಹೆಚ್ಚು ಪಾತ್ರವಹಿಸುತ್ತಿವೆ. ಆರಾಮವಾಗಿ ಕುಳಿತು ಟಿವಿ ನೋಡಲು, ಪೇಪರ್ ಓದಲು, ಊಟ ಮಾಡಲು, ಕುಡಿಯಲು... ಕೆಲವೊಮ್ಮೆ ಬೋರ್ ಆದಾಗ ಮಲಗಲೂ ಕೂಡ ಸೋಫಾ, ಕುರ್ಚಿಗಳನ್ನು ಬಳಸೋದು ಸಹಜ.
ಆದರೆ ಕುರ್ಚಿ, ಸೋಫಾಗಳು, ಬೆತ್ತದ ಕುರ್ಚಿಗಳು, ಕಬ್ಬಿಣದ ಕುರ್ಚಿಗಳು ಹಳೇ ಮಾಡೆಲ್ಗಳು. ಈಗ ಅವೆಲ್ಲವನ್ನೂ ನಾಚಿಸುವಂಥ, ಎಲ್ಲರ ಮನೆಗೂ ಒಪ್ಪುವ, ಸುಲಭವಾಗಿ ಎಲ್ಲೆಡೆ ಸಾಗಿಸುವ, ಅಂದದ, ಹಗುರವಾದ 'ಬೀನ್ ಬ್ಯಾಗ್'ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಇತ್ತೀಚಿನ ದಿನಗಳಲ್ಲಿ ನೀವು ಯಾರ ಮನೆಗೆ ಹೋದರೂ ಇಂತಹ ಫ್ಯಾನ್ಸಿಯ ಬೀನ್ ಬ್ಯಾಗ್ಗಳು ಕಣ್ಣಿಗೆ ಬೀಳುತ್ತವೆ. ಈ ಬೀನ್ ಬ್ಯಾಗ್ಗಳು ಎಲ್ಲಿ ಸಿಗುತ್ತವೆ? ಹಣ ಎಷ್ಟು? ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ, ಆ ಚಿಂತೆ ಬೇಡ. ಈ ಬೀನ್ ಬ್ಯಾಗ್ಗಳು ಸಾಮಾನ್ಯರ ಕೈಗೆಟುಕುವ ದರದಲ್ಲಿ ಲಭ್ಯ. ಬಹುತೇಕವಾಗಿ ಎಲ್ಲಾ ಮಾಲ್ಗಳಲ್ಲೂ ಸಿಗುತ್ತವೆ. ನೋಡಲು ದಪ್ಪ ಇರುವ ಈ ಬ್ಯಾಗ್ಗಳು ಕಡಲೆಪುರಿಯಂತೆ ಹಗುರವಾಗಿರುವುದರಿಂದ ಅಂಗಡಿಯಿಂದ ಮನೆಗೆ, ಮನೆ ಖಾಲಿ ಮಾಡಿದಾಗ ಬೇರೆ ಮನೆಗೆ ಸಾಗಿಸುವುದು ಕಷ್ಟದ ಕೆಲಸವೇನಲ್ಲ.
ಬ್ಯಾಗ್ ಇಡಲು ಸ್ಥಳ ಬೇಕಿಲ್ಲ
ಸಾಮಾನ್ಯವಾಗಿ ಮಂಚ, ಬೀರು, ಕುರ್ಚಿ... ಹೀಗೆ ಏನೇ ಖರೀದಿಸಲಿ ಅವುಗಳನ್ನಿಡಲು ಪ್ರತ್ಯೇಕ ಸ್ಥಳ ಬೇಕು. ಆದರೆ, ಬೀನ್ ಬ್ಯಾಗ್ ಹಾಗಲ್ಲ. ಜಾಗದ ಬಗ್ಗೆ ಚಿಂತಿಸಬೇಕಿಲ್ಲ. ಅದು ದೊಡ್ಡದಿದ್ದರೂ ಹಗುರ ಇರುವ ಕಾರಣ ಅದನ್ನು ಅತ್ತಿಂದಿತ್ತ, ಇತ್ತಿಂದತ್ತ ಸ್ಥಳಾಂತರಿಸುವುದು ಸುಲಭ. ಅಗತ್ಯ ಇದ್ದಾಗ ನೆಲದ ಮೇಲೆ ಹಾಕಿಕೊಂಡು ಕೂರಬಹುದು. ಬೇಡವೆಂದಾಗ ಎತ್ತಿ ಮೇಲಿಡಬಹುದು.
ಓದಲು ಬರೆಯಲು ಮಾತ್ರವಲ್ಲ, ಆಯಾಸವಾದರೆ ಕುಳಿತೇ ಮಲಗಬಹುದು, ಲ್ಯಾಪ್ಟಾಪ್ ಇದ್ದರೆ ಬ್ಯಾಗ್ ಮೇಲೆ ಆರಾಮವಾಗಿ ಕುಳಿತು ಕೆಲಸ ಮಾಡುವುದು ಸೇರಿ ಈ ಬ್ಯಾಗ್ ಎಂಬ ಖುರ್ಚಿ ಮೇಲೆ ಕುಳಿತು ಹಲವು ಕೆಲಸಗಳನ್ನು ಮಾಡಬಹುದು.
ಮಕ್ಕಳ ಬೀನ್ ಬ್ಯಾಗ್
ಇದರಲ್ಲಿ ದೊಡ್ಡವರಿಗೆ, ಮಕ್ಕಳಿಗೆ ಎಂದು ಪ್ರತ್ಯೇಕ ಬ್ಯಾಗ್ ಇದೆ. ಮಕ್ಕಳು ಅವುಗಳ ಮೇಲೆ ಸುಲಭ ಹಾಗೂ ಆರಾಮವಾಗಿ ಕುಳಿತುಕೊಳ್ಳಲಿ ಎಂಬ ಉದ್ದೇಶದಿಂದ ಸಣ್ಣ ಬೀನ್ ಬ್ಯಾಗ್ಗಳನ್ನು ತಯಾರಿಸಲಾಗಿರುತ್ತದೆ. ಅವುಗಳಲ್ಲಿ ಮಕ್ಕಳಿಗೆ ಖುಷಿಯಾಗಲೆಂಬ ಕಾರಣಕ್ಕೆ ಚೌಕಾಕಾರ, ಉಬ್ಬಿದ, ದಿಂಬಿನಂತೆ... ಸೇರಿ ವಿವಿಧ ರೀತಿಯ ಬೀನ್ ಬ್ಯಾಗ್ಗಳು ಮಾರುಕಟ್ಟೆಯಲ್ಲಿ ಲಭ್ಯ.
ವಿಧಗಳು
ಗುಂಡಾಕಾರ, ಕುರ್ಚಿಯಾಕಾರದ್ದು, ಚೌಕಾಕಾರದ್ದು, ಸೋಫಾ ರೀತಿ ಮಲಗಲು ಅನುಕೂಲವಾಗುವಂತೆ, ಬಣ್ಣಬಣ್ಣದ ಬ್ಯಾಗ್ಗಳು, ವಾಲಿಬಾಲ್, ಫುಟ್ಬಾಲ್, ಸ್ಪೋರ್ಟ್ಸ್, ಸಾದಾ, ಮರಗಿಡ, ಪ್ರಾಣಿಗಳ ಚಿತ್ರ, ಸಣ್ಣ ಸಣ್ಣ ಚುಕ್ಕಿ ಹೊಂದಿರುವುದು, ತ್ರಿಭುಜಾಕಾರ ಸೇರಿದಂತೆ ವಿವಿಧ ಆಕಾರದಲ್ಲಿ ಬೀನ್ ಬ್ಯಾಗ್ಗಳು ಲಭ್ಯ.
ಬೀನ್ಗಳನ್ನು ತುಂಬಬೇಕು
ಬೀನ್ ಬ್ಯಾಗ್ಗಳನ್ನು ಆರೇಳು ತಿಂಗಳು ಬಳಸಿದಾಗ ಕ್ರಮೇಣ ಮೆತ್ತಗಾಗಿರುತ್ತವೆ. ಹಾಗಾಗಿ ಮತ್ತೆ ಹೊಸದಾಗಿ ಬೀನ್ಗಳನ್ನು ತಂದು ಹಳೆಯ ಬೀನ್ಗಳ ಜತೆಗೆ ಹೊಸ ಬೀನ್ಗಳನ್ನು ಆ ಬ್ಯಾಗ್ಗೆ ತುಂಬಬೇಕು. ಅದನ್ನು ತುಂಬಲು ಪ್ರತ್ಯೇಕ ಸ್ಥಳ ಖಾಲಿ ಬಿಟ್ಟಿರಲಾಗಿರುತ್ತದೆ. ಆಗ ಬ್ಯಾಗ್ ಮೇಲೆ ಕುಳಿತುಕೊಳ್ಳಲು, ಮಲಗಲು ಸರಿಯಾಗಿರುತ್ತದೆ. ಇಲ್ಲವಾದಲ್ಲಿ ಅದನ್ನು ಬಳಸಲು ಆಗುವುದಿಲ್ಲ. ಒಂದು ಬ್ಯಾಗ್ಗೆ ರು. 999 ರಿಂದ 10,000 ಸಾವಿರದವರೆಗೆ ದರವಿದೆ. ಕೆಲವು ಬ್ಯಾಗ್ಗಳಿಗೆ ದಿಂಬುಗಳು ಉಚಿತವಾಗಿ ಸಿಗುತ್ತವೆ.
ಉದ್ದ, ಅಗಲ
ಅಂಗಡಿಯಲ್ಲಿ ಬಟ್ಟೆ ಖರೀದಿಸುವ ಮುನ್ನ ತಮಗೆ ಒಪ್ಪುವ ಬಣ್ಣ, ಉದ್ದ ಹಾಗೂ ಅಗಲವನ್ನು ಪರಿಶೀಲಿಸುವಂತೆ ಬೀನ್ ಬ್ಯಾಗ್ನಲ್ಲೂ ಅದೆಲ್ಲವನ್ನೂ ಪರಿಶೀಲಿಸಿ ತಮಗೆ ಒಪ್ಪುವುದನ್ನು ಖರೀದಿಸಬಹುದು. ಇದರಲ್ಲಿ ಎಂ, ಎಕ್ಸೆಲ್, 2 ಎಕ್ಸೆಲ್, 3 ಎಕ್ಸೆಲ್ ಅಳತೆಯ ಬ್ಯಾಗ್ಗಳು ಲಭ್ಯ.
ಟಾಮ್ಟಾಮ್ ಬೀನ್ ಬ್ಯಾಗ್
ಇವು ಮತ್ತೊಂದು ರೀತಿಯ ಬೀನ್ ಬ್ಯಾಗ್ಗಳು. ಆದರೆ, ಮನುಷ್ಯರು ಕೂರಲಾಗುವುದಿಲ್ಲ. ಬದಲಾಗಿ ಕಾರು, ಹೋಂ ಥಿಯೇಟರ್ಗಳಲ್ಲಿ ಇವುಗಳನ್ನು ಬಳಸಲಾಗುತ್ತದೆ. ಮೊಬೈಲ್ ಅಥವಾ ಮೈಕ್ರೋ ಟಿವಿಗಳನ್ನು ಇಡಲು ಇವು ಅನುಕೂಲ.
- ಶಾಂತ ತಮ್ಮಯ್ಯ