ಕಾಫಿಯ ಸೊಗಡಿನ ಬಗ್ಗೆ ಹೇಳಿದಷ್ಟೂ ಕಡಿಮೆ ಬಿಡಿ. ಆದರೆ ಕಾಫಿಯನ್ನು ಪೇಯವಾಗಿ ಮಾತ್ರವಲ್ಲ, ಬೇರೆ ಉದ್ದೇಶಗಳಿಗೂ ಬಳಸಬಹುದು ಎನ್ನುವುದು ಗೊತ್ತೇ? ಹೆಚ್ಚೆಂದರೆ ಕಾಫಿ ಗಿಡಕ್ಕೆ ವಯಸ್ಸಾಗಿ ಅದನ್ನು ಕಿತ್ತು ಎಸೆದ ನಂತರ ಅದರ ಟೊಂಗೆ, ಬೇರಿನಿಂದ ಅಲಂಕಾರಿಕ ವಸ್ತು ತಯಾರಿಸುವುದನ್ನು ಕೇಳಿರಬಹುದು. ಆದರೆ, ಕಾಫಿ ಬೀಜ ಹಾಗೂ ಅದರ ಡಿಕಾಕ್ಷನ್‌ನಿಂದ ಅಲಂಕಾರಿಕ ವಸ್ತುಗಳನ್ನು ತಯಾರಿಸಬಹುದು ಎಂದರೆ ನಂಬುತ್ತೀರಾ?
ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ಡಬ್ಲ್ಯೂಸಿಪಿಸಿ (ವಿಮನ್ ಕಾಫಿ ಪ್ರಮೋಟಿವ್ ಕೌನ್ಸಿಲ್) ಸಂಘದ ಮಹಿಳೆಯರು ಈ ಕೆಲಸ ಮಾಡುತ್ತಿದ್ದಾರೆ ಎಂದಮೇಲೆ ನಂಬಲೇಬೇಕು.
ಕಾಫಿಯ ಗುಣಗಳು, ಉಪಯೋಗಗಳ ಬಗ್ಗೆ ಅರಿವು ಮೂಡಿಸುವುದು ಈ ಸಂಘದ ಪ್ರಮುಖ ಉದ್ದೇಶ. ಇತ್ತೀಚೆಗೆ ರಾಜಧಾನಿ ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿ ನಡೆದ ಎರಡು ದಿನಗಳ ಕಾಫಿ ಮೇಳದಲ್ಲಿ ಈ ಕಲಾಕೃತಿಗಳು ಗಮನ ಸೆಳೆದವು.
ಸಾಮಾನ್ಯವಾಗಿ ದೇವರಿಗೆ ಹಾಕುವ ಹಾರ ಎಂದಾಕ್ಷಣ ಹೂ ಬಿಟ್ಟರೆ ಮಾರುಕಟ್ಟೆಯಲ್ಲಿ ಸಿಗುವ ಅಲಂಕಾರಿಕ ಪ್ಲಾಸ್ಟಿಕ್ ಹೂವಿನ ಹಾರಗಳು ನೆನಪಾಗುತ್ತವೆ. ಅದೇ ರೀತಿ ಪೇಂಟಿಂಗ್ ಎಂದರೆ ಆಯಿಲ್ ಪೇಂಟಿಂಗ್‌ನಂತಹ ವಿವಿಧ ರೀತಿಯ ಪೇಂಟಿಂಗ್‌ಗಳು ನೆನಪಾಗುತ್ತವೆ. ಅಷ್ಟೇ ಅಲ್ಲ, ಅವುಗಳು ಹೆಚ್ಚು ದಿನ ಬಾಳಿಕೆ ಬರುತ್ತವೆ ಎಂಬ ನಂಬಿಕೆ ಪ್ರತಿಯೊಬ್ಬರದ್ದು. ಆದರೆ, ಈಗ ಕಾಫಿಯಿಂದಲೂ ಪೇಂಟಿಂಗ್ ಮಾಡಬಹುದು.
ಹೇಗಪ್ಪಾ ಎನ್ನುತ್ತೀರಾ? ಈ ಕಾಫಿ ಪೇಂಟಿಂಗ್ ಸ್ವಲ್ಪ ಡಿಫರೆಂಟ್. ಮಲೆನಾಡಿನ ಎಷ್ಟೋ ಮಂದಿಗೆ ಕಾಫಿಯ ಈ ಉಪಯೋಗಗಳ ಬಗ್ಗೆ ತಿಳಿದಿಲ್ಲ. ಹಾಗಿದ್ದರೆ ಈ ಕಾಫಿ ಪೇಂಟಿಂಗ್ ಹೇಗೆ ತಯಾರಿಸಲಾಗುತ್ತದೆ, ಇದು ಎಷ್ಟು ದಿನ ಇರುತ್ತದೆ ಎಂಬುದನ್ನು ನೋಡಿ.
ನಶಿಸುವುದಿಲ್ಲ
ಕಾಫಿ ಬೆಳೆಗಾರರ ಸಂಘದ ಸದಸ್ಯೆ ರೂಪಲತಾ ನೀಡಿರುವ ವಿವರಣೆಯಂತೆ, ಈ ಕಾಫಿ ಪೇಂಟಿಂಗ್ ಹಾಗೂ ಹಾರಗಳು ಯಾವುದೇ ಕಾರಣಕ್ಕೂ ಹಾಳಾಗುವುದಿಲ್ಲ. ಆದರೆ, ಅವುಗಳನ್ನು ಬಳಸುವವರು ಕಾಲಕಾಲಕ್ಕೆ ಸರಿಯಾಗಿ ಅದರ ಮೇಲೆ ಕೂರುವ ಕಸ ತೆಗೆದರೆ ಸಾಕು. ಅದೇ ರೀತಿ ನೀರಿನಲ್ಲಿ ತೊಳೆಯುವಂತಿಲ್ಲ. ಆಗ ಉತ್ತಮ ಬಾಳಿಕೆ ಬರುತ್ತದೆ.
ತಯಾರಿ ಹೇಗೆ?
ಈ ಪೇಂಟಿಂಗ್ ಹಾಗೂ ಹಾರ ಮಾಡುವುದು ಕಷ್ಟವೇನಲ್ಲ. ಅದು ಕೂಡ ಸುಲಭವೇ. ಕಾಫಿ ಕುಡಿಯಲು ಕಾಯಿಸುವಂತೆ ಕುದಿಸಿದ ಡಿಕಾಕ್ಷನ್ ಅಥವಾ ಕಾಫಿ ಪುಡಿ ಮತ್ತು ನೀರನ್ನು ಮಿಶ್ರಣ ಮಾಡಿ ಫಿಲ್ಟರ್‌ನಲ್ಲಿ ಹಾಕಿಡಬೇಕು. ಫಿಲ್ಟರ್ ಆದ ಮಿಶ್ರಣವನ್ನು ಪೇಂಟಿಂಗ್‌ಗೆ ಬಳಸುವುದು. ನಮಗೆ ಬೇಕಾದಂತೆ ಬ್ರಷ್‌ನಿಂದ ಪೇಂಟ್ ಮಾಡಬಹುದು. ಡಿಕಾಕ್ಷನ್ ಹೆಚ್ಚು ತೆಳುವಾಗಿದ್ದರೆ ಕಾಫಿಯ ನುಣ್ಣನೆ ಪುಡಿಯನ್ನು ಬಳಸಿಕೊಳ್ಳಬಹುದು. ಅದರ ಬಣ್ಣ ಸಾಮಾನ್ಯವಾಗಿರುತ್ತದೆ. ಆದರೆ, ರೋಬೋಸ್ಟಾ ಕಾಫಿಯನ್ನು ಬಳಸಿದರೆ ಹೆಚ್ಚು ಬಣ್ಣ ಇರುತ್ತದೆ.
ಈ ಮಿಶ್ರಣವನ್ನು ಬಳಸಿ ಸಾಮಾನ್ಯ ಪೇಪರ್ ಮೇಲೆ ಅಥವಾ ಬಟ್ಟೆ (ಕ್ಯಾನ್‌ವಾಸ್) ಮೇಲೆ ಚಿತ್ರ ಬಿಡಿಸಬಹುದು. ಬೇಕೆಂದಲ್ಲಿ ಬರೀ ಕಾಫಿಯ ಚಿತ್ರ ಬಿಡಿಸಬಹುದು. ಇಲ್ಲವಾದಲ್ಲಿ ಅದಕ್ಕೆ ಸಿಲ್ವರ್, ಗೋಲ್ಡ್ ಔಟ್‌ಲೈನ್ ಕೊಡಬಹುದು. ಕಾಪರ್ ಸಲ್ಫೇಟ್ ಸಹ ಮಿಶ್ರಣ ಮಾಡಬಹುದು. ಆಗ ಅದರ ಅಂದ ಹೆಚ್ಚುತ್ತದೆ. ಪೇಂಟಿಂಗ್ ನಂತರ ಅದನ್ನು ಒಣಗಿಸಿ ಫ್ರೇಮ್ ಹಾಕಿ ಇಡಬಹುದು ಎನ್ನುತ್ತಾರೆ ರೂಪಲತಾ.
ಹಾರ ಹೇಗೆ?
ಸಂಘದ ಮತ್ತೊಬ್ಬ ಸದಸ್ಯೆ ಸುಮತಿ ಬಸವರಾಜು, ಕಾಫಿ ಬೀಜ (ಇಡೀ ಬೀಜ ಇರಬೇಕು, ಬೇಳೆ ಮಾಡುವಂತಿಲ್ಲ) ವನ್ನು ಒಣಗಿಸಿ ಅದರ ಸಿಪ್ಪೆ ತೆಗೆಯಬೇಕು. ನಂತರ ಕಾಫಿಯ ಡಿಕಾಕ್ಷನ್(ಗಟ್ಟಿಯಾದ)ನಲ್ಲಿ ಅವುಗಳನ್ನು ಹಾಕಿ ಒಣಗಿಸಬೇಕು. ನಂತರ ಅವುಗಳಿಗೆ ವಾರ್ನಿಷ್ ಹಾಕಿ ನಮಗೆ ಬೇಕಾದ ಆಕಾರದಲ್ಲಿ ಪೋಣಿಸಬಹುದು. ಹಾಳಾಗದಂತೆ ಕೆಲ ರಾಸಾಯನಿಕ ಔಷಧ ಅಥವಾ ಪೌಡರ್ ಲೇಪಿಸಲಾಗುತ್ತದೆ. ಇವುಗಳನ್ನು ವಸ್ತುಪ್ರದರ್ಶನದಲ್ಲಿ ಪ್ರದರ್ಶಿಸಿದಾಗ ಅಪಾರ ಮೆಚ್ಚುಗೆ ಸಿಕ್ಕಿದೆ ಎನ್ನುತ್ತಾರೆ ಅವರು.
ಹೆಚ್ಚಿನ ಮಾಹಿತಿಗಾಗಿwww.womenscoffeeindia. ಸಂಪರ್ಕಿಸಿ.
-ಶಾಂತ ತಮ್ಮಯ್ಯ
ಚಿತ್ರ- ಪಿ.ಸುರೇಶ್