'ನಿಂಗೆ ನಾನು ಯಾವುದ್ರಲ್ಲಾದ್ರೂ ಕಮ್ಮಿ ಮಾಡಿದ್ನಾ? ಮನೆಗೆ ಬೇಕಾದ ವಸ್ತುಗಳೆಲ್ಲ ಇವೆ. ನಿನ್ನ ಅಕೌಂಟಿನಲ್ಲಿ ಸಾಕಾಗುವಷ್ಟು ದುಡ್ಡೂ ಇಟ್ಟಿದ್ದೀನೆ. ಓಡಾಡಲು ಕಾರಿದೆ, ನಿನಗಿಷ್ಟವಾಗುವ ಹಾಗೆ ಇರಲು ಸ್ವಾತಂತ್ರ್ಯವನ್ನೂ ಕೊಟ್ಟಿದ್ದೇನೆ. ಇದೆಲ್ಲಾ ಮಾಡಿದರೂ ನನ್ನಿಷ್ಟದ ವಿರುದ್ಧವಾಗಿ ನಿನ್ನ ವೃತ್ತಿಯನ್ನು ಮುಂದುವರಿಸಿದರೆ ಮಾತ್ರ ನಾನು ಸಹಿಸುವುದಿಲ್ಲ. ಯಾವುದಕ್ಕೂ ಮತ್ತೊಮ್ಮೆ ಯೋಚಿಸು'- ಹೀಗೆಂದ ಕಾರ್ತಿಕ್ ಸುಮಾಳ ಉತ್ತರವನ್ನೂ ನಿರೀಕ್ಷಿಸದೆ ಮನೆಯಿಂದ ಹೊರನಡೆದ.
ಇದಕ್ಕೇನಾ ನಾನಿವರನ್ನು ಪ್ರೀತ್ಸಿ ಮದ್ವೆ ಆದದ್ದು? ನನ್ನ ಬೇಕು ಬೇಡಗಳನ್ನು ತನ್ನದಂತೆಯೇ ಕಾಳಜಿ ವಹಿಸಿ ಪೂರೈಸುತ್ತಿದ್ದ, ವೈದ್ಯ ವೃತ್ತಿಯಲ್ಲಿ ಬೆನ್ನೆಲುಬಾಗಿ ನಿಂತ ಅದೇ ಕಾರ್ತಿಕ್ ಇದ್ದಕ್ಕಿದ್ದ ಹಾಗೆ ಬದಲಾಗಿದ್ದಾದರೂ ಯಾಕೆ? ಕಾರ್ತಿಕ್ನನ್ನು ಬಿಟ್ಟಿರಲು ಸಾಧ್ಯವೇ ಇಲ್ಲ. ಜತೆಗೆ ವೈದ್ಯ ವೃತ್ತಿ ನನ್ನ ಅಸ್ತಿತ್ವ. ಅದನ್ನು ಬಿಟ್ಟರೆ ನನ್ನನ್ನು ನಾನು ಗುರುತಿಸಿಕೊಳ್ಳುವುದಾದರೂ ಹೇಗೆ? ಇಬ್ಬರ ವೃತ್ತಿಯೂ ಒಂದೇ, ವ್ಯತ್ಯಾಸವೆಂದರೆ ಈ ಎರಡು ವರ್ಷಗಳಲ್ಲಿ ಕಾರ್ತಿಕ್ಗೆ ಹೋಲಿಸಿದರೆ ವೃತ್ತಿಯ ಪಯಣದಲ್ಲಿ ತನ್ನದು ಸ್ವಲ್ಪ ಮಟ್ಟಿನ ಯಶಸ್ಸು. ಬಹುಶಃ ಇದೇ ಯಶಸ್ಸು ಅವರ ಮನಸ್ಸನ್ನು ಘಾಸಿಗೊಳಿಸಿದೆಯೇ?
ಮಿಂದು ವಿದ್ಯಾವಂತೆ. ಸ್ಕಾಲರ್ಶಿಪ್ನಲ್ಲೆ ಸ್ನಾತಕೋತ್ತರ ಪದವಿ ಪಡೆದು ಸಂಶೋಧನೆಯಲ್ಲಿ ತೊಡಗಿಕೊಂಡವಳು. ಇನ್ನೇನು ಅದು ಪೂರ್ಣಗೊಳ್ಳಲು ಕೆಲ ತಿಂಗಳು ಬಾಕಿ ಎಂದಾಗ ಇಷ್ಟು ವರ್ಷಗಳ ಕಾಲ ಅವಳ ನೆರಳಿನಂತಿದ್ದ ಆಕೆಯ ಗಂಡ ಅದನ್ನು ನಿಲ್ಲಿಸುವಂತೆ ಹೇಳಿದ. ತನ್ನ ಕನಸುಗಳಿಗಿಂತ ಪತಿಯೇ ಮುಖ್ಯವಾಗಿ, ಕೈಗೆಟುಕುವಷ್ಟೇ ದೂರದಲ್ಲಿದ್ದ ಡಾಕ್ಟರೇಟ್ ಕನಸನ್ನು ಕನಸಾಗಿಯೇ ಉಳಿಸಿಬಿಟ್ಟಳು. ಇದು ಮತ್ತೊಂದು ಉದಾಹರಣೆಯಷ್ಟೆ.
ಇಂದು ಪ್ರೇಮ ವಿವಾಹ ಅಥವಾ ಹಿರಿಯರು ನೋಡಿ ಮಾಡಿದ ಸಾಕಷ್ಟು ಮದುವೆಗಳಲ್ಲಿ ಗಂಡು ಹೆಣ್ಣಿನ ವೃತ್ತಿ ಒಂದೇ ಆಗಿರುವುದನ್ನು ಗಮನಿಸಬಹುದು. ಕಾರಣ ಇಷ್ಟೆ, ಇಬ್ಬರೂ ಒಂದೇ ಕೆಲಸದಲ್ಲಿದ್ದರೆ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ, ಅನ್ಯೋನ್ಯತೆ ನೆಲೆಯೂರುತ್ತದೆ. ಅಂಥ ಸಂಸಾರ ಸುಖವಾಗಿರುತ್ತದೆ ಎಂಬ ನಂಬಿಕೆ. ಪತಿಯ ಯಶಸ್ಸನ್ನು ತನ್ನದೇ ಎಂದು ಭಾವಿಸಿ ಅದಕ್ಕೆ ಬೀಗುವ ಗುಣ ಹೆಣ್ಣಿನಲ್ಲಿದೆ. ಆದರೆ, ಗಂಡಸರಲ್ಲಿ ಹಾಗಲ್ಲ. ಪತ್ನಿ ಅಥವಾ ಗೆಳತಿ ಯಾವುದಾದರೂ ವಿಷಯದಲ್ಲಿ ತನ್ನನ್ನು ಮೀರಿಸಿದಲ್ಲಿ ಗಂಡಸರಿಗೆ ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಅವರಿಬ್ಬರ ನಡುವೆ ನೇರ ಸ್ಪರ್ಧೆ ಇಲ್ಲದಿದ್ದರೂ ಅದರಿಂದ ಆತ ತನ್ನ ಸುಪ್ತಪ್ರಜ್ಞೆಯಲ್ಲಿ ಗಲಿಬಿಲಿಗೊಳ್ಳುತ್ತಾನೆ. ಪತ್ನಿ ವೈಯಕ್ತಿಕವಾಗಿ ಬೆಳೆದರಂತೂ ಅದು ಪತಿಯ ಆತ್ಮಾಭಿಮಾನವನ್ನು ಕೆಣಕುತ್ತದೆ. ದೇಹದ ತೂಕ ಇಳಿಸಿಕೊಳ್ಳುವಂಥ ಸಣ್ಣ ವಿಷಯದಿಂದ ಹಿಡಿದು ವೃತ್ತಿಯಲ್ಲಿನ ಬಡ್ತಿಯ ವಿಷಯವಾದರೂ ಸರಿ ಆತನ ಸಹನೆಯ ಕಟ್ಟೆ ಒಡೆಯುತ್ತದೆ.
ಇದು ಸಂಶೋಧನೆಯ ಮೂಲಕ ಸಾಬೀತಾಗಿರುವ ಸತ್ಯ ಸಂಗತಿ. ಫ್ಲೋರಿಡಾ ವಿವಿ ಸಂಶೋಧಕರು ಇದನ್ನು ಪತ್ತೆಮಾಡಿದ್ದಾರೆ. 'ಹೆಂಡತಿ ಅಥವಾ ಗೆಳತಿಯ ಯಶಸ್ಸು ಪುರುಷರ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ, ಜತೆಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತದೆ' ಎಂದಿದ್ದಾರೆ ಸಂಶೋಧನೆ ಮಾಡಿದ ವಿಜ್ಞಾನಿಗಳು.
'ನಮ್ಮದು ಪುರುಷ ಪ್ರಧಾನ ಸಮಾಜ. ಹೆಣ್ಣಿನ ಯಶಸ್ಸು ಗಂಡಿನ ಸ್ವಾಭಿಮಾನವನ್ನು ಕೆಣಕುವುದು ಸಹಜ. ಪ್ರತಿ ಗಂಡಸಿನ ಸುಪ್ತಪ್ರಜ್ಞೆಯಲ್ಲೂ ಈ ಭಾವನೆಯಿರುತ್ತದೆ. ಹೆಣ್ಣಿನ ಮೇಲೆ ತನ್ನ ಪ್ರಭುತ್ವವನ್ನು ಹಿಡಿದಿಡಲು ಸದಾ ಬಯಸುತ್ತಾನೆ. ಕೆಲವೊಮ್ಮೆ ಆಕೆಯನ್ನು ಎಲ್ಲಿ ಕಳೆದುಕೊಳ್ಳುತ್ತೇನೋ ಎನ್ನುವ ಭಯವೂ ಆತನ ವರ್ತನೆಗೆ ಕಾರಣವಾಗಬಹುದು. ಅಂಥ ಸಂದರ್ಭದಲ್ಲಿ ಸನ್ನಿವೇಶವನ್ನು ಅರ್ಥೈಸಿಕೊಂಡು ಆತ್ಮಾವಲೋಕನ ಮಾಡಿಕೊಳ್ಳುವುದು ಒಳಿತು' ಎನ್ನುತ್ತಾರೆ ಮನೋಚಿಕಿತ್ಸಕರಾದ ಚೇತನ್. ಪತ್ನಿಗೆ ಬೆಂಬಲವಾಗಿ ನಿಲ್ಲುವ, ಮದುವೆಯಾದ ನಂತರವೂ ಹೆಂಡತಿಯನ್ನು ಓದಿಸುವ, ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಹೊರಗಿನ ಕೆಲಸದ ಜತೆಗೆ ಮನೆಯ ಕೆಲಸಗಳಲ್ಲಿ ಕೈಜೋಡಿಸುವ, ಆಕೆಯ ಗೆಲುವಿನ ಪ್ರಯಾಣದಲ್ಲಿ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡಿರುವ, ಕನಸುಗಳನ್ನು ಪತ್ನಿಯ ಮೂಲಕ ಸಾಕಾರ ಮಾಡಿಕೊಂಡ ಎಷ್ಟೋ ಗಂಡಸರು ನಮ್ಮ ನಡುವಿದ್ದಾರೆ. ತನ್ನಲ್ಲಿರುವ ಕೌಶಲ, ಆಸಕ್ತಿಯನ್ನು ಹೊರ ಜಗತ್ತಿನ ಮುಂದೆ ತೆರೆದುಕೊಳ್ಳುವಲ್ಲಿ ಮತ್ತು ಅಸ್ತಿತ್ವ ಗುರುತಿಸಿಕೊಳ್ಳಲು ವೃತ್ತಿಯನ್ನೇ ಅವಲಂಬಿಸಿರುವ ಸಾಕಷ್ಟು ಮಹಿಳೆಯರಿದ್ದಾರೆ. ಅಂಥವರಿಗೆ ಬೇಕಿರುವುದು ತಾತ್ಸಾರದ ಮಾತಲ್ಲ, ಬದಲಿಗೆ ಅವರನ್ನು ಪ್ರೋತ್ಸಾಹಿಸುವ, ಅವರ ಕೆಲಸವನ್ನು ಉತ್ತೇಜಿಸುವ ಸಂಗಾತಿ. ಒಬ್ಬರನ್ನೊಬ್ಬರು ಸಾಯುವಷ್ಟು ಪ್ರೀತಿಸುವವರು ಯಶಸ್ಸಿನ ವಿಷಯದಲ್ಲಿ ಮಾತ್ರ ಅಸೂಯೆ, ಸ್ವಾಭಿಮಾನವನ್ನು ತೋರುವುದು ಎಷ್ಟು ಸರಿ? ಪರಸ್ಪರ ಗೌರವ, ಆದರಗಳಿದ್ದಾಗ ಒಣ ಪ್ರತಿಷ್ಠೆ, ಅಹಂಕಾರಕ್ಕೆ ಜಾಗವೇ ಇರುವುದಿಲ್ಲ. ನಾವಿಬ್ಬರೂ ಒಂದೇ ಎಂದು ಹೇಳುವಾಗ ಒಬ್ಬರ ಯಶಸ್ಸು ಮತ್ತೊಬ್ಬರದೇ ತಾನೆ? ಇಬ್ಬರೂ ಸಮಾನರೂ ಎಂಬುದನ್ನು ಮನವರಿಕೆ ಮಾಡಿಕೊಂಡರೆ ಸಾಕು.
- ಕೋಕಿಲಾ ಎಂ.ಎಸ್.