ಹೀಗೆ ಮೆಹಂದಿ ಹಾಕಿ
ಹಿಂದಿನ ಕಾಲದಿಂದಲೂ ಅರಿಶಿಣ ಮತ್ತು ಗೋರಂಟಿಗಳನ್ನು ಹೆಂಗಳೆಯರು ತಮ್ಮ ಸೌಂದರ್ಯವರ್ಧಕವಾಗಿ ಬಳಸುತ್ತಿದ್ದರು. ಈಗೇನಿದ್ದರೂ ರೆಡಿಮೇಡ್ ಕಾಲ. ಆಧುನಿಕ ಯುಗದಲ್ಲಿ ಸಮಾರಂಭಕ್ಕೆ ಹೋಗುವ ಸ್ವಲ್ಪ ಸಮಯದ ಮುಂಚೆಯೂ ಕೂಡ ಈ ರೆಡಿಮೇಡ್ ಮೆಹಂದಿಬಳಸಬಹುದು.
ಇನ್ನು ಮೆಹಂದಿಯ ವಿಶೇಷತೆಯ ಬಗ್ಗೆ ಹೇಳುವುದಾದರೆ ಮೆಹಂದಿ ಹಾಕಿಸಿಕೊಂಡ ನಂತರ ಸುಮಾರು 12 ಅಥವಾ 24 ಗಂಟೆಯ ನಂತರ ಅದರ ಬಣ್ಣ ತೆಳು ಕಿತ್ತಳೆಯಿಂದ, ಕಡುಕೆಂಪು ಬಣ್ಣಕ್ಕೆ ತಿರುಗುತ್ತದೆ. ಮೆಹಂದಿಯ ಗುಣಮಟ್ಟಚೆನ್ನಾಗಿದ್ದರೆ ಒಂದು ತಿಂಗಳ ಕಾಲ ಚೆನ್ನಾಗಿ ಎದ್ದು ಕಾಣುತ್ತದೆ. ಇದರಲ್ಲಿಅರೇಬಿಕ್ ಮೆಹಂದಿ ವಿನ್ಯಾಸಗಳು ಬಹಳ ಪ್ರಸಿದ್ಧಿ ಪಡೆದಿವೆ.
ಮೆಹಂದಿಯನ್ನು ಕೇವಲ ಕೈ, ಕಾಲುಗಳಅಲಂಕಾರಕ್ಕೆ ಬಳಸಲಾಗುತ್ತಿಲ್ಲ. ಅದನ್ನು ತಲೆಯ ಕೂದಲಿಗೆ ಬಣ್ಣ ಹಚ್ಚಲೂ ಬಳಸಲಾಗುತ್ತಿದೆ. ಕೂದಲು ಬಿಳುಪಾಗಿದ್ದರೆ ಅದಕ್ಕೆ ಕಾಲಿ ಮೆಹಂದಿ ಅಥವಾ ಲಾಲ್ ಮೆಹಂದಿ ಬಳಸಿ, ಕೂದಲಿನ ಬಣ್ಣ ಕಪ್ಪಾಗಿ ಇಲ್ಲವೇ ಕೆಂಪಾಗಿ ಮಾಡಿಕೊಳ್ಳುತ್ತಿದ್ದಾರೆ. ಕೆಲವು ಜನರು ತಮ್ಮ ಕೈ, ಕಾಲುಗಳ ಉಗುರುಗಳಿಗೆ ಮೆಹಂದಿ ಬಳಸುತ್ತಿದ್ದಾರೆ. ಸಾಮಾನ್ಯವಾಗಿ ಎಲ್ಲರೂ ಮೆಹಂದಿ ತಮ್ಮ ಕೈಕಾಲುಗಳ ಮೇಲೆ ಗಾಢವಾಗಿ ಕಾಣಿಸಬೇಕು ಎಂದು ಇಚ್ಛೆಯುಳ್ಳವರಾಗಿರುತ್ತಾರೆ. ಅದಕ್ಕೋಸ್ಕರ ಈ ಕೆಲ ಟಿಪ್ಸ್ಗಳು ನಿಮಗೆ ಸಹಾಯವಾಗುತ್ತವೆ.
ಮೆಹಂದಿ ಹಚ್ಚಿಕೊಳ್ಳುವ ಮುನ್ನ ಕೈಯನ್ನು ತೊಳೆದು, ಹಚ್ಚುವ ಭಾಗಕ್ಕೆ ಟೋನರ್ ಅಥವಾ ಆಸ್ಟೋಜೆಂಟ್ ಹಚ್ಜಿದರೆ ಅದು ಕೈಯಲ್ಲಿರುವ ಎಣ್ಣೆಯಂಶ ಅಥವಾ ಜಿಡ್ಡಿನಂಶವನ್ನು ತೆಗೆದು ಕೈಗೆ ಮೆಹಂದಿ ಚೆನ್ನಾಗಿ ಹಿಡಿಯುವಂತೆ ಮಾಡುತ್ತದೆ.
ಮೆಹಂದಿ ವಿನ್ಯಾಸವನ್ನು ಸ್ವಲ್ಪ ದಪ್ಪ ಎಳೆಯಲ್ಲಿ ಹಾಕಿದರೆ ವಾಸಿ. ಮೆಹಂದಿ ಬೇಗ ಮಾಸುವುದಿಲ್ಲ.
ಮೆಹಂದಿ ಹಚ್ಚಿಕೊಂಡ ನಂತರ ಅದನ್ನು ಬೇಗನೆ ತೆಗೆಯಬೇಡಿ, ಕನಿಷ್ಠ 2 ಗಂಟೆಗಳ ಕಾಲ ಒಣಗಲು ಬಿಟ್ಟು ತೆಗೆಯಬೇಕು. ಇಲ್ಲದಿದ್ದರೆ ಮೆಹಂದಿ ಬಣ್ಣಗಾಢವಾಗಿ ಬರುವುದಿಲ್ಲ.
ಮೆಹಂದಿ ಹಚ್ಚಿಕೊಂಡು ಅದು ಒಣಗುವ ಹಂತಕ್ಕೆ ಬಂದಾಗ ಸಕ್ಕರೆ ಮತ್ತು ಲಿಂಬೆಹಣ್ಣಿನ ರಸವನ್ನು ಸಮನಾಗಿ ಮಿಶ್ರಣ ಮಾಡಿ ಸ್ವಲ್ಪ ಮಟ್ಟಿಗೆ ಬೆಚ್ಚಗೆ ಕಾಯಿಸಿ ಮೆಹಂದಿ ಹಚ್ಚಿದ ಭಾಗಕ್ಕೆ ಚಿಮುಕಿಸಿ. ಅರ್ಧ ಗಂಟೆಗೊಂದು ಸಾರಿ ಈ ರೀತಿ ಮಾಡುತ್ತಿದ್ದರೆ. ಮೆಹಂದಿಯ ಬಣ್ಣಗಾಢವಾಗುತ್ತದೆ.
ಮೆಹಂದಿ ಹಚ್ಚಿಕೊಂಡ ನಂತರ ಅದು ಆರಿದ ಮೇಲೆ ಅದನ್ನು ನಿಧಾನವಾಗಿ ಕೆರೆದು ತೆಂಗಿನೆಣ್ಣೆ ಹಚ್ಚಬೇಕು. ಇದರಿಂದ ಕೂಡ ಗಾಢ ವರ್ಣ ಬರುತ್ತದೆ ಮತ್ತು ಒಂದು ದಿನದ ಮಟ್ಟಿಗೆ ಸೋಪಿನಿಂದ ಮೆಹಂದಿ ಹಾಕಿದ ಭಾಗಕ್ಕೆ ಉಜ್ಜಬಾರದು.
-ಆಶಾ ಎಸ್.ಕೆ
kulkarni.asha3@gmail.com