ಇಪ್ಪತ್ತೊಂಬತ್ತು ಮುಗಿಯುತ್ತಿದ್ದಂತೆ ಕಾಡುವ ಆತಂಕ ಒಂದೆರಡಲ್ಲ. ಮೂರು ದಶಕದ ಪಯಣ ಕಳೆದು ಮುಂದಿನ ಮೂರು ದಶಕದ ಖಂಡಕ್ಕೆ ಕಾಲಿಡುವ ಸಂಕ್ರಮಣ ಕಾಲ. ಇಲ್ಲಿ ಎಳೆತನದ ಹುಚ್ಚಾಟವೂ ಇಲ್ಲ, ಇಪ್ಪತ್ತರ ಗೊಂದಲವೂ ಇಲ್ಲ. ಜಾರಿದರೆ ಮೇಲೇಳುವುದು ಕಷ್ಟ ಅನ್ನುವ ಎಚ್ಚರ! ಸೋತಾಗ ಅನುಭವವೇ ಗೆಲ್ಲಿಸುತ್ತದೆ ಎನ್ನುವ ಧೈರ್ಯ. ಎಲ್ಲವನ್ನೂ ಬಳಸಿಕೊಂಡು ಮುನ್ನಡೆದರೆ ಮೂವತ್ತು ಮಹತ್ತರ ಘಟ್ಟ...
ಈ ವಯಸ್ಸಲ್ಲಿ ನನ್ನದೆಲ್ಲ ಮುಗಿದಿತ್ತು. 30ನೇ ವಯಸ್ಸಿಗೆ 3 ಮಕ್ಕಳಾಗಿದ್ದವು. ಮೊನ್ನೆ ಹೆಣ್ಣು ನೋಡೋಕೆ ಬಂದ ಹುಡುಗನನ್ನು ನಿರಾಕರಿಸಿದ್ದಕ್ಕೆ ಅಮ್ಮ ಗೊಣಗಾಟ ಶುರುಮಾಡಿದ್ದಳು. ಎಲ್ಲ ನೀವೇ ಮಾಡಿದ್ದು, ಅವಳಿಗೆ ಇಷ್ಟವಾಗುವ ಹುಡುಗನನ್ನೇ ಮದುವೆ ಆಗಲಿ ಎಂದು ಸ್ವಾತಂತ್ರ್ಯ ಕೊಟ್ಟದ್ದು ನೀವೇ... ಅಮ್ಮ ತನ್ನೆಲ್ಲ ಅಸಮಾಧಾನಗಳನ್ನು ಅಪ್ಪನ ಮೇಲೆ ಪ್ರಯೋಗಿಸುತ್ತಿದ್ದಳು. ಇವಳ ವಯಸ್ಸಿನ... ಯಾಕೆ ಇವಳಿಗಿಂತ ಚಿಕ್ಕ ಚಿಕ್ಕ ವಯಸ್ಸಿನ ಮಕ್ಕಳಿಗೆಲ್ಲರಿಗೂ ಮದುವೆ ಆಗಿ ಎರಡೆರಡು ಮಕ್ಕಳಾಯ್ತು. ಇವಳ ಬೆನ್ನ ಹಿಂದೆಯೇ ಅವಳಿಲ್ವಾ? ಅವಳಿಗೂ ಆಯ್ತು ಮದುವೆ ವಯಸ್ಸು... ಅವಳಿಗೂ ಮದುವೆ ಮಾಡುವುದು ಬೇಡವಾ? ಅಮ್ಮನ ಫೈರಿಂಗ್ ಮುಂದುವರಿದಿತ್ತು. ನಾವೆಲ್ಲ ಮೌನದ ಮೊರೆ ಹೋಗಿದ್ದೆವು.
ಸ್ಟೇಟಸ್- ಸಿಂಗಲ್
ವಯಸ್ಸು 30! ಹೆಣ್ಮಕ್ಕಳ ಪಾಲಿಗೆ ಈ 30ನೇ ವಯಸ್ಸು ಮಹತ್ತರವಾದುದು. ಸಾಧಾರಣವಾಗಿ 13ರ ಹರೆಯದಲ್ಲಿ ದೊಡ್ಡವಳಾಗುವ ಮೂಲಕ ಪ್ರಬುದ್ಧತೆಗೆ ಕಾಲಿಡುವ ಹೆಣ್ಣು, 30ರ ಹರೆಯದಲ್ಲಿ ಪ್ರಬುದ್ಧತೆಯ ಇನ್ನೊಂದು ಮಜಲನ್ನು ದಾಟುತ್ತಾಳೆ. ಮೂವತ್ತರ ತಳಮಳಗಳು ಶುರುವಾಗುವುದು ಕೂಡ ಇಲ್ಲಿಯೇ. ಮೂವತ್ತರ ಹರೆಯದಲ್ಲಿ ಸಿಂಗಲ್ ಆಗಿರುವ ಹೆಣ್ಣು ಮತ್ತು ಸಂಸಾರಸ್ಥೆಯ ಅನುಭವಗಳು ಬೇರೆ ಬೇರೆಯೇ ಆಗಿರುತ್ತವೆ. ಅದೇ ವೇಳೆ ನೌಕರಿಯಲ್ಲಿರುವ ಹಾಗೂ ನೌಕರಿ ಇಲ್ಲದೇ ಇರುವ ಹೆಣ್ಣಿನ ಅನುಭವ ಇಲ್ಲಿಯೂ ಭಿನ್ನವಾಗಿರುತ್ತದೆ. 'ನೀವ್ಯಾಕೆ ಇನ್ನೂ ಮದುವೆ ಆಗಿಲ್ಲ?' ಎಂದು ಯಾರೂ ನೇರ ಪ್ರಶ್ನೆ ಕೇಳದಿದ್ದರೂ, ಮದುವೆ ಯಾವಾಗ? ಅನ್ನೋ ಪ್ರಶ್ನೆಯಂತೂ ಪದೇಪದೆ ಕಿವಿಗೆ ಬೀಳುತ್ತಿರುತ್ತದೆ. ನಗರದಲ್ಲಿನ ಹೆಣ್ಣು ಮಕ್ಕಳಿಗೂ, ಹಳ್ಳಿಯಲ್ಲಿರುವ ಹೆಣ್ಣು ಮಕ್ಕಳಿಗೂ 30ರ ತಲ್ಲಣ ಬೇರೆ ಬೇರೆಯಾಗಿರುವುದಿಲ್ಲ. ಅದರಲ್ಲೂ ಹಳ್ಳಿಗಳಲ್ಲಿ 30 ವರ್ಷವಾದರೂ ಮದುವೆ ಆಗಿಲ್ಲ ಎಂಬುದು ದೊಡ್ಡ ವಿಷಯವೇ. ಆದಾಗ್ಯೂ, ಮೂವತ್ತರ ಹರೆಯದಲ್ಲಿ ಹೆಣ್ಣೊಬ್ಬಳು ಅನುಭವಿಸುವ ಮಾನಸಿಕ ಅನುಭವಗಳಿವೆಯಲ್ಲಾ... ಅವು ಪದಗಳಿಗೆ ನಿಲುಕದ್ದು.
ವಾರಿಗೆಯವರಿಗೆಲ್ಲ ಮದುವೆಯಾಗಿ ಅವರ ಮಕ್ಕಳು ಶಾಲೆಗೆ ಹೋಗಲು ತೊಡಗಿದ್ದಾರೆ. ಫೇಸ್ಬುಕ್ನಲ್ಲಿ ಮಕ್ಕಳದ್ದೇ ಪ್ರೊಫೈಲ್ ಫೋಟೊ. Blessed with bundle of joy...its baby boy ಎಂಬ ಗೆಳತಿಯ ಸ್ಟೇಟಸ್ಗೆ ಲೈಕ್ ಮಾಡಿ ಕಂಗ್ರಾಟ್ಸ್ ಡಿಯರ್ ಎಂದು ಕಾಮೆಂಟ್ ಮಾಡಿ ಮುಂದೆ ಸಾಗಿದರೂ, ಮನಸ್ಸು ಕ್ಷಣ ಮಾತ್ರಕ್ಕೆ ತನ್ನ ಬಗ್ಗೆಯೇ ಚಿಂತಿಸತೊಡಗುತ್ತದೆ.
30 ಪ್ಲಸ್ ಮತ್ತು ಮದುವೆ
ಮ್ಯಾಟ್ರಿಮೋನಿಯಲ್ ವೆಬ್ಸೈಟ್ನಲ್ಲಿ ಇಂಟರೆಸ್ಟೆಡ್ ಎಂದು ಸಂದೇಶ ಕಳುಹಿಸಿ ಪ್ರೊಫೈಲ್ಗಳನ್ನು ನೋಡುವಾಗ ಮನಸ್ಸಿನಲ್ಲಿ ಭಾವಿ ವರನನ್ನು ಹುಡುಕುವ ಚಿಂತೆ. ಆಮೇಲೆ ಮನಸ್ಸಲ್ಲೇ ರೈಟ್ ಕ್ಲಿಕ್ ಹೊಡೆದು ರೀಫ್ರೆಶ್ ಮಾಡಿ ಮುಂದಿನ ಪ್ರೊಫೈಲ್ಗೆ ಜಿಗಿಯುತ್ತದೆ. ಸಾಲು ಸಾಲಾಗಿ ಬರುವ ಪ್ರೊಪೋಸಲ್ಗಳು... ಅದೇ ಉಪ್ಪಿಟ್ಟು, ಟೀ ಟ್ರೇ ಹಿಡಿದು ಭಾವಿ ವರನ ಮುಂದೆ ಪೋಸ್ ಕೊಟ್ಟು ಸಾಕಾಯ್ತು ಮಾರಾಯ್ತಿ ಎಂದು ಅವಳು ಹೇಳುವಾಗ ಅವಳ ಮುಖದಲ್ಲಿ ವಿಷಾದದ ಗೆರೆ ಇತ್ತು. ಎಲ್ಲದಕ್ಕೂ ಕಂಕಣ ಭಾಗ್ಯ ಕೂಡಿ ಬರಬೇಕು. You will get better one Don't worry ಎಂದು ಆಕೆಯನ್ನು ಸಮಾಧಾನಿಸಿದ್ದೆ. ಊರಿಗೆ ಹೋದ್ರೆ ಎಲ್ಲರೂ ನನ್ನ ಮದುವೆ ಬಗ್ಗೆಯೇ ಮಾತಾಡ್ತಾರೆ. ನನ್ನ ಕಸಿನ್ಗಳೆಲ್ಲ ಕಲಿಯದೇ ಇದ್ರೂ ಮದುವೆಯಾಗಿ ಸಂಸಾರಸ್ಥೆಯರಾದ್ರು. ಅವರ ಮಕ್ಕಳು ಆಂಟಿ ಎಂದು ನನ್ನನ್ನು ಕರೆಯುವಾಗ ಒಂಥರಾ ಸಂಕೋಚ. ಆದರೆ ಇಲ್ಲಿ ಆ ಕಿರಿಕಿರಿ ಇಲ್ಲ, ನಾವಾಯ್ತು ನಮ್ಮ ಕೆಲಸ ಆಯ್ತು. ಇಷ್ಟೆಲ್ಲಾ ಬ್ಯುಸಿ ಇದ್ದರೂ ಕೆಲವೊಮ್ಮೆ, ನನಗೆ ಸಾಂತ್ವನ ನೀಡಲು, ಆಸರೆಯಾಗಲು ಒಬ್ಬ ಗೆಳೆಯ ಅಲ್ಲ ಬಾಳಸಂಗಾತಿ ಬೇಕು ಎಂದು ಅನಿಸುತ್ತದೆ. ನನ್ನ ಭಾವನೆಗಳನ್ನು ಹಂಚಿಕೊಳ್ಳೋಕೆ, ನಿನ್ನ ಜತೆ ನಾನಿದ್ದೀನಿ ಎಂದು ಧೈರ್ಯ ತುಂಬಲು ಒಬ್ಬ ಬೇಕೇಬೇಕು ಎಂದು ಹೇಳುವಾಗ ಅವಳ ಕಣ್ಣಲ್ಲಿ ನೀರಿತ್ತು. ಇಷ್ಟು ವರ್ಷ ಕಾದು ಕುಳಿತಿದ್ದಕ್ಕೆ ಒಳ್ಳೆಯ ಬಾಳಸಂಗಾತಿ ಸಿಕ್ಕೇ ಸಿಗುತ್ತಾನೆ ಎಂಬ ಡೈಲಾಗ್ ಹೊಡೆದು ಸುಮ್ಮನಾದಾಗ, ಕ್ಯಾಲೆಂಡರ್ನ ಹಾಳೆಯೊಂದಿಗೆ ಆಕೆಯ ವಯಸ್ಸು ಹೆಜ್ಜೆ ಹಾಕುತ್ತಾ ಹೋಗಿರುತ್ತದೆ. ಇತ್ತ ಚಿಕ್ಕ ವಯಸ್ಸಿನಲ್ಲಿ ಮದುವೆಯಾಗಿ 30ರ ಹರೆಯಕ್ಕೆ ಅಮ್ಮನಾಗಿರುವ ಹೆಣ್ಣು ಮಕ್ಕಳ ಕತೆ ಬೇರೆಯೇ ಆಗಿರುತ್ತದೆ. ಮನೆ, ಸಂಸಾರ, ಕೆಲಸ ಎಲ್ಲವನ್ನೂ ಸರಿದೂಗಿಸಿಕೊಂಡು ಜವಾಬ್ದಾರಿಯುತ ಮಹಿಳೆಯಾಗಿ ಆಕೆ ಬೆಳೆದಿರುತ್ತಾಳೆ. ತನ್ನ ವಾರಿಗೆಯವರೇ ಆಗಿದ್ದರೂ, ಮದುವೆಯಾದವಳು ಎಂದ ಮಾತ್ರಕ್ಕೆ ಆಕೆ ಅಲ್ಲಿ 'ಹಿರಿಯಕ್ಕ'ನ ಮನ್ನಣೆಗೂ ಪಾತ್ರಳಾಗುತ್ತಾಳೆ.
ಹ್ಯಾಪಿ ಸಿಂಗಲ್ಸ್ ಅಂದ್ರೆ ನಾವೇ...
ಪಿ.ಜಿ.ಯ ಟೆರೇಸ್ ಮೇಲೆ ಸಂಜೆ ಹೊತ್ತು ಕಾಫಿ ಮಗ್ ಹಿಡಿದು ಹರಟುವಾಗ, Yes I am single and happy. ಸಂಬಂಧಗಳ ಜಂಜಾಟವೇ ಬೇಡ. ಒಬ್ಬಂಟಿಯಾಗಿದ್ದರೂ ಖುಷಿಯಾಗಿದ್ದೀನಿ. ಯಾಕೆ ಬೇಕು ಈ ಕಮಿಟ್ಮೆಂಟ್? ಊರು ಬಿಟ್ಟು ಈ ಮಾಯಾನಗರಿ ಸೇರುವಾಗ ಲಗ್ಗೇಜ್ಗಳ ಜತೆ ಕನಸನ್ನೂ ತುಂಬಿಕೊಂಡು ಬಂದಿದ್ದೆ. ಮೊದಲು ನನ್ನ ಕಾಲ ಮೇಲೆ ನಿಲ್ಲಬೇಕು ಆಮೇಲೆ ಮದುವೆ. ಮದುವೆ ಆದ ಮೇಲೆ ಇಷ್ಟೊಂದು ಸ್ವಾತಂತ್ರ್ಯ ಸಿಗುತ್ತದೆ ಎಂದು ಯಾವನಿಗೊತ್ತು? ಸೋ, ಲೈಫ್ ಎಂಜಾಯ್ ಮಾಡ್ತಾ ಇದ್ದೀನಿ. ನಾಳೆ ಹೇಗಿರುತ್ತೋ ಗೊತ್ತಿಲ್ಲ... ಈ ಕ್ಷಣವನ್ನು ಅನುಭವಿಸಬೇಕು... ನಾನಿನ್ನೂ ಮಾತು ಮುಗಿಸಿರಲಿಲ್ಲ...
ಆದ್ರೆ 30ರ ನಂತರ ದೇಹದಲ್ಲಾಗುವ ಬದಲಾವಣೆಗೆ ಏನು ಮಾಡೋದು? ಇದೆಯಲ್ಲಾ, ಏಜ್ ಮಿರಾಕಲ್ ಕ್ರೀಮ್, ಸ್ಕಿನ್ ಟೈಟನಿಂಗ್ ಮಾಸ್ಕ್...
ಏನು ಬೇಕೋ ಅದೆಲ್ಲ ಎಂದು ಹೇಳುತ್ತಾ ಎಲ್ಲರೂ ಸೇರಿ ನಕ್ಕಿದ್ದೆವು. ಟೆರೇಸ್ನಿಂದ ಇಳಿದು ಕೋಣೆಗೆ ಬರುವಾಗ 30ರ ಹರೆಯದ ತಳಮಳಗಳು ಮನಸ್ಸಲ್ಲಿ ಹಾಗೇ ಉಳಿದುಕೊಂಡಿದ್ದವು.
-ರಶ್ಮಿ ಕಾಸರಗೋಡು