ಹದಿನೈದು ವರ್ಷಗಳ ನಂತರ ಎದುರಾದ ಸೋಮು ಬಾಯಲ್ಲಿ ಅವೇ ಮಾತು, 'ನೀನು ಸ್ವಲ್ಪ ವರ್ಷಗಳ ಮೊದಲೇ ನನಗೆ ಸಿಗ್ಬೇಕಿತ್ತು' ಎಂದು ನಗಾಡಿದ. ಹಲವು ದೌರ್ಬಲ್ಯಗಳನ್ನು ಮೈಗೂಡಿಸಿಕೊಂಡಿದ್ದ ಸೋಮು ಜತೆ ಮೊದಲಿಗೆ ನಾನು ಮಾತಾಡಿದವಳೇ ಅಲ್ಲ. ಮಾತನಾಡಿದರೆ ಎಲ್ಲಿ ಅವನೊಡನೆ ತನ್ನ ಹೆಸರು ತಳುಕು ಹಾಕಿಕೊಂಡು ನರಳುತ್ತದೋ ಎಂದು ಹೆದರಿದ್ದೆ. ಆದರೀಗ ವಯಸ್ಸು ದಾಟುವಾಗ ಅವನ ಸ್ನೇಹ ಸಹನೀಯ ಅನಿಸತೊಡಗಿತು. ಸೋಮು ಸಾಕಷ್ಟು ಪಕ್ವವಾಗಿದ್ದ. ಈಗ ಒಳ್ಳೆಯ ಸ್ನೇಹಿತನಾಗಬಲ್ಲ ಅನಿಸಿತು. ಆ ನಂಬಿಕೆ ಸುಳ್ಳಾಗಲಿಲ್ಲ. ನನಗೆ ಅವನೊಡನೆ ಮಾತುಗಳು ಖಾಲಿಯಾಗುವುದೇ ಇಲ್ಲ ಅನಿಸಿತ್ತು. ದೈನಂದಿನ ಜೀವನದ ಜಂಜಾಟದಲ್ಲಿ ಎಲ್ಲೂ ರಿಲ್ಯಾಕ್ಸ್ ಆಗುವುದಕ್ಕೆ ಸಾಧ್ಯವೇ ಇಲ್ಲ ಅನಿಸಿಬಿಟ್ಟಿತ್ತು.
ಒಮ್ಮೊಮ್ಮೆ ರಾತ್ರಿಗಳೂ ನಿದ್ದೆ ಇಲ್ಲದೆ ನರಳುವುದಿತ್ತು. ಆ ಸಮಸ್ಯೆಗಳೆಲ್ಲ ಅಚ್ಚರಿ ಎನ್ನುವಂತೆ ಅವನ ಸಹವಾಸದಲ್ಲಿ ಕಡಿಮೆಯಾಗುತ್ತಾ ಬಂದಿತ್ತು. ಏನೋ ಚೇತರಿಕೆ. ಅವನಾಡುವ ಬದುಕಿನ ರಿಯಾಲಿಟಿಗಳ ಪರಿಚಯ ಇಷ್ಟವಾಗಿ ಆಗಾಗ್ಗೆ ಜತೆಯಲ್ಲಿ ಕಾಫಿಗೆಂದು ಹೋಗಿ ಮಾತಿಗೆ ಕೂರುವುದು ಅಭ್ಯಾಸವಾಗಿತ್ತು. ಅವನ ಹಾಸ್ಯ ಮನಸ್ಸಿಗೆ ಮುದ ನೀಡುತ್ತಿತ್ತು. ನಗು ಮರೆತುಹೋದ ದಿನಗಳಲ್ಲಿ ನಗುತರಿಸಿದ ವಾತ್ಸಲ್ಯಮಯಿ ಗೆಳತಿಯೊಬ್ಬಳು ಅವನಲ್ಲಿ ಸಿಕ್ಕಿದ್ದಳು. ಅವನ ಎಗ್ಗಿಲ್ಲದ ಮಾತುಕತೆಗಳು ಹಿಂದೆಲ್ಲ ಸಂಕೋಚದಿಂದ ಮುದುಡುವಂತೆ ಮಾಡುತ್ತಿತ್ತು. ಆದರೆ, ಅವೇ ಮಾತುಗಳು ಈಗ ವಾಸ್ತವದ ಅರಿವು ಮೂಡಿಸಿ ಚಿಂತನೆಗೆ ಹಚ್ಚುತ್ತಿತ್ತು.
'ಏನೇ ಶಾರಿ? ನೀನು ಚೆಲುವೆ ನಿಜ, ಆದರೆ... ಈ ವಯಸ್ಸಿನಲ್ಲಿ ಸೋಮು ಜತೆ ಓಡಾಟ ಮಾಡ್ತಾ ಇದ್ದೀಯ ಅಂತ ಸುದ್ದಿ ಬಂತು. ಏನೂ ಅನ್ಕೋಬೇಡ, ಸುಮ್ಮನೆ ಕೇಳ್ದೆ ಅಷ್ಟೇ. ಮೊದಲೆಲ್ಲ ಅವನ ಜತೆ ಮಾತೂ ಆಡಿದವಳಲ್ಲ. ಒಂದೇ ಕಡೆ ಹದಿನೈದು ವರ್ಷ ಕೆಲಸ ಮಾಡಿದ್ರೂ ಮಾತಿಲ್ಲ ಕತೆ ಇಲ್ಲ?' ಜಾನು ಕೇಳಿದಳು. 'ಹೌದು, ಆಕರ್ಷಣೆಗಳೆಲ್ಲ ತೊಲಗಿದ ಈ ವಯಸ್ಸಿನಲ್ಲೇ ನಿಜವಾದ ಸ್ನೇಹ ವಿಶ್ವಾಸಗಳಿಗೆ ಅರ್ಥ ಹುಡುಕುವುದಕ್ಕೆ ಆಗೋದು. ಸ್ನೇಹಕ್ಕೆ ವಯಸ್ಸಿನ ಮಿತಿ ಇದೆಯಾ? ಹುಚ್ಚಿ ನೀನು. ನಿನಗೆ ಗೊತ್ತಲ್ಲ ನಾನು- ಅವನು ಹಿಂದೆ ಒಂದೇ ಹಡಗಿನಲ್ಲಿ ಇದ್ದವರು. ಒಂದೊಂದು ಪೈಸೆಗ್ಕೂ ನನ್ನ ಹಾಗೆ ಒದ್ದಾಡಿದವ ಅವನು. ಆದರೀಗ ಆತ ಹುಬ್ಬೇರಿಸುವಂತೆ ಬೆಳೆದಿದ್ದಾನೆ. ನನಗೆ ವರ್ಗವಾದ ಮೇಲೆ ನಾನು ಬಿಜಾಪುರಕ್ಕೆ ಹೊರಟುಹೋದೆ. ಒಂದು ವರ್ಷದ ಕೆಳಗೆ ಸೋಮು ಟ್ರೈನ್‌ನಲ್ಲಿ ಸಿಕ್ಕ. ಆ ಇಡೀ ರಾತ್ರಿ ನಾವು ಅದೆಷ್ಟು ಕಷ್ಟ ಸುಖ ಹಂಚಿಕೊಂಡೆವು ಗೊತ್ತಾ? ಈಗವನು ಬಹಳ ಪ್ರಬುದ್ಧ ವ್ಯಕ್ತಿಯಾಗಿದ್ದಾನೆ. ಜಾನು, ನಿನ್ನ ಹತ್ತಿರ ಮುಚ್ಚುಮರೆ ಏನು? ಅವನೊಡನೆ ಮಾತನಾಡಿದರೆ ಮನಸ್ಸಿಗೆ ಉಲ್ಲಾಸವಿರುತ್ತದೆ ಗೊತ್ತಾ? ನಾನೀಗ ಸ್ಲೀಪಿಂಗ್ ಮಾತ್ರೆಗಳಿಲ್ಲದೆ ನಿದ್ದೆ ಮಾಡ್ತಿದ್ದೀನಿ. ಅವನ ಎಲ್ಲ ಮಾತುಗಳೂ ಪ್ರಯೋಜನಕಾರಿ ಕಣೆ. ನೀನೇನೋ ಅಂದ್ಕೋತಿ ಅಂತ ನಾನು ಅವನೊಡನೆ ಮಾತನಾಡದಿದ್ರೆ ನನಗೇ ನಷ್ಟ. ಷೇರ್‌ಗಳ ವಿಚಾರದಲ್ಲಿ ನಾವು ಹೇಗೆ ಜಾಣತನ ತೋರಿಸಬೇಕು, ಇಂಟರ್‌ನೆಟ್‌ನಲ್ಲಿ ಚಿನ್ನ, ಬೆಳ್ಳಿ ಮೇಲೆ ಹಣ ಹೂಡುವ ವ್ಯವಹಾರದ ಗುಟ್ಟುಗಳು... ಹೀಗೆ ಒಂದೆ ರಡು ವಿಚಾರಗಳಲ್ಲ ಬಿಡು. ಪ್ರಯೋಜನಕ್ಕೆ ಬರುವ ಮಾತುಗಳು, ನಡುವೆ ಅವನ ಸ್ವಭಾವ ನಿನಗೆ ಗೊತ್ತಲ್ಲ, ತಮಾಷೆ ಮಾತುಗಳು. ಕಂಪನಿಗೆ ಗಂಡು ಹೆಣ್ಣು ಅಂತ ನೋಡಕ್ಕೆ ಆಗುತ್ತಾ? ನನಗೆಲ್ಲಾ ಒಂದೇ' ಅಂದೆ.
'ಜನರ ಬಾಯಲ್ಲಿ ನಿನ್ನ ಹೆಸರಿನ ಮುಂದೆ ಅವನ ಪ್ರಸ್ತಾಪವಿದೆ. ಅದಕ್ಕೆ ಹೇಳಿದೆ, ನಿನ್ನಿಷ್ಟ' ಅಂದಳು ಜಾನು. ಯಾಕೋ ರೇಗಿತು. ನೀವು ಮಾತನಾಡುವಾಗ ಬಾಯಲ್ಲೊಂದು ಫಿಲ್ಟರ್ ಇರಲಿ. ಈ ಮೆಂಟಾಲಿಟಿ ಇರೋದರಿಂದಲೇ ಕೆಲವು ಹೆಂಗಸರು ನಿನ್ನ ಥರ ಮಾಡನಾಡುವುದು. ಅಲ್ವೆ? ನಾನು ನಿನಗೆ ಗೊತ್ತಿದೀನಿ ಅಂದಮೇಲೆ ಮಾತನಾಡುವ ಜನರಿಗೆ ನೀನು ದಬಾಯಿಸುವುದು ಬಿಟ್ಟು ನನ್ನ ಹತ್ತಿರ ಜನ ಆಡುವುದನ್ನು ಹೇಳ್ತೀಯಲ್ಲ, ಈ ಜನ್ಮದಲ್ಲಿ ನಿನ್ನ ಹೆಣ್ತನ ಮುಗಿಯೋದಿಲ್ಲ ಬಿಡು. ಹೆಣ್ಣಾಗಲಿ, ಗಂಡಾಗಲಿ ನನಗೆ ಒಳ್ಳೆಯ ಕಂಪನಿ ಸಿಕ್ಕರೆ ಸಾಕು, ಸಂತೋಷಪಡ್ತೀನಿ' ಎಂದು ಅಲ್ಲಿಂದ ಹೊರಟೆ.
'ಸದಾ ಅನಾರೋಗ್ಯದಿಂದ ಬಳಲುತ್ತಿದ್ದ ಶಾರಿ ಈಗ ಗೆಲುವಾಗಿರುವುದಕ್ಕೆ ಇದೇ ಕಾರಣವಾ?' ಅಚ್ಚರಿಯಾಯಿತು ಜಾನುಗೆ!
= ಭಾಗ್ಯ ಕೃಷ್ಣಮೂರ್ತಿ