ಅಜ್ಜಿಯ ನೂರೆಂಟು ಮಾತು!
ಮನುಷ್ಯನ ಆಯಸ್ಸು ಕಡಿಮೆಯಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ನಂಜಮ್ಮ (ಕರಗಮ್ಮ) ಎಂಬ ಶತಾಯುಷಿ ಮಹಾತಾಯಿಯೊಬ್ಬಳು 108 ವರ್ಷ ತುಂಬಿದರೂ ಕೂಡ ಇನ್ನೂ ಉತ್ತಮ ಆರೋಗ್ಯದೊಂದಿಗೆ ತಮ್ಮ ಕೆಲಸವನ್ನು ತಾವೆ ಮಾಡಿಕೊಳ್ಳುತ್ತಿದ್ದಾರೆ.
ಭಾರತೀನಗರದಲ್ಲಿ ವಾಸವಾಗಿರುವ ಕರಗಮ್ಮ ಮೂಲತಃ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಚಿಕ್ಕಯ್ಯನ ಛತ್ರಹೋಬಳಿಯ ಏಚಗಹಳ್ಳಿ ಗ್ರಾಮದ ಬೋಳಪ್ಪನವರ ಪತ್ನಿ. ಪತಿ 55 ವರ್ಷಗಳ ಹಿಂದೆಯೇ ನಿಧನ ಹೊಂದಿದರೂ ಕೂಡ ಶತಾಯುಷಿ ನಂಜಮ್ಮ ಮಾತ್ರ ಇನ್ನೂ ಕೂಡ ಗಟ್ಟಿಮುಟ್ಟಾಗಿದ್ದಾರೆ.
ಈ ಶತಾಯುಷಿಗೆ 9 ಜನ ಗಂಡುಮಕ್ಕಳಿದ್ದು, ಈಗಾಗಲೇ 7 ಮಂದಿ ಸಾವನ್ನಪ್ಪಿದ್ದಾರೆ. 5 ತಲೆಮಾರಿನ 35 ಮಂದಿ ಮೊಮ್ಮಕ್ಕಳು, ಮುಮ್ಮಕ್ಕಳು, ಮರಿಮಕ್ಕಳು, ಮೂಳಮಕ್ಕಳು ಕಂಡಿದ್ದಾರೆ. ಕೆ.ಎಂ.ದೊಡ್ಡಿಯಲ್ಲಿ ಟ್ರ್ಯಾಕ್ಟರ್ ಚಾಲಕನಾಗಿ ಕೆಲಸ ನಿರ್ವಹಿಸುತ್ತಿರುವ ಮಹೇಶ್ ಎಂಬ ಮೊಮ್ಮಗನ ಮನೆಯಲ್ಲಿ ವಾಸವಾಗಿದ್ದಾಳೆ.
ಬಾಲ್ಯದಿಂದಲೂ ಜೋಳದ ಹಿಟ್ಟು, ಬೆಣ್ಣೆತುಪ್ಪ ತಿಂದು ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳುವುದರ ಮೂಲಕ ಯುವಕರನ್ನು ನಾಚಿಸುವಂತಿದ್ದಾರೆ. ಮನೆಯಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಳ್ಳುವುದರ ಮೂಲಕ ಮೊಮ್ಮಕ್ಕಳ, ಮುಮ್ಮಕ್ಕಳಿಗೆ ಕಥೆಯನ್ನು ಹೇಳಿಕೊಡುವುದರ ಮೂಲಕ ದಿನಕಳೆಯುತ್ತಿದ್ದಾರೆ. ಇವರಿಗೆ ಎಲಾ ್ಲಹಲ್ಲುಬಿದ್ದು ಹೋಗಿ ಮತ್ತೆ ಮರು ಹಲ್ಲು ಹುಟ್ಟುತ್ತಿವೆ. ಆರೋಗ್ಯ ಸ್ಥಿರವಾಗಿದ್ದು ಕಿವಿ ಸ್ವಲ್ಪ ಮಟ್ಟಿಗೆ ಕೇಳಿಸುತ್ತಿಲ್ಲ.
ವೃದ್ಧಾಪ್ಯ ವೇತನ ಇಲ್ಲ: 60 ವರ್ಷ ತುಂಬಿದ ವೃದ್ಧರಿಗೆ ಸರ್ಕಾರ ವೃದ್ಧಾಪ್ಯ ನೀಡುತ್ತಿದ್ದು, ಈ ಶತಾಯುಷಿಗೆ ಮಾತ್ರ ಇನ್ನೂ ಸೌಲಭ್ಯ ತಲುಪಿಲ್ಲ. 60 ವರ್ಷ ತುಂಬದಿದ್ದರೂ ಕೂಡ ಲಂಚವನ್ನು ಕೊಟ್ಟು ವೃದ್ಧಾಪ್ಯ ವೇತನ ಪಡೆಯುತ್ತಿದ್ದು, ತನಗೆ 108 ವರ್ಷ ತುಂಬಿದರೂ ಕೂಡ ಯಾವುದೇ ಸರ್ಕಾರಿ ಸೌಲಭ್ಯ ಸಿಗುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಒಂದು ದೊಡ್ಡ ಸವಾಲು ಎನ್ನುವ ಈ ಪ್ರಸ್ತುತ ಸಂದರ್ಭದಲ್ಲಿ ಶತಾಯುಷಿ ಎಲ್ಲರಿಗೂ ಮಾದರಿಯಾಗಿದ್ದಾಳೆ.