ಮಹಿಳೆ-ಮನೆ-ಬದುಕು

ಪ್ರೀತಿ ಪ್ರಶ್ನೋತ್ತರ

ಆಫೀಸಿನಲ್ಲಂದು ಇದ್ದಕ್ಕಿದ್ದಂತೆ ನಿರ್ಧರಿಸಿದ ಲಂಚ್‌ಗೆಂದು ಇಡೀ ಟೀಮಿನ ಸದಸ್ಯರೆಲ್ಲರೂ ರೆಸ್ಟೋರೆಂಟಿನತ್ತ ಹೋಗುತ್ತಿದ್ದಾರೆ...

ಆಫೀಸಿನಲ್ಲಂದು ಇದ್ದಕ್ಕಿದ್ದಂತೆ ನಿರ್ಧರಿಸಿದ ಲಂಚ್‌ಗೆಂದು ಇಡೀ ಟೀಮಿನ ಸದಸ್ಯರೆಲ್ಲರೂ ರೆಸ್ಟೋರೆಂಟಿನತ್ತ ಹೋಗುತ್ತಿದ್ದಾರೆ. ತನ್ನ ಮೂರ್ನಾಲ್ಕು ಸಹೋದ್ಯೋಗಿಗಳ ಜತೆ ಕಾರಿನಲ್ಲಿ ಕುಳಿತವಳ ಫೋನಿಗೆ ಆಕೆಯ ಪ್ರಿಯಕರನಿಂದ ಕರೆ ಬರುತ್ತದೆ. ಹಿಂದೆಯೇ ಅವನಿಂದ ಪುಂಖಾನುಪುಂಖವಾಗಿ ಪ್ರಶ್ನೆಗಳು. ಎಲ್ಲಿಗೆ ಹೋಗ್ತಿದ್ದೀಯ? ಯಾರ ಜತೆ? ಯಾವಾಗ ಪ್ಲ್ಯಾನ್ ಆಗಿದ್ದು? ಮುಂಚೆ ಯಾಕೆ ಹೇಳಲಿಲ್ಲ? ಈಗ ಎಲ್ಲಿದ್ದೀಯ? ಹೇಗೆ ಹೋಗ್ತಾ ಇದ್ದೀಯ? ಪಕ್ಕ ಯಾರಿದ್ದಾರೆ? ಅವನ ಬಗ್ಗೆ ಹೇಳೇ ಇಲ್ಲ ನೀನು, ಮೊನ್ನೆ ಎಸ್ಸೆಮ್ಮೆಸ್ ಕಳುಹಿಸಿದ್ದನಲ್ಲ ಅವನಾ?
ಪಕ್ಕದಲ್ಲಿ ಕುಳಿತ ಸಹೋದ್ಯೋಗಿಗೆ ತಿಳಿಯದಂತೆ ಮುಜುಗರದಿಂದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದರೂ ಸಹನೆಯ ಕಟ್ಟೆಯೊಡೆದು ಮನಸ್ಸೇಕೋ ಕುದಿವ ಅಗ್ನಿಪರ್ವತದಂತಾಗಿದೆ. ಕೋಪದಲ್ಲಿ ಆಕೆ ಫೋನಿಟ್ಟ ರೀತಿಯೇ ನಡೆದ ವಿಷಯವನ್ನು ಪಕ್ಕದಲ್ಲಿದ್ದವರಿಗೆ ಸೂಕ್ಷ್ಮವಾಗಿ ಹೇಳಿದಂತಿತ್ತು. ಎಲ್ಲರ ಜತೆಯಿದ್ದರೂ ಏನೋ ಅಸಮಾಧಾನ. ಊಟ ಮುಗಿಸಿ ಮತ್ತೆ ಕ್ಯಾಬಿನ್ನಿಗೆ ಬಂದರೂ ತಲೆಯಲ್ಲಿ ಗಿರಕಿ ಹೊಡೆವ ಅದೇ ಪ್ರಶ್ನೆಗಳು. ಇಡೀ ದಿನ ಕೆಲಸದಲ್ಲಿ ಏಕಾಗ್ರತೆ ಸಾಧಿಸಲಾಗುತ್ತಿಲ್ಲ. ನಿಜಕ್ಕೂ ತಾನು ನಿಂತಿದ್ದನ್ನು, ಕೂತದ್ದನ್ನು, ದಿನನಿತ್ಯದ ಇಂಚಿ ಂಚನ್ನೂ ಬಿಡದೇ ಹೇಳಲು ಶುರುವಿಟ್ಟುಕೊಂಡಿದ್ದೇ ತಪ್ಪಾಯಿತೇ? ಬಾಳಸಂಗಾತಿಯ ಆಯ್ಕೆಯಲ್ಲಿ ತಪ್ಪಾಯಿತೇ? ಎಂಬ ಪ್ರಶ್ನೆ ಮನದ ಮೂಲೆಯಲ್ಲಿ ಚಿಗುರೊಡೆಯಿತು.
ಏಕೆ ಹೀಗೆ?
ಗಮನಿಸಿ. ಆ ಹುಡುಗಿಯ ಪ್ರಿಯಕರ ತೋರಿದ್ದು ಅನುಮಾನವಲ್ಲ. ಅದು ಅವರಿಬ್ಬರೂ ಪರಸ್ಪರ ಶುರುಮಾಡಿ ಬೆಳೆಸಿಕೊಂಡ ದಿನನಿತ್ಯದ ಪರಿಪಾಠ. ಕೇವಲ ಆ ಹುಡುಗಿಯಷ್ಟೇ ಅಲ್ಲ. ಇದು ಪ್ರೇಮಿಸಿದ ಬಹುಪಾಲು ಹುಡುಗ ಹುಡುಗಿಯರು ದಿನಕಳೆದಂತೆ ಎದುರಿಸುವ ಸಮಸ್ಯೆ. ಶುರುವಿನಲ್ಲಿ ಸ್ವೀಟ್ ನಥಿಂಗುಗಳನ್ನು ಗಂಟೆಗಟ್ಟಲೆ ಕಿವಿಯಲ್ಲಿ ಉಸುರುತ್ತಾ ಎಲ್ಲವನ್ನೂ ಹೇಳಿಕೊಂಡು ಖಾಲಿಯಾಗುವಾಗ ದೊರಕುವ ಸಾರ್ಥಕ್ಯದ ಭಾವ ಕೊಂಚ ದಿನಗಳಲ್ಲೇ ದಿನಚರಿಯಂತೆ ಬದಲಾಗುತ್ತದೆ. ಹೇಳಿಕೊಳ್ಳಲು ಏನೂ ಇಲ್ಲವೆಂದ ಮೇಲೂ ಸುಮ್ಮನೆ ಮೊಬೈಲ್‌ನಲ್ಲಿ ಸಂಭಾಷಣೆಯನ್ನು ಗಂಟೆಗಟ್ಟಲೆ ಮುಂದುವರಿಸುವ ಸಂದರ್ಭಗಳಲ್ಲೇ ಅನವಶ್ಯ ದಿನಚರಿಗಳ ಬಗ್ಗೆ ಪ್ರಶ್ನೋತ್ತರ ಶುರು.

ತಿಳಿಹೇಳಿ
ಪ್ರತಿಯೊಬ್ಬರಿಗೂ ಅವರದ್ದೇ ಖಾಸಗಿ ಬದುಕಿರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ತನ್ನ ಖಾಸಗಿ ಕ್ಷಣಗಳು ಕಳೆದುಹೋಗುತ್ತಿವೆ ಎಂಬ ಸೂಚನೆ ದೊರಕಿದ ತಕ್ಷಣ ಸಂಗಾತಿಗೆ ಅದರ ಬಗ್ಗೆ ತಿಳಿಹೇಳಿ, ಅವರ ಅನುಮಾನ ಪರಿಹರಿಸುವತ್ತ ಗಮನ ಕೊಡಬೇಕು. ಇದರಿಂದ ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಬಹುದು. ಈಗಾಗಲೇ ಅಂಥದ್ದೊಂದು ಸಮಸ್ಯೆಯ ಸುಳಿಯಲ್ಲಿ ಸಿಕ್ಕಿಕೊಂಡಿದ್ದೇವೆ ಎಂದಾದರೆ ಸಾವಧಾನವಾಗಿಯೇ ಸಂಗಾತಿಗೆ ಈ ಮುಜುಗರದ ಸನ್ನಿವೇಶದ ಬಗ್ಗೆ ತಿಳಿಹೇಳುವ ಪ್ರಯತ್ನ ಮಾಡಬೇಕು. ಈ ಎರಡೂ ಸಂದರ್ಭಗಳಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮವೆಂದರೆ ಯಾವುದೋ ಜಗಳದ ಮಧ್ಯ ಈ ವಿಷಯದ ಪ್ರಸ್ತಾಪ ಸಲ್ಲ. ಅದು ಸಂಬಂಧವನ್ನು ಇನ್ನಷ್ಟು ಕೆಡಿಸುತ್ತದೆ. ಸಂಗಾತಿಯ ಖಾಸಗಿತನವನ್ನು ಗೌರವಿಸುತ್ತೇನೆಂದು ನಿರ್ಧರಿಸಿ ಅದರಂತೆ ನಡೆದುಕೊಳ್ಳಿ. ಆಗ ಬದುಕು ಖಂಡಿತಾ ವರ್ಣರಂಜಿತವಾಗಿ ಬದಲಾಗುತ್ತದೆ. ಪ್ರೀತಿ ಉಸಿರಾಗಬೇಕೆ ಹೊರತು, ಉಸಿರು ಕಟ್ಟಿಸಬಾರದು. ಅಲ್ಲವೇ?

 -ಸಂತೋಷ್‌ಕುಮಾರ್ ಎಲ್.ಎಂ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!