ಬೊಕ್ಕತಲೆ ಸಮಸ್ಯೆಯೆಂದರೆ ಮಹಿಳೆಯರಿಗೆ ಸಿಕ್ಕಾಪಟ್ಟೆ ಭಯ. ಪುರುಷರಲ್ಲಿ ಕಾಣಿಸಿಕೊಳ್ಳುವಂಥ ಬೊಕ್ಕತಲೆ ಸಮಸ್ಯೆ ಸಾಮಾನ್ಯವೆನಿಸಿದರೂ ಅವರಿಗೂ ಕೂದಲುದುರುವಿಕೆಯ ಸಮಸ್ಯೆ ಚಿಂತೆಗೀಡುಮಾಡಿಬಿಡುತ್ತದೆ. ಆದರೆ ಪುರುಷರಲ್ಲಿನ ಈ ಸಮಸ್ಯೆ ಈಗಿನದಲ್ಲ. ತಲೆತಲಾಂತರಗಳಿಂದಲೂ ಕಾಣಿಸಿಕೊಳ್ಳುತ್ತಾ ಬಂದಿದ್ದು, ಅದನ್ನು ಎದುರಿಸುವ ಮಾನಸಿಕ ಸಾಮರ್ಥ್ಯ ಅವರಲ್ಲಿರುತ್ತದೆ. ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರದೇ ಇದ್ದರೂ, ಇತ್ತೀಚೆಗೆ ಗಣನೀಯವಾಗಿ ಏರಿಕೆಯಾಗಿದೆ. ಇದು ಅವರ ಅರಿವಿಗೆ ಬರುವ ಮುನ್ನವೇ ಅವರಲ್ಲಿ ಸಾಕಷ್ಟು ಕೂದಲು ಉದುರಿಹೋಗಿರುತ್ತವೆ. ಇದರಿಂದಾಗಿ ಮಹಿಳೆಯರು ಆತ್ಮಸ್ಥೈರ್ಯ ಕಳೆದುಕೊಳ್ಳುವುದಲ್ಲದೆ ಖಿನ್ನತೆಗೂ ಒಳಗಾಗುತ್ತಾರೆ.
ಕೂದಲುದುರಲು ಕಾರಣ
- ಪ್ರತಿದಿನ 50ರಿಂದ 100 ಕೂದಲು ಉದುರುವುದು ಸಾಮಾನ್ಯ. ಇದಕ್ಕಿಂತ ಹೆಚ್ಚು ಕೂದಲು ಉದುರುತ್ತಿದ್ದಲ್ಲಿ ಖಂಡಿತವಾಗಿಯೂ ಸಮಸ್ಯೆ ಇದೆ ಎಂದರ್ಥ. ಗರ್ಭವತಿಯರಾಗಿದ್ದಲ್ಲಿ, ಯಾವುದೋ ಶಸ್ತ್ರಚಿಕಿತ್ಸೆಗೊಳಪಟ್ಟಲ್ಲಿ, ತೀವ್ರವಾಗಿ ತೂಕ ಇಳಿಕೆ ಕಂಡುಬಂದ ಸಂದರ್ಭಗಳಲ್ಲಿ ಹಾಗೂ ಮಾನಸಿಕ ಒತ್ತಡ ಹೆಚ್ಚಾದಾಗ ಕೂದಲುದುರುವ ಸಮಸ್ಯೆ ಹೆಚ್ಚಾಗುತ್ತದೆ.
- ಖಿನ್ನತೆ ನಿವಾರಿಸುವ ಹಾಗೂ ಉರಿಯೂತ ಕಡಿಮೆ ಮಾಡುವಂಥ ಔಷಧಗಳ ಸೇವನೆಯಿಂದಲೂ ಕೂದಲುದುರುತ್ತದೆ.
- ಕೂದಲಿಗೆ ಅತಿಯಾದ ಶಾಂಪೂ ಬಳಕೆ, ಕೇಶ ವಿನ್ಯಾಸ ಹಾಗೂ ಬ್ರಷ್ ಮಾಡಿಸಿದ ಮೂರರಿಂದ ಆರು ತಿಂಗಳುಗಳ ಕಾಲ ಕೂದಲು ಉದುರುವ ಪ್ರಮಾಣ ಹೆಚ್ಚಿರುತ್ತದೆ.
- ಇನ್ನು ಬೊಕ್ಕತಲೆ ಅನುವಂಶಿಕವಾಗಿಯೂ ಬರುವ ಸಂಭವ ಹೆಚ್ಚು. ತಜ್ಞರ ಪ್ರಕಾರ ಇದೇ ಬೊಕ್ಕತಲೆಯ ಸಮಸ್ಯೆಗೆ ತೀರಾ ಸಾಮಾನ್ಯವಾದ ಕಾರಣ.
- ಹೈಪೋಥೈರಾಯ್ಡಿಸಮ್ (ಹಾರ್ಮೋನ್‌ಗಳ ಉತ್ಪಾದನೆಯಲ್ಲಿ ಕೊರತೆ)ನಿಂದಲೂ ಕೂದಲುದುರುತ್ತದೆ. ಇದರಿಂದಾಗಿ ಕೂದಲು ಬಹುಬೇಗನೇ ಕಾಂತಿಹೀನವಾಗುವುದು.
- ಶರೀರದಲ್ಲಿ ಕಬ್ಬಿಣದ ಅಂಶ ಕಡಿಮಾಯಾದರೂ ಕೂದಲುದುರುತ್ತದೆ. ಶರೀರಕ್ಕೆ ಬೇಕಾದ ಅಗತ್ಯ ಕಬ್ಬಿಣದ ಅಂಶ ಲಭ್ಯವಾಗದೇ ಇದ್ದಲ್ಲಿ ರಕ್ತಹೀನತೆಯ ಸಮಸ್ಯೆ ಉಂಟಾಗುತ್ತದೆ. ರಕ್ತಹೀನತೆ ಕೂದಲುದುರಲು ಕಾರಣವಾಗುತ್ತದೆ.
- ಅಂಡಾಶಯದಲ್ಲಿನ ಪಾಲಿಸಿಸ್ಟಿಕ್ ಲಕ್ಷಣಗಳು ಹಾಗೂ ಹಾರ್ಮೋನ್‌ನಲ್ಲಿನ ಏರುಪೇರಿನಿಂದಾಗಿ ಮುಖದ ಮೇಲಿನ ಕೂದಲು ಹೆಚ್ಚುತ್ತದೆ, ತಲೆಕೂದಲು ಉದುರುತ್ತದೆ.
- ತಲೆಯ ಭಾಗದಲ್ಲಿನ ಚರ್ಮದಲ್ಲಿ ಕಾಣಿಸಿಕೊಳ್ಳುವಂಥ ಸೋಂಕು, ಹೊಟ್ಟು ಹಾಗೂ ಸೋರಿಯಾಸಿಸ್‌ನಿಂದಾಗಿಯೂ ಕೂದಲುದುರುತ್ತದೆ.
- ಹಣ್ಣು, ತರಕಾರಿಗಳನ್ನು ಹೆಚ್ಚಾಗಿ ಸೇವಿಸುವುದರ ಜತೆಗೆ ಪ್ರೊಟೀನ್‌ಯುಕ್ತ ಆಹಾರ ಸೇವನೆ ಹಾಗೂ ಹೆಚ್ಚು ಹೆಚ್ಚು ನೀರು ಕುಡಿಯುವುದನ್ನು ರೂಢಿಸಿಕೊಳ್ಳಬೇಕು.
- ಕೂದಲಿಗೆ ಸರಿಯಾದ ರೀತಿಯಲ್ಲಿ ರಕ್ಷಣೆ ಒದಗಿಸುವುದು ಬಹುಮುಖ್ಯ. ಶಾಂಪೂ ಆಯ್ಕೆ ಮಾಡಿಕೊಳ್ಳುವ ಸಂದರ್ಭದಲ್ಲಿ ಅವು ನಿಮ್ಮ ಕೂದಲಿಗೆ ಹಾಗೂ ಕೂದಲಿನ ಚರ್ಮಕ್ಕೆ ಹೊಂದಿಕೊಳ್ಳುತ್ತದೆಯೇ ಎಂದು ತಿಳಿದು ಬಳಕೆ ಮಾಡಬೇಕು.
- ದಿನವಿಡೀ ಕೂದಲನ್ನು ಗಂಟುಹಾಕಿ ಇಟ್ಟುಕೊಳ್ಳುವ ಅಭ್ಯಾಸವಿದ್ದಲ್ಲಿ ಮೊದಲು ಈ ಅಭ್ಯಾಸವನ್ನು ಬಿಟ್ಟುಬಿಡಿ. ನಿಮ್ಮ ಕೂದಲಿಗೂ ಉಸಿರಾಟದ ಅಗತ್ಯವಿರುತ್ತದೆ.
- ಕೂದಲನ್ನು ನೇರ ಮಾಡಿಸುವುದು, ಕರ್ಲಿ ಮಾಡಿಸುವುದು, ಜೆಲ್ ಬಳಸುವುದು, ಐರನ್ ಮಾಡುವುದು ಹಾಗೂ ಇನ್ನಿತರೆ ರಾಸಾಯನಿಕ ಪದಾರ್ಥಗಳನ್ನು ಬಳಸುವುದರಿಂದ ಕೂದಲಿನ ಸ್ವರೂಪವೇ ಹಾಳಾಗುತ್ತದೆ. ಇದರಿಂದ ಕೂಡ ಕೂದಲುದುರುತ್ತದೆ. ಅಲ್ಲದೇ ಡ್ರೈಯರ್‌ನಿಂದ ಕೂದಲು ಒಣಗಿಸುವುದನ್ನು ಕಡಿಮೆಮಾಡಬೇಕು. ಅನಿವಾರ್ಯ ಸಂದರ್ಭಗಳಲ್ಲಿ ಕಡಿಮೆ ಬಿಸಿಯಿಂದ ಒಣಗಿಸಬೇಕು. ಕೂದಲನ್ನು ಆದಷ್ಟು ನೈಸರ್ಗಿಕವಾಗಿಯೇ ಒಣಗಲು ಬಿಟ್ಟರೆ ಒಳಿತು.
- ಡಾ. ಶಾಹಿದ್ ಶಂಶೇರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics