ಸಾಂಧರ್ಬಿಕ ಚಿತ್ರ 
ಮಹಿಳೆ-ಮನೆ-ಬದುಕು

ಗುಟ್ಟಾಗಿ ಉಳಿದಿರದ ಒಂದು 'ಮುಟ್ಟಿ'ನ ಕತೆ!

ಹಿಂದೆಲ್ಲ ಅವ್ವಂದಿರು ಹುಟ್ಟಿನಿಂದಲೇ..

ಹಿಂದೆಲ್ಲ ಅವ್ವಂದಿರು ಹುಟ್ಟಿನಿಂದಲೇ ಹೆಣ್ಣುಮಗುವಿಗೆ ಬೇಕುಬೇಕಾದ ಆಹಾರ ಪದ್ಧತಿಯನ್ನು ಅಳವಡಿಸಿ, ಅದರ ಮೂಲಕ ಅವರವರ ಹೆಣ್ಣುಮಕ್ಕಳು ಗಟ್ಟಿಮುಟ್ಟಾಗಿಯೂ, ಆರೋಗ್ಯಕರವಾಗಿಯೂ ಬೆಳೆದು ಬಾಳುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದರು. ಇವತ್ತಿನ ಅಮ್ಮಂದಿರಿಗೆ ಟೀವಿಯಲ್ಲಿಕಾಣಿಸುವ ಸ್ಯಾನಿಟರಿ ಪ್ಯಾಡುಗಳ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುವ ಚೆಲುವೆಯರ ರೀತಿಯಲ್ಲಿ, ಚೂಪುಚಪ್ಪಲಿ ಹಾಕಿಕೊಂಡು, ತಮ್ಮ ಮನೆಯ ಬೆಕ್ಕೂ ನಾಚುವ ಹಾಗೆ ತಮ್ಮ ತಮ್ಮ ಹೆಣ್ಣುಮಕ್ಕಳು ನೆರೆದವರ ಮುಂದೆ ನಡೆದು, ಚಪ್ಪಾಳೆ ಗಿಟ್ಟಿಸುವ ಹಾಗೆ ಆಗಲಿ ಎಂಬ ಹಂಬಲದಲ್ಲಿ ಏನು ಮಾಡಿ ಉಣಿಸುತ್ತಿದ್ದೇವೆ ಅನ್ನುವುದರ ಕಡೆಗೆ ಕಿಂಚಿತ್ ಲಕ್ಷ್ಯವೂ ಇರದವರೇ ಆಗಿದ್ದಾರೆ.

'ಅವ್ರನ್ನ ಬಿಟ್ಟು ಇವ್ರನ್ನ ಬಿಟ್ಟು ಯಾರನ್ನ ಮುಟ್ಟಲಿ' ಎನ್ನುವ ಆಟದ ಬಗ್ಗೆಯೇನೋ ನೀವು ಕೇಳಿಯೇ ಇರುತ್ತೀರಿ. ಕೇಳಿಯೂ, ಅನುಭವಿಸಿಯೂ ಮುಟ್ಟಲಿಕ್ಕೆ ಬಂದರೆ ತಪ್ಪಿಸಿಕೊಂಡು ಓಡಬೇಕು ಅನ್ನಿಸುವಂತೆ, ಮಾಡುವ, ತಿಂಗಳೊಪ್ಪತ್ತಿನಲ್ಲಿ ನಾಲ್ಕಾರು ದಿನಗಳ ಕಾಲ ಬೇಡದ ನೆಂಟನಂತೆ ಒಮ್ಮೆ ಮಾತ್ರ ಬಂದು ಹೋದರೂ 'ಯಾಕಾದರೂ ಬಂತಪ್ಪಾ!' ಅಂತ ಬೇಸರಿಕೊಳ್ಳುವ ಹಾಗೆ ಮಾಡುವ ಮುಟ್ಟಿನಾಟದ ಬಗ್ಗೆ ನಿಮಗೆ ಖಂಡಿತ ತಿಳಿದೇ ಇರುತ್ತದೆ. ಈಗೀಗಂತೂ ಬಹುತೇಕ ಮನೆಗಳಲ್ಲಿ ಮುಟ್ಟಿದರೆತಪ್ಪಿಸಿಕೊಂಡು ಓಡುವ ಆಟವಾಡುವ ಎಂಟು ಹತ್ತು ವರ್ಷಗಳ ಆಜೂಬಾಜಿನಲ್ಲೇ ಬೆಳೆಯುತ್ತಿರುವ ಎಳೆಯ ಬಾಲೆಯರು ಮೈನೆರೆಯುತ್ತಿರುವ ಸಂಗತಿಗೆ ವೈದ್ಯಕೀಯ ಸಂಶೋಧನೆಗಳು ಏನು ಹೇಳುತ್ತವೆ ಎಂಬ ಅಂಶವನ್ನು ಪುಟ್ಟದಾಗಿಯಾದರೂ ಈ ಬರಹ ಮುಟ್ಟಲಿದೆ.
ಕಳೆದ ಸಲ ಊರಿಗೆ ಹೋದಾಗ ಸಿಕ್ಕ ಬಾಲ್ಯದ ಗೆಳತಿ ಗೋಳಾಡುತ್ತಿದ್ದಳು. 'ನೋಡೇ, ನನ್ನ ಮಗಳಿನ್ನೂ ಐದನೇ ಕ್ಲಾಸು, ಆಗಲೇ ಶುರುವಾಯ್ತು ಪಾಪದ್ದಕ್ಕೆ ಹೊರಗಾಗುವ ಪಡಿಪಾಟಲು. ಟಿವಿಯಲ್ಲಿ ಬರೋ, ವಯಸ್ಸಿನವರ ಎಲ್ಲ ಬಗೆಯ ಭಾವನೆಗಳಿಗೆ ನೇರ, ನಿರ್ಲಜ್ಜ ಲಗ್ಗೆ ಹಾಕುವ ಕಾರ್ಯಕ್ರಮಗಳನ್ನ ನೋಡಿ ನೋಡಿ ಬಹುಷಃ ಆಕೆಯ ದೇಹದಲ್ಲಾದ ಹಾರ್ಮೋನುಗಳ ಏರುಪೇರಿನಿಂದಾಗಿ ಇಷ್ಟು ಬೇಗ ಆಕೆಗೆ ನಾವು ಆರತಿ ಮಾಡುವಂತಾಯಿತು' ಅಂತ ಆಕೆ ಹೇಳಿದ ಮಾತುಗಳು ನನಗೆ ಅಚ್ಚರಿ ಮೂಡಿಸದೇ ಇರಲಿಲ್ಲ. ಹೊರಗಾಗುವ, ಮುಟ್ಟಿಸಿಕೊಳ್ಳದೇ ತಾಯಿಗಳಿಗೆ ಹೊಣೆಗಾರಿಕೆ ಹೆಚ್ಚು ಮಾಡುವ, ಹೆಣ್ಣುಮಕ್ಕಳಿಗಷ್ಟೇ ಒಲಿದಿರುವ ಈ ಬೇಡದ ಹಾಡಿನ ರಾಗಬೆರಗನ್ನೂ, ಬೇಸರವನ್ನೂ ಏಕಕಾಲಕ್ಕೆತಂದಿಡುವಂಥದ್ದು.

ಶಾಲೆಗೆ ಹೋದ ಮಗಳು ಹೋಗಿನ್ನೂ ಹತ್ತು ನಿಮಿಷ ಕಳೆದಿರದೇ ಆಕೆಯ ಶಾಲೆಯ ಮೇಡಮ್ಮು ಫೋನು ಹಚ್ಚಿ 'ಕೆಂಪಾದವೋ ಎಲ್ಲ ಕೆಂಪಾದವೋ' ಅಂತ ಹಾಡಿದರೆ ಅಮ್ಮನಿಗೆ ಸಡಗರಕ್ಕಿಂತ ಹೆಚ್ಚಾಗಿ ಗಡಿಬಿಡಿಯೇ ಆಗುವುದು ಈಗಿನ ದಿನಗಳಲ್ಲಿ ಸಾಮಾನ್ಯ. ಮಗುವಿಗೆ ಯಾವ ಬಗೆಯ ಪಾಠವನ್ನೂ ಹೆಚ್ಚಿನ ತಾಯಂದಿರುಗಳು ಶುರುವಿಟ್ಟುಕೊಂಡಿರದ ಹೊತ್ತಿನಲ್ಲಿ ಅಚಾನಕ್ಕಾಗಿ ಮಗಳು ದೊಡ್ಡವಳಾಗಿಬಿಡುತ್ತಾಳೆ.
ಇದೆಲ್ಲಕ್ಕೂ ಅಮ್ಮಂದಿರು ತಯಾರಿಸುವಅಡುಗೆ ಅಥವಾ ಮಾಡಲಿಕ್ಕಾಗದೇ ಹೊರಗೆ ಕರೆದುಕೊಂಡು ಹೋಗಿ ಸಿಕ್ಕಸಿಕ್ಕದ್ದನ್ನೆಲ್ಲ ತಿನ್ನಿಸಿ ತಿನ್ನಿಸಿ, ದೇಹದ ತೂಕ ಮಿತಿಮೀರಿ ಹೆಚ್ಚಾಗುತ್ತಿರುವುದಕ್ಕೆ ನೇರವಾಗಿಯೂ, ಪರೋಕ್ಷವಾಗಿಯೂ ಕಾರಣರಾಗುತ್ತಿರುವುದರಿಂದಲೇ ಹೆಣ್ಣುಮಕ್ಕಳುಗಳು ಹೀಗೆಅವಧಿಗೂ ಮುನ್ನವೇ ಮುಟ್ಟಿನ ನೋವಿಗೆ, ಮುಜುಗರಕ್ಕೆ ಈಡಾಗುತ್ತಿದ್ದಾರೆ ಅನ್ನುತ್ತಾರೆ ಬಲ್ಲವರು.

ಹಿಂದೆಲ್ಲ ಅವ್ವಂದಿರು ಹುಟ್ಟಿನಿಂದಲೇ ಹೆಣ್ಣುಮಗುವಿಗೆ ಬೇಕುಬೇಕಾದ ಆಹಾರ ಪದ್ಧತಿಯನ್ನು ಅಳವಡಿಸಿ, ಅದರ ಮೂಲಕ ಅವರವರ ಹೆಣ್ಣುಮಕ್ಕಳು ಗಟ್ಟಿಮುಟ್ಟಾಗಿಯೂ, ಆರೋಗ್ಯಕರವಾಗಿಯೂ ಬೆಳೆದು ಬಾಳುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದರು. ಇವತ್ತಿನ ಅಮ್ಮಂದಿರಿಗೆ ಟೀವಿಯಲ್ಲಿ ಕಾಣಿಸುವ ಸ್ಯಾನಿಟರಿ ಪ್ಯಾಡುಗಳ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುವ ಚೆಲುವೆಯರ ರೀತಿಯಲ್ಲಿ, ಚೂಪುಚಪ್ಪಲಿ ಹಾಕಿಕೊಂಡು, ತಮ್ಮ ಮನೆಯ ಬೆಕ್ಕೂ ನಾಚುವ ಹಾಗೆ ತಮ್ಮ ತಮ್ಮ ಹೆಣ್ಣುಮಕ್ಕಳುಗಳು ನೆರೆದವರ ಮುಂದೆ ನಡೆದು, ಚಪ್ಪಾಳೆ ಗಿಟ್ಟಿಸುವ ಹಾಗೆ ಆಗಲಿ ಎಂಬ ಹಂಬಲದಲ್ಲಿ ಏನು ಮಾಡಿ ಉಣಿಸುತ್ತಿದ್ದೇವೆ ಅನ್ನುವುದರ ಕಡೆಗೆ ಕಿಂಚಿತ್ ಲಕ್ಷ್ಯವೂ ಇರದವರೇ ಆಗಿದ್ದಾರೆ. ಆದರೆ ವಾಸ್ತವವಾಗಿ ಹೆಣ್ಣುಮಕ್ಕಳು ಏನೂಟ ಮಾಡುತ್ತಾರೆ ಅನ್ನುವ ಅಂಶದ ಮೇಲೆ ಎಷ್ಟು ಬೇಗ ಅವರು ಮೈನೆರೆಯುತ್ತಾರೆ ಅನ್ನುವ ಅಂಶ ನಿರ್ಧಾರವಾಗುತ್ತದೆ ಅಷ್ಟೇ ಅಲ್ಲ, ಅನುಕೂಲಸ್ಥ ಕುಟುಂಬಗಳು, ಮಧ್ಯಮವರ್ಗದ ಕುಟುಂಬಗಳು ಮತ್ತು ಬಡ ಹಾಗೂ ಅನುಕೂಲವಿರದ ಕುಟುಂಬಗಳ ಬಾಲೆಯರು ಅವರವರ ಮನೆಯ ಆರ್ಥಿಕ ಹಾಗೂ ಆಹಾರ ಪದ್ಧತಿಗೆ ಅನುಗುಣವಾಗಿ ತಮ್ಮ ಜೀವಮಾನದ ಮುಟ್ಟಿನ ಪಯಣವನ್ನು ಆರಂಭಿಸುವರು ಎಂಬುದಾಗಿ ಈ ಅಧ್ಯಯನಗಳು ಹೇಳುತ್ತವೆ. ತಾಯ್ತಂದೆಯರು ಕೂಲಿ ಕೆಲಸದವರಾಗಿದ್ದರೆ, ಮನೆಕೆಲಸದವರಾಗಿದ್ದರೆ ಅಥವಾ ಇತರೆ ಕಾರ್ಮಿಕವರ್ಗಕ್ಕೆ ಸೇರಿದವರಾಗಿದ್ದರೆ ಅಂಥವರ ಮಕ್ಕಳು, ತಾಯ್ತಂದೆಯರು ಶಿಕ್ಷಕರಾಗಿಯೂ, ನೌಕರರಾಗಿಯೂ ಇದ್ದಲ್ಲಿ ಅಂಥವರ ಮಕ್ಕಳು ಹಾಗೂ ವೈದ್ಯರುಗಳು, ಬಿಳಿಕಾಲರಿನ ಜನರ ಮನೆಯ ಹೆಣ್ಣುಮಕ್ಕಳು, ಮ್ಯಾನೇಜರಿಕೆ ಮಾಡುವರ ಮಕ್ಕಳುಅಲ್ಲದೆಯೇ ಇಂಜಿನಿಯರುಗಳು ಮುಂತಾದ ಮೇಲ್ವರ್ಗದವರ ಮಕ್ಕಳು ಎಂಬುದಾಗಿ ಈ ವರ್ಗಗಳನ್ನು ವಿಂಗಡಿಸಲಾಗಿದೆ. ಅದರಲ್ಲೂಅವರ ದೇಹದ ತೂಕ, ಉದ್ದ, ಮೈಯ ಸುತ್ತಳತೆ ಮೊದಲಾದ ಅಂಶಗಳು ಸಹ ಅವರು ಯಾವ ವಯಸ್ಸಿನಲ್ಲಿ ಅಂದರೆ ಅಪ್ರಾಪ್ತ, ಪ್ರಾಪ್ತ ಹಾಗೂ ತುಂಬ ತಡವಾಗಿ ಹೀಗೆ ಮೂರು ವಯೋವಾನಗಳಲ್ಲಿ ಮೈನೆರೆಯುವರು ಎಂಬುದನ್ನು ನಿರ್ಧರಿಸುತ್ತವೆಯಂತೆ. ಈ ಮೂರೂ ವರ್ಗಗಳಲ್ಲಿ ಯಾರು ಯಾರು ದೈಹಿಕ ವ್ಯಾಯಾಮ, ಚಟುವಟಿಕೆ ಮೊದಲಾದವುಗಳಲ್ಲಿ ತೊಡಗಿರುತ್ತಾರೆ, ತೊಡಗುವುದು ವಿರಳ ಎಂಬಂಥ ಅಂಶಗಳೂ ಈ ಬಗೆಯ ಹೆಣ್ಣುಮಕ್ಕಳ ವರ್ಗ ಯಾವ ಯಾವವಯೋವಾನದಲ್ಲಿ ಮೈನೆರೆಯುತ್ತಾರೆಅನ್ನುವುದಕ್ಕೆ ಇರುವ ಮಾನದಂಡಗಳಾಗಿವೆ.

ಒಬ್ಬೊಬ್ಬರಲ್ಲೂ ಭಿನ್ನ ಬಗೆಯಲ್ಲಿ ಕಾಣಿಸಿಕೊಳ್ಳುವ ಮುಟ್ಟು ಸಾಮಾನ್ಯವಾಗಿ ಪ್ರತಿ 28 ದಿನಗಳಿಗೊಮ್ಮೆ ತನ್ನ ಚಕ್ರವನ್ನು ಮರುಕಳಿಸುತ್ತದೆ. ಕೆಲವೊಮ್ಮೆ ಕೇವಲ 21 ದಿನಗಳಿಗೇ ಚಕ್ರವು ಮರಳುವ ಸಾಧ್ಯತೆಗಳೂ ಇರುತ್ತವೆ.2 ರಿಂದ 3 ದಿನಗಳ ಕಾಲ ಇರುವ ಸ್ರಾವ, ತಲೆನೋವು, ತ್ರಾಸವನ್ನಲ್ಲದೇ ಮತ್ತೇನನ್ನೂ ಹೊತ್ತು ತರುವುದಿಲ್ಲ. ಲವಲವಿಕೆಯ ಕಾರಂಜಿಯಂತಿರುವ ಬಾಲಕಿಯರು ಇಂಥ ದಿನಗಳಲ್ಲಿ ಗುಡ್ಡವನ್ನೇ ಹೊತ್ತುಕೂತವರ ಹಾಗೆ ಬಳಲಿಬಿಡುತ್ತಾರೆ. ಮನೆಯವರ ಕಾಳಜಿ, ಆರೈಕೆ, ಪ್ರೀತಿಯನ್ನು ಪ್ರತಿ ಜೀವ ಬಯಸುವುದು ಈ ಹೊತ್ತಿನಲ್ಲೇ. ಅದನ್ನು ದೊಡ್ಡವರುಸೂಕ್ಷ್ಮವಾಗಿಯೇ ಅರ್ಥಮಾಡಿಕೊಂಡು ನಿಭಾಯಿಸಬೇಕಾಗುತ್ತದೆ.

ಯಾವಾಗ ಮಗಳು ಮೈನೆರೆದರೆ ಒಳ್ಳೆಯದು?
9 ರಿಂದ 11 ವರ್ಷದೊಳಗೆ ಮೈನೆರೆತರೆ ತುಂಬ ಬೇಗ ಅನ್ನಿಸಿಕೊಳ್ಳುವ ಈ ದೈಹಿಕ ಪ್ರಕ್ರಿಯೆ 12 ರಿಂದ 14 ರ ಆಸುಪಾಸಿನಲ್ಲಾದರೆ ಕರಾರುವಕ್- ಐಡಿಯಲ್ ಅನ್ನಿಸಿಕೊಳ್ಳುವ ಹಾಗೆಯೇ 15 ದಾಟಿತೆಂದರೆ ತೀರಾ ತಡವಾಯಿತು ಎನ್ನುವ ಪಟ್ಟಿಯಲ್ಲಿ ಬರುತ್ತದೆ. ತಾಯ್ತಂದೆಯರ ಆದಾಯ, ಅನುಕೂಲಗಳನ್ನಾಧರಿಸಿ ಹೆಣ್ಣುಮಗುವೊಂದು ಮೈಯರಳಲು ಕಾರಣವಾಗುವ ಹಾಗೆಯೇ ಎಷ್ಟು ಪೌಷ್ಠಿಕ ಆಹಾರವನ್ನು ಮಗುವಿಗೆ ಕೊಡಲಾಗುತ್ತದೆ ಎಂಬುದೂ ಸಹ ಮೈನೆರೆಯುವ ವಯಸ್ಸನ್ನು ಅಳೆಯುವ ಪ್ರಮುಖ ಅಂಶವಾಗಿದೆ. ಮಾಂಸಾಹಾರ ಸೇವಿಸುವ ಹೆಣ್ಣುಮಕ್ಕಳು ಸಸ್ಯಾಹಾರೀ ಆಹಾರವನ್ನು ಸೇವಿಸುವ ಹೆಣ್ಣುಮಕ್ಕಳಿಗಿಂತ ಸರಾಸರಿ ಆರು ತಿಂಗಳು ಮೊದಲೇ ಮೈನೆರೆಯುತ್ತಾರೆ ಎಂಬುದನ್ನು ಅಧ್ಯಯನಗಳು ಹೇಳುತ್ತವೆ. ದೇಹದ ತೂಕದಲ್ಲಿ ಆಗುವ ಹಠಾತ್ ಏರುಪೇರುಗಳು ಮತ್ತೊಂದು ಕಾರಣವಾದರೆ ಕೆಲ ಕುಟುಂಬಗಳಲ್ಲಿ ಹಿಂದೆ ಮುಂದೆ ಜನಿಸಿರುವ ಅಣ್ಣತಮ್ಮಂದಿರ ವಯಸ್ಸಿನಲ್ಲಿ ಇರುವ ಅಂತರಗಳೂ ಕೂಡ ಕಾರಣವಾಗಿರುತ್ತವಂತೆ.

ಸೈಕಲ್ ಹೊಡಿಯೋ ಕೆಲಸ, ಅಮ್ಮಂದಿರಿಗೆ ಮನೆಗೆಲಸದಲ್ಲಿ ನೆರವಾಗುವುದು, ಹೊಲಗದ್ದೆಗಳಲ್ಲಿ ಕೆಲಸ ಮಾಡುವಷ್ಟು ಶ್ರಮದಾನ ಮಾಡುವುದು, ಶಾಲೆಗಳಿಗೆ ಮೈಲುಗಟ್ಟಲೆ ದೂರ ನಡೆದು ಹೋಗುವುದು, ಕ್ರೀಡೆ ಆಟೋಟಗಳಲ್ಲಿ ಭಾಗವಹಿಸುವುದು ಮೊದಲಾದವು ಈ ಪ್ರಕ್ರಿಯೆ ಪ್ರಾರಂಭವಾಗುವ ಸಮಯದ ಮೇಲೆ ಪ್ರಭಾವ ಬೀರುವ ಹಾಗೆಯೇ ಉಂಡುಂಡು ಕಾಲಕಳೆಯುವ, ಯಾವುದೇ ಬಗೆಯ ದೈಹಿಕ ಚಟುವಟಿಕೆಗಳಿರದೆಯೇ ಹೊಟ್ಟೆಯ ಸುತ್ತ ಹುತ್ತ ಬೆಳೆಸಿಕೊಳ್ಳುವ ಅಥವಾ ಮೈನೆರೆಯುವುದಕ್ಕೂ ಆಗದಿರುವಂತೆ ಮೈಬೆಳೆಸಿಕೊಳ್ಳುವ ಬಾಲೆಯರ ಆರೋಗ್ಯದ ಮೇಲೂ ಇರುವ ಇದರ ಗಂಭೀರತೆಯನ್ನುಅರಿಯಬಹುದಾಗಿದೆ.

ತುಂಬ ಬೇಗ ಈ ಬದಲಾವಣೆಗೆಮೈಯೊಡ್ಡುವ ಬಾಲೆಯರಲ್ಲಿ ಬಹುತೇಕರಿಗೆ ಅದರೆಡೆಗೆ ಕುತೂಹಲವಿದ್ದರೂ ಸಹ ಒಮ್ಮೆ ಅದು ಶುರುವಾಯಿತೆಂದರೆ ಮೂಗುಮುರಿವ ಸಂದರ್ಭಗಳೇ ಹೆಚ್ಚು. ಮನೆಯಲ್ಲಿ ಸ್ಯಾನಿಟರಿ ಪ್ಯಾಡುಗಳನ್ನು ಹೇಗೆ ಉಪಯೋಗಿಸಬೇಕು, ಹೇಗೆ ಸ್ರಾವದ ನೋವು, ನರಳಾಟಗಳನ್ನು ಮ್ಯಾನೇಜು ಮಾಡಬೇಕು ಅಂತೆಲ್ಲ ಗೈಡು ಮಾಡಲಾಗಲಿ, ಹೇಳಿಕೊಡಲಾಗಲಿ ತಮಗಿಂತ ದೊಡ್ಡವರಾದ ಅಕ್ಕಂದಿರು, ಅಮ್ಮ ಇದ್ದರೂ ತಮ್ಮನ್ನು ತಾವು ಕ್ಲೀನಾಗಿಟ್ಟುಕೊಳ್ಳುವ ಕೆಲಸಕ್ಕೆ ತಾವೇ ತೊಡಗಿಕೊಳ್ಳಲು ಹಚ್ಚುವ ಈ ಕೆಲಸ ಹುಚ್ಚು ಹಿಡಿಸಿಬಿಡುತ್ತದೆ ಎನ್ನುವುದೇ ಅದಕ್ಕಿರುವ ಕಾರಣ. 13ರಿಂದ 15ರ ಆಸುಪಾಸಿನಲ್ಲಿ ಆದರೆಕಡೆಯಪಕ್ಷ ಅದರ ಬಗ್ಗೆ ಅರಿವಾದರೂ ಮೂಡಿರುತ್ತದೆ. 'ಅಯ್ಯೋ ನಮ್ ಕಾಲ್ದಲ್ಲೆಲ್ಲಾ ಹಂಗಿರ್ಲಿಲ್ಲಪ್ಪಾ. ಇಷ್ಟು ಬೇಗ ಅಂತೂ ಇರ್ಲೇ ಇಲ್ಲ!' ಅಂತ ಹಾಡಿದ್ದೇ ಹಳೆಯ ರೆಕಾರ್ಡು ಹಚ್ಚಿ, ಮೊಮ್ಮಕ್ಕಳನ್ನು ಮುತುವರ್ಜಿಯಿಂದ ಬೆಳೆಸಲಾರದ, ಬೆಳೆಸುವ ಗೋಜಿಗೆ ಹೋಗಲೊಪ್ಪದ ಮಾಡರ್ನ್ ಸೊಸೆಯಂದಿರಿಗೆ ಅತ್ತೆಯಂದಿರು ಸೂಕ್ಷ್ಮವಾಗಿ ತಿವಿದರೂ ಕಾಲ ಯಾರ ಮಾತನ್ನೂ ಕೇಳುವ ಲೆಕ್ಕದಲ್ಲಿ ಇದ್ದಂತೆ ಕಾಣುವುದಿಲ್ಲ. ಮೊನ್ನೆಮೊನ್ನೆಯಿನ್ನೂ ನನ್ನ ಬಂಧುಗಳೊಬ್ಬರ ಮನೆಯಲ್ಲಿ ಮೈನೆರೆದ ಹುಡುಗಿ ಕೇವಲ ಎಂಟಕ್ಕೆ ಬಂದು ಸೊಂಟಕ್ಕೆ ನಿಲ್ಲುವಷ್ಟು ಎಳೆಯದೆಂದರೆ ತೀರಾ ಎಳೆಯ ಬಾಲೆ. ಇಷ್ಟು ಪುಟ್ಟಪುಟಾಣಿ ಮಕ್ಕಳಿಗೆ ಹೇಳಿಕೊಡುವುದಾದರೂ ಹೇಗೆ, ಏನನ್ನು? ಅನ್ನುವುದುಅಮ್ಮಂದಿರ ಆತಂಕಕ್ಕೆ ಕಾರಣವಾಗುತ್ತಿದೆಯೇ ವಿನಃ ಮಾಧ್ಯಮಗಳು ಹೇಗೆ ಮಕ್ಕಳ ಮನೋಲೋಕವನ್ನು, ದೈಹಿಕ ಅಚ್ಚರಿಗಳ ಗೂಡನ್ನು ಘಾಸಿಗೊಳಿಸುತ್ತಿವೆ ಎಂಬ ಅಪಾಯ ಯಾರಿಗೂ ಅರ್ಥವಾಗುತ್ತಿಲ್ಲ. ಎಲ್ಲರೂ ಎಲ್ಲವನ್ನೂ ಎಲ್ಲರೆದುರಿಗೂ ಬಿಡುಬೀಸಾಗಿ ನೋಡುತ್ತ ಕೂರಬಹುದು ಎಂಬ ಬಿಂದಾಸ್ ಮನೋಭಾವ ಎಲ್ಲೋ ನನ್ನ ಗೆಳತಿ ಹೇಳಿದಂತೆ ನಮ್ಮ ನಮ್ಮ ಹೆಣ್ಣುಮಕ್ಕಳುಗಳ ಹಾರ್ಮೋನುಗಳ ಪ್ರಪಂಚವನ್ನು ಕಾಲಪಕ್ವವಾಗುವುದಕ್ಕೂ ಮೊದಲೇ ತಿವಿದು ತಿವಿದುಅವರು ಬಲುಬೇಗ ಅರಳಿಕೊಳ್ಳುವ ಹಾಗೆ ಮಾಡುತ್ತಿರುವುದು ಹೌದೇನೋ ಅನಿಸುತ್ತದೆ. ಹೀಗೆ ಮೈನೆರೆದ ಕೂಡಲೆ ಎಲ್ಲ ಬಗೆಗಳಲ್ಲೂ ಅವರನ್ನು ದೊಡ್ಡವರೆಂದೇ ಬಿಂಬಿಸತೊಡಗುತ್ತಾರೆ ನಮ್ಮ ಸೋ ಕಾಲ್ಡ್ ದೊಡ್ಡವರು. ಕಿನ್ನರಿಯ ಹಾಗಿರಬಯಸುವ ಕಿಶೋರಿಯರಿಗೆ ಮನಸೋ ಇಚ್ಛೆ ಆಡಲೂ ಬಿಡದಂತೆ ಕಟ್ಟಿಹಾಕುವ ದರ್ದಿಗೆ, ಅನಿವಾರ್ಯತೆಗೆ ಈ ದಿನಗಳು ದೂಡುತ್ತವೆಂದರೂ ತಪ್ಪಾಗಲಾರದು. ಆದರೆ ದೂಷಿಸುವುದಾದರೂ ಯಾರನ್ನು? ಕರೆಯುವ ಮುನ್ನವೇ ವಕ್ಕರಿಸುವ ಋತುಗಾನವನ್ನೋ? ಕತೆಯ ಮೂಲಕವಾದರೂ ಕನಿಷ್ಟ ಬಗೆಯ ಮಾಹಿತಿಯನ್ನು ನೀಡಲು ಸೋತು ಸುಣ್ಣವಾಗುವ ಒಂದೆಡೆ ಮುಗ್ಧರೂ, ಮತ್ತೊಂದೆಡೆ ಜಾಣರೂ ಆದ ಅಮ್ಮಂದಿರನ್ನೋ? ಅಥವಾ ಯಾರ ಮಾತನ್ನೂ ಕಿವಿಗೆ ಹಾಕಿಕೊಳ್ಳದೇ ಕಂಡ ಕಂಡದ್ದನ್ನೆಲ್ಲ ಮೂರ್ಖರಪರದೆಯ ಮೇಲೆ ನೋಡಲು ಕೂಡುವ ಕಿಶೋರಿಯರಿಯರನ್ನೋ?

ಆರತಿ ಬೇಕೆ?
ಮೊದಲೆಲ್ಲ ಆರತಿಗೊಬ್ಬ ಮಗಳು ಕೀರುತಿಗೊಬ್ಬ ಮಗ ಅಂತಿದ್ದರಾದರೂ, ಈಗ ಹೆಚ್ಚಿನ ಪಾಲಕರು ಹೆಣ್ಣು ಮಗುವಿದ್ದರೂ, ಆರತಿ ಮಾಡಬೇಕಾದ ಸಂದರ್ಭ ಬಂದಾಗ ಮೌನವಾಗಿ ಅಂತಹ ಕಾರ್ಯಕ್ರಮಗಳನ್ನು ಮಾಡಿ ಮುಗಿಸಿ, ಮಗುವನ್ನು ಮುಜುಗರಕ್ಕೆ ಒಳಪಡಲು ಬಿಡದಷ್ಟು ಸೂಕ್ಷ್ಮತೆಯನ್ನು ಗಳಿಸಿಕೊಂಡಿದ್ದಾರೆ. ಹೆತ್ತವರು ಅದ್ಧೂರಿಯಾಗಿ ಆರತಿ ಎತ್ತಲು ತಯಾರಿದ್ದರೂ ಮಕ್ಕಳು ಅದನ್ನು ಒಪ್ಪುತ್ತಿಲ್ಲ. ಹಳ್ಳಿಗಳಲ್ಲಿ ಈಗಲೂ ಮಗುವೊಂದು ಮೈನೆರೆಯಿತೆಂದರೆ ಬಂಧುಬಳಗವನ್ನೆಲ್ಲ ಕರೆದು ಹಾಲು ತುಪ್ಪ ಹಾಕಿಸಿ ಎರೆವ ಬಯಕೆ ಮನೆಮಾಡಿರುವುದು ತಮಾಷೆ ಅಂತನ್ನಿಸಿದರೂ ಸತ್ಯವೇ. ಹೇಳಿಕೊಳ್ಳಲು ಪ್ರತಿಷ್ಠೆಯ ವಿಷಯವಾಗಿರುವ ಈ ಅಂಶ ಪೇಟೆವಾಸಿಗಳಿಗೆ ಮೂಗುಮುರಿಯುವ ಮಾತಾಗಿದ್ದರೂ, ತಮ್ಮ ತಮ್ಮ ಬಾಲ್ಯಗಳಲ್ಲಿ ತಮಗೆ ಆರತಿ ಎತ್ತಿ, ಹತ್ತೂರಿಗೂ ಗೊತ್ತಾಗುವಂತೆ ಈ ವಿಷಯವನ್ನು ಜಾಹೀರು ಮಾಡುತ್ತಿದ್ದ ತಾಯ್ತಂದೆಯರನ್ನು ಶಪಿಸದೇ ಬಿಟ್ಟವರಿಲ್ಲ. ಎಲ್ಲೋ ಕೆಲವೊಂದು ಕಡೆ ಜಾಣ, ವಿವೇಕ
ಅಮ್ಮ ಅಪ್ಪಂದಿರು ಅದನ್ನೊಂದು ಬ್ರೇಕಿಂಗ್ ನ್ಯೂಸಾಗಿಸದೇ, ಮೌನವಾಗಿ ಮನೆಯೊಳಗೆ ಹೆಣ್ಣುಮಗುವನ್ನು ಆರೈಕೆ ಮಾಡಿ, ಎಜುಕೇಟ್ ಮಾಡಿ ಮತ್ತೆ ಶಾಲೆಗೆ ಕಳಿಸುತ್ತಾರೆ. ಒಮ್ಮೊಮ್ಮೆ ನಾವು ಓದುವಾಗ ನಮ್ಮ ಶಾಲೆಯಲ್ಲಿ ಅಪ್ಪಿತಪ್ಪಿ ಹುಡುಗಿಯೊಂದು ಆರತಿಗೆ ಮುಖತೋರಿಸುವ ಹಾಗಾಗಿಬಿಟ್ಟಳು ಅನ್ನುವ ಸುದ್ದಿಯಂತೂ ಯಾಪಾಟಿ ನಾಚಿಗೆಗೆ ನಮ್ಮನ್ನು ತಳ್ಳುತ್ತಿತ್ತೆಂದರೆ, ಯಾರೆಂದರೂ ಯಾರೂ ನಮ್ಮನ್ನು ನೋಡಿರದಿದ್ದರೂ ಎಲ್ಲರೂ ನಮ್ಮತ್ತಲೇ ದಿಟ್ಟಿ ನೆಟ್ಟಿದ್ದಾರೆ ಅನಿಸಿ ಸೀತಾಮಾತೆಯ ಹಾಗೆ ಭೂಮಿ ಬಾಯ್ತೆರೆಯಬಾರದೇ ಅಂದುಕೊಂಡು ಕುಗ್ಗಿಹೋಗಿಬಿಟ್ಟಿರುತ್ತಿದ್ದೆವು.

ಪರಿಸರ, ಹೆಣ್ಣಿಗಷ್ಟೇ ತಾಯ್ತನವೆಂಬ ಹಿರಿದಾದ ಉಡುಗೊರೆ ನೀಡಿದೆ, ಆ ಕಾರಣ ಮೈನೆರೆಯುವ ಕ್ರಿಯೆ ಕೇವಲ ಒಂದು ದೈಹಿಕ ಕ್ರಿಯೆ ಮಾತ್ರವಾಗಿರದೇ, ಹೆಣ್ಣೊಬ್ಬಳು ತಾಯಿಯಾಗುವ ದಿಕ್ಕಿನಲ್ಲಿ ಇಡುವ ಮೊದಲ ಹೆಜ್ಜೆಯೂ ಆಗಿರುವುದರಿಂದ, ಅತ್ಯಂತ ಗೌರವಯುತವಾಗಿಯೇ ನಮ್ಮ ಮಗಳೂ ಮದುವೆಗೆಅಣಿಯಾಗುವ ಹಂತದಲ್ಲಿದ್ದಾಳೆಂದು ಹುಡುಗಿಯ ಪಾಲಕರು ಆ ವಿಷಯವನ್ನು ಬಂಧುಗಳಲ್ಲಿ ಹಂಚಿಕೊಂಡು, ಸಂಭ್ರಮಿಸುವುದಕ್ಕೆ ಇರುವ ಒಂದು ಕಾರಣ ಆರತಿ ಮಾಡುವುದು ಅನ್ನುತ್ತಾರೆ ಸಂಪ್ರದಾಯವನ್ನು ಗೌರವಿಸುವ ಕೆಲವರು.
ಹೆಣ್ಣು ಹುಡುಗಿಯಾಗಿರುವ ಹಂತ ದಾಟಿ ತರುಣಿಯಾಗುವ ಈ ಪ್ರಕ್ರಿಯೆಯನ್ನು ಅತ್ಯಂತ ಸಾಂಪ್ರದಾಯಿಕ ನೆಲೆಗಟ್ಟಿನಲ್ಲಿಗಮನಿಸುವ ಸಮಾಜ, ಹೆಣ್ಣನ್ನುಗೌರವಿಸಲಿ ಎಂಬ ಉದ್ದೇಶದಿಂದಲೇ ಈ ಆಚರಣೆಗಳನ್ನು ಮಾಡಲಾಗುತ್ತದೆ ಅನ್ನುವ ಮಾತನ್ನೂ ಅಲ್ಲಗಳೆಯಲಾಗುವುದಿಲ್ಲ. ಬಂಧುಬಳಗದವರು ಒಂದೆಡೆ ಸೇರಿ, ಮೈನೆರೆದ ಮಗುವಿಗೆ ಬೇಕುಬೇಕಾದ ತಿನಿಸುಗಳನ್ನು, ಉಡುಗೊರೆಗಳನ್ನು ನೀಡಿ, ಎಲ್ಲ ಬಗೆಯ ಸುರಕ್ಷತೆಯ ಭಾವವನ್ನು ಗಟ್ಟಿಗೊಳಿಸಿ, 'ನಿನ್ನೊಂದಿಗೆ ನಾವಿದ್ದೇವೆ, ಧೈರ್ಯಶಾಲಿಯಾಗಿ, ಜಾಣೆಯಾಗಿ ಬೆಳೆ, ಬದುಕು' ಎಂದು ಹಾರೈಸುವ ಕ್ಷಣಗಳೂ ಒಳ್ಳೆಯವೇ, ಸ್ವಾಗತಾರ್ಹವೇ. ಹಚ್ಚುವಅರಿಶಿನ, ಬದಲಾದ ಅಂದವನ್ನು ತೋರುವ ಕನ್ನಡಿ, ಅಮ್ಮನ ಅಪ್ಪುಗೆ, ಅಕ್ಕಂದಿರ ನಗುವಿನ ಹೊನಲು, ಅತ್ತೆಯಂದಿರ ತಮಾಷೆ ಬೆರೆತ ಪ್ರೀತಿಯ ನೋಟಗಳು, ಮೆಚ್ಚುಗೆ ಹೆಮ್ಮೆಯಿಂದ ತನ್ನ ಮಗಳನ್ನು ಮರೆಯಲ್ಲಿಯೇ ನೋಡುವ ಅಪ್ಪನ ಪ್ರೀತಿ ಇಂಥ ಮಾಧುರ್ಯದ ನೋಟಗಳು ಹೆಣ್ಣುಮಗುವಿನ ಒಡಲಲ್ಲಿ ತಾಯಾಗಬಲ್ಲ ಬೆರಗನ್ನು ಊರುತ್ತವಷ್ಟೇ ಅಲ್ಲ, ತಾನು ಬೆಳೆದಿದ್ದೇನೆ, ತನ್ನ ಜವಾಬ್ದಾರಿಗಳು ಬದಲಾಗುವ ಹಂತದಲ್ಲಿವೆ. ತರಲೆಯ ತುಂಟತನದ ಘಟ್ಟದಿಂದ,ತಾರುಣ್ಯದ, ಮಾಗಿದ ಹಂತಕ್ಕೆ ತಾನು ಕಾಲಿಡುತ್ತಿದ್ದೇನೆ ಎನ್ನುವ ಜವಾಬ್ದಾರಿಯನ್ನು ಕೂಡ ಮತ್ತೆ ಮತ್ತೆ ಮೆಲುಕು ಹಾಕುವಂಥ ಭಾವನೆಗಳನ್ನೂ ಆಕೆಯೊಳಗೆ ನೆಲೆಸುವಂತೆ ಮಾಡುತ್ತದೆ. ಆದರೆ ಬದಲಾದ ಕಾಲಮಾನದಲ್ಲಿ, ಆತಂಕವೇ ಹೆಚ್ಚು ನೆಲೆಯೂರಿರುವ ಪರಿಸರದಲ್ಲಿ, ಇಂಥ ಆಚರಣೆಗಳು ಮಗುವನ್ನು ಮುಜುಗರಕ್ಕೀಡು ಮಾಡದಂತೆ ಖಾಸಗಿಯಾಗಿ, ಕುಟುಂಬಕ್ಕಷ್ಟೇ ಅದನ್ನು ಸೀಮಿತಗೊಳಿಸಿಕೊಳ್ಳಬೇಕಾದ ಅಗತ್ಯವೂ ಇಲ್ಲಿಕಂಡುಬರುತ್ತದೆ.

ತಾಯ್ತಂದೆಯರು ಪೆಂಡಾಲು ಹಾಕಿಸಿ, ಕಾಗೆಬಳಗವನ್ನೆಲ್ಲಾ ಕಾಕಾ ಕರೆದು ಟಾಂಟಾಂ ಹೊಡೆಯುವ ಮೊದಲು ಮಗುವಿನ ಮನಸನ್ನು ಅರಿತು, ಅದರದ್ದೊಂದು ಅನಿಸಿಕೆಯನ್ನು ಕೇಳುವ ಕನಿಷ್ಟ ಸೌಜನ್ಯವನ್ನಾದರೂ ತೋರಿಸುವುದು ಒಳ್ಳೆಯದು ಅನಿಸುತ್ತದೆ. 'ಎಷ್ಟ್ ಜನಾ ಉಂಡ್ರು ಗೊತ್ತಾ?' ಅಂತ ಮೀಸೆ ತಿರುವುವ ಅಪ್ಪಂದಿರಿಗೆ ಬಹುಷಃ ಈ ಸೂಕ್ಷ್ಮತಿಳಿಯುವುದು ಕಷ್ಟವೇ. ತನ್ನದೇ ಓಣಿಯ ತನ್ನ ಜೊತೆ ನಿಷ್ಕಲ್ಮಶವಾಗಿ ಆಡುತ್ತಿದ್ದ, ಮಾತಾಡುತ್ತಿದ್ದ ಗಂಡುಮಕ್ಕಳು ಕೂಡ ತನ್ನನ್ನು ಕಂಡು ಒಂದು ರೀತಿಯಾಗಿ ನೋಡುವ ಅಂಶ ಯಾವ ಪುಟ್ಟಗೌರಿಗೂಹಿಡಿಸಲಿಕ್ಕಿಲ್ಲ. ಮನೆಯೊಳಗೆ ಮಾತಾಡಿಕೊಂಡು, ಅದರ ಬಗ್ಗೆ ಸಾಧ್ಯವಾದಷ್ಟೂ ಮಾಹಿತಿ ಕೊಟ್ಟು ಆಕೆ ತನ್ನನ್ನು ತಾನುಸಂಭಾಳಿಸಿಕೊಳ್ಳುವಷ್ಟು ಕನಿಷ್ಟ ಉಪಕಾರವನ್ನು ಪಾಲಕರು ಮಾಡುವುದು ಯೋಗ್ಯವಾದ ಕೆಲಸ. ಎಲ್ಲರೊಡನೆ ಬೆರೆತು ಆಡಿದರೂ, ಸಂದರ್ಭ ಬಂದರೆ ಕಮಲಿನಿಯಂತಹ ಹುಡುಗಿ ಕಠಿಣಳೂ ಆಗಿರಬೇಕು ಎಂಬ ಎಚ್ಚರಿಕೆಯ ಪಾಠವಷ್ಟೇ ಇಲ್ಲಿ ಮಗುವಿಗೆ ಮುಖ್ಯವಾಗಬೇಕಾಗಿರುವುದು ಈ ಹೊತ್ತಿನಅಗತ್ಯವೂ ಹೌದು, ಅನಿವಾರ್ಯತೆಯೂ ಹೌದು.
ಕಿರಿಕಿರಿಯ ನಡುವೆಯೂ ಕಾಳಜಿ ಇರಲಿ

1. ಸ್ರಾವದ ದಿನಗಳು ಶುರುವಾದ ಮೇಲೆ ಹೆಣ್ಣುಮಗುವೊಂದು ತನ್ನನ್ನು ತಾನು ದೈಹಿಕವಾಗಿ ಸ್ವಚ್ಛವಾಗಿಯೂ ಶುದ್ಧವಾಗಿಯೂ ಇಟ್ಟುಕೊಳ್ಳುವ, ಸುರಕ್ಷಿತ ಟಿಪ್ಸುಗಳನ್ನು, ಸ್ವಚ್ಛ ಸ್ರಾವದ ಬಟ್ಟೆ ಅಥವಾ ಪ್ಯಾಡುಗಳನ್ನು ಉಪಯೋಗಿಸುವ ಬಗ್ಗೆ ಶಿಕ್ಷಣ/ಮಾಹಿತಿ, ಆರೋಗ್ಯದ ಕಡೆಗೆ ನೀಡಬೇಕಾದ ಮಹತ್ವ, ಉಣ್ಣಬೇಕಾದ ಪೌಷ್ಠಿಕ ಆಹಾರಕ್ರಮ, ಉಣ್ಣದೇ ಬಿಡಬಹುದಾದ ಅನಗತ್ಯ ಜಂಕುಫುಡ್ಡು ಅಥವಾ ಕಸದಂಥ ಆಹಾರ, ಸಾಮಾಜಿಕ ವರ್ತನೆಗಳಲ್ಲಿ, ಮಾತು-ಕತೆಗಳಲ್ಲಿ ತಂದುಕೊಳ್ಳಬಹುದಾದ ಧನಾತ್ಮಕ ಬದಲಾವಣೆಗಳು, ಉತ್ಪತ್ತಿಯಾಗುವ ಹಾರ್ಮೋನುಗಳು ಮತ್ತು ಅವು ಉಂಟು ಮಾಡುವ ಮನೋದೈಹಿಕ ಬದಲಾವಣೆಗಳು, ಇವೆಲ್ಲ ಮತ್ತೂ ಇನ್ನೂ ಇದ್ದರೆ ಅವಿಷ್ಟೂ ವಿಷಯಗಳನ್ನು ಕಿಶೋರಿಯರ ಕಿವಿಗೆ ಆಪ್ತವಾಗಿ ಹಾಕುವ ಕೆಲಸವನ್ನು ಮನೆಯಲ್ಲೇ ಆರಂಭಿಸುವ ಅಮ್ಮನೂ, ಅಮ್ಮನ ಪಾತ್ರವನ್ನು ಶಾಲೆಯಲ್ಲಿ ನಿಭಾಯಿಸುವ ಟೀಚರುಗಳೂ ಮಾಡಬೇಕಾಗುತ್ತದೆ.

2. ಹೆಣ್ಣುಮಕ್ಕಳ ಸುದ್ದಿ ನಮಗೇಕೆ ಎನ್ನುವ ಉದಾಸೀನತೆಯನ್ನು ಕೊಡವಿ, ತಮ್ಮ ಮಿತಿಯಲ್ಲಿ ಮಗುವಿಗೆ ಸೂಕ್ಷ್ಮತೆಯನ್ನು ಕಲಿಸಲು ಅಪ್ಪಂದಿರೂ, ಅಣ್ಣತಮ್ಮಂದಿರೂ, ಮುಚ್ಚಟೆಯಾಗಿ ಮಮತೆಯ ಮಳೆ ಮಾತ್ರ ಸುರಿಸದೇ ತಮ್ಮ ಅನುಭವ, ಆತ್ಮೀಯತೆಗಳನ್ನು ಮೂಲವಾಗಿಟ್ಟುಕೊಂಡು ಅಜ್ಜ-ಅಜ್ಜಿಯರೂ ಮಹತ್ವದ, ಕೆಲಸೂಕ್ಷ್ಮ ವಿಷಯಗಳನ್ನು ಮನವರಿಕೆ ಮಾಡಿಕೊಡುವ ಹೊಣೆಗಾರಿಕೆಯ ಪಾತ್ರವಹಿಸಬೇಕಾಗುತ್ತದೆ. ಮಿಕ್ಕಂತೆ ಆಂಟಿ ಅಂಕಲ್ಲುಗಳು, ಅತ್ತೆಮಾವಂದಿರು,ಚಿಕ್ಕಪ್ಪ-ಚಿಕ್ಕಮ್ಮಂದಿರು,ಕೂಡುಕುಟುಂಬಗಳಾಗಿದ್ದರೆ ಈ ಎಲ್ಲರೂ, ತಮ್ಮ ಕುಟುಂಬದ ಯಾವುದೇ ಹೆಣ್ಣುಮಗುವೂ ತಮ್ಮ ಮನೆಯ ಹೆಣ್ಣುಮಗುವೇ ಎಂದು ಭಾವಿಸಿ, ವಾತ್ಸಲ್ಯದಿಂದ ನೋಡಲೇಬೇಕಾದ ನಂಬುಗೆಯನ್ನು ಗಳಿಸಿ ಉಳಿಸಿಕೊಂಡು ಹೋಗುವ ಜವಾಬ್ದಾರಿ ಹೆಚ್ಚಾಗಿದೆ. ನಂಬುಗೆಯ ಎಳೆಯನ್ನು ನಡುವಿಟ್ಟುಕೊಂಡಿರುವ ನೆರೆಯವರೂ ಸಹ ಹೆಣ್ಣು ಹಡೆದವರಿಗೆ ಹೊರೆಯಾಗದಂತೆ ಮತ್ತು ಇನ್ನೂ ಅನೇಕರು ಅವರವರ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸುವ ಹೊಣೆಗಾರಿಕೆ ಯಾವ ಕಾಲಕ್ಕೂ ಇದ್ದೇ ಇದೆ. ಈಗಿನ, ಇನ್ನು ಮುಂದಿನದಿನಗಳಲ್ಲಿಯಂತೂ ಅದು ಇನ್ನೂ ಹೆಚ್ಚಿನ ಅಗತ್ಯವಾಗಿ ತೋರುತ್ತಿದೆ.

ಋತುವು ಮತಿಯ ಕೆಡಿಸದಂತೆ!
ಮುಟ್ಟಾದರೂ ಮನೆಯಲ್ಲಿ ಕೂರುವ, ವಿಶ್ರಾಂತಿ ಪಡೆಯುವ ಅನುಕೂಲ ಮೊದಲಿನ ಹೆಣ್ಣುಮಕ್ಕಳ ಹಾಗೆ ಇಂದಿಲ್ಲ. ಎದ್ದು ಓಡುತ್ತಿರಲೇ ಬೇಕು. ರಜೆ ಪಡೆಯದೇ ತನ್ನ ಕಷ್ಟಗಳನ್ನು ಹೊತ್ತೇ, ಕಛೇರಿಯ ಕೆಲಸಗಳನ್ನೂ ಸಮರ್ಥವಾಗಿ ನಿಭಾಯಿಸಬಲ್ಲ ಹೆಣ್ಣುಮಗಳು ತನ್ನ ಮಗಳಿಗೆ ಹೇಳಿಕೊಡುವ ಈ ದಿನಗಳ ಬಗೆಗಿನ ಪಾಠ ಮಾತ್ರ ಮಹತ್ವದ್ದೇ. ಕೆಲವರಿಗೆ ಮನೆಯಲ್ಲಿದ್ದು ಆರಾಮಾಗಿ ಬೇಕುಬೇಕಾದ್ದನ್ನೆಲ್ಲ ಮಾಡಿಸಿಕೊಂಡು ಕಾಳಜಿ ಮಾಡಿಕೊಳ್ಳುವ ಅನುಕೂಲವಿದ್ದರೆ ಇನ್ನು ಕೆಲವರಿಗೆ ಆ ಸುಖ ದಕ್ಕುವುದೇ ಇಲ್ಲ. ಕ್ರೀಡೆ, ಪಂದ್ಯ, ಪರೀಕ್ಷೆ, ಪಾಠ ಮುಂತಾಗಿ ತೊಡಗಿಸಿಕೊಳ್ಳಬೇಕಾದ ಕೆಲಸಗಳು ಕೈಬೀಸಿ ಕರೆಯುತ್ತವಾದ್ದರಿಂದ ಬಾಲಕಿಯರು ಈ ಮುಟ್ಟಿನ ನೋವನ್ನು ಮೆಟ್ಟಿನಿಂತು, ಓಟ ಮುಂದುವರೆಸಲೇಬೇಕಾದ ಅನಿವಾರ್ಯತೆಯೂ ಇವೆ. ಓದುಮುಗಿಸುವ, ಉದ್ಯೋಗ ಹಿಡಿಯುವ, ಬದುಕು ರೂಪಿಸಿಕೊಳ್ಳುವ ಯಾವುದೇ ಬಗೆಯ ಸವಾಲನ್ನು ಧೈರ್ಯವಾಗಿ ಎದುರಿಸುವ ಛಾತಿ ಹುಡುಗಿಯರಲ್ಲಿದ್ದರೂ, ದೈಹಿಕವಾಗಿ ತಮ್ಮೊಳಗಾಗುತ್ತಿರುವ ಬದಲಾವಣೆಗಳನ್ನು ಗಮನಿಸಿಕೊಂಡೇ, ಜಾಗರೂಕತೆಯಿಂದ ಹೆಜ್ಜೆಯಿಡಬೇಕಾದ ಸವಾಲೂ ಅವರುಗಳ ಮುಂದಿದೆ.
ಬದಲಾಗುವ ಋತುಗಳ ಜಾದೂ ಬೆಳೆಯುವ ಹೆಣ್ಣುಮಗುವೊಂದರ ಮೇಲೆ ಮಾಡುವ ಪರಿಣಾಮಗಳು ಖಂಡಿತಅಮ್ಮಂದಿರ ಮತಿಯನ್ನು ಆಧರಿಸಿವೆ. ಋತುಮತಿಯಾಗುವ ಬಾಲೆಗೆ ಅಮ್ಮಂದಿರೇ ಬೆಳಕು ತೋರಬೇಕು. ಅವರ ಕಣ್ಣಿಗೆ ಕತ್ತಲು ಕವಿಯಿತೆಂದರೆ ಮತ್ತಾರೂ ಅವರಿಗೆ ಸಹಾಯ ಮಾಡಲಾರರು. ಬೆಳೆದು ದೊಡ್ಡವಳಾದ ಮೇಲೆ, ತಾಯಿಯಾಗಿಯೂ ದೈಹಿಕವಾಗಿ ಮಾರ್ಪಾಟು ಹೊಂದಲು ರಹದಾರಿಯಾಗಿರುವ ಈ ಮೈನೆರೆಯುವ ಪ್ರಕ್ರಿಯೆ ಹೆಣ್ಣುಮಗುವೊಂದರ ಎದೆಯರಳಿ, ಮೊಲೆ ಬಲಿತು, ಹೊಟ್ಟೆಯ ಪುಟ್ಟಗೂಡಿನಲ್ಲಿ ಗರ್ಭಕೋಶವು ಆರೋಗ್ಯಕರವಾಗಿ ಬೆಳೆಯುವ ಮಹತ್ವದಕೆಲಸಕ್ಕೆ ನಾಂದಿ ಹಾಡುತ್ತದೆ. ತನ್ನ ಶಾಲೆಯಲ್ಲಿ ಓದುವ ತನ್ನದೇ ವಾರಿಗೆಯ ಗೆಳತಿಯರಲ್ಲಿ ಹಠಾತ್ ಬದಲಾವಣೆಯನ್ನು ಅಚ್ಚರಿಯಿಂದಲೇ ಗಮನಿಸುವ ಬಾಲಕಿಗೆ ಅರಿಯದ ಕುತೂಹಲ, ಬೆರಗು ಎಲ್ಲ ಬಗೆಯ ಆತಂಕದ ಭಾವಗಳು ಆವರಿಸುತ್ತವೆ. ಶಿಕ್ಷಕಿಯರು ಬಿಡುವಿನ ಸಮಯದಲ್ಲಿ ಈ ಬಗ್ಗೆ ವಿದ್ಯಾರ್ಥಿನಿಯರಲ್ಲಿ ಅರ್ಥವಾಗುವ ರೀತಿಯಲ್ಲಿ ವಿವರಿಸಿ ಹೇಳುವುದರಿಂದಲೂ ಸಾಮಾನ್ಯವಾಗಿ ಮಕ್ಕಳನ್ನು ಕುತೂಹಲಕ್ಕೆ ಹಚ್ಚುವ, ಆ ಮೂಲಕ ಸಣ್ಣಗೆ ಬೆಚ್ಚುವ ಅಪಾಯದಿಂದ ದೂರ ಮಾಡಬಹುದು. ಶಾಲೆಗಳಲ್ಲಿ ವಿಚಾರವಂತಿಕೆಯ ಮೇಡಮ್ಮುಗಳು ಮುಟ್ಟಿನ ಈ ಸೂಕ್ಷ್ಮ ವಿಷಯವನ್ನು ಮುಟ್ಟುವ ಮನಸ್ಸು ಮಾಡಬೇಕಷ್ಟೇ! ಸಿನಿಮಾಗಳು, ಧಾರಾವಾಹಿಗಳು ಸಾಮಾಜಿಕವಾಗಿ, ಆರ್ಥಿಕವಾಗಿಆತ್ಮವಿಶ್ವಾಸವನ್ನು ಗಳಿಸಿ ನೆಲೆಯೂರಬೇಕಾದ ಹುಮ್ಮಸ್ಸನ್ನು ತುಂಬುವುದಕ್ಕೆ ಬದಲಾಗಿ, ನಮ್ಮ ಹೆಣ್ಣುಮಕ್ಕಳು ಕಾಲ ಪಕ್ವವಾಗುವುದಕ್ಕೂ ಮುನ್ನವೇ 'ಚೆಲುವಿನ ಚಿತ್ತಾರ' ಬರೆಯಲು ಧೈರ್ಯ, ಹುಂಬತನ ತೋರುವಷ್ಟು ದಾರಿತಪ್ಪಿಸುತ್ತಿರುವುದು ಆತಂಕಕ್ಕೆ ಕಾರಣವಾಗುವ ಅಂಶವಾಗಿದೆ. ಹೈಸ್ಕೂಲು ದಾಟುವ ಹಂತದಲ್ಲಿರುವಾಗಲೇ ಹೆಣ್ಣುಮಗುವೊಂದು ಮದುವೆಯ ಕನಸುಗಳನ್ನು ಹೆಣೆಯಲು ತೊಡಗಿಬಿಡುವಷ್ಟು ಧಾವಂತದ ಕ್ಷಣಗಳಿಗೆ ನಾವೇ ಕೊಡುಗೆ ನೀಡುತ್ತಿದ್ದೇವೆಯೇ ಎಂಬ ಪ್ರಶ್ನೆಯನ್ನು ಎಲ್ಲ ತಾಯ್ತಂದೆಯರೂ ಸಾವಧಾನವಾಗಿ ಕೂತು ಯೋಚಿಸಬೇಕಾಗಿದೆ.

ಇಲ್ಲಿ ಬೇಕಿರುವುದು ಕೇಳಿದ್ದನ್ನೆಲ್ಲ ಮಕ್ಕಳಿಗೆ ಕೊಡಿಸುವ, ಕೊಡುವ ಸ್ವಾತಂತ್ರ್ಯವಷ್ಟೇ ಅಲ್ಲ, ಕನಸುಗಳನ್ನು ಕಾಣುವ, ಈಡೇರಿಸಿಕೊಳ್ಳುವ ಕಾಲಮಾನದಲ್ಲಿ ಹೆಣ್ಣುಮಗುವೊಂದು ತೆಗೆದುಕೊಳ್ಳಬೇಕಿರುವ ನಿರ್ಣಯಗಳು, ವಿಚಾರಗಳು, ಮೈನೆರೆಯುವ ಮಗುವನ್ನಷ್ಟೇ ಅಲ್ಲ, ಆಕೆಯ ಪಾಲಕರು, ಸಮಾಜ, ಶಾಲೆ ಎಲ್ಲರ ಹೊಣೆಯೂ ಆಗಿದೆ. ಅದನ್ನು ಸರಿಯಾದ ರೀತಿಯಲ್ಲಿ ಗಮನಿಸಿ, ಗೈಡ್ ಮಾಡುವಮನಸ್ಸುಗಳ ಅವಶ್ಯಕತೆ ಖಂಡಿತ ಇದೆ.

-ಛಾಯಾ ಭಗವತಿ, ಬೆಂಗಳೂರು
chayaguru@gmail.com

(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು http://www.magzter.com/IN/Express-Network-Private-Limited/Sakhi/Women%27s-Interest/ಗೆ ಭೇಟಿನೀಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

42 ಎಸೆತ, 102 ರನ್: ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆಯೇ ಉಡೀಸ್‌ ಮಾಡಿದ ಶ್ರೇಯಸ್ ಅಯ್ಯರ್‌!