ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮಹಿಳೆ-ಮನೆ-ಬದುಕು

ಬ್ರೌಸಿಂಗ್ ಭೂತಕ್ಕೆ ಬಲಿಯಾದರೆ ಎಚ್ಚರಿಕೆ!

Lingaraj Badiger
Updated On : 21 May 2014, 4:46 am

ಹಾಗೊಂದು ಬೈಗುಳ ಅಮ್ಮಂದಿರ ಬಾಯಿಯಿಂದ ಹಲವು ಬಾರಿ ಬರುತ್ತದೆ; 'ಇವಿದ್ದರೆ ಮಕ್ಳಿಗೆ ಊಟ ನಿದ್ರೆ ಏನೂ ಬೇಡ' ಅಂತ. ಮಕ್ಕಳು ಸದಾ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಸೈಬರ್ ಸೆಂಟರ್‌ಗಳಲ್ಲಿ ದಿನದ ಹೆಚ್ಚು ಸಮಯ ಕಳೆಯುತ್ತಿರುವ ಬಗ್ಗೆ ನಮ್ಮ ಸಾಮಾನ್ಯ ದೂರು ಅದು.
ಸುದ್ದಿತಾಣಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಜನರು ಪರಸ್ಪರ ಪರಿಚಿತರಾಗುತ್ತಾರೆ, ಸಂವಾದ ನಡೆಸುತ್ತಾರೆ. ಹೀಗೆ ಪರಿಚಯವಾಗುವ ಜನರಲ್ಲಿ ಕೆಲವರು ಸುಳ್ಳು ಹೆಸರು, ವಿಳಾಸದೊಂದಿಗೆ ಅಂತರ್ಜಾಲದಲ್ಲಿ ಸೇರಿಕೊಂಡು ದುರುದ್ದೇಶ ನಡೆಸುತ್ತಾರೆ. ಇಂಥ ವ್ಯಕ್ತಿಗಳ ಬಗ್ಗೆ, ಗುಂಪು-ಸಂಘಟನೆಗಳ ಬಗ್ಗೆ ಅರಿವು ಮತ್ತು ಎಚ್ಚರ ಅಗತ್ಯ. ಮಕ್ಕಳಿಗೆ ಅಂತರ್ಜಾಲದ ಬಳಕೆಗೆ ಅವಕಾಶ ನೀಡುವ ಪಾಲಕರು ಈ ಕುರಿತು ಮಾರ್ಗದರ್ಶನ ನೀಡುವುದೊಳಿತು.

ಪೋಷಕರಿಗೆ ಸಲಹೆಗಳು
ಸರ್ಚ್ ಎಂಜಿನ್‌ಗಳು ನಾವು ಹುಡುಕುವ ಪದಗಳಿಗೆ, ಪದಗುಚ್ಛಗಳಿಗೆ ಉತ್ತರವಾಗಿ ಲಕ್ಷಾಂತರ ಪುಟಗಳನ್ನು ತೆರೆಯುತ್ತವೆ. ಅವುಗಳಲ್ಲಿ ಕೆಲವು ಅಶ್ಲೀಲ ಪುಟಗಳೂ ಇರುತ್ತವೆ. ಅಂಥ ಪುಟಗಳನ್ನು ನಿರ್ಬಂಧಿಸಲು ಸಾಧ್ಯವಿದೆ. ನಿಮ್ಮ ಕಂಪ್ಯೂಟರ್ C‌ont‌r‌ol​ Pan​elಗೆ ಹೋಗಿ  Inte‌rn​et​ P‌r‌op​e‌r​t‌i​es​ ಸೆಟ್ಟಿಂಗ್‌ನಲ್ಲಿ Fam‌i​ly​ Sa​f​ty ಆನ್ ಮಾಡಿ. ಸಂಬಂಧಿಸಿದ ಸೈಟ್‌ಗಳನ್ನು ಲಾಕ್ ಮಾಡಿ. 

ಇತ್ತೀಚಿನ ದಿನಗಳಲ್ಲಿ ಅತ್ಯಂತ ಪ್ರಸಿದ್ಧವಾಗಿರುವುದು ಮತ್ತು ಎಲ್ಲ ವಯಸ್ಸಿನವರೂ ಆಸಕ್ತಿಯಿಂದ ಪಾಲ್ಗೊಳ್ಳುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ. ಅದರಲ್ಲೂ ಫೇಸ್‌ಬುಕ್, ವಾಟ್ಸ್ ಆ್ಯಪ್‌ಗಳಲ್ಲಿ. ಇಲ್ಲಿ ಹೊಸ ಸ್ನೇಹಿತರನ್ನು ಸಂಪಾದಿಸಿಕೊಳ್ಳುತ್ತಾರೆ, ಅನೇಕ ವಿಷಯಗಳನ್ನು ಚರ್ಚಿಸುತ್ತಾರೆ. ದುರುದ್ದೇಶವುಳ್ಳವರು ಮಕ್ಕಳು ಮತ್ತು ಹದಿಹರೆಯದವರೊಡನೆ ಮಾತಿಗೆ ತೊಡಗಿ, ಸ್ನೇಹ ಸಂಪಾದಿಸುತ್ತಾರೆ. ಮಕ್ಕಳಿಂದ ಅವರ ಖಾಸಗಿ ಮಾಹಿತಿಗಳನ್ನು, ಮನೆಯ ವಿಳಾಸವನ್ನು ಪಡೆದು ಕಳ್ಳತನಕ್ಕೆ ಬಳಸಿಕೊಳ್ಳಬಹುದು, ಅಪ್ರಾಪ್ತರನ್ನು ಅಶ್ಲೀಲವಾಗಿ ಬಳಸಿಕೊಳ್ಳಬಹುದು, ಮತಾಂತರಕ್ಕೆ ಪ್ರಯತ್ನಿಸಬಹುದು, ಭಯೋತ್ಪಾದನೆಗೆ ಪ್ರೇರೇಪಿಸಬಹುದು. ಹೀಗಾಗಿ, ಇಂಥ ತಾಣಗಳಲ್ಲಿ ಮಕ್ಕಳು ಯಾರ ಜತೆ ಮಾತನಾಡುತ್ತಿದ್ದಾರೆ ಎಂಬುದರತ್ತ ನಿಗಾ ಇಡಿ.
ಮಕ್ಕಳು ಬೇರೆಯವರನ್ನು ಸುಲಭವಾಗಿ ನಂಬುತ್ತಾರೆ. ಹೀಗಾಗಿ ಯಾರಾದರೂ ಮುಖತಃ ಭೇಟಿ ಬಯಸಿದರೆ ಮನೆಯ ಹಿರಿಯರಿಗೆ ತಿಳಿಸಲು ಹೇಳಿ. ಗೂಗಲ್ ಕ್ರೋಮ್‌ನಲ್ಲಿ ಅವರಿಗೆ ತಮ್ಮದೇ ಆದ ಜಾಲನಾಮವನ್ನು ರಚಿಸಿ, ಅದರ ಮೂಲಕ ಅಂತರ್ಜಾಲದ ಬಳಕೆ ಮಾಡಿಕೊಳ್ಳಲು ಸಹಾಯ ಮಾಡಿ. ಮಕ್ಕಳಿಗೆ ಇಷ್ಟವಾದ ಪುಟಗಳನ್ನು ಬುಕ್‌ಮಾರ್ಕ್ ಮಾಡಿಕೊಳ್ಳುವುದನ್ನು ಕಲಿಸಿ.

ಸೈಬರ್ ಕ್ರೈಮ್
ಜಾಗತಿಕವಾಗಿ ಸುಮಾರು 300 ಕೋಟಿ ಜನ, 75 ಮಿಲಿಯನ್ ಜಾಲತಾಣಗಳನ್ನು ನೋಡುತ್ತಾರೆ. ಈ ಬೃಹತ್ ಸಂಖ್ಯೆಯ ಬಳಕೆದಾರರನ್ನು ಗುರಿಯಾಗಿಟ್ಟುಕೊಂಡು ಅನೇಕರು ಅಪರಾಧ ನಡೆಸುತ್ತಾರೆ. ಇದರಲ್ಲಿ ಯಾವ ರೀತಿ ಮೋಸಗಳು ನಡೆಯುತ್ತವೆ, ಹೇಗೆ ದೂರ ಉಳಿಯಬೇಕು ಎಂಬುದನ್ನು ತಿಳಿಯುವುದು ಅಗತ್ಯ. ಮುಖ್ಯವಾಗಿ ಹ್ಯಾಕಿಂಗ್, ವೈರಸ್‌ಗಳು, ವಂಚನೆ, ಬೇಹುಗಾರಿಕೆ, ವೇಶ್ಯಾವೃತ್ತಿ, ಜೂಜು, ಡ್ರಗ್ ಬಳಕೆ ಮತ್ತು ಕಳ್ಳಸಾಗಣೆ, ಆತ್ಮಹತ್ಯೆಗೆ ಪ್ರೇರೇಪಿಸುವುದು, ಮಾನಹಾನಿ ಮತ್ತು ಭಯೋತ್ಪಾದನೆಗಳೇ ಸೇರಿವೆ.
ಅಂತರ್ಜಾಲದಲ್ಲಿ ಅಪರಾಧಗಳ ಪ್ರಕಾರಗಳು ಮತ್ತು ಸ್ವರೂಪಗಳ ಕುರಿತು ತಿಳಿಯುವುದು ಎಲ್ಲರಿಗೂ ಅವಶ್ಯ. ಎಷ್ಟೋ ಬಾರಿ ತಮಗೆ ಅರಿವಿಲ್ಲದೇ ಬಳಕೆದಾರರು ಅಪರಾಧವೆಸಗುತ್ತಾರೆ ಅಥವಾ ಅಪರಾಧಗಳಲ್ಲಿ ಭಾಗಿಯಾಗುತ್ತಾರೆ. ಹಾಗಾಗಿ ಬಳಕೆದಾರರಿಗೆ ಎಚ್ಚರ ಅವಶ್ಯ.

ಹ್ಯಾಕಿಂಗ್ ಮಾಡ್ತಾರೋ, ಯಾಕಿಂಗ್ ಕಾಡ್ತಾರೋ?
ಹ್ಯಾಕಿಂಗ್ ಎಂದರೆ ಅನಧಿಕೃತವಾಗಿ ಇನ್ನೊಬ್ಬರ ಜಾಲತಾಣಗಳಿಗೆ, ನೆಟ್‌ವರ್ಕ್‌ಗಳಿಗೆ ನುಗ್ಗುವುದು. ಅಲ್ಲಿರುವ ವಿಷಯಗಳನ್ನು ಹಾಳುಮಾಡುವುದು, ಬದಲಿಸುವುದು, ಅನಗತ್ಯವಾದುದನ್ನು ತುಂಬುವುದು ಮುಂತಾದವು.  ಬಳಕೆದಾರರು ತಮ್ಮ ಬ್ಯಾಂಕಿನ ಪಾಸ್‌ವರ್ಡ್ ಮುಂತಾದ ವಿವರಗಳನ್ನು ನೀಡುವಂತೆ ಮಾಡಿ ಅವರ ಖಾತೆಗೆ ಲಗ್ಗೆ ಹಾಕುವುದು ಅಂತರ್ಜಾಲದಲ್ಲಿ ಸಾಮಾನ್ಯವಾಗಿ ನಡೆಯುವ ವಂಚನೆ. ಕೆಲವೊಮ್ಮೆ ಒಂದು ಸಂಸ್ಥೆಯ ಹೆಸರಲ್ಲಿ ಪಾಸ್‌ವರ್ಡ್ ದೃಢೀಕರಣಕ್ಕಾಗಿ ಇಮೇಲ್ ಕಳಿಸಿ ಬ್ಯಾಂಕ್ ಖಾತೆಯಿಂದ ಹಣ ಕದಿಯುತ್ತಾರೆ.

-ಪ್ರಪುಲ್‌ಚಂದ್ರ ಎಸ್.ಬಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement