ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮಹಿಳೆ-ಮನೆ-ಬದುಕು

ಭರ್ಜರಿ ಬೇಟೆ: ಹುಡುಗರ ಬೇಟೆಯಾಡುವ ಹೆಣ್ಣು ಚಿರತೆಗಳು!

ಸಾಹಸಿ ಪ್ರವೃತ್ತಿಯ ಹೆಣ್ಣು ತನಗೆ ಆಕರ್ಷಕ..

Lingaraj Badiger
Updated On : 24 Jun 2014, 1:45 am

ಸಂಬಂಧಗಳ ವಿಷಯದಲ್ಲಿ ಸಾಹಸಿ ಪ್ರವೃತ್ತಿ ಹೊಂದಿರುವ ಗಂಡಸರು ಸಣ್ಣ ವಯಸ್ಸಿನ ಹುಡುಗಿಯರನ್ನು ಬೀಳಿಸಿಕೊಳ್ಳುವಂತೆ ಇದೂ ಕೂಡ. ಸಾಹಸಿ ಪ್ರವೃತ್ತಿಯ ಹೆಣ್ಣು ತನಗೆ ಆಕರ್ಷಕವಾಗಿ ಕಾಣುವ ಚಿಕ್ಕ ವಯಸ್ಸಿನ ಹುಡುಗನಲ್ಲಿ ಖುಷಿ ಹುಡುಕುತ್ತಾಳೆ. ಇವತ್ತು ತನಗಿಂತ ದೊಡ್ಡ ವಯಸ್ಸಿನ ಮಹಿಳೆಯನ್ನು ಇಷ್ಟಪಟ್ಟು ಮದುವೆಯಾಗುವ ಹುಡುಗರಿಗೇನೂ ಕಡಿಮೆಯಿಲ್ಲ ಎಂಬುದನ್ನು ಇಲ್ಲಿ ಮರೆಯಬಾರದು.

ನಿಮಗೆ 'ಚಿರತೆ ಸಂಬಂಧ' ಅಂದರೆ ಗೊತ್ತಾ?
ನಲವತ್ತು ವರ್ಷಕ್ಕೂ ಹಿಂದೆ 'ದಿ ಗ್ರಾಜುಯೇಟ್‌' ಅಂತ ಹಾಲಿವುಡ್ ಸಿನಿಮಾ ಬಂದಿತ್ತು. ಅದರಲ್ಲಿ ಐವತ್ತು ದಾಟಿದ ಆಂಟಿಯೊಬ್ಬಳು ಆಗಷ್ಟೇ ಡಿಗ್ರಿ ಮುಗಿಸಿ ಓಡಾಡಿಕೊಂಡಿದ್ದ ಹುಡುಗನನ್ನು ಬುಟ್ಟಿಗೆ ಹಾಕಿಕೊಳ್ಳುವ ಕತೆ ಚಿತ್ರರಂಗದಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಿತ್ತು.

ನಂತರ ಇದು ನಿಧಾನವಾಗಿ ನಿಜ ಜೀವನಕ್ಕೂ ಕಾಲಿಟ್ಟಿತು. ಪಾಪ್ ತಾರೆ ಮಡೋನಾ ತನಗಿಂತ ಹತ್ತು ವರ್ಷ ಚಿಕ್ಕವನಾದ ಗಯ್ ರಿಚಿಗೆ ಮೋಡಿ ಮಾಡಿ ಬಲೆಗೆ ಬೀಳಿಸಿಕೊಂಡಿದ್ದಳು. ನಮ್ಮದೇ ಬಾಲಿವುಡ್‌ನಲ್ಲಿ, ನಿಜ ಜೀವನದಲ್ಲೇ, ಅಮೃತಾ ಸಿಂಗ್ ಎಂಬ ಮಧ್ಯ ವಯಸ್ಸಿನ ನಟಿ  ಆಗಷ್ಟೇ ಮೀಸೆ ಚಿಗುರುತ್ತಿದ್ದ ಸೈಫ್ ಅಲಿ ಖಾನ್‌ಗೆ ಮೋಡಿ ಮಾಡಿ ಮದುವೆ ಮಾಡಿಕೊಂಡಿದ್ದಳು. ಕೆಲ ವರ್ಷಗಳ ಹಿಂದೆ ಖ್ಯಾತ ನಿರ್ದೇಶಕಿ ಫರಾ ಖಾನ್ ತನಗಿಂತ ಎಂಟು ವರ್ಷ ಚಿಕ್ಕವನಾದ ಶಿರೀಶ್ ಕುಂದರ್‌ನನ್ನು ಮದುವೆಯಾಗಿದ್ದಾಳೆ.
ಈಗ ಇಂತಹ ಸಂಬಂಧಕ್ಕೆ ಲೆಕ್ಕವೇ ಇಲ್ಲ. ಇದೇ 'ಕಗರ್ ರಿಲೇಶನ್‌ಶಿಪ್‌'. ಕನ್ನಡದಲ್ಲಿ ಕೆಟ್ಟದಾಗಿ ಅನುವಾದ ಮಾಡುವುದಾದರೆ 'ಚಿರತೆ ಸಂಬಂಧ.'

ಹೆಣ್ಣೊಬ್ಬಳು ಚಿರತೆಯಂತೆ ಅಗ್ರೆಸ್ಸಿವ್ ಆಗಿ, ಮೇಲೆ ಬಿದ್ದು, ಹೊಂಚು ಹಾಕಿ, ಮೋಡಿ ಮಾಡಿ ತನಗಿಂತ ಚಿಕ್ಕ ಹುಡುಗನನ್ನು ಬೇಟೆಯಾಡುವುದಕ್ಕೆ ಆಧುನಿಕ ಸಮಾಜಶಾಸ್ತ್ರಜ್ಞರು ಈ ಹೆಸರು ಕೊಟ್ಟಿದ್ದಾರೆ. ಬಲೆಗೆ ಬಿದ್ದವನು ತೀರಾ ಅಮಾಯಕನಾಗಿದ್ದರೆ ಮತ್ತು ಬಲೆಗೆ ಬೀಳಿಸಿಕೊಂಡ ಆಂಟಿ ತುಂಬಾ ಘಟವಾಣಿಯಾಗಿದ್ದರೆ ಖಂಡಿತ ಇದು ಚಿರತೆ ಬೇಟೆಯೇ!
ಮದುವೆಯಾಗಲು ಅಥವಾ ಪ್ರೀತಿಸಲು ಗಂಡು ದೊಡ್ಡವನಾಗಿರಬೇಕು, ಹೆಣ್ಣು ಅವನಿಗಿಂತ ಐದಾರು ವರ್ಷ ಚಿಕ್ಕವಳಾಗಿರಬೇಕು ಎಂಬುದು ಮೊದಲಿನಿಂದಲೂ ಭಾರತೀಯ ಸಾಮಾಜಿಕ ವ್ಯವಸ್ಥೆಯ ಅಲಿಖಿತ ನಿಯಮ. ಇಂದಿಗೂ ಶೇ.99ರಷ್ಟು ಮದುವೆಗಳಲ್ಲಿ ಹುಡುಗಿಯೇ ಚಿಕ್ಕವಳಾಗಿರುತ್ತಾಳೆ. ಬಹುಶಃ ಈ ಕಾರಣಕ್ಕಾಗಿಯೇ ನಮ್ಮದು ಪುರುಷ ಪ್ರಧಾನ ಸಮಾಜವಾಗಿ ಬೆಳೆದು ಬಂತು. ನಾಗರಿಕತೆ ಉಗಮವಾಗುವುದಕ್ಕಿಂತ ಮುಂಚೆ ಸಂಬಂಧಗಳಿಗೆ ಅರ್ಥವೇ ಇರಲಿಲ್ಲ. ಯಾರು ಯಾರ ಜೊತೆಗೆ ಬೇಕಾದರೂ ಸೇರುತ್ತಿದ್ದರು. ಒಬ್ಬ ಗಂಡಿಗೆ ಒಂದು ಹೆಣ್ಣು ಎಂಬ ಸೂತ್ರ ಇರಲಿಲ್ಲ. ಆ ಕ್ಷಣಕ್ಕೆ ಯಾರು ಬೇಕು ಅನ್ನಿಸುತ್ತಿದ್ದರೋ ಅವರನ್ನು ಪ್ರೀತಿಸುವ ಸ್ವಾತಂತ್ರ್ಯವಿತ್ತು. ನಾಗರಿಕತೆ ಬೆಳೆಯುತ್ತ ಬಂದಂತೆ ಹೆಣ್ಣು ಮನೆ ನೋಡಿಕೊಳ್ಳುವವಳು, ಗಂಡು ದುಡಿದು ತರುವವನು ಎಂದಾಯಿತು. ಮನೆಕೆಲಸಕ್ಕೆ ಸೀಮಿತಳಾದ ಹೆಣ್ಣು ಕೊಂಚ ದುರ್ಬಲಳಾದಳು. ಆಗ ಅವಳಿಗೆ ರಕ್ಷಣೆ ಬೇಕಾಯಿತು. ರಕ್ಷಣೆ ನೀಡಲು ಶಕ್ತಿವಂತನ ಅಗತ್ಯ ಕಾಣಿಸಿತು. ಇಪ್ಪತ್ತು ವರ್ಷದ ಹೆಣ್ಣಿಗೆ ಹದಿನಾರು ವರ್ಷದ ಗಂಡು ಏನು ರಕ್ಷಣೆ ನೀಡಿಯಾನು? ಹಾಗಾಗಿ ಹೆಣ್ಮಕ್ಕಳು ತಮಗಿಂತ ದೊಡ್ಡವರನ್ನು ಮದುವೆಯಾಗುವ ಪದ್ಧತಿ ರೂಢಿಗೆ ಬಂತು.

ಇಂದು ನಾವೆಲ್ಲ ಸಮಾನತೆಯ ಯುಗದಲ್ಲಿದ್ದೇವೆ. ನಮ್ಮದು ನಾಗರಿಕ ಸಮಾಜ. ಇಲ್ಲಿ ರಕ್ಷಣೆ ನೀಡಲು ಪೊಲೀಸರಿದ್ದಾರೆ. ಸ್ವಯಂ ರಕ್ಷಣೆಗೆ ಅತ್ಯಾಧುನಿಕ ಆಯುಧಗಳು ಬಂದಿವೆ. ಹೆಣ್ಣಿಗೆ ಗಂಡೇ ರಕ್ಷಣೆ ನೀಡಬೇಕೆಂದಿಲ್ಲ. ಅವಳು ತನ್ನನ್ನು ತಾನೇ ರಕ್ಷಿಸಿಕೊಳ್ಳಬಲ್ಲಳು. ಮೇಲಾಗಿ, ಆಕೆ ಈಗ ಹಣ ಗಳಿಸುತ್ತಿದ್ದಾಳೆ. ಹಾಗಾಗಿ ಅವಳಿಗೊಂದು ಸ್ವತಂತ್ರ ಐಡೆಂಟಿಟಿ ಬಂದಿದೆ. ಅಂದಮೇಲೆ ಸಂಬಂಧಗಳ ವಿಷಯದಲ್ಲಿ ಅವಳು 'ಸಾಹಸ'ಕ್ಕೆ ಇಳಿದರೆ ತಪ್ಪೇನು?
ಚಿಂತನೆಯ ಕ್ರಮದಲ್ಲಾದ ಈ ಕ್ರಾಂತಿಕಾರಿ ಬದಲಾವಣೆಯೇ ಸಣ್ಣ ವಯಸ್ಸಿನ ಹುಡುಗರನ್ನು ಮದುವೆಯಾಗುವ ದೊಡ್ಡ ವಯಸ್ಸಿನ ಮಹಿಳೆಯರ ಸಂಖ್ಯೆ ಹೆಚ್ಚುವಂತೆ ಮಾಡಿದೆ. ಇದನ್ನು ತಪ್ಪು ಅನ್ನುತ್ತೀರಾ?

ಭಿನ್ನವಾಗಿ ಏನನ್ನು ಮಾಡಿದರೂ ಅದು ಜನರನ್ನು ಹುಬ್ಬೇರಿಸುವಂತೆ ಮಾಡುತ್ತದೆ. ಆದ್ದರಿಂದಲೇ ಚಿಕ್ಕ ವಯಸ್ಸಿನವರನ್ನು ಮದುವೆಯಾಗುವ ಹೆಂಗಸರು ಥಟ್ಟನೆ ಎಲ್ಲರ ಗಮನ ಸೆಳೆಯುತ್ತಾರೆ. ಈ ಪ್ರವೃತ್ತಿ ಸೆಲೆಬ್ರಿಟಿಗಳಲ್ಲೇ ಹೆಚ್ಚು. ಹಾಗಾಗಿ ಹೆಂಡತಿ ದೊಡ್ಡವಳು-ಗಂಡ ಚಿಕ್ಕವನು ರೀತಿಯ ಸಂಬಂಧಗಳು ಜನಸಾಮಾನ್ಯರ ಬದುಕಿಗಿಂತ ನಟ-ನಟಿಯರ ಅಥವಾ ಸೂಪರ್ ಶ್ರೀಮಂತರ ಬದುಕಿನಲ್ಲೇ ಹೆಚ್ಚಾಗಿ ಕಂಡುಬರುತ್ತದೆ.

ಒಂದೆರಡು ವರ್ಷ ಕಡಿಮೆ ವಯಸ್ಸಿನವರನ್ನು ಮದುವೆಯಾಗುವುದು 'ಚಿರತೆ ಸಂಬಂಧ' ಎನ್ನಿಸಿಕೊಳ್ಳುವುದಿಲ್ಲ. ಇಂಥ ಪ್ರೇಮ ಪ್ರಕರಣಗಳು ಅಥವಾ ವಿವಾಹಗಳು ಬಹಳ ಮೊದಲಿನಿಂದಲೂ ಇವೆ. ಇವು ಸಾಮಾನ್ಯ ಕೂಡ. ಇಲ್ಲಿ ಸಾಹಸ ಪ್ರವೃತ್ತಿಯೇನೂ ಕಾಣಿಸುವುದಿಲ್ಲ. ನಟ ಸುನಿಲ್ ದತ್ ಹಾಗೂ ನರ್ಗಿಸ್, ಶಿಲ್ಪಾಶೆಟ್ಟಿ ಹಾಗೂ ರಾಜ್ ಕುಂದ್ರಾ, ಐಶ್ಚರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಇವರ ಮದುವೆ ಅಷ್ಟೇನೂ ವಿಶೇಷವಾಗಿ ಕಾಣಿಸಿಕೊಂಡಿಲ್ಲ. ಇಲ್ಲೆಲ್ಲ ಮಹಿಳೆಯರು ಒಂದೆರಡು ವರ್ಷಕ್ಕಷ್ಟೇ ಗಂಡನಿಗಿಂತ ದೊಡ್ಡವರು.
ಆದರೆ, ತೀರಾ ಎಂಟು-ಹತ್ತು ವರ್ಷ ಚಿಕ್ಕ ಹುಡುಗನನ್ನು ಮದುವೆಯಾಗಲು ನಿಜಕ್ಕೂ ಮಹಿಳೆಯರಿಗೆ ಗಂಡೆದೆಯೇ ಬೇಕು. ಹೀಗೆ ಮದುವೆಯಾಗುವ ಹೆಂಗಸರನ್ನು ಸಮಾಜ ಇವತ್ತಿಗೂ ಅಷ್ಟಾಗಿ ಗೌರವದಿಂದ ಕಾಣುವುದಿಲ್ಲ. ಮೋಜಿಗಾಗಿ, ಹಣದ ಮದದಿಂದ ಅಮಾಯಕ ಹುಡುಗನನ್ನು ಬಲೆಗೆ ಬೀಳಿಸಿಕೊಂಡವಳು ಎಂದೇ ಅವಳನ್ನು ನೋಡುತ್ತದೆ. ಅವರನ್ನು ಮದುವೆಯಾಗುವ ಹುಡುಗರಿಗೆ ಬೌದ್ಧಿಕ ಪ್ರೌಢಿಮೆ ಬಂದಿರುತ್ತದೆ ಎಂದೇನೂ ಇಲ್ಲ. ಆದರೆ ಇವರನ್ನು ಮದುವೆಯಾಗುವವರು ಅನುಭವಿಗಳಾಗಿರುತ್ತಾರೆ. ಅವರಿಗೆ ಮದುವೆ ಎಂದರೇನು, ಸಂಬಂಧ ಎಂದರೇನು, ಲೈಂಗಿಕ ಬದುಕು ಹೇಗಿರುತ್ತದೆ, ಗಂಡಸನ್ನು ಆಳುವುದು ಹೇಗೆ ಎಂಬುದೆಲ್ಲ ತಿಳಿದಿರುತ್ತದೆ. ಸಾಮಾನ್ಯವಾಗಿ ಇಂಥ ಸ್ತ್ರೀಯರು ಆರ್ಥಿಕವಾಗಿಯೂ ತಾವು ಮದುವೆಯಾಗುವ ಹುಡುಗನಿಗಿಂತ ಬಲಾಢ್ಯರಾಗಿರುತ್ತಾರೆ. ಏಕೆಂದರೆ, ವಯೋಸಹಜವಾಗಿ ಇವರು ತಮ್ಮ ವೃತ್ತಿ ಬದುಕಿನಲ್ಲಿ ಮೇಲೆ ಬಂದಿರುತ್ತಾರೆ. ಯಶಸ್ಸು ಇವರ ಬೆನ್ನಿಗಿರುತ್ತದೆ. ಆದರೆ, ಹುಡುಗ ಇನ್ನೂ ತನ್ನನ್ನು ಪ್ರೂವ್ ಮಾಡಿಕೊಳ್ಳುವ ಹಂತದಲ್ಲಿರುತ್ತಾನೆ. ಅಂಥ ಸಮಯದಲ್ಲಿ ಅವನನ್ನು ಮದುವೆಯಾದರೆ ಸಹಜವಾಗಿಯೇ ಅವನು ಹೆಂಡತಿಯ ಅಂಕೆಯಲ್ಲಿರಬೇಕಾಗುತ್ತದೆ. ಮನೆಯಲ್ಲಿ ಹೆಂಡತಿಯ ಮಾತೇ ಮೇಲಾಗುತ್ತದೆ. ಈ ರೀತಿಯ ಸಂಬಂಧಗಳನ್ನು ಸಮಾಜ 'ಅಸಹಜ' ಎಂದು ನೋಡುವುದು ಸಹಜವೇ.

ಆದರೆ, ಮಹಿಳಾವಾದಿಗಳು ಇದನ್ನು ನೋಡುವ ರೀತಿಯೇ ಬೇರೆ. ಅವರ ಪ್ರಕಾರ ಇದರಲ್ಲೇನೂ ತಪ್ಪಿಲ್ಲ. ಏಕೆಂದರೆ, ತಮ್ಮ ಬಾಳ ಸಂಗಾತಿಯನ್ನು ಆಯ್ದುಕೊಳ್ಳಲು ಗಂಡಸಿಗಿರುವಷ್ಟೇ ಹಕ್ಕು ಹೆಂಗಸಿಗೂ ಇದೆ. ಯಾವಾಗಲೂ ಗಂಡೇ ಏಕೆ ಹೆಣ್ಣನ್ನು ಆಯ್ಕೆ ಮಾಡಿಕೊಳ್ಳಬೇಕು? ವೈ ಶುಡ್ ಮೆನ್ ಹ್ಯಾವ್ ಆಲ್ ದಿ ಫನ್? ಹೆಂಗಸರೂ ತಮಗೆ ಬೇಕಾದವರನ್ನು ಆಯ್ದುಕೊಳ್ಳಲಿ ಬಿಡಿ.  ತಪ್ಪೇನಿಲ್ಲ. ಮದುವೆ ಎಂಬುದು ಸಂತಾನೋತ್ಪತ್ತಿಗಾಗಿ ಇರುವ ವ್ಯವಸ್ಥೆ ಎಂದು ನೋಡುತ್ತಿದ್ದ ಹಿಂದಿನ ಕಾಲದಲ್ಲಿ ಇದು ತಪ್ಪಾಗಿತ್ತು. ವೈದ್ಯಕೀಯವಾಗಿ ನೋಡುವುದಾದರೆ, ಹೆಣ್ಣಿನ ಸಂತಾನೋತ್ಪತ್ತಿ ಸಾಮರ್ಥ್ಯ ಬೇಗ ಕ್ಷೀಣಗೊಳ್ಳುತ್ತದೆ. ಗಂಡಸು ಐವತ್ತು ವರ್ಷ ದಾಟಿದರೂ ಅಪ್ಪನಾಗುವ ಶಕ್ತಿ ಹೊಂದಿರುತ್ತಾನೆ. ಹಾಗಾಗಿ ವಯಸ್ಸಾದ ಮೇಲೆ ಮದುವೆಯಾಗುವ ಹೆಂಗಸರಿಗೆ ಮಕ್ಕಳಾಗುವ ಚಾನ್ಸ್ ಕಡಿಮೆಯಿರುತ್ತಿತ್ತು. ಈಗ ವೈದ್ಯಕೀಯ ಕ್ಷೇತ್ರ ಸಾಕಷ್ಟು ಮುಂದುವರೆದಿದೆ. ಮಕ್ಕಳಾಗಲು ಗಂಡು-ಹೆಣ್ಣು ಸೇರಬೇಕೆಂದೇ ಇಲ್ಲ. ಹಾಗಿರುವಾಗ ವಯಸ್ಸಿನ ಅಂತರದಲ್ಲಿ ಮದುವೆಯಾದರೆ ಸಂತಾನೋತ್ಪತ್ತಿ ಕಷ್ಟ ಎಂಬ ಕಲ್ಪನೆಯೇ ಅಪ್ರಸ್ತುತವಾಗುತ್ತದೆ.

ಮದುವೆಯಲ್ಲಿ ಹೆಣ್ಣು ತನ್ನ ಬೇಕು-ಬೇಡಗಳನ್ನು ಪೂರೈಸಲು ಹಾಗೂ ರಕ್ಷಣೆ ಪಡೆಯಲು ಗಂಡನಲ್ಲಿ ತಂದೆಯನ್ನು ಕಾಣುತ್ತಾಳೆ. ದೊಡ್ಡ ವಯಸ್ಸಿನವಳನ್ನು ಮದುವೆಯಾಗುವ ಹುಡುಗ ತನ್ನ ಹೆಂಡತಿಯಲ್ಲಿ ತಾಯಿಯನ್ನು ಕಾಣಬೇಕು. ಬದಲಾಗಬೇಕಿರುವುದು ಇದೊಂದು ಮನಸ್ಥಿತಿ ಮಾತ್ರ.

ಸಂಬಂಧಗಳ ವಿಷಯದಲ್ಲಿ ಸಾಹಸಿ ಪ್ರವೃತ್ತಿ ಹೊಂದಿರುವ ಗಂಡಸರು ಸಣ್ಣ ವಯಸ್ಸಿನ ಹುಡುಗಿಯರನ್ನು ಬೀಳಿಸಿಕೊಳ್ಳುವಂತೆ ಇದೂ ಕೂಡ. ಸಾಹಸಿ ಪ್ರವೃತ್ತಿಯ ಹೆಣ್ಣು ತನಗೆ ಆಕರ್ಷಕವಾಗಿ ಕಾಣುವ ಚಿಕ್ಕ ವಯಸ್ಸಿನ ಹುಡುಗನಲ್ಲಿ ಖುಷಿ ಹುಡುಕುತ್ತಾಳೆ. ಇವತ್ತು ತನಗಿಂತ ದೊಡ್ಡ ವಯಸ್ಸಿನ ಮಹಿಳೆಯನ್ನು ಇಷ್ಟಪಟ್ಟು ಮದುವೆಯಾಗುವ ಹುಡುಗರಿಗೇನೂ ಕಡಿಮೆಯಿಲ್ಲ ಎಂಬುದನ್ನು ಇಲ್ಲಿ ಮರೆಯಬಾರದು.

-ಪಲ್ಲವಿ ಡಿ.ಎಂ.
(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555 ಸಖಿ ಖರೀದಿಗಾಗಿ http://www.magzter.com/IN/Express-Network-Private-Limited/Sakhi/Women%27s-Interest//40308ಗೆ ಭೇಟಿನೀಡಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement