ಅವತ್ತು ನನ್ನ ಗೆಳತಿಯ ಮದುವೆ. ಇಡೀ ಮದುವೆ ಮನೆ ಸಂಭ್ರಮದಲ್ಲಿ ಮುಳುಗಿರುವಾಗ ಗೆಳತಿಯ ತಾಯಿ ಮಾತ್ರ ಒಂದು ಮೂಲೆಯಲ್ಲಿ ನಡೆಯುವ ಶಾಸ್ತ್ರಗಳನ್ನೆಲ್ಲ ನೋಡುತ್ತಾ ಕುಳಿತಿದ್ದರು. ವಿಧವೆಯಾದ ಅವರನ್ನು ಯಾವುದೇ ಶಾಸ್ತ್ರಗಳಲ್ಲೂ ತೊಡಗಿಸಿಕೊಳ್ಳದೆ, ಕಂಡರೂ ಕಾಣದಂತೆ ಆಕೆಯ ಮಗಳ ಮದುವೆ ಮಾಡಿ ಮುಗಿಸಿದ ಧನ್ಯತೆಯಲ್ಲಿದ್ದರು ಮನೆಯವರು. ಹೆತ್ತ ಮಗಳ ಮದುವೆಯಲ್ಲಿ ಕುಳಿತು ಶಾಸ್ತ್ರ ಮಾಡಲಾಗದ, ಸಂಭ್ರಮಿಸಲಾಗದ ಸಂಕಟದಲ್ಲಿ ತೊಳಲಾಡುತ್ತಿರುವ ಅವರತ್ತ ಯಾರಿಗೂ ಲಕ್ಷ್ಯವೇ ಇರಲಿಲ್ಲ.
ಇದೊಂದೇ ಅಲ್ಲ ಮಕ್ಕಳಿಗಾದ ದೃಷ್ಟಿಯನ್ನು ತೆಗೆಯುವಾಗಲೂ 'ಮುಂಡೇರ್ ಕಣ್ಣು ರಂಡೇರ್ ಕಣ್ಣು ಎಲ್ಲ ಹಾಳಾಗಿ ಹೋಗಲಿ' ಎಂದು ಹೇಳುವ ನಾವು ಯಾವತ್ತೂ ಯೋಚಿಸುವುದಿಲ್ಲ, ವಿಧವೆಯಾಗಿರುವುದು ಆ ಹೆಣ್ಣಿನ ತಪ್ಪಾ? ಆ ಅವಸ್ಥೆಗೆ ಕಾರಣ ಆಕೆಯಾ? ಎಂದು.
ಯಾವುದೇ ಸಮಾರಂಭಕ್ಕೆ ಹೋದರೂ ಒಂದು ಸನ್ನಿವೇಶ ಸಾಮಾನ್ಯವಾಗಿ ನಮ್ಮ ಕಣ್ಣಿಗೆ ಗೋಚರಿಸುತ್ತದೆ. ಕುಂಕುಮ ಕೊಡುವ ಸಂದರ್ಭ ಬಂದಾಗ ಕುಂಕುಮ ಹಿಡಿದು ಬರುವವರು ಮುಖ ನೋಡಿ, ವಿಧವೆ ಎಂದು ತಿಳಿದ ತಕ್ಷಣ ಹಿಡಿದಿದ್ದ ಅರಿಶಿನ ಕುಂಕುಮದ ತಟ್ಟೆಯನ್ನು ಹಿಂತೆಗೆದುಕೊಳ್ಳುತ್ತಾರೆ. ವಿಧವೆ ಎಂದ ಕೂಡಲೇ ಶುಭ ಸಮಾರಂಭಗಳಲ್ಲಿ ನೋಡುವ ರೀತಿಯೇ ಬೇರೆ. ತನ್ನದೇ ಮಗಳ/ಮಗನ ಮದುವೆಯಲ್ಲೂ ಮಾಡಬೇಕಾದ ಶಾಸ್ತ್ರಗಳಿಗೆ ಬೇರೆಯವರನ್ನು ಅವಲಂಬಿಸುವ ಸ್ಥಿತಿ.
ಇದಕ್ಕೆಲ್ಲ ಕಾರಣ ನಮ್ಮ ಮೂಢನಂಬಿಕೆ. ವಿಧವೆ ಎಂದರೆ ಅಶುಭ ಎನ್ನುವ ಧೋರಣೆ. ಅವಮಾನವಾದರೂ ನುಂಗಿಕೊಳ್ಳುವ, ತಿರುಗಿ ಅಬ್ಬರಿಸದ ಮನಃಸ್ಥಿತಿ. ವಿಧವೆಯರು ತಮ್ಮಿಂದಾಗಿರದ ಈ ಸ್ಥಿತಿಗೆ ಹೊಣೆ ಏಕಾಗಬೇಕು? ಎನ್ನುವ ಒಂದು ಪ್ರಶ್ನೆ ಜನರ ಮನದಲ್ಲಿ ನಾಟುವಂತೆ ಮಾಡಿದರೆ ಸಮಸ್ಯೆಗೆ ಪರಿಹಾರ ದೊರೆತಂತೆ. ಆಗ ಮಾತ್ರ ಇಂಥ ಮೂಢನಂಬಿಕೆಗಳಿಗೆ ಮುಕ್ತಿ ದೊರೆತು ಕೀಳರಿಮೆ ಸೃಷ್ಟಿಸಿ ಶೋಷಣೆಗೊಳಗಾಗುವ ಎಷ್ಟೋ ಜೀವಗಳ ಮುಖದಲ್ಲಿ ಮಂದಹಾಸ ಮೂಡಬಹುದು.
= ಜಮುನಾ ರಾಣಿ ಎಚ್.ಎಸ್.