ಸೌಂದರ್ಯ, ತ್ವಚೆ ಹಾಗೂ ಕೂದಲಿನ ಬಣ್ಣ ನಮಗೆ ವಂಶಪಾರಂಪರ್ಯವಾಗಿ ದೊರೆತಿರುತ್ತವೆ. ಇದರ ಮೂಲದಲ್ಲಿ ಯಾವುದೇ ಬದಲಾವಣೆ ಮಾಡುವುದು ಅಸಾಧ್ಯ ಎನ್ನುವುದನ್ನು ನಾವು ಮೊದಲು ಅರಿಯಬೇಕು.
'ಸೌಂದರ್ಯದ ಖಜಾನೆ ಹೊಂದಲು ನಮ್ಮ ವಸ್ತುಗಳನ್ನೇ ಉಪಯೋಗಿಸಿ' ಎಂದೆಲ್ಲ ಸೌಂದರ್ಯ ಪ್ರಸಾಧನ ಕಂಪನಿಗಳು ಮಾಡುವ ಜಾಹೀತಾತುಗಳಲ್ಲಿ ಬಹುತೇಕ ಸಿನಿಮಾ ತಾರೆಯರು ಮಾಡೆಲ್ ಗಳಾಗಿ ಅಭಿನಯಿಸಿರುತ್ತಾರೆ.
ಈ ಜಾಹೀರಾತುಗಳ ಇನ್ನೊಂದು ಬದಿಯನ್ನು ಸ್ವಲ್ಪ ಗಮನಿಸಿ. ಕ್ಯಾಮೆರಾದಿಂದ ಪಕ್ಕಕ್ಕೆ ಸರಿದ ತಕ್ಷಣ ಅವರು ತಮ್ಮ ಮುಖದ ಮೇಕಪ್ ತೆಗೆದು ಹಾಕುತ್ತಾರೆ. 'ನೈಸರ್ಗಿಕ ಸೌಂದರ್ಯ ಕಾಯ್ದುಕೊಳ್ಳಲು ಶೂಟಿಂಗ್, ಚಿತ್ರೀಕರಣ ಇಲ್ಲದ ಸಂದರ್ಭದಲ್ಲಿ ನಾನು ಏನೇನೂ ಮೇಕಪ್ ಮಾಡುವುದಿಲ್ಲ' ಎನ್ನುತ್ತಾರೆ. ಆದರೆ ಅವರಂತೆ ಕಾಣಬೇಕೆಂಬ ಹಂಬಲವುಳ್ಳವರಿಗೆ ಮಾತ್ರ ಇದು ಕೊಂಚವೂ ತಿಳಿದಿರುವುದಿಲ್ಲ.
ಸಂಕೋಚ ಪ್ರವೃತ್ತಿ, ಆತ್ಮವಿಶ್ವಾಸದ ಕೊರತೆ, ವಾಸ್ತವವನ್ನು ಸ್ವೀಕರಿಸದಿರುವಿಕೆ ಈ ದೌರ್ಬಲ್ಯಗಳು ಬಹುತೇಕವಾಗಿ ಯುವತಿಯರನ್ನು ಸೌಂದರ್ಯ ಪ್ರಸಾದನಗಳ ಕಡೆ ಎಳೆದೊಯ್ಯುತ್ತವೆ. ಸೌಂದರ್ಯ ಪ್ರಸಾದನಗಳ ಜಾಹೀರಾತುಗಳು ಬಹುತೇಕ ಸ್ತ್ರೀಯರ ಆತ್ಮವಿಶ್ವಾಸವನ್ನು ತಲ್ಲಣಗೊಳಿಸುತ್ತವೆ ಎನ್ನುವುದಂತೂ ಕಟುಸತ್ಯ.
ಸೌಂದರ್ಯ ವೀಕ್ಷಿಸುವವರ ದೃಷ್ಟಿಯಲ್ಲಿರುತ್ತದೆ ಎನ್ನುವುದು ಸುಳ್ಳಲ್ಲ. ನೀವು ಎಲ್ಲ ರೀತಿಯಲ್ಲೂ ಆರೋಗ್ಯಕರವಾಗಿರಬಹುದು. ಆತ್ಮವಿಶ್ವಾಸದಿಂದ ಜೀವನ ನಡೆಸುತ್ತಿರಬಹುದು. ಆಗ ನಿಮ್ಮನ್ನು 'ಬ್ಯೂಟಿಫುಲ್' ಎನ್ನದಿದ್ದರೂ ಕನಿಷ್ಠ 'ಗುಡ್ ಲುಕಿಂಗ್'ಅಥವಾ 'ಆಕರ್ಷಕ' ಎಂದು ತಿಳಿಯಬಹುದು. ಇದಕ್ಕೆ ಕಾರಣ ಆಂತರಿಕ ಸೌಂದರ್ಯ. ಇದು ಪ್ರತಿಯೊಬ್ಬರಿಗೂ ಇರುತ್ತದೆ. ಸುಂದರವಾಗಿ ಕಾಣಲು ನಾವು ಆರೋಗ್ಯವಂತರಾಗಿರಬೇಕಾದುದು ಅವಶ್ಯಕ.
ಪ್ರತಿಯೊಂದು ಪ್ರಸಾಧನ ತ್ವಚೆಗೆ ಅಲರ್ಜಿಯನ್ನುಂಟು ಮಾಡುತ್ತದೆ. ಅಲ್ಲದೇ ಅಡ್ಡ ಪರಿಣಾಮಗಳನ್ನೂ ಬೀರುತ್ತದೆ. ಹೆಸರಾಂತ ದುಬಾರಿ ಕಂಪನಿಗಳೂ ತಮ್ಮ ಉತ್ಪನ್ನಗಳ ಮೇಲೆ ಕೆಲವು ಸೂಚನೆಗಳನ್ನು ಹಾಕಿರುತ್ತಾರೆ. ಚರ್ಮಕ್ಕೆ ಹಾನಿಯನ್ನುಂಟು ಮಾಡುವ ಪ್ರಸಾಧನಗಳ ಬದಲಾಗಿ ನೈಸರ್ಗಿಕವಾಗಿ ಪ್ರಕೃತಿಯಲ್ಲಿ ದೊರೆಯುವ ಗಿಡಮೂಲಿಕೆಗಳು, ಸಸ್ಯಗಳನ್ನು ಬಳಕೆ ಮಾಡಿ ನಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವಲ್ಲಿ ಅನೇಕ ಉಪಾಯಗಳು ನಮ್ಮಲ್ಲಿವೆ. ಅವುಗಳ ಬಗ್ಗೆ ನಾವು ಯೋಚಿಸಬೇಕಲ್ಲವೆ?