ಬೆಂಗಳೂರಿನ ಮಾರತ್ತಳ್ಳಿ ಸಮೀಪದ ಹೂಡಿ ಹಾಸ್ಟೆಲ್‌ನಿಂದ ಕೆ.ಆರ್. ಪುರಂ ಟಿನ್ ಫ್ಯಾಕ್ಟರಿ ಮಾರ್ಗವಾಗಿ ಮೆಜೆಸ್ಟಿಕ್ ತಲುಪಿ ಮತ್ತೆ ಮಲ್ಲೇಶ್ವರದಿಂದ ಹರಿಶ್ಚಂದ್ರ ಘಾಟ್ ಸ್ಟಾಪ್‌ನಲ್ಲಿ ಇಳಿದು ಡಿ.ಇಡಿ. ಈಸ್ಟ್- ವೆಸ್ಟ್ ಕಾಲೇಜ್ ತಲುಪುವಷ್ಟರಲಿ ನಾಲ್ಕು ಗಂಟೆ ಪಯಣ ನನ್ನದು. ಮುಂಜಾನೆ 7ಕ್ಕೆ ಹಾಸ್ಟೆಲ್ ಬಿಟ್ಟರೆ ಮತ್ತೆ ಸಂಜೆ 6.30ಕ್ಕೆ ವಾಪಾಸ್. ಅಂದರೆ ಹೂ ಮಾರುವ ಮಹಿಳೆಯರು ಪ್ರಯಾಣ ಮಾಡುವ ಸಮಯವೂ ಅದುವೇ.
ಬಸ್ ನಿಂತಕೂಡಲೆ ದಪ್ಪದಾದ ಹೂವಿನ ಕವರನ್ನೋ ಬುಟ್ಟಿಯನ್ನೋ ಹಿಡಿದು ಜನರನ್ನು ತಳ್ಳಿಕೊಂಡು ಬಸ್ ಒಳಗೆ ನುಗ್ಗುವ ಇವರು ಯಾವಾಗಲೂ ಡ್ರೈವರ್‌ನ ಹಿಂದಿನ ಸೀಟ್‌ನಲ್ಲೋ, ಡೋರ್ ಪಕ್ಕದ ಸೀಟ್‌ನಲ್ಲೋ ಮಾತ್ರ ಕುಳಿತುಕೊಳ್ಳುತ್ತಾರೆ. ಅಗತ್ಯ ಬಿದ್ದರೆ ಮೆಟ್ಟಿಲಲ್ಲಿ ಕುಳಿತುಕೊಳ್ಳಲೂ ಇವರು ರೆಡಿ. ಇವರು ಹೂ ವ್ಯಾಪಾರಕ್ಕೆ ಕೃ.ರಾ. ಮಾರುಕಟ್ಟೆಗೆ ಬರಲೇಬೇಕು. ಬಸ್ಸಿನ ಜಂಟಾಟದ ನಡುವೆ ನಾವು ಓದಲೆಳಸಿದರೆ ಇವರು ಹೂ ಕಟ್ಟುತ್ತಾರೆ! ಇವರು ಬಸ್ಸಿನಲ್ಲಿ ಕುಳಿತ ತಕ್ಷಣ ಹೂವಿನ ಗಂಟನ್ನು ಬಿಚ್ಚಿ ನೂಲನ್ನು ಬೆರಳ ಮಧ್ಯ ಸಿಕ್ಕಿಸಿಕೊಂಡು ತಮ್ಮ ಮಡಿಲಲ್ಲಿ ಮೊಗ್ಗು, ಹೂ ಹಾಕಿಕೊಂಡು ವೈವಿಧ್ಯ ಮಾಲೆ ಕಟ್ಟಲು ಪ್ರಾರಂಭಿಸುತ್ತಾರೆ.
ಮಳೆ ಬರುತ್ತಿರಲಿ, ಬಿರುಬಿಸಿಲಿನ ಧಗೆಯಿರಲಿ, ಬಸ್ ತುಂಬಾ ಜನರ ನೂಕು ನುಗ್ಗಲು, ಧೂಳು, ಹೊಗೆಯಿರಲಿ, ಕರ್ಕಶ ಶಬ್ದವಿರಲಿ, ಟ್ರಾಫಿಕ್ ಜಾಮ್... ಏನೇ ಇರಲಿ, ಸ್ವಲ್ಪವೂ ತಲೆಕೆಡಿಸಿಕೊಳ್ಳದೆ ತಮ್ಮ ಕಾಯಕದಲ್ಲಿ ಮುಳುಗಿಬಿಡುತ್ತಾರೆ. ಹೂ ಕಟ್ಟಿ ಹಾರ ಮಾಡಿ ಒಂದು ಬದಿಗೆ ಜರುಗಿಸಿ ಪೇಪರಿನ ತಳ ಭಾಗಲ್ಲಿ ಉಳಿದ ಹೂ ದಳಗಳ ಮಧ್ಯ ಬೇರೆ ಬಣ್ಣದ ಹೂಗಳನ್ನು ಸೇರಿಸಿ ಮಾಲೆ ಮಾಡುತ್ತಾರೆ. ಇದಕ್ಕೆ ಸುಂದರ ರೂಪ ಕೊಟ್ಟು ಮೊಳಕ್ಕೆ 5-10 ರು.ನಂತೆ ಮಾರಿ ಅಂದಿನ ಪ್ರಯಾಣದ ವೆಚ್ಚವನ್ನು ಭರಿಸುತ್ತಾರೆ. ಅಚ್ಚರಿಯೆಂದರೆ ಇಷ್ಟೆಲ್ಲಾ ಹೂ ಕಟ್ಟುವ ಅವರು ಮಾತ್ರ ಹೂ ಮುಡಿಯುವುದು ತೀರಾ ವಿರಳ. ಸದಾ ಕೆದರಿದ ತಲೆ, ಕರಗಿದ ಕುಂಕುಮ, ತಾಂಬೂಲ ಹಾಕಿದ ಬಾಯಿ, ಹೂವಿನ ಕಲೆ, ಹೊಗೆ ಧೂಳಿಗೆ ಮಾಸಿದ ಸೀರೆ... ಕುತೂಹಲ ಮೂಡಿ 'ನಿಮಗೆ ತಿಂಗಳಿಗೆ ಎಷ್ಟು ಲಾಭ ಬರುತ್ತದೆ?' ಎಂದು ಕೇಳಿದರೆ ಹತ್ತು ಸಾವಿರದವರೆಗೂ ಲೆಕ್ಕ ಹೇಳುತ್ತಾರೆ! ಅಷ್ಟು ಹಣ ಏನು ಮಾಡುವಿರೆಂದು ಕೇಳಿದರೆ, ನಾಳಿನ ವ್ಯಾಪಾರಕ್ಕೆ ಬಂಡವಾಳ, ಮನೆ- ಮಕ್ಕಳು, ಓದು- ಮದುವೆ ಇರುತ್ತಲ್ಲಾ... ಎನ್ನುತ್ತಾರೆ. 'ಗಂಡ ದುಡಿಯುವುದಿಲ್ಲವೆ?' ಕೇಳಿದರೆ, ಕೆಲವರು 'ಅವರೂ ನನ್ನೊಂದಿಗೆ ಕೆಲಸ ಮಾಡುತ್ತಾರೆ' ಅನ್ನುತ್ತಾರೆ. ಮತ್ತೆ ಕೆಲವರು 'ಅವ್ನು ಸರಿ ಇದ್ದಿದ್ರೆ ನನಗ್ಯಾಕ್ ಈ ಪಾಡು ಇರ್ತಿತ್ತು?' ಎಂದು ನಮ್ಮನ್ನೇ ಕೇಳುತ್ತಾರೆ.
'ನಾವು ಹೂವನ್ನ ಚೆನ್ನಾಗಿ ಮಾಲೆ ಮಾಡುತ್ತೇವೆ ಆದರೆ ನಮಗೆ ಅಲಂಕರಿಸಿಕೊಳ್ಳಲು ಸಮಯ ಇರೋಲ್ಲ. ಅದರ ಬಗ್ಗೆ ನಮಗೇನೂ ಬೇಜಾರಿಲ್ಲ. ಆದರೆ, ನಾವು ಹತ್ತೋ ಬಸ್‌ನಲ್ಲಿ ನಮ್ಮ ಮಕ್ಕಳೇ ಇದ್ದರೂ ಅವರು ನಮ್ಮನ್ನು ಮಾತಾಡ್ಸೋಲ್ಲ. ನೋಡಿಯೂ ನೋಡದಂತೆ ಇದ್ದು ಬಿಡುತ್ತಾರೆ. ನಮ್ಮೊಂದಿಗೆ ಗುರುತಿಸಿಕೊಳ್ಳಲು ಅವರಿಗೆ ನಾಚಿಕೆ. ಆವಾಗ ಮಾತ್ರ ಬೇಸರವಾಗುತ್ತೆ...' ಅಂತಾರೆ ಒಬ್ಬ ಹೂವಾಡಗಿತ್ತಿ. 'ಮನೆ ಮಕ್ಕಳಿಗಾಗಿ ಸ್ವಂತ ಸುಖಗಳನ್ನೂ ತೊರೆದು ಬೆಂಗಳೂರಿನಂಥ ದೈತ್ಯ ಮಾರುಕಟ್ಟೆಯಲ್ಲಿ ಆರೋಗ್ಯ, ಮನಶಾಂತಿಯನ್ನು ಕಡೆಗಣಿಸಿ ಪ್ರಾಣಿಗಳ ಥರ ದುಡಿದರೂ 'ತನ್ನ ತಾಯಿ, ತನ್ನ ಸಂಬಂಧಿ' ಎಂದು ಹೇಳಿಕೊಳ್ಳಲು ನಮ್ಮ ಮಕ್ಕಳು ತಯಾರಿಲ್ಲವಲ್ಲ, ಅದಕ್ಕಿಂತ ದೊಡ್ಡ ನೋವು ನಮಗೇನೂ ಇಲ್ಲ ಕಣವ್ವಾ' ಅನ್ನುವವರು ಮತ್ತೊಬ್ಬರು.
ಆದರೆ ಈ ಕಾರಣಗಳಿಗೆ ತಲೆಕೆಡಿಸಿಕೊಂಡು ಕೂರದೇ ಪ್ರತಿ ದಿನವನ್ನೂ ಹೊಸ ಹೂವಿನ ಹಾಗೆ ಕಾಣುವ ಜೀವನಪ್ರೀತಿ ಇವರದು. ಬೆಳಗಾದರೆ ಹೂವಿನಲ್ಲಿ ಆಡುವ ಇವರ ಬಾಳು ಹೂವಿನ ಹಾಸಿಗೆಯೇನಲ್ಲ.
- ಶಿಲ್ಪಶ್ರೀ ಯು.