ಅವರಿಬ್ಬರಿಗೂ ಇಪ್ಪತ್ತೈದರ ಹರೆಯ. ಪ್ರೀತಿಸಿ ಮದುವೆಯಾದವರು. ಎಂಎನ್‌ಸಿ ಉದ್ಯೋಗಿಗಳು. ಕೈತುಂಬಾ ಸಂಬಳ. ಆದರೆ, ಎಣಿಸಲು ಪುರುಸೊತ್ತಿಲ್ಲ. ಇಬ್ಬರ ಶಿಫ್ಟ್‌ಗಳು ಬೇರೆ ಬೇರೆ. ಗಂಡ ಮನೆಗೆ ಬರುವ ಹೊತ್ತಿಗೆ ಹೆಂಡತಿ ಮನೆಯಿಂದ ಹೊರಡುತ್ತಾಳೆ. ವಾರದಲ್ಲೆರಡು ದಿನ ರಜೆ. ಆ ದಿನಗಳಲ್ಲಿ ಹೆಚ್ಚಿನ ಸಮಯ ಮನೆ ಕ್ಲೀನ್ ಮಾಡುವುದಕ್ಕೆ, ಬಟ್ಟೆ ತೊಳೆಯುವುದಕ್ಕೆ ಇನ್ನಿತ್ಯಾದಿ ಕೆಲಸಗಳಲ್ಲಿ ಹರಿದು ಹೋಗುತ್ತದೆ.
ದಣಿದ ದೇಹಗಳು ನಿದ್ದೆಯನ್ನಷ್ಟೇ ಪ್ರೀತಿಸುತ್ತವೆ. ಮಾತು, ನಗು ಜತೆಗೆ ಅರ್ಥವೇ ಇಲ್ಲ ಎಂದೆನ್ನಿಸುವ ಆದರೆ ಸಾವಿರ ಭಾವಗಳನ್ನು ಹೊತ್ತುಕೊಳ್ಳುವ ಆತ್ಮೀಯ ಸ್ಪರ್ಶ, ಒಂದು ಸಣ್ಣ ಮುತ್ತು ಎಲ್ಲಕ್ಕೂ ಎರವಾಗಿ ಈ ಜೀವಗಳು ಸವೆಯುತ್ತವೆ. ಬದುಕು ಇನ್ನೂ ಅರಳಬೇಕಾದ ಸಮಯದಲ್ಲೇ ಅವರ ನಡುವೆ ಸಣ್ಣದೊಂದು ಬಿರುಕು ಮೂಡಿ ಕಂದಕವಾಗುತ್ತದೆ. ಒಂದೋ ಒಂದೇ ಮನೆಯಲ್ಲಿ ನಿರ್ಭಾವುಕರಾಗಿ ಯಾಂತ್ರಿಕ ಸಂಬಂಧವನ್ನಷ್ಟೇ ಉಳಿಸಿಕೊಂಡು ದಿನ ದೂಡುತ್ತಾರೆ. ಇಲ್ಲವೇ ವಿಚ್ಛೇದನದತ್ತ ಮುಖ ಮಾಡುತ್ತಾರೆ. ಅಂತೂ 'ಮಕ್ಕಳು ಚೆನ್ನಾಗಿ ಓದಿ ಒಳ್ಳೆಯ ಬದುಕು ಕಟ್ಟಿಕೊಂಡರು' ಎಂದು ಅವರ ಹೆತ್ತವರು ನೆಮ್ಮದಿಯ ಉಸಿರು ಬಿಡುವಷ್ಟರಲ್ಲಿ ಅದು ನೋವಿನ ನಿಟ್ಟುಸಿರಾಗಿ ಬದಲಾಗಿಬಿಡುತ್ತದೆ.
ಮಗಳ ಪದವಿ ವಿದ್ಯಾಭ್ಯಾಸ ಈಗಿನ್ನೂ ಮುಗಿಯುತ್ತಿದೆ ಅಷ್ಟೇ. ತಾಯ್ತಂದೆಗೆ ಅವಳ ಮದುವೆಯ ತವಕ. ತಮ್ಮ ಜವಾಬ್ದಾರಿ ಮುಗಿಸಿಕೊಳ್ಳಬೇಕು ಎನ್ನುವುದಕ್ಕಿಂತಲೂ ತಾವು ಗಟ್ಟಿಯಾಗಿರುವಾಗಲೇ ಮಗಳಿಗೊಂದು ನೆಲೆ ಕಾಣಿಸಬೇಕು ಎಂಬ ಆತುರ. ಹುಡುಗನ ಮನೆತನ, ಉದ್ಯೋಗ, ಊರು ಎಲ್ಲವನ್ನೂ ನೋಡಿಕೊಂಡು ಮದುವೆ ನಿಶ್ಚಯಿಸುತ್ತಾರೆ. ಸಂಭ್ರಮದಲ್ಲಿ ಮದುವೆ ಪೂರೈಸುತ್ತಾರೆ. ಒಂದು ತಿಂಗಳು ಕಳೆಯುವಷ್ಟರಲ್ಲಿ ಮಗಳು ಮನೆಗೆ ಹಿಂದಿರುಗುತ್ತಾಳೆ. ಮೈ ಮುಖದ ಮೇಲೆಲ್ಲಾ ಗಾಯ, ಸುಟ್ಟ ಗುರುತುಗಳು. ಅವರ ಹೃದಯ ಚಿಂದಿಯಾಗುತ್ತದೆ. ಗಿಣಿಯಂತೆ ಸಾಕಿದ ಮಗಳನ್ನು ತಾವೇ ಕೈಯಾರೆ ಗಿಡುಗನಿಗೆ ಕೊಟ್ಟೆವಲ್ಲಾ, ಅವಳಿಗೆ ಇನ್ನೂ ಓದಿಸಿ ಸ್ವಂತ ಕಾಲ ಮೇಲೆ ನಿಲ್ಲುವಂತೆ ಮಾಡಿ ಮತ್ತೆ ಮದುವೆ ಮಾಡಿದ್ದರೆ ಒಳ್ಳೆಯದಿತ್ತು ಎಂದು ಚಡಪಡಿಸುತ್ತಾರೆ. ಆದರೆ ಸಮಯ ಅವರನ್ನು ನೋಡಿ ವಿಷಾದಿಸುತ್ತದೆ.
ನಾವು ಒಂದಿಷ್ಟು ಸೂಕ್ಷ್ಮವಾಗಿ ನೋಡಿದರೆ ಇಂಥ ಅದೆಷ್ಟೋ ಉದಾಹರಣೆಗಳು ನಮ್ಮ ನಡುವೆ ಕಾಣಿಸುತ್ತವೆ. ಯಾಕೋ ಮನಸ್ಸು ಮುದುಡುತ್ತದೆ. ಸಾವಿರ ಪ್ರಶ್ನೆಗಳು. ನಮ್ಮಲ್ಲಿ ಈ ಬಗೆಯ ಹೊಂದಾಣಿಕೆಯ ಸಮಸ್ಯೆ ಭುಗಿಲೆದ್ದಿರುವುದಾದರೂ ಏಕೆ? ಪ್ರೇಮ ವಿವಾಹಗಳೇ ಇರಲಿ, ಅಪ್ಪ ಅಮ್ಮ ನೋಡಿ, ಜಾತಕ ಹೊಂದಿಸಿ ಮಾಡಿದ ಮದುವೆಗಳೇ ಆಗಿರಲಿ, ಯಾವ ಬಾಂಧವ್ಯದ ಮೋಡಿಗೂ ಸಿಲುಕದೇ ಛಿದ್ರವಾಗುತ್ತಿವೆ ಅಂದರೆ ಅದಕ್ಕೆ ಕಾರಣಗಳೇನು? ಇಂದಿನ ಯುವಪೀಳಿಗೆಯೆಲ್ಲ ಒಂದೋ ಒಂಟಿ ಮಗುವಾಗಿ ಬೆಳೆದವರಾಗಿರುತ್ತಾರೆ ಅಥವಾ ಇಬ್ಬರಿದ್ದರೂ ಹೆತ್ತವರು ತಮ್ಮ ಸಾಮರ್ಥ್ಯ ಮೀರಿ ಅವರ ಎಲ್ಲ ಆಸೆ ಆಕಾಂಕ್ಷೆಗಳನ್ನು ಪೂರೈಸುತ್ತಾ ತೃಪ್ತರನ್ನಾಗಿಡಲು ಪ್ರಯತ್ನಿಸುತ್ತಾ ಬೆಳೆಸಿರುತ್ತಾರೆ. ಅವರು ಎಲ್ಲೂ ಯಾವ ಕೊರತೆಯನ್ನೂ ಒಪ್ಪಿಕೊಳ್ಳುವುದಕ್ಕೆ ತಯಾರಿರುವುದಿಲ್ಲ. ತಾವು ಬಯಸಿದ್ದು ಅದು ಹೇಗಾದರೂ ಸರಿ, ಮರುಕ್ಷಣದಲ್ಲಿ ತಮ್ಮಲ್ಲಿರಬೇಕು ಎಂಬ ಹಟ ಅವರಲ್ಲಿ ಬೆಳೆದುಬಂದಿರುತ್ತದೆ. ಸಣ್ಣಂದಿನಲ್ಲಿ ರಸ್ತೆ ಮೇಲೆ ಉರುಳಾಡಿಯಾದರೂ ಸರಿಯೇ, ಬೇಕೆಂದ ಆಟದ ಸಾಮಾನನ್ನು ಗಿಟ್ಟಿಸಿಕೊಳ್ಳುತ್ತಾ ಬೆಳೆಯುವ ಮಕ್ಕಳು ಜೀವನದ ಮುಖ್ಯ ಘಟ್ಟದಲ್ಲಿ ಸೋಲುತ್ತಾರೆ. ಯಾವ ಸಂದರ್ಭದಲ್ಲೂ ಹೊಂದಾಣಿಕೆಯ ಅಗತ್ಯವನ್ನು ಅರ್ಥಮಾಡಿಕೊಳ್ಳುವುದಿಲ್ಲ. ಇದು ಜೀವನ ಸಂಗಾತಿಯ ವಿಷಯಕ್ಕೂ ಅನ್ವಯವಾಗುತ್ತದೆ. ಬದುಕಿನುದ್ದಕ್ಕೂ ಜತೆಗೂಡಿರಬೇಕಾದ ಹೆಜ್ಜೆಗಳು ಅರ್ಧದಾರಿಯನ್ನೂ ಜತೆಯಾಗಿ ಕ್ರಮಿಸುವುದಿಲ್ಲ. ಪೂರ್ವಪಶ್ಚಿಮವಾಗಿ ಎಳೆದಾಡುತ್ತಾರೆ. ಇವರ ಎಳೆದಾಟದಲ್ಲಿ ಕಂಗಾಲಾಗುವುದು ಅವರ ಹೆತ್ತವರು ಇಲ್ಲಾ ಅವರು ಹೆತ್ತವರು!
ಹೆಣ್ಣು ಆರ್ಥಿಕವಾಗಿ ಸ್ವತಂತ್ರಳಾಗಿರುವುದರಿಂದ ಇಂದು ವಿಚ್ಛೇದನಗಳು ಜಾಸ್ತಿಯಾಗಿವೆ ಎಂಬುದು ಹಿರಿಯರೊಬ್ಬರ ವಾದ. ಇದನ್ನು ಒಪ್ಪಿಕೊಳ್ಳುವಂತೆಯೂ ಇಲ್ಲ, ಒಪ್ಪದೇ ಇರುವಂತೆಯೂ ಇಲ್ಲ. ಆರ್ಥಿಕ ಸ್ವಾತಂತ್ರ್ಯ ಹೆಣ್ಣುಮಕ್ಕಳಿಗೆ ಆತ್ಮವಿಶ್ವಾಸವನ್ನೂ ಬದುಕನ್ನೆದುರಿಸುವ ಧೈರ್ಯವನ್ನೂ ತಂದು ಕೊಟ್ಟಿದೆ ಎಂಬುದು ನಿಜ. ತನಗೆ ಬೇಕಾದ ದಾರಿಯನ್ನು ಆಕೆ ಆಯ್ಕೆ ಮಾಡಿಕೊಳ್ಳುತ್ತಾಳೆ. ಬದುಕನ್ನು ಸಾಧ್ಯವಾದಷ್ಟರ ಮಟ್ಟಿಗೆ ಸರಿದೂಗಿಸಿಕೊಂಡು ಹೋಗುವ ಪ್ರಯತ್ನ ಮಾಡುತ್ತಾಳೆ. ತಾನು ಎಡವದಂತೆ, ಮಕ್ಕಳಿಗೆ ತೊಂದರೆಯಾಗದಂತೆ ಎಚ್ಚರಿಕೆಯಿಂದ ಹೆಜ್ಜೆಯಿಡುವ ಚಾಕಚಕ್ಯತೆ ಅವಳಲ್ಲಿರುತ್ತದೆ. ಹಾಗೆಂದು ಇವರು ಗಂಡನೇನಾದರೂ ದಬ್ಬಾಳಿಕೆ ನಡೆಸಿದರೆ ತಲೆತಗ್ಗಿಸಿ ಒಪ್ಪಿಕೊಳ್ಳುವವರೂ ಅಲ್ಲ. ಬಂಧನದಿಂದ ಬಿಡಿಸಿಕೊಂಡು ನನ್ನ ದಾರಿ ನನಗೆ, ನಿನ್ನದು ನಿನಗೆ ಎಂದು ನಡೆದು ಬಿಡುತ್ತಾರೆ. ಇವರಿಗೆ ಹೊಂದಾಣಿಕೆಯ ಪಾಠ ಹೇಳುವುದರಲ್ಲಿ ಯಾವ ಅರ್ಥವೂ ಇಲ್ಲ!
ಆದರೆ ತಾನು ದುಡಿಯುತ್ತೇನೆ ಎಂಬ ಆತ್ಮವಿಶ್ವಾಸ ಅಹಂ ಆಗಿ ಬದಲಾದರೆ ಮಾತ್ರ ಅವಳ ಜೀವನ ಮೂರಾಬಟ್ಟೆಯಾಗುತ್ತದೆ. ತಾನು ದುಡಿದದ್ದು ತನಗೆ ಮಾತ್ರ, ಮನೆಯ ಖರ್ಚೆಲ್ಲಾ ಗಂಡನೇ ನೋಡಿಕೊಳ್ಳಬೇಕು ಎಂಬ ವಾದವೂ ಕೊನೆಗೆ ಅವರಿಬ್ಬರ ನಡುವೆ ಅಂತರ ಉಂಟುಮಾಡಬಹುದು ಅಥವಾ ತಾನು ದುಡಿದು ಮನೆಗೆ ನೆರವಾಗದೇ ಇದ್ದರೆ ಮನೆ ನಡೆಸಲು ಗಂಡನೊಬ್ಬನ ಸಂಬಳ ಸಾಲದು ಎಂಬ ಮಾತು ಪದೇಪದೆ ಆಕೆಯ ಬಾಯಲ್ಲಿ ಬಂದರೆ ಆಗ ಸ್ವತಃ ಗಂಡನ ಅಹಂಗೆ ಧಕ್ಕೆ ಉಂಟಾಗಿ ಅಲ್ಲೂ ಸಂಬಂಧಗಳು ಹಳಸಬಹುದು.
ಈ ಬಗೆಯ ಕಾರಣಗಳಿಂದ ಹೊಂದಾಣಿಕೆಯ ಕೊರತೆ ಎದುರಾಗುವುದು ಸಾಮಾನ್ಯವಾದರೆ ಇನ್ನೂ ಕೆಲವು ಬಗೆಯ ವಿಷಯಗಳು ತೀರಾ ನೋವುಂಟು ಮಾಡುತ್ತವೆ. ಅಕ್ಷತಾ ತಾಯ್ತಂದೆಗೆ ಒಬ್ಬಳೇ ಮಗಳು. ಅವರ ಜೀವನ ಸಂಧ್ಯೆಯಲ್ಲಿ ನೆರಳಾಗುವುದು ಅವಳ ಕರ್ತವ್ಯ. ಆದರೆ ತನ್ನ ಹೆತ್ತವರ ಬಗ್ಗೆ ಅಪಾರ ಕಾಳಜಿ ವಹಿಸುವ ಅವಳ ಪತಿ ಅತ್ತೆ ಮಾವನ ಬಗ್ಗೆ ನಿರ್ಲಿಪ್ತ. ಅವರನ್ನು ಜತೆಯಲ್ಲಿ ಕರೆತರುವುದು ಹಾಗಿರಲಿ, ಆರ್ಥಿಕವಾಗಿ ಪತ್ನಿ ನೆರವು ನೀಡಿದರೂ ಆತನಿಗೆ ಸಿಟ್ಟು. ತನ್ನ ತಂದೆತಾಯಿಯನ್ನು ಪತ್ನಿ ಸ್ವತಃ ತನ್ನ ಅಪ್ಪ ಅಮ್ಮನಂತೆ ಕಾಣಬೇಕೆಂದು ಬಯಸುವ ಆತನಿಗೆ ಅಕ್ಷತಾಳ ನೋವು ಅರ್ಥವೇ ಆಗುವುದಿಲ್ಲ. ಪರಿಣಾಮ, ಅವಳ ಬಾಳಬಂಡಿಯೂ ಹಳಿ ತಪ್ಪುತ್ತದೆ.
ಎಳೆಯ ಮನಸ್ಸುಗಳು ಸಮಯ ಹೊಂದಿಸಿಕೊಂಡು ಮಾತಾಡುವುದನ್ನು ರೂಢಿಸಿಕೊಂಡರೆ ಹೆಚ್ಚಿನ ಸಮಸ್ಯೆಗಳೂ ಕಡಿಮೆಯಾಗಬಲ್ಲವು. ಪರಸ್ಪರರಿಗೆ ಸಮಯ ನೀಡುವುದು, ಮಾತು ತಮಾಷೆಗಳಲ್ಲಿ ತೊಡಗುವುದು, ಒಂದು ರೌಂಡ್ ವಾಕ್ ಇವೆಲ್ಲ ಹೆಜ್ಜೆಗಳನ್ನು ಹತ್ತಿರ ತರಬಲ್ಲ ಸುಲಭ ಸಾಧನಗಳು.
- ಆರತಿ ಪಟ್ರಮೆ