ರಾತ್ರಿ ನಿದ್ರೆಯ ವೇಳೆ ಹಾಸಿಗೆಯಲ್ಲಿ ಮೂತ್ರ ವಿಸರ್ಜಿಸುವುದು ಚಿಕ್ಕ ಮಕ್ಕಳಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆ. ಪ್ರತಿಶತ 0.5ರಷ್ಟು ವಯಸ್ಕರಲ್ಲೂ ಈ ಸಮಸ್ಯೆ ಕಂಡುಬರುತ್ತದೆ. ಪಾಲಕರು ರೂಢಿಸುವ ಅಭ್ಯಾಸಗಳ ಆಧಾರದ ಮೇಲೆ 3 ವರ್ಷದಿಂದ 5 ವರ್ಷ ವಯಸ್ಸಿನೊಳಗಿನ ಬಹುತೇಕ ಮಕ್ಕಳು ಮಲ-ಮೂತ್ರ ವಿಸರ್ಜನೆಯ ಮೇಲೆ ಸಂಪೂರ್ಣ ಹತೋಟಿ ಸಾಧಿಸುತ್ತಾರೆ. ಆದರೂ ಶೇ.10 ಮಕ್ಕಳಲ್ಲಿ 7ನೇ ವರ್ಷದವರೆಗೆ ಇದು ಮುಂದುವರಿಯುತ್ತದೆ. ಇದರ ಮೇಲೆ ಹತೋಟಿ ಸಾಧಿಸಿದ ಮಕ್ಕಳು ಅವಧಿಗೊಂದಾವರ್ತಿ ಒಂದು ನಿರ್ದಿಷ್ಟ ಸ್ಥಳದಲ್ಲಿ ಮೂತ್ರ ವಿಸರ್ಜಿಸುವುದನ್ನು ಕಲಿಯುತ್ತಾರೆ. ಅಪರೂಪಕ್ಕೊಮ್ಮೆ ಹಾಸಿಗೆ ಒದ್ದೆ ಮಾಡಬಹುದು!
ಪಾಲಕರಲ್ಲಿ ಈ ಸಮಸ್ಯೆ ಇದ್ದರೆ ಮಕ್ಕಳಲ್ಲಿಯೂ ಕಂಡುಬರಬಹುದು. ವಿರಳವಾಗಿ ಕೆಲವರು 18ನೇ ವಯಸ್ಸಿನವರೆಗೂ ಹಾಸಿಗೆಯನ್ನು ಒದ್ದೆ ಮಾಡುತ್ತಿರುತ್ತಾರೆ. ಈ ಸಮಸ್ಯೆ ಹುಡುಗಿಯರಿಗಿಂತ ಹುಡುಗರಲ್ಲಿ ಹೆಚ್ಚು.
ಕಾರಣಗಳು
ಈ ರೀತಿಯ ಅನಿಯಂತ್ರಣದ ಸಮಸ್ಯೆಗೆ ಎರಡು ರೀತಿಯ ಕಾರಣಗಳಿವೆ. ಒಂದರಲ್ಲಿ ಮೆದುಳಿಗೆ ಪೆಟ್ಟು, ತೀವ್ರ ಬುದ್ಧಿಮಾಂದ್ಯತೆ, ಮೂತ್ರಕೋಶದ ನರತಂತುಗಳು ಸರಿಯಾಗಿ ವಿಕಾಸವಾಗದಿರುವುದು, ಸೀಳು ಬೆನ್ನುಗಂಬ ಅಥವಾ ಮಲ-ಮೂತ್ರ ಹತೋಟಿ ಸಾಧಿಸಲು ಯಾರೂ ತರಬೇತಿಯನ್ನು ನೀಡದಿರುವುದು ಇದಕ್ಕೆ ಕಾರಣವಾಗಬಹುದು.
ಗಾಢನಿದ್ರೆ, ಆಲಸ್ಯ, ಮೂತ್ರಕೋಶದ ಸೋಂಕು, ಡಯಾಬಿಟಿಸ್, ಮಾನಸಿಕ ಒತ್ತಡ ಇವುಗಳಿಂದಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಸಲಹೆಗಳು
- ಇದೊಂದು ತಾತ್ಕಾಲಿಕ ಸಮಸ್ಯೆ. ಇದಕ್ಕಾಗಿ ಪಾಲಕರು ಮುಜುಗರಪಟ್ಟುಕೊಳ್ಳುವ ಅಗತ್ಯವಿಲ್ಲ. ರಾತ್ರಿ ಮಲಗುವ ಮುನ್ನ ಮಗುವಿಗೆ ಮೂತ್ರ ವಿಸರ್ಜನೆ ಮಾಡಿಸಿ, ಕತ್ತಲಾದ ಮೇಲೆ ದ್ರವಾಹಾರ ಕೊಡುವುದನ್ನು ನಿಲ್ಲಿಸಿ. (ನೀರು, ಮಜ್ಜಿಗೆ, ಜ್ಯೂಸ್, ಹಾಲು ಇತ್ಯಾದಿಗಳು ಬೇಡ).
- ಮಧ್ಯರಾತ್ರಿ ಒಮ್ಮೆ ಮಗುವನ್ನು ಮೂತ್ರ ಮಾಡಲು ಎಬ್ಬಿಸಿ.
- ಹಗಲು ಹೊತ್ತಿನಲ್ಲಿ ಹೆಚ್ಚು ನೀರು ಕುಡಿಸಿ, ಸಾಧ್ಯವಾದಷ್ಟು ಹೆಚ್ಚು ಕಾಲ ಮೂತ್ರವನ್ನು ತಡೆಹಿಡಿಯಲು ಮಗುವಿಗೆ ಹೇಳಬೇಕು. ಈ ರೀತಿಯ ಚಟುವಟಿಕೆಗಳಿಂದ ಮೂತ್ರ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ.
- ನಮ್ಮ ಮಗ ಓದಿನಲ್ಲಿ ಜಾಣ. ರಾತ್ರಿ ಹಾಸಿಗೆಯಲ್ಲಿ ಉಚ್ಚೆ ಹೊಯ್ಯುವುದನ್ನು ಬಿಟ್ಟರೆ ಬೇರೆ ಎಲ್ಲಾ ಚೆನ್ನಾಗಿದೆ ಎಂದು ಕಂಡಕಂಡವರ ಬಳಿ ಹೇಳುತ್ತಾ ತಿರುಗಬೇಡಿ. ಇದು ಮಗುವಿನಲ್ಲಿ ಕೀಳರಿಮೆಯನ್ನು ಹುಟ್ಟಿಸುತ್ತದೆ.
- ಮಗು ಮಲಗುವ ಕೋಣೆ ಆತಂಕರಹಿತವಾಗಿರಬೇಕು. ದೀಪ ಉರಿಯುತ್ತಿದ್ದರೆ ಉತ್ತಮ.
- ಮಗುವಿನ ಜತೆ ಮಲಗುವುದು, ಮಲಗುವ ಮೊದಲು ಮನಸ್ಸಿಗೆ ಮುದ ನೀಡುವ ಕಥೆಯನ್ನು ಹೇಳುವುದು, ಮಗುವಿಗೆ ಒಂದು ರೀತಿಯ ಸಾಂತ್ವನ ನೀಡುತ್ತದೆ.
- ಹೀಯಾಳಿಸುವುದನ್ನಾಗಲೀ, ಬಯ್ಯುವುದನ್ನಾಗಲೀ, ಹೊಡೆಯುವುದನ್ನಾಗಲಿ ಮಾಡಬೇಡಿ.
ಆಯುರ್ವೇದ ಔಷಧಗಳು