ಉಜಿರೆಯಲ್ಲಿ ನಡೆದ ಐತಿಹಾಸಿಕ ದಾಖಲೆಯ ತುಳು ಸಮ್ಮೇಳನ ನೋಡಿದವರಿಗೆ ಅಲ್ಲಿದ್ದ ತುಳುನಾಡ ಸಂಸ್ಕೃತಿ ಸಂಪನ್ನವಾದ ಹಳೆ ಕಾಲದ ಗುತ್ತು ಮನೆಯ ಪ್ರತಿಕೃತಿ ನೆನಪಿನಿಂದ ಮಾಸದು. ಇ.ಚೆನ್ನಗಂಗಪ್ಪ ನಿರ್ದೇಶಿಸಿದ 'ಕರಿಮಲೆಯ ಕಗ್ಗತ್ತಲು' ಮತ್ತು 'ಚಿಕ್ಕಮಗಳೂರ ಚಿಕ್ಕಮಲ್ಲಿಗೆ' ಚಲನಚಿತ್ರಗಳನ್ನು ನೋಡಿದವರ ಮನದಲ್ಲಿನ್ನೂ ಈ ಮನೆಯ ಹಸೀ ನೆನಪು ಉಳಿದಿರಲೇಬೇಕು.
ಅದು ನಡ ಗುತ್ತಿನ ಮನೆ. ಬೆಳ್ತಂಗಡಿಯಿಂದ ಬಂಗಾಡಿ ಮಾರ್ಗದಲ್ಲಿ 5 ಕಿ.ಮೀ. ಸಾಗಿದಾಗ ಮಂಜೊಟ್ಟಿ ಪೇಟೆಯಿದೆ. ಅಲ್ಲಿಂದ ಜಮಲಾಬಾದ್ ಕೋಟೆಯ ಮಾರ್ಗದಲ್ಲಿ 3 ಕಿ.ಮೀ. ಕ್ರಮಿಸಿದರೆ ಶತಮಾನಗಳ ಇತಿಹಾಸವಿರುವ ನಡಗುತ್ತಿನ ವಿಶಾಲ ಮನೆ ಸಿಗುತ್ತದೆ.
ಮನೆ ಹಿಂಭಾಗದಲ್ಲಿ ಕೋಟೆಯನ್ನು ಹೊತ್ತ ಬೃಹದಾಕಾರದ ಗಡಾಯಿಕಲ್ಲಿನ ರಮ್ಯ ನೋಟ. ಒಂದು ಎಕರೆ ನೆಲವಿಡೀ ಹರಡಿಕೊಂಡಿರುವ ಈ ಬೃಹತ್ ಮನೆಯನ್ನು ವಂಶದ ಹಿರಿಯ ದೇವಪ್ಪ ಅಜ್ರಿಯವರ ಮಗ ಚಂದಯ್ಯ ಕಟ್ಟಿಸಿದ್ದು. ಈಗ ಅವರ 4ನೇ ತಲೆಮಾರು ವಾಸವಾಗಿದೆ.
ನಡಗುತ್ತಿನ ಮನೆಗೆ ಜೈನ ಧರ್ಮಿಯರಲ್ಲಿ ಅತ್ಯಂತ ಗೌರವದ ಸ್ಥಾನ ಇಂದಿಗೂ ಇದೆ. ಕರಾವಳಿಯ ಜೈನ ಸಮುದಾಯದಲ್ಲೇ ಅತ್ಯಂತ ಪ್ರತಿಷ್ಠೆಯ ಮನೆತನ. ಗ್ರಾಮದ ವಿವಾದಗಳನ್ನು ಗುತ್ತಿನ ಮನೆಯ ಚಾವಡಿಯಲ್ಲೇ ಇತ್ಯರ್ಥ ಮಾಡುತ್ತಿದ್ದರು. ಈ ಮನೆ ಮಿನಿ ನ್ಯಾಯಾಲಯವೇ ಆಗಿತ್ತು.
ಮನೆಯ ವಿಶಾಲ ಚಾವಡಿಯಲ್ಲಿ ಕಲಾತ್ಮಕ ಕೆತ್ತನೆಯ ನಾಲ್ಕು ಬೋದಿಗೆ ಕಂಬಗಳಿವೆ. ಅದರ ಬುಡದಲ್ಲಿರುವ ಬಾಜಿರ ಹಲಗೆಯಲ್ಲಿ ಬಂದವರು ಕೂಡುತ್ತಿದ್ದರು. ಮನೆ ಜಗಲಿಯಲಿ ಸರಳವಾದ ಇನ್ನೂ ಆರು ಕಂಬಗಳಿವೆ. ಆತ್ಮರಕ್ಷಣೆಗಾಗಿ ಬ್ರಿಟಿಷ್ ಸರ್ಕಾರ ನೀಡಿದ್ದ ಡಬಲ್ ಬ್ಯಾರೆಲ್ ಬಂದೂಕು ಇಂದಿಗೂ ಅಲ್ಲಿದೆ.
ಚಂದಯ್ಯ ಅಜ್ರಿಯವರು ಕಟ್ಟಿಸಿದ ಈ ಬೃಹತ್ ಮನೆಯನ್ನು ಒಂದಿಷ್ಟೂ ಮುಕ್ಕಾಗದಂತೆ ರಕ್ಷಿಸಿದ್ದಾರೆ ಧನಂಜಯ ಅಜ್ರಿ. ಕೆಂಪು ಕಲ್ಲಿನಿಂದ ಗೋಡೆ ಕಟ್ಟಿ, ಬೆಲ್ಲ ಮತ್ತು ಸುಣ್ಣದ ಗಾರೆ ನೀಡಿದ್ದರು. ಹೊರಗಿನಿಂದ ನೋಡಿದಾಗ ಎರಡೇ ಅಂತಸ್ತು ಕಾಣಿಸಿದರೂ ಒಳ ಹೊಕ್ಕು ಉಪ್ಪರಿಗೆ ಏರಿದರೆ ಮೇಲುಪ್ಪರಿಗೆಯೂ ಇದೆ.
ಲೆಕ್ಕ ಹಾಕಿದರೆ 25ಕ್ಕೂ ಹೆಚ್ಚು ಕೋಣೆಗಳಿವೆ. ಹಲಸು, ಹೆಬ್ಬಲಸು, ಸಾಗುವಾನಿ ಮರಗಳ ದಪ್ಪ ಗಾತ್ರದ ತೊಲೆಗಳನ್ನು ಬಳಸಲಾಗಿದೆ. ಮನೆ ಹಿಂಭಾಗದಲ್ಲಿ ಅಂದು 150 ಮಂದಿ ಒಮ್ಮೆಲೇ ಭೋಜನಕ್ಕೆ ಕೂಡುತ್ತಿದ್ದ ವಿಸ್ತಾರವಾದ ಕೊಠಡಿಯಿತ್ತು. ಈಗಲೂ ಅದು ಇದೆ.
ಚಂದಯ್ಯ ಅಜ್ರಿ ಮೂರು ಅಡುಗೆ ಕೋಣೆ ಕಟ್ಟಿಸಿದ್ದರು. ಒಂದರಲ್ಲಿ ಜೈನ ಯತಿಗಳಿಗೆ ಮಾತ್ರ ಅಡುಗೆ, ಇನ್ನೆರಡರಲ್ಲಿ ಬೇಸಿಗೆಗೊಂದು ಮಳೆಗಾಲಕ್ಕೊಂದು. ಬೃಹದಾಕೃತಿಯ ಮೂರು ಕಡೆಯುವ ಕಲ್ಲುಗಳನ್ನು ಮಿಸುಕಾಡಿಸುವವರೂ ಇಂದು ಇಲ್ಲ. ದೇವಾಲಯಗಳು ಮತ್ತು ಊರಿನ ಬಡವರ ಸಮಾರಂಭಗಳ ಬಳಕೆಗೆ ಉಚಿತವಾಗಿ ಕೊಡುತ್ತಿದ್ದ ತಾಮ್ರ ಹಿತ್ತಾಳೆಯ ಭಾರಿ ಪಾತ್ರೆಗಳ ರಾಶಿಯೇ ಒಂದು ಸಾವಿರ ಜನಕ್ಕೆ ಅಡುಗೆಗೆ ಸಾಲುವಷ್ಟಿದೆ. ಹಾಗೆಯೇ ಅಷ್ಟಮಂಗಲ ಪೂಜಾದಿ ಧಾರ್ಮಿಕ ವಿಧಿಗಳಿಗೆ ಬೇಕಾಗುವ ಆರತಿಗಳು, ದೀಪಗಳು, ಹರಿವಾಣಗಳು ಮುಂತಾದ ಪರಿಕರಗಳ ದೊಡ್ಡ ದರ್ಶನ ಇಲ್ಲಿ ಸಿಗುತ್ತವೆ.
ಉಪ್ಪರಿಗೆ ಏರಿದರೆ ಹಿಂದಿನ ಕಾಲದಲ್ಲಿ ನಿತ್ಯ ಬಳಸುತ್ತಿದ್ದ ಮರದ ಮಣ್ಣಿನ ಸಲಕರಣೆಗಳನ್ನು ಧನಂಜಯ ಅಜ್ರಿ ಒಪ್ಪವಾಗಿ ಶೇಖರಿಸಿಟ್ಟಿದ್ದಾರೆ. ಆ ಕಾಲದಲ್ಲಿ ಪ್ರತಿದಿನ ರಾತ್ರಿ ಬೀಡಿನ ಸುತ್ತ ಪಹರೆ ಕಾಯಬೇಕಿತ್ತು. ಪಾಳಿಯಲ್ಲಿ ಪಹರೆ ಕಾಯಬೇಕಿತ್ತು. ಇದಕ್ಕಾಗಿ ಊರಿನ ಒಂದು ಮನೆಯವರು ರೋಂದುಗೋಲು ಎಂಬ ವಿಶಿಷ್ಟ ದೊಣ್ಣೆ ಕೈಯಲ್ಲಿ ಹಿಡಿದು ಪಹರೆ ಕಾಯುತ್ತಿದ್ದರು. ಈಗಲೂ ಅದು ಇಲ್ಲಿದೆ. ಆತ್ಮರಕ್ಷಣೆಗೆ ಖಡ್ಗಗಳನ್ನು ಬಳಸುತ್ತಿದ್ದರು. ಈಗಲೂ ಇಲ್ಲಿವೆ.
ಬಾಗಿಲು ಇಲ್ಲದ ಎರಡು ದ್ವಾರಗಳು ಕಮಾನಿನಂತೆ ಇವೆ. ಉಳಿದ ದ್ವಾರಗಳಿಗೆ ವಿಶಿಷ್ಟ ಕೆತ್ತನೆಯ ಚೌಕಟ್ಟುಗಳು ಬಾಗಿಲುಗಳಿವೆ. ಮುಚ್ಚಿದರೆ ಕಿಟಕಿಗೆ ಬಾಗಿಲು ತೆರೆದು ಬಿಡಿಸಿದರೆ ಅದು ಮಲಗುವ ಮಂಚವಾಗುತ್ತದೆ. ಹಳೆಯ ಕಪಾಟುಗಳ ನೋಟವೇ ಪ್ರತ್ಯೇಕ. ಇನ್ನೊಂದೆಡೆ ಕಪಾಟೆಂದೇ ಭ್ರಮಿಸಿದರೆ ಅದು ಕಪಾಟಲ್ಲ. ಒಡವೆ ವಸ್ತುಗಳನ್ನು ಸುರಕ್ಷಿತವಾಗಿಡುವ ರಹಸ್ಯ ಕೋಣೆಯ ಬಾಗಿಲು. ಹೀಗೆ ನಡ ಗುತ್ತು ಮನೆಯ ಒಳಗೆ ಹೊಕ್ಕರೆ ಹೊರಗೆ ಬರಲು ಮನಸ್ಸೇ ಬಾರದು.
- ಪ. ರಾಮಕೃಷ್ಣ ಶಾಸ್ತ್ರಿ