ಮಹಿಳೆ-ಮನೆ-ಬದುಕು

ಸೂರಿನೊಳಗೆ ಸೂರ್ಯ

ಮನೆಯ ಸೌಂದರ್ಯಕ್ಕೆ ಎಷ್ಟು ಅಲಂಕಾರಿಕ ವಸ್ತುಗಳಿದ್ದರೂ ಸಾಲದು. ಆದರಿವು ನೈಸರ್ಗಿಕ ವಸ್ತುಗಳ ಮುಂದೆ ಏನೂ ಅಲ್ಲ. ಹೀಗಾಗಿ...

ಮನೆಯ ಸೌಂದರ್ಯಕ್ಕೆ ಎಷ್ಟು ಅಲಂಕಾರಿಕ ವಸ್ತುಗಳಿದ್ದರೂ ಸಾಲದು. ಆದರಿವು ನೈಸರ್ಗಿಕ ವಸ್ತುಗಳ ಮುಂದೆ ಏನೂ ಅಲ್ಲ. ಹೀಗಾಗಿ ಸಹಜವಾಗಿ ಗಾಳಿ, ಬೆಳಕು ಒಳಗೆ ಬರುವಂತೆ ಮನೆಯನ್ನು ಕಟ್ಟಿಸುತ್ತಿರುವ ಟ್ರೆಂಡ್ ಕೂಡ ಇತ್ತೀಚೆಗೆ ಜೋರಾಗಿಯೇ ಇದೆ. ಇದಕ್ಕಾಗಿಯೇ ಸ್ಕೈ ಲೈಟ್ ಸೂರಿನ ಮೇಲೆ ತಲೆ ಎತ್ತುತ್ತಿವೆ. ಇದನ್ನು ಆಕಾಶದಿಂದ ನೇರ ಮನೆಯೊಳಗೆ ತರಬಹುದಾದ ಬೆಳಕಿಂಡಿ ಎನ್ನಬಹುದು.
ಸ್ಕೈ ಲೈಟುಗಳನ್ನು ಅಳವಡಿಸಲು ಬಳಸುವ ವಸ್ತುಗಳು ಪಾರದರ್ಶಕವಿರಬೇಕು. ಇದು ಮನೆಯೊಳಗೆ ಎಷ್ಟು ಮತ್ತು ಯಾವ ಪ್ರಮಾಣದಲ್ಲಿ ಸೂರ್ಯನ ಬೆಳಕು ನಮಗೆ ಸಿಗಬೇಕೆಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಸ್ಕೈ ಲೈಟುಗಳ ಅಳವಡಿಕೆಯಿಂದ ಅನಗತ್ಯ ಕೃತಕ ದೀಪಗಳ ಬಳಕೆ ಕಡಿಮೆಯಾಗುತ್ತದೆ. ಅಗಾಧ ವಿದ್ಯುತ್ ಉಳಿತಾಯವೂ ಸಾಧ್ಯ. ಹಗಲಿನಲ್ಲಂತೂ ಬಹುಪಾಲು ಸಹಜ ಬೆಳಕು ಹರಡುವುದರಿಂದ ಕೃತಕ ಬೆಳಕಿನ ಅಗತ್ಯವಿರದು. ಇತ್ತೀಚೆಗೆ ಸುಧಾರಿತ ತಂತ್ರಜ್ಞಾನಗಳು ಸ್ಕೈ ಲೈಟುಗಳ ಅಳವಡಿಕೆಯಲ್ಲಿ ಬಂದಿವೆ.
ಹಲವು ದಶಕಗಳ ಹಿಂದೆ ನಮ್ಮಲ್ಲಿ ಹೆಂಚಿನ ಚಾವಣಿ ಮನೆಗಳೇ ಹೆಚ್ಚಾಗಿದ್ದವು. ಹೀಗಾಗಿ ಅಂಥ ಮನೆಗಳಲ್ಲಿ ನೈಸರ್ಗಿಕ ಬೆಳಕು ಮನೆಯೊಳಗೆ ಸಾಕಷ್ಟು ಹರಿಯುತ್ತಿತ್ತು. ಆಗಿನ ವೇಳೆ ಹೆಂಚುಗಳ ಮಧ್ಯದಲ್ಲಿ ಅಲ್ಲಲ್ಲಿ ದಪ್ಪವಾದ, ಮಿತವಾದ ಪಾರದರ್ಶಕ ಗಾಜನ್ನು ಅಳವಡಿಸುತ್ತಿದ್ದರು. ಇದೂ ಬೆಳಕಿಂಡಿಗೆ ತುಂಬಾ ಸಹಕಾರಿಯಾಗಿತ್ತು.
ಆದರೆ, ಈಗಿನ ಆಧುನಿಕ ಬೆಳಕಿಂಡಿಯಲ್ಲಿ ಒಂದಕ್ಕೊಂದು ಬೆಸೆದ ಗಾಜಿನ ಪದರಗಳನ್ನು ಕಿಟಕಿಗಳಾಗಿ ಬಳಸುತ್ತಾರೆ. ಇವು ಶಾಖ ನಿರೋಧಕ. ಇದರಲ್ಲಿ ಒಂದು ಪದರ ಕಡಿಮೆ ಬೆಳಕು, ಶಾಖ ಹೊರ ಸೂಸುವಂತಿರುತ್ತದೆ. ಈ ರೀತಿ ಜೋಡಿಸಿದ ಗಾಜುಗಳಿಂದ ಒಳಬರುವ ಶಾಖ ಮತ್ತು ಬೆಳಕು ಸಮತೋಲನವಾಗಿರುತ್ತದೆ. ಇವುಗಳಲ್ಲಿ ಬಳಕೆಯಾಗುವ ಗಾಜಿನ ಪದರಗಳು ವಿವಿಧ ಅಳತೆಗಳಲ್ಲಿ ಅಗತ್ಯಕ್ಕೆ ತಕ್ಕಂತೆ ದೊರೆಯುತ್ತದೆ. ಇದನ್ನು ಮನೆಯ ಪಡಸಾಲೆ, ಹಜಾರ, ಅಡುಗೆ ಕೋಣೆ ಹೀಗೆ ಎಲ್ಲ ಭಾಗಗಳಲ್ಲೂ ಜೋಡಿಸಿಡಬಹುದು.

ಚಾವಣಿಯ ಕಿಟಕಿಗಳು
ಹೆಚ್ಚಾಗಿ ಪೆಂಟ್ ಹೌಸ್ಗಳಲ್ಲಿ ಜಾರುವ ಚಾವಣಿಯಿರುತ್ತದೆ. ಇದರಲ್ಲಿ ಈ ಮಾದರಿಯ ಸ್ಕೈ ಲೈಟುಗಳನ್ನು ಬಳಸಬಹುದು. ಅದೇ ರೀತಿ ಓದಲು, ಬರೆಯಲು ಬಳಸುವ ಸ್ಥಳದ ಮೇಲ್ಭಾಗದಲ್ಲಿ ಇದನ್ನು ಅಳವಡಿಸಿದರೆ ಅಲ್ಲಿ ಹೆಚ್ಚಿನ ನೈಸರ್ಗಿಕ ಬೆಳಕು ದೊರೆತು ಕಣ್ಣಿಗೆ ಆಗಬಹುದಾದ ಹಾನಿಯೂ ತಪ್ಪುತ್ತದೆ.

ಸನ್ ಟನೆಲ್ ಗಳು
ಸಾಂಪ್ರದಾಯಿಕ ಸ್ಕೈ ಲೈಟುಗಳಿಗೆ ಇದೊಂದು ಬದಲಿ ವ್ಯವಸ್ಥೆ. ಜೋಡಣೆ ಸುಲಭ. ಇದರ ಬಳಕೆಯನ್ನು ಸ್ನಾನದ ಕೋಣೆಯಲ್ಲೂ ಮಾಡಿಕೊಳ್ಳಬಹುದು. ಇದರ ಹೆಸರೇ ಸೂಚಿಸುವಂತೆ ಸೂರ್ಯನ ಬೆಳಕನ್ನು ಸಣ್ಣ ಸುರಂಗಗಳ ಮೂಲಕ ಒಳತರುತ್ತದೆ.

ಟ್ಯೂಬ್ಯುಲರ್ ಡೇ ಲೈಟಿಂಗ್ ಡಿವೈಸ್
ಕೊಳವೆ ಮೂಲಕ ಬೆಳಕನ್ನು ಒಳತರುವ ವಿಧಾನವಿದು. ಆಧುನಿಕ ತಂತ್ರಜ್ಞಾನವೆನ್ನಬಹುದು. ಇದರಲ್ಲಿನ ಕೊಳವೆಗಳು ಬೆಳಕನ್ನು ತರುವಲ್ಲಿ ನಿಷ್ಕ್ರಿಯ ಘಟಕಗಳಾಗಿರುತ್ತವೆ. ಅದರ ಒಳಮೈನಲ್ಲಿ ಬೆಳಕಿನ ಪ್ರತಿಫಲನ ಮಾಡುವಂಥ ಲೇಪನವಿರುತ್ತದೆ. ಇದರಲ್ಲಿನ ಇನ್ನೊಂದು ವಿಧವೆಂದರೆ, ಬೆಳಕಿನ ವಾಹಕವಾದ ಆಪ್ಟಿಕ್ ಫೈಬರ್ ಎಳೆಗಳುಳ್ಳಂಥದ್ದು. ಈ ಕೊಳವೆಯ ಒಂದು ಭಾಗವನ್ನು ಪಾರದರ್ಶಕ ವಸ್ತುವಿನಿಂದ ಮುಚ್ಚಿರುತ್ತಾರೆ. ಇದನ್ನು ಲೈಟ್ ಕಲೆಕ್ಟರ್ಸ್ ಅಥವಾ ಬೆಳಕನ್ನು ಹಿಡಿದಿಡುವುದು ಎನ್ನುತ್ತಾರೆ.

ಹೀಲಿಯೋ ಸ್ಟ್ರಾಟ್
ಇದು ಕನ್ನಡಿ ಅಳವಡಿಸಿ ಬಳಸುವಂಥದ್ದು. ಇದನ್ನು ಸ್ವಯಂ ಚಾಲಿತವಾಗಿ ಸೂರ್ಯನ ಬೆಳಕಿರುವೆಡೆ ತಿರುಗಿಸಿ ಪ್ರತಿಫಲನ ಪಡೆಯಬಹುದು. ಆದರೆ, ಇದರಲ್ಲಿ ಪ್ರತಿಫಲನ ಒಂದೇ ದಿಕ್ಕಿನಲ್ಲಿರುತ್ತದೆ.

ಹೈಬ್ರಿಡ್ ಸೋಲಾರ್ (ಮಿಶ್ರಜ ಸೌರ)
ಈ ರೀತಿಯ ಸ್ಕೈ ಲೈಟುಗಳಲ್ಲಿ ನವೀನ ತಂತ್ರಜ್ಞಾನದ ಪ್ರತಿದೀಪ್ತಿಯ (ಫ್ಲೋರೊಸೆಂಟ್) ದೀಪಗಳ ಸಲಕರಣೆ ಬಳಸಲ್ಪಡುತ್ತದೆ. ಇವುಗಳಿಗೆ ಪಾರದರ್ಶಕ ಸರಳನ್ನು ಜೋಡಿಸಿ ಅದನ್ನು ಆಪ್ಟಿಕಲ್ ಫೈಬರ್ ಎಳೆಗಳಿಗೆ ಜೋಡಿಸುತ್ತಾರೆ.  ಇದರಲ್ಲಿ ಯಾವುದೂ ಸರಿಕಾಣದಿದ್ದರೆ ಸೌರಶಕ್ತಿಯನ್ನು ಪೂರ್ಣವಾಗಿ ಬಳಸಿಕೊಳ್ಳುವ ಪ್ರತ್ಯೇಕ ಕೇಂದ್ರಗಳನ್ನು ಮನೆ ನಿರ್ಮಿಸುವಾಗಲೇ ಮಾಡಿಕೊಳ್ಳಬಹುದು. ಇದನ್ನು 'ಸೊಲಾರಿಯಂ' ಎಂದು ಕರೆಯುತ್ತಾರೆ. ಅಂದರೆ, ಕಟ್ಟಡದ ನಾಲ್ಕೂ ಭಾಗಗಳಿಗೆ ಸೂಕ್ತ ಗುಣಮಟ್ಟದ ಗಾಜುಗಳ ಅಳವಡಿಕೆ, ಒಂದು ಸೂರ್ಯ ಕೋಣೆ (ಸನ್ರೂಂ) ಗ್ರೀನ್ ಹೌಸ್ ಇತ್ಯಾದಿ.
ಸ್ಕೈ ಲೈಟುಗಳು ಮನೆಯ ಒಳಾಂಗಣ ಸೌಂದರ್ಯ ಹೆಚ್ಚಿಸಲು ಸಹಕಾರಿ. ಅದೇ ರೀತಿ ಹವಾಮಾನ ವೈಪರೀತ್ಯಗಳಿಗೂ ತಡೆಯಾಗಬಹುದು. ಸ್ವಲ್ಪ ಮಬ್ಬಾದ (ಸ್ಟೇಯ್ನ್) ಗಾಜು, ತೆಳುವಾದ ಬಣ್ಣದಿಂದ ಕೂಡಿರುವುದನ್ನು ಬಳಸಬಹುದು. ಹೆಚ್ಚು ಗಾಢವಲ್ಲದ ವಿನ್ಯಾಸಗಳನ್ನು ಅಚ್ಚು ಹಾಕಿಸಿದ ಪಾರದರ್ಶಕ ಗಾಜುಗಳ ಬಳಕೆ ಮನೆಗೆ ವಿಶಿಷ್ಟವಾದ ಮೆರುಗು ನೀಡುತ್ತದೆ.ಟಿ

ಸ್ಮಾಟರ್ ಗ್ಲಾಸ್
ಇದರಲ್ಲಿ ವಸ್ತು ಪಾರದರ್ಶಕ ಮತ್ತು ಅಪಾರದರ್ಶಕಗಳ ಮಧ್ಯ ಸುಲಭವಾಗಿ ಬದಲಿಸಬಹುದು. ಸಾರದೀಪಕ (ಟ್ರಾನ್ಸಲ್ಯೂಸೆಂಟ್) ಪ್ರತಿಫಲಕಗಳು ಇಲ್ಲಿ ಬೆಳಕನ್ನು ನೀಡುತ್ತವೆ. ಸೂಕ್ತ ವೋಲ್ಟೇಜಿನ ವಿದ್ಯುತ್ ಅಥವಾ ಆಪ್ಟಿಕಲ್ ಫೈಬರ್ ಕೇಬಲ್ಗಳನ್ನು ಗೋಡೆಯೊಳಗೆ ಅಳವಡಿಸುವುದರ ಮೂಲಕ ಸೂರ್ಯನ ಬೆಳಕನ್ನು ಒಳತರಲಾಗುತ್ತದೆ.

- ಕೆ.ಎಸ್. ಸೋಮೇಶ್ವರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

ರಮೇಶ್ ಜಾರಕಿಹೊಳಿಗೆ ಸ್ಟಿಂಗ್ ಮಾಡಿದ್ದು ಯಾರು? ಒಬ್ಬ CM ಇಂಥಾ ಕೀಳು ಮಟ್ಟಕ್ಕೆ ಇಳಿಯಬಾರದಿತ್ತು: ಛಲವಾದಿ ನಾರಾಯಣಸ್ವಾಮಿ

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

Indian Stock Market ಮತ್ತೆ ಭಾರಿ ಕುಸಿತ; ಸೆನ್ಸೆಕ್ಸ್ 1,045 ಅಂಕ ಕುಸಿತ, 10 ಲಕ್ಷ ಕೋಟಿ ರೂ ನಷ್ಟ!