ನೋಡು... ಅವಳು ಎಷ್ಟು ದಪ್ಪಗಿದ್ದಾಳೆ, ಆಕೆಯ ಮೂಗು ಜಾರುಬಂಡಿ ರೀತಿ ಇದೆ. ಅವಳ ವಯ್ಯಾರ ನೋಡಿಯೇ ಕಚೇರಿಯಲ್ಲಿ ಬಾಸ್ ಆಕೆಗೆ ಪ್ರಮೋಷನ್ ಕೊಟ್ಟಿದ್ದಾರೆ... ಹೀಗೆ ಹೊಟ್ಟೆಕಿಚ್ಚಿನ ಕಾಮೆಂಟ್ ಮಾಡುವವರಲ್ಲಿ ಹೆಚ್ಚಿನವರು ಮಹಿಳೆಯರೇ ಅನ್ನುತ್ತದೆ ಸಂಶೋಧನೆಯೊಂದು. ಪುರುಷರಲ್ಲಿ ಈ ರೀತಿಯ ವರ್ತನೆ ಕಂಡುಬರುವುದಿಲ್ಲವೆಂದೇನೂ ಇಲ್ಲ. ಮಹಿಳೆಯರಿಗೆ ಹೋಲಿಸಿದರೆ ಪುರುಷರ ಪ್ರಮಾಣ ಕಡಿಮೆ ಎಂದಷ್ಟೇ ಹೇಳಬಹುದು.
ಗಂಡ ಹೆಂಡತಿಯ ಎದುರು ಬೇರೊಬ್ಬಳನ್ನು ಹೊಗಳಿದರೆ, ಸಮಾರಂಭಗಳಲ್ಲಿ ವಿಶೇಷವಾಗಿ ಅಲಂಕರಿಸಿಕೊಂಡ ಯುವತಿಯ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದರೆ, ಕಚೇರಿಯಲ್ಲಿ ಬಾಸ್ ಸಹೋದ್ಯೋಗಿಯೊಬ್ಬಳನ್ನು ಹೊಗಳಿದರೆ, ಅವಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಿದ್ದಾರೆಂದು ತಿಳಿದರೆ ಹೊಟ್ಟೆಯಲ್ಲಿ ಖಾರದ ಪುಡಿ ಕುಟ್ಟಿದಂತಾಗುತ್ತದೆ. ಹೊಟ್ಟೆಕಿಚ್ಚಿನವರು ಅಂಥವರ ಬಗ್ಗೆ ಲೂಸ್‌ಟಾಕ್ ಮಾಡುತ್ತಲೇ ಇರುತ್ತಾರೆ. ಆಕೆಗೇನಾದರೂ ಪ್ರಮೋಷನ್ ಸಿಕ್ಕಿದರಂತೂ ಮುಗಿದೇ ಹೋಯ್ತು.
ಎಲ್ಲದಕ್ಕೂ ಕೊಂಕು
ಇವರ ಹೊಟ್ಟೆಕಿಚ್ಚು ಕೇವಲ ಆಕೆಗಷ್ಟೇ ಸೀಮಿತವಾಗಿರುವುದಿಲ್ಲ. ಅದು ಅವಳ ಗಂಡ, ಮನೆ, ಮಕ್ಕಳವರೆಗೂ ಹೋಗುತ್ತದೆ. ಅವಳಿಗೆ ಮಕ್ಕಳನ್ನು ಸರಿಯಾಗಿ ಬೆಳೆಸಲು ಬರುವುದಿಲ್ಲ. ಅವಳ ಮಕ್ಕಳು ಸಂಸ್ಕಾರವಿಲ್ಲದವರಂತೆ ಬೆಳೆದುಬಿಟ್ಟಿದ್ದಾರೆ. ಮುಂದೊಂದು ದಿನ ಆ ಮಕ್ಕಳೇ ಇವಳಿಗೆ ಪಾಠ ಕಲಿಸುತ್ತಾರೆ. ಹೋಗಿ ಹೋಗಿ ಆ ಶಾಲೆಗೆ ಸೇರಿಸುವುದೇ. ಹೀಗೆ ಎಲ್ಲದಕ್ಕೂ ಕೊಂಕು.
ಏನು ಮಾಡಬೇಕು?
ಮೊದಲು ಕೀಳರಿಮೆ ಬಿಡಿ. ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ. ಆಕೆಯೊಬ್ಬಳೇ ಅಲ್ಲ. ನಾನೂ ಬೆಳೆಯಬಲ್ಲೆ. ಬೆಳೆದು ತೋರಿಸುತ್ತೇನೆ ಎಂಬ ದೃಢ ನಿರ್ಧಾರಕ್ಕೆ ಬನ್ನಿ.
ಇನ್ನೊಬ್ಬರ ಅಂತೆ-ಕಂತೆಗಳಿಗೆ ಕಿವಿಗೊಡಬೇಡಿ. ನಿಮ್ಮ ಪಾಡಿಗೆ ನೀವಿರಿ. ನಿಮ್ಮ ಜೀವನದ ಬಗ್ಗೆ ಚಿಂತಿಸಿ.
ಹೊಟ್ಟೆಕಿಚ್ಚು ಆ ಕ್ಷಣಕ್ಕಷ್ಟೇ ಸೀಮಿತವಾಗಿರಲಿ. ಇದು ನಿಮ್ಮ ಆರೋಗ್ಯಕ್ಕೂ ಒಳ್ಳೆಯದು.
ನಿಮ್ಮ ಸಹೋದ್ಯೋಗಿ ಉತ್ತಮ ಕೆಲಸ ಮಾಡಿದಾಗ ಒಮ್ಮೆ ಹೊಗಳಿ ನೋಡಿ. ಆಕೆಯೂ ನಿಮ್ಮ ಒಳ್ಳೆಯ ಕೆಲಸವನ್ನು ಹೊಗಳಬಹುದು. ಹೊಗಳದಿದ್ದರೆ ತಲೆಕೆಡಿಸಿಕೊಳ್ಳಬೇಡಿ.
ಇನ್ನೊಬ್ಬರ ಮಕ್ಕಳ ಬಗ್ಗೆ ಟೀಕೆ ಮಾಡುವುದನ್ನು ಬಿಟ್ಟು ಬೇರೆಯವರು ನಿಮ್ಮ ಮಕ್ಕಳ ಬಗ್ಗೆ ಹೆಮ್ಮೆಯಿಂದ ಮಾತನಾಡಿಕೊಳ್ಳುವ ಹಾಗೆ ಬೆಳೆಸಿ.
'ಕಿಚ್ಚು' ಅಂದರೆ ಸುಡುವುದು ಎಂದರ್ಥ. ಹಾಗಾಗಿ ನಮ್ಮನ್ನು ಸುಡುವ ಹೊಟ್ಟೆ'ಕಿಚ್ಚು' ಏಕೆ ಬೇಕು?
= ಶ್ರೀನಿವಾಸ್ ರಾವ್