ನಿತ್ಯವೂ ಏನನ್ನಾದರೂ ಕಲಿಯುತ್ತಿರುತ್ತೇವೆ. ಅದನ್ನು ಮನಗಂಡು ಅದಕ್ಕೊಂದು ಅರ್ಥ ಕಲ್ಪಿಸಿದರೆ ಪ್ರತಿಯೊಂದೂ ಜೀವನದ ಪಾಠವಿದ್ದಂತೆ. ಇಲ್ಲಿರುವ ಎರಡು ಕಥೆಗಳು ವೈರುಧ್ಯದ ನಡೆಗಳಿಗೆ ಕನ್ನಡಿಯಂತಿದೆ.
ನನ್ನ ಗೆಳತಿಯೊಬ್ಳು ಸಾಕಷ್ಟು ತುಂಟಿ, ಪೆದ್ದು ಪೆದ್ದಾಗಿ ಆಡ್ತಿರೋಳು. ಹುಡುಗರಿಗೇ ಅವಾಜ್ ಹಾಕೋಳು. ಅವಳ ಜತೆ ಓಡಾಡೋದಂದ್ರೆ ಮುಜುಗರ ಆಗ್ತಿತ್ತು. ಒಂದಿನ ಹೀಗೆ ಜತೆಯಾಗಿ ನಡಕೊಂಡು ಹೋಗ್ತಿದ್ವಿ. ಆಗ ಪುಟ್ಟ ನಾಯಿಮರಿಯೊಂದು ಕುಂಟುತ್ತಾ ಬರ್ತಿತ್ತು. ಅದರ ಕಾಲಿಗೆ ಪೆಟ್ಟಾಗಿತ್ತು. ಮುಖ ನಿಸ್ತೇಜವಾಗಿತ್ತು. ಬಳಲಿ ಹೋಗಿತ್ತದು.
ಇವಳು ಇದ್ದಕ್ಕಿದ್ದಾಗೆ ಪಕ್ಕದಲ್ಲೇ ಇದ್ದ ಅಂಗಡಿಗೆ ಹೋಗಿ, ಒಂದು ಬಿಸ್ಕೆಟ್ ಪ್ಯಾಕ್ ತಂದ್ಳು. ಎಲ್ಲರೂ ನೋಡ್ತಿದಾರೆ, ಏನ್ ಮಾಡೋಕ್ ಹೊರಟ್ಲಪ್ಪಾ ಇವಳು ಅಂತ ಸಿಡುಕೋಕ್ ಶುರುಮಾಡಿದ್ವಿ. ಆಕೆ ಬಿಸ್ಕೇಟ್ ಚಿಕ್ಕ ಚಿಕ್ಕ ತುಂಡು ಮಾಡಿ ನಾಯಿಮರಿಗೆ ತಿನ್ನಿಸೋಕೆ ಶುರುಮಾಡಿದ್ಳು. ಅಷ್ಟರಲ್ಲೇ ಇನ್ನೊಂದು ನಾಯಿ ಬಂತು. ಅವಳು ಅದಕ್ಕೆ ತಿನ್ನೋಕೆ ಬಿಡ್ದೆ ಹೊಡೆದು ಓಡಿಸೋಕೆ ಶುರುಮಾಡಿದ್ಳು. ನಾನು 'ಬಿಡೇ ತಿನ್ಲಿ. ಅದನ್ ಯಾಕ್ ಓಡಿಸ್ತೀಯಾ?' ಅಂದೆ.
ಅದಕ್ಕವಳು 'ಅದಕ್ಕಾದ್ರೆ ಕಾಲು ಸರಿ ಇದೆ. ಎಲ್ಲಾದ್ರೂ ಹೋಗಿ ಹುಡುಕ್ಕೊಂಡು ತಿನ್ನುತ್ತೆ. ಪಾಪ ಇದೇನ್ ಮಾಡ್ಬೇಕು?' ಅಂತ ಬಿಸ್ಕೆಟ್ ಪ್ಯಾಕ್ ಮುಗಿಯೋ ತನಕ ತಿನ್ನಿಸಿದ್ಲು. ಅವತ್ತಿಂದ ಅವಳ ಮೇಲೆ ಅಭಿಮಾನ ಬಂತು. ಅವಳ ಗೆಳತಿ ಆಗಿದ್ದಕ್ಕೆ ಹೆಮ್ಮೆ ಅನಿಸ್ತು.
ಎಸ್ಡಿಎಂ ಕಾಲೇಜಿನ ಅಂತಿಮ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ಶ್ವೇತಾ ಪ್ರಭು ಈ ಕಥೇನ ಹೇಳಿದ್ದು. ಕೇಳಿದ್ಮೇಲೆ ನಿಜಕ್ಕೂ ನಾಚಿಕೆ ಅನಿಸ್ತು. ಆಗಷ್ಟೇ ಕೈಕಾಲು ಸರಿಯಿದ್ದ ಒಬ್ಬ ವ್ಯಕ್ತಿಗೆ ದುಡ್ಡು ಕೊಟ್ಟಿದ್ದೆ. 'ರಾತ್ರಿ ಬಂದು ನೋಡು. ಇದೇ ಫುಟ್ಪಾತ್ ಮೇಲೆ ಕುಡಿದು ಬಿದ್ಕೊಂಡಿರ್ತಾರೆ' ಅಂದಾಗ ವಾಸ್ತವದ ಅರಿವಾಗಿತ್ತು. ಇನ್ಮುಂದೆ ಕೈ ಚಾಚಿದೋರ್ಗೆಲ್ಲ ದಾನಶೂರ ಆಗಬೇಕಾದ ಅಗತ್ಯ ಇಲ್ಲ ಎನಿಸಿತು.
-
ರಸ್ತೆಯಲ್ಲಿ ಒಂದಷ್ಟ್ ಹುಡುಗೀರು ಹರಟುತ್ತ ಬರ್ತಾ ಇದ್ರು. ಒಬ್ಬಳು ಬಹಳ ಜೋಶಲ್ಲಿ, 'ಅವನು ನನ್ನ ಫೇಸ್ಬುಕ್ಕಲ್ಲೇ ನೋಡಿದಾನಂತೆ. ಮಗಾ ಫುಲ್ ಫಿದಾ ಆಗ್ಬುಟ್ಟವ್ನೆ!' ಅಂತಿದ್ಲು.
ಸ್ವಲ್ಪ ಹಿಂದಿದ್ದ ಹುಡುಗಿ, 'ಮೊನ್ನೆ ನಂಗೂ ಸಖತ್ತಾಗಿದಿಯಾ, ಫುಲ್ ಕ್ರಷ್ ಆಗ್ಬಿಟ್ಟಿದೆ. ಲವ್ ಮಾಡ್ತಿಯಾ?' ಅಂದಿದ್ದ. 'ಮುಚ್ಕೊಂಡಿರೊ ಲೋಫರ್!' ಅಂತ ಬಯ್ದಿದ್ದೆ. ಈಗ ಈ ಅಮ್ಮಣ್ಣಿ ಹಿಂದೆ ಬಿದ್ದಿದಾನೆ. ಮುಂಚೆ ನನ್ನ ಫ್ರೆಂಡಿಗೂ ಹೀಗೇ ಮಾಡಿದ್ದನಂತೆ. ಅನುಭವಿಸ್ತಾಳೆ!' ಅಂತ ಜತೆಗಿದ್ದವಳಲ್ಲಿ ಹೇಳುತ್ತಿದ್ದಳು, ಮುಂದಿದ್ದವಳಿಗೆ ಕೇಳದಂತೆ! ಗೆಳತಿಯೊಬ್ಬಳು ಮೋಸ ಹೋಗುತ್ತಿದ್ದಾಳೆ ಎಂಬ ಅರಿವಿದ್ದರೂ ತಿಳಿಸದೆ ಆಡಿಕೊಂಡು ನಗುವುದು ಸಣ್ಣಬುದ್ಧಿಯೇ ಸರಿ.
ಕಲಿತ ಪಾಠ ಇತರರಿಗೂ ಹೇಳಬೇಕು. ಆಗಲೇ ಬದುಕಿಗೊಂದು ಅರ್ಥಬರುತ್ತದೆ. ಜೀವನ ಸುಂದರವಾಗಿರುತ್ತದೆ.
-ಮಂಜುನಾಥ್ ಎಲ್.ಕೆ.