ಸ್ತ್ರೀಯರು ಮೇಕಪ್‌ನಷ್ಟೇ ಪ್ರಾಮುಖ್ಯತೆಯನ್ನು ಹ್ಯಾಂಡ್‌ಬ್ಯಾಗ್‌ಗೂ ನೀಡುತ್ತಾರೆ. ನಿಮಗೆ ಗೊತ್ತೋ ಇಲ್ವೋ, ಒಂದು ಕಾಲದಲ್ಲಿ ಸ್ತ್ರೀಯರಿಗೆ ಈ ಗೊಂದಲವೇ ಇರುತ್ತಿರಲಿಲ್ಲ. ಏಕೆಂದರೆ ಅವರಿಗೆ ಮನೆಯಿಂದ ಹೊರಗೆ ಹೋಗುವ ಅವಕಾಶವೇ ಕಡಿಮೆ. ಒಂದು ವೇಳೆ ಹೋದರೂ ಗಂಡನ ಜತೆ ಹೋಗುತ್ತಿದ್ದುದರಿಂದ ಕೈಯಲ್ಲಿ ಹಣವಿಟ್ಟುಕೊಳ್ಳುವ ಸಂದರ್ಭವೇ ಬರುತ್ತಿರಲಿಲ್ಲ.
ನಂತರದ ಕಾಲದಲ್ಲಿ ಹೆಣ್ಣುಮಕ್ಕಳು ಕಾಲೇಜಿಗೆ ಹೋಗಲು ಪ್ರಾರಂಭಿಸಿದರು. ಉದ್ಯೋಗಗಳನ್ನು ಮಾಡಲಾರಂಭಿಸಿದರು. ಈ ಕಾಲದಲ್ಲಿ ಹೆಣ್ಣುಮಕ್ಕಳಿಗೆ ಹ್ಯಾಂಡ್‌ಬ್ಯಾಗ್ ಒಂದು ರೀತಿಯ ಸ್ತ್ರೀ ಸಂಕೇತ ಮತ್ತು ಭದ್ರತೆಯೆಂದು ಭಾವಿಸುತ್ತಿದ್ದರು.
ಇಂದಿನ ಚಿಕ್ಕ ಚಿಕ್ಕ ಬಾಲೆಯರು ತಾವಾಡುವ ಆಟದಲ್ಲಿಯ ಗೊಂಬೆಗಳ ಕೈಯಲ್ಲಿಯೂ ಪರ್ಸ್, ಬ್ಯಾಗ್‌ಗಳನ್ನು ಉಪಯೋಗಿಸುವುದನ್ನು ಕಾಣುತ್ತೇವೆ. ಉದ್ಯೋಗಸ್ಥ ಸ್ತ್ರೀ ಸಮುದಾಯವು ಯಾವುದೇ ವಯಸ್ಸಿನವರಾಗಲಿ ಅವರಿಗೆ ಕೈಯಲ್ಲಿ ಬ್ಯಾಗ್‌ಗಳು ಬೇಕೇಬೇಕು. ಇತ್ತೀಚಿನ ದಿನಗಳಲ್ಲಿ ಬ್ಯಾಗ್‌ಗಳು ವರ್ಗೀಕೃತವಾಗಿವೆ. ಕಾಲೇಜು ಹುಡುಗಿಯರ ಹ್ಯಾಂಡ್‌ಬ್ಯಾಗ್ ಒಂದು ರೀತಿಯ ವಿನ್ಯಾಸ ಹೊಂದಿದ್ದರೆ, ನಿತ್ಯ ಕೆಲಸಕ್ಕೆ ಹೋಗುವ ಮಹಿಳೆಯರ ಬ್ಯಾಗ್‌ಗಳೇ ಬೇರೆ.
ಇನ್ನು ಪ್ರಯಾಣಕ್ಕೆ ಬಳಸುವಂಥ ಬ್ಯಾಗ್‌ಗಳನ್ನು ಮಹಿಳೆಯರು ಉಪಯೋಗಿಸುವುದು ಸಾಮಾನ್ಯ. ಅವಶ್ಯಕತೆ ಮತ್ತು ಸಂದರ್ಭಾನುಸಾರವಾಗಿ ಬಣ್ಣಬಣ್ಣದ ವಿವಿಧ ಮಾದರಿಯ ಹ್ಯಾಂಡ್‌ಬ್ಯಾಗ್‌ಗಳು ಈಗ ಮಾರುಕಟ್ಟೆಯಲ್ಲಿ ಲಭ್ಯ.
ಹ್ಯಾಂಡ್‌ಬ್ಯಾಗ್ ಆಯ್ಕೆ ಹೇಗೆ?
ಹ್ಯಾಂಡ್‌ಬ್ಯಾಗ್ ಖರೀದಿಸುವಾಗ ಹಲವಾರು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಬ್ಯಾಗ್‌ನ ಗುಣಮಟ್ಟ, ಅದು ಯಾವ ಮೆಟೀರಿಯಲ್‌ನಿಂದ ತಯಾರಾಗಿದೆ ಎಂಬುದು ಮುಖ್ಯ. ಚರ್ಮದ ಬ್ಯಾಗ್‌ಗಳನ್ನು ಕೊಂಡುಕೊಳ್ಳುವಾಗ ಅದು ಮೃದುವಾಗಿದೆಯಾ, ಗಟ್ಟಿಯಾಗಿದೆಯಾ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕಾಗುತ್ತದೆ. ಮತ್ತೊಂದು ವಿಷಯ ಅವುಗಳಿಗೆ ಎಂತಹ ಬಣ್ಣ ಬಳಸಿದ್ದಾರೆ ಎನ್ನುವುದು. ಸಿಂಥೆಟಿಕ್ ರಾಸಾಯನಿಕ ವಸ್ತುಗಳಿಂದ ತಯಾರಿಸಿದ ಬ್ಯಾಗ್‌ಗಳು ಚರ್ಮಕ್ಕೆ ಹಾನಿಕರವಾಗಿದ್ದರಿಂದ ನೈಸರ್ಗಿಕವಾಗಿ ತಯಾರಿಸಿದವುಗಳನ್ನು ಖರೀದಿಸುವುದು ಉತ್ತಮ. ಇದರಲ್ಲಿ ಹೊಲಿಯುವ ಕಾರ್ಯಕುಶಲತೆಯೂ ಒಂದು ಕಲೆ ಇದ್ದ ಹಾಗೆ. ಹೊಲಿಗೆಗಳು ಒಂದೇ ತೆರನಾಗಿದ್ದರೆ ಬ್ಯಾಗಿನ ಸೌಂದರ್ಯಕ್ಕೆ ಹೆಚ್ಚು ಮೆರಗು ಬರುವುದು ಖಚಿತ.
ಬ್ಯಾಗ್‌ಗಳ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಜಿಪ್ ಉಪಯೋಗಿಸಿದರೆ ಅದರ ಬಾಳಿಕೆ ಕಡಿಮೆ. ಜತೆಗೆ ಅದು ಯಾವ ಘಳಿಗೆಯಲ್ಲಿಯಾದರೂ ಕೈಕೊಡಬಹುದು. ಒಟ್ಟಿನಲ್ಲಿ ಬ್ಯಾಗನ್ನು ಉಪಯುಕ್ತವಾಗಿ, ಮೃದುವಾಗಿ, ಆಕರ್ಷಣೀಯವಾಗಿ ಕಾಣುವಂತೆ ಮಾಡಿರಬೇಕು. ಲೈನಿಂಗ್ ವಿಷಯಕ್ಕೆ ಬಂದರೆ ಕಾಟನ್ ಬಟ್ಟೆಯದ್ದಾದರೆ ಉತ್ತಮ.
ಒಟ್ಟಿನಲ್ಲಿ ನಾವು ಕೊಂಡುಕೊಳ್ಳುವ ಬ್ಯಾಗ್ ನಮಗೆ ಶೋಭೆ ತರುವಂತೆ ಇರಬೇಕು.
- ಪ್ರತಿಮಾ ಕೆ. ರಾಯಚೂರು