ಅದು ಪ್ರಾಜೆಕ್ಟ್ ಬಾಲಕೃಷ್ಣ!
ಬೆಂಗಳೂರಿನ ಆಯ್ದ 14 ಶಾಲೆಗಳಿಗೆ ವಾರಕ್ಕೆರಡು ಸಲ ನಂದಿನಿಯ ಹಾಲನ್ನು ವಿತರಿಸುವ ಯೋಜನೆ. ಹೀಗೆ ವಿತರಿಸುವುದು ನಂದಲಾಲಾ ಸೇವಾ ಸಮಿತಿ. 13 ವರ್ಷಗಳಿಂದ ಈ ಸೇವೆ ನಡೆಯುತ್ತಿದೆ. ಕಾಯಿಸಿದ ಹಾಲನ್ನು ಶಾಲೆಗಳಿಗೆ ಹಂಚುವ ಸಮಿತಿಯ ಕಾರ್ಯಕರ್ತರಲ್ಲಿ ಶಿಸ್ತಿದೆ. ಸುಮಾರು 2500ಕ್ಕೂ ಹೆಚ್ಚು ಮಕ್ಕಳು ಹಾಲುಂಡು ಖುಷಿ ಖುಷಿಯಲ್ಲಿದ್ದಾರೆ.
ಈ ಸಮಿತಿಗೀಗ 25 ವರ್ಷ ತುಂಬುತ್ತಿದೆ. ಬಡ ಮಕ್ಕಳಿಗೆ ವಿದ್ಯಾರ್ಥಿವೇತನ, 'ಕ್ಷಣ ಕ್ಷಣ' ಯೋಜನೆಯಡಿ ವಿಜಯನಗರದಲ್ಲಿ ಸಾಂಸ್ಕೃತಿಕ ಕೇಂದ್ರ ಹಾಗೂ ಪ್ಲೇ ಹೋಮ್, ವಾರಾಂತ್ಯದಲ್ಲಿ ಮಕ್ಕಳಿಗೆ ಸಂಗೀತ, ನೃತ್ಯ, ಸಂಗೀತ ಉಪಕರಣಗಳ ತರಬೇತಿಗಳು ಸಮಿತಿಯ ಹೆಸರನ್ನು ಉತ್ತುಂಗಕ್ಕೇರಿಸಿದವು. ಈ ಸಮಿತಿ ಕಣ್ತೆರೆದಿದ್ದು 1988ರಲ್ಲಾದರೂ, ಅದಕ್ಕೆ ಸಂಸ್ಥೆಯ ಕಳೆ ಬಂದಿದ್ದು 1990ರ ನವೆಂಬರ್‌ನಲ್ಲಿ. ಸಂಸ್ಥೆಯ ರೂವಾರಿ ಮತಿ ಒಳಿ ಆರ್. ಸರಸ್ವತಿ (ಶ್ರೀ ಅಕ್ಕ)ಯವರು ಕವಿ, ಲೇಖಕಿ, ಕಲಾವಿದೆಯೂ ಹೌದು. 'ಮತಿ ಒಳಿ' ನಾಮಧೇಯದಿಂದ ಬರೆದ ಇವರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿಗಳೂ ಸಿಕ್ಕಿವೆ. ಮೊದಲು ಚೆನ್ನೈನಲ್ಲಿ ಆರಂಭವಾದ ಈ ಸಮಿತಿ ಈಗ ಬೆಂಗಳೂರು, ಹೈದರಾಬಾದ್, ತಿರುವನಂತಪುರಂ ಹಾಗೂ ದೆಹಲಿಯಲ್ಲೂ ಶಾಖೆಗಳನ್ನು ತೆರೆದಿದೆ. <
= ಸಂಕೇತ್