ಕೆಲವರು ಮಾತನಾಡಿದರೆ ಕೇಳ್ತಾ ಇರಬೇಕು ಅನಿಸುತ್ತೆ. ಮತ್ತೆ ಕೆಲವರು ಬಾಯಿಬಿಟ್ಟರೆ ಕಿವಿಗಳಿಗೆ ಹತ್ತಿ ತುರುಕಿಕೊಳ್ಳುವಂತಾಗುತ್ತದೆ. ಇನ್ನು ಕೆಲವರು ಬಾಯಿಬಿಟ್ಟರೆ ಅವರ ಅಜ್ಞಾನ ಸಾಬೀತುಪಡಿಸಿದಂತಿರುತ್ತದೆ. ಮಾತನಾಡುವ ಮೊದಲು ನಾನೇನು ಮಾತನಾಡುತ್ತೇನೆ? ಯಾಕೆ ಮಾತನಾಡುತ್ತೇನೆ? ಹೇಳಿದ್ದನ್ನೇ ಹೇಳುತ್ತಿದ್ದೇನೆಯೇ? ಎದುರಿಗಿರುವವರ ಗತಿ ಏನಾದೀತು? ಇತ್ಯಾದಿಗಳನ್ನು ತಲೆಯೊಳಗಿಟ್ಟುಕೊಳ್ಳುವುದೊಳಿತು. ಇಲ್ಲವಾದರೆ ಲಲಿತಾರ ಸ್ಥಿತಿ ನಿಮಗೂ ಬರಬಹುದು.
ಮೂಲೆಮನೆ ಲಲಿತಾ ಇತ್ತೀಚೆಗೆ ಹೊರಗೆ ಕಾಣಿಸಿಕೊಂಡರೆ ಸಾಕು ಈ ರಸ್ತೆಯ ಹೆಂಗಸರೆಲ್ಲ ಬೆಚ್ಚಿಬೀಳುತ್ತಾರೆ. ಮೊನ್ನೆ ಲಲಿತಾ ಕೈಗೆ ನಾನು ಸಿಕ್ಕಿಬಿದ್ದೆ ನೋಡಿ, ಆಗಲೇ ನನಗೆ ಅರ್ಥವಾಗಿದ್ದು ಈ ಹಿಂಸೆ ಸಾಧಾರಣವಾದುದಲ್ಲ ಅಂತ.
ಈ ಮೊದಲು ಲಲಿತಾ ಹೀಗಿರಲಿಲ್ಲ. ಆರು ತಿಂಗಳ ಹಿಂದೆ ಅಮೆರಿಕಗೆ ಹೋಗಿ ಬಂದದ್ದೇ ಬಂದಿದ್ದು, ಇಂಡಿಯಾದವರನ್ನು ಹಿಗ್ಗಾಮುಗ್ಗಾ ಬಯ್ಯಲು ಶುರುಮಾಡಿಬಿಟ್ಲು. ಮಾತುಮಾತಿಗೂ ಅಮೆರಿಕ... ಅಮೆರಿಕ... ನಡುನಡುವೆ 'ಇಲ್ಲೇ ಬಿದ್ದಿರುವ ನಿಮಗೇನು ಗೊತ್ತು?' ಅನ್ನುವ ಗತ್ತು ಬೇರೆ. 'ರೀ ಲಲಿತಾ, ರೆಸ್ಟ್ ರೂಮ್‌ಗೆ ಹೋಗಬೇಕು' ಅಂತ ತಪ್ಪಿಸಿಕೊಳ್ಳಕ್ಕೆ ನೋಡಿದೆ. 'ಬನ್ನಿ ಬನ್ನಿ..' ಅಮೆರಿಕ ಥರ ಮಾಡ್ಸಿದೀನಿ' ಅಂತ ಒಳಗೆ ಬಿಟ್ಟು ಹೋದ್ಲು. ಎಲ್ಲವೂ ಅಮೆರಿಕಮಯ. ಪೇಪರ್ ರೋಲ್ ನೋಡಿ ಬೆಚ್ಚಿದೆ. ಹೊರಗೆ ಬಂದು 'ಲಲಿತಾ ನಾನು ಮನೆಗೆ ಹೋಗ್ತೀನಿ ಪ್ಲೀಸ್' ಅಂದೆ. 'ಇರಿ ಚಾಕೊಲೇಟ್ ತಂದಿದೀನಿ. ಅಲ್ಲಿ ಚಾಕೊಲೇಟ್ ಮಾಲ್‌ಗಳಲ್ಲಿ ತಿನ್ನಬೇಕು ಕಣ್ರೀ.. ಅಬ್ಬಾ! ಯಾರೂ ಏನೂ ಅನ್ನಲ್ಲ, ದುಡ್ಡೂ ತಗೊಳಲ್ಲ.. ಪ್ಯಾಕ್ ಮಾಡಿಸಿದ್ರೆ ಮಾತ್ರ ದುಡ್ಡು. ಹಣ್ಣುಗಳೂ ಅಷ್ಟೆ ಕಣ್ರೀ.. ಇಲ್ಲಿ ನೋಡಿ ಈ ಹವಳ, ಜೇಡ, ಪರ್ಲ್ ಎಲ್ಲ ಅಮೆರಿಕದ್ದು. ಅಯ್ಯೋ ಬೆಡ್‌ಶೀಟ್ ತಂದಿದೀನಿ, ಹೇಗಿವೆ ಅಂತೀರಾ? ಎಷ್ಟಾಗಲಿ ಅಮೆರಿಕದ್ದು ಕೇಳಬೇಕೆ' ಅನ್ನುತ್ತಾ ಪ್ರೀತಿಯಿಂದ ನೇವರಿಸಿದ್ದು ಕಂಡು 'ಲಲಿತಾ, ನೀವು ಇಂಡಿಯಾ ಪೂರ್ತಿ ಸುತ್ತಿದೀರಾ?' ಅಂತ ಕೇಳಿದೆ. 'ಇಲ್ಲಪ್ಪಾ, ಅಮೆರಿಕಾದಲ್ಲಿ ಇಲ್ಲದ್ದು ಇಲ್ಲೇನಿದೆ? ಬದುಕಿರೋವಾಗ ಕೈ ಕಾಲು ಗಟ್ಟಿ ಇರುವಾಗ ಅಮೆರಿಕಕ್ಕೆ ಹೋಗ್ ಬಂದುಬಿಡಬೇಕು. ಏನೋ ನಮಗೆ ಪೂರ್ವಜನ್ಮದ ಪುಣ್ಯ ಇತ್ತು. ಅವರೂ ಕರೆದ್ರು...' ಲಲಿತಾ ನಿಜವಾಗ್ಲೂ ಕನವರಿಕೆಗೆ ಬಿದ್ದಿದ್ದಳು. 'ಅಲ್ಲಿಂದ ಬಂದ ಮೇಲೆ ಯಾರೂ ನನ್ನನ್ನು ಸರಿಯಾಗಿ ಮಾತೇ ಆಡಿಸಲ್ಲರೀ... ನನ್ನ ಮೇಲೆ ಅದೇನು ಹೊಟ್ಟೆ ಉರೀರಿ ಈ ಜನಕ್ಕೆ?' ಅಂದಳು. ಇದೇ ಸರಿಯಾದ ಸಮಯವೆಂದು, 'ಸಾರಿ ಲಲಿತಾ, ನಿಮಗೆ ಅಲ್ಲಿಗೆ ಹೋಗಿ ಬಂದಿದ್ದು ಹೆಚ್ಚುಗಾರಿಕೆ ಇದ್ದರೆ ನೀವು ಖುಷಿ ಪಡಿ. ಅದು ಬಿಟ್ಟು ಇಲ್ಲಿಯವರನ್ನ ಬಾಯಿಗೆ ಬಂದಹಾಗೆ ಬಯ್ಯ ಬೇಡಿ. ಹೀಗಾದರೆ ಯಾರು ಮಾತಾಡಿಸ್ತಾರೆ ಹೇಳಿ. ನಿಮಗೆ ಅವರೆಲ್ಲಾ ಸೇರಿ 'ಪಿಟಿಲೇಶ್ವರಿ' ಅಂತ ಹೆಸರಿಟ್ಟಿದ್ದಾರೆ ಗೊತ್ತಾ? ನೀವೇನಾದ್ರೂ ಅಂದ್ಕೊಳ್ಳಿ, ನನಗಂತೂ ತಲೆಚಿಟ್ಟು ಹಿಡೀತು. ನೀವು ಇದನ್ನೇ ಮುಂದುವರಿಸೋದಾದ್ರೆ ಒಬ್ಬಂಟಿ ಆಗ್ತೀರಿ ಅಷ್ಟೆ. ನನಗನಿಸಿದ್ದು ಹೇಳಿದೀನಿ. ಇನ್ನು ನಿಮ್ಮಿಷ್ಟ' ಎಂದು ಆಕೆ ಕೈಗಳನ್ನು ಕೊಡವಿಕೊಂಡು ಮನೆಕಡೆ ನಡೆಯುವಾಗ ನಿಜವಾಗಿಯೂ ತಲೆನೋವು ಪ್ರಾರಂಭವಾಗಿತ್ತು.
- ಭಾಗ್ಯ ಕೃಷ್ಣಮೂರ್ತಿ