ಪುಟ್ಟ ಹುಡುಗ ಅವನಮ್ಮನ ಕಡೆಗೆ ನೋಡಿ, 'ಅಮ್ಮಾ ಎಷ್ಟೊಂದು ನಗ್ತೀಯಾ ನೀನಿಲ್ಲಿ.. ಮನೆಯಲ್ಲಿ ಯಾಕೆ ನೀನು ಹೀಗಿರೋಲ್ಲ?' ಅಂದ. ಅಲ್ಲಿ ನಂಗೆ ನಗಕ್ಕೂ ಟೈಮ್ ಇರಲ್ಲ. ಅಷ್ಟೊಂದು ಕೆಲ್ಸ ಇರುತ್ತೆ. ಇಲ್ಲಿ ಕೆಲ್ಸ ಏನೂ ಇಲ್ಲ ಅದಕ್ಕೇ ಈ ನಗು ಅಂದಳು. ಮಾತುಮಾತಿಗೂ ಉಕ್ಕುವ ನಗು ಅಮ್ಮನ ಮೋರೆಯನ್ನು ಸುಂದರಗೊಳಿಸುವುದನ್ನು ನೋಡಿ ಅಚ್ಚರಿಗೊಂಡ ಪುಟ್ಟ ಪೋರ, ಅಮ್ಮನಿಗೆ 'ನಗುವಲ್ಲಿ' ಅಂತ ನಾಮಕರಣ ಕೂಡಾ ಮಾಡಿಬಿಟ್ಟ!
ಇತ್ತೀಚೆಗೆ ರಜೆಯಲ್ಲಿ ಮನೆಗೆ ಬಂದ ಅತ್ತಿಗೆ ಮತ್ತು ಅವರ ಮಗನ ನಡುವಿನ ಮಾತುಕತೆ ಇದು. ನಾವು ಮನೆಯ ಕೆಲಸ ಅಂತ ಎಷ್ಟೊಂದು ಮುಳುಗಿ ಹೋಗುತ್ತೇವೆಂದರೆ ಸಹಜವಾಗಿ ಬರುವ ನಗುವನ್ನೂ ಮರೆಯುವಷ್ಟು. ರಾತ್ರಿ ಮಲಗುವಾಗ ಬೆಳಗ್ಗಿನ ಕೆಲಸದ ಪಟ್ಟಿ ಕಣ್ಣೆದುರು. ಎದ್ದೊಡನೆ ಆ ದಿನದ ಕೆಲಸಗಳೆಲ್ಲ ರಾಕ್ಷಸಾಕಾರವಾಗಿ ಎದ್ದು ನಿಲ್ಲುತ್ತವೆ. ಒಂದರ ಬೆನ್ನಿಗೆ ಇನ್ನೊಂದು ತಯಾರಾಗಿರುತ್ತದೆ. ಕೆಲವೊಮ್ಮೆ ಈ ಏಕತಾನತೆ ಎಷ್ಟು ಬೇಸರ ಹುಟ್ಟಿಸುತ್ತದೆ ಎಂದರೆ ಬದುಕು ಕೇವಲ ಹಗಲು ಇರುಳುಗಳ ನಡುವಿನ ಇರುಕಿನಲ್ಲಿ ಅಸಹಾಯಕವಾಗಿ ಸಿಕ್ಕಿಹಾಕಿಕೊಂಡಿದೆಯೇನೋ ಎಂದು ಸಂಶಯ ಬರುವಷ್ಟು...
ಇಂಥ ಸಂದರ್ಭದಲ್ಲಿ ಕೆಲವು ದಿನಗಳ ಬಿಡುವು ಮನಸ್ಸಿಗೆ ಚೇತೋಹಾರಿಯಾಗಿ ಹೊಸ ಚೈತನ್ಯ ನೀಡಬಹುದು. ಎಲ್ಲಾದರೂ ಕೆಲವು ದಿನಗಳ ಪ್ರವಾಸ ಯೋಜನೆ ಅಥವಾ ಅತ್ಮೀಯರೊಡನೆ ಭೇಟಿ ಶರೀರದ ಬಳಲಿಕೆ ನೀಗಿ, ಉತ್ಸಾಹ ತುಂಬಲು ಸಹಾಯ ಮಾಡೀತು. ಅದರಲ್ಲೂ ನಮಗಿಷ್ಟವಾದವರ ಭೇಟಿ ಆಪ್ಯಾಯಮಾನ. ಅದಕ್ಕೆ ಹೆಣ್ಣು ಮಕ್ಕಳಿಗೆ ತವರು ಆಪ್ತವೆನಿಸುವುದು. ಅಲ್ಲಿ ನಮ್ಮ ಬಾಲ್ಯದ ಸಾಮ್ರಾಜ್ಯದ ಪಳೆಯುಳಿಕೆಗಳು ಇನ್ನೂ ಉಳಿದಿದ್ದು ಆಗಿನ ನಮ್ಮ ಪರಾಕ್ರಮಗಳನ್ನು ನೆನಪಿಸುತ್ತವೆ.
ನನ್ನೊಬ್ಬಳು ಗೆಳತಿಯ ದಿನಚರಿ ಶುರು ಆಗುವುದು ಬೆಳಗ್ಗಿನ ನಾಲ್ಕು ಗಂಟೆಗೆ. ಮುಗಿಯುವುದು ರಾತ್ರಿ ಹನ್ನೊಂದಕ್ಕೆ. ಹೊರಗೂ ದುಡಿಯಬೇಕಾದ ಅನಿವಾರ್ಯತೆ. ಆದರೆ, ರಜ ಅಂತ ಸಿಕ್ಕಿದಾಗೆಲ್ಲ ಇಷ್ಟವಾದ ಸ್ಥಳಗಳಿಗೆ ಹೋಗಿ ಬರುವ ವ್ಯವಸ್ಥೆಯನ್ನು ಮೊದಲೇ ಮಾಡಿಕೊಳ್ಳುತ್ತಾಳೆ. ಆ ಸಮಯದಲ್ಲಿ ಪಡೆಯುವ ಆನಂದದ ಮೆಲುಕು ತುಂಬಾ ದಿನಗಳವರೆಗೆ ಉಳಿದು ಸ್ಫೂರ್ತಿ ತುಂಬುತ್ತದೆ. ಬದುಕಿಗೊಂದು ಅರ್ಥ ನೀಡುತ್ತದೆ ಎನ್ನುವುದು ಅವಳ ವಾದ.
ಬಿಡುವು ಇಲ್ಲದಿದ್ದರೂ ಕೆಲವು ದಿನಗಳನ್ನು ತಮಗಾಗಿಯೇ ಮೀಸಲಾಗಿರಿಸುವುದು ಮಾನಸಿಕ ಆರೋಗ್ಯಕ್ಕೂ ಪೂರಕ. ಒಂದಿಷ್ಟು ಹೊತ್ತನ್ನು ನಮಗಾಗಿ ಮೀಸಲಿಡುವುದು ಎಂದರೆ ಅದರ ಮೊದಲಿನ ಒತ್ತಡದ ನಿಭಾವಣೆಯೂ ಸುಲಭದ್ದಲ್ಲ. ಅದನ್ನು ಸೂಕ್ತವಾಗಿ ನಿರ್ವಹಿಸಲು ಎಲ್ಲರ ಸಹಕಾರವೂ ಬೇಕು.
ಎಲ್ಲರಿಗೂ ಇದು ಅಸಾಧ್ಯವಾಗಿರಬಹುದು. ಕೆಲವರಿಗೆ ಮನೆಯಲ್ಲಿರುವ ವಯಸ್ಸಾದವರನ್ನು ನೋಡಿಕೊಳ್ಳುವ ಹೊಣೆಗಾರಿಕೆ ಇರುವ ಕಾರಣ, ಪ್ರವಾಸ ಎಂದು ಮನೆಯಿಂದ ಹೊರ ಹೋಗುವುದು ಸಾಧ್ಯವಿಲ್ಲದೆ ನಮ್ಮದೇ ಆದ ಏಕಾಂತಕ್ಕೆ ಹಾತೊರೆಯುವಂತಾಗುತ್ತದೆ. ಆ ಹೊತ್ತಿನಲ್ಲಿ ಲಘು ಸಂಗೀತ ಕೇಳುವುದೋ, ಗಿಡಗಳ ನಡುವೆ ಕಾಲ ಕಳೆಯುವುದೋ, ಓದುವುದೋ ಮಾಡಬಹುದು. ಇದು ಕೂಡ ನಮ್ಮನ್ನು ಬೇಸರದಿಂದ ಹೊರಗೆಳೆದು ನಗು ತರಿಸಬಹುದು.
= ಅನಿತಾ ನರೇಶ್ ಮಂಚಿ