ಮಕ್ಕಳು ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆಗೆ ಬಂದಾಗ ಹಲವು ದೈಹಿಕ ಹಾಗೂ ಮಾನಸಿಕ ಬದಲಾವಣೆಗಳಾಗುವುದು ಸಾಮಾನ್ಯ. ಹೆಣ್ಣುಮಕ್ಕಳು ಪ್ರೌಢಾವಸ್ಥೆಗೆ ಬರುವುದು ಎಂದರೆ ಋತುಮತಿ ಹೊಂದುವುದು ಅಥವಾ ಮುಟ್ಟಾಗುವುದು ಎಂದು ನಾವು ಹೇಳುತ್ತೇವೆ.
ಆರೋಗ್ಯವಂತ ಹೆಣ್ಣುಮಕ್ಕಳು ಸಾಮಾನ್ಯವಾಗಿ 12ರಿಂದ 16 ವರ್ಷದ ಒಳಗೆ ಮುಟ್ಟಾಗುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳು ಪೂರ್ವಪ್ರೌಢಿಮೆ ಹೊಂದುವ ಸಂಖ್ಯೆ ಜಾಸ್ತಿಯಾಗುತ್ತಿದೆ. 10 ವರ್ಷದೊಳಗೆ ಹುಡುಗಿಯರು ಮುಟ್ಟಾಗುವುದನ್ನು ನಾವು ಅಲ್ಲಲ್ಲಿ ಕೇಳುತ್ತಿದ್ದೇವೆ. ಕೆಲವು ಮಕ್ಕಳಂತೂ 5ರಿಂದ 8 ವರ್ಷದೊಳಗೆ ಪ್ರೌಢಾವಸ್ಥೆಗೆ ಬರುತ್ತಾರೆ. ಇಂತಹ ಸಂದರ್ಭದಲ್ಲಿ ಮಕ್ಕಳು ಮತ್ತು ಅವರ ತಾಯಿ ಆತಂಕಕ್ಕೀಡಾಗುತ್ತಾರೆ. ಈ ರೀತಿ ಆಗುವುದು ಸಹಜ ಬೆಳವಣಿಗೆಯಲ್ಲ. ಇದು ಮಕ್ಕಳ ದೈಹಿಕ ಮತ್ತು ಮಾನಸಿಕ ಸ್ಥಿತಿಯ ಮೇಲೆ ತೀವ್ರ ಪರಿಣಾಮ ಬೀರಬಹುದು. ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಬಹುದು.
ಕಾರಣವೇನು?
precacious puberty ಅಥವಾ early maturity ಎಂದು ಆಂಗ್ಲಭಾಷೆಯಲ್ಲಿ ಕರೆಯುವ ಪೂರ್ವಪ್ರೌಢಿಮೆಗೆ ಕೆಲವು ನಿರ್ದಿಷ್ಟ ವೈದ್ಯಕೀಯ ಕಾರಣವಿದೆ ಎನ್ನುತ್ತಾರೆ ವೈದ್ಯರು. ಮಕ್ಕಳಿಗೆ ಸಣ್ಣವರಿರುವಾಗ ತಲೆಗೆ ಪೆಟ್ಟು ಬಿದ್ದಿದ್ದರೆ, ಮೆದುಳಿನ ಸೋಂಕು ಸಂಭವಿಸಿದ್ದಲ್ಲಿ ಮೆದುಳಿನಲ್ಲಿರುವ ಹೈಪೊಥಲಮಸ್ ಎಂಬ ಅಂಗದಲ್ಲಿ ವ್ಯತ್ಯಾಸವುಂಟಾಗಿ ಮಕ್ಕಳು ಎಳೆ ವಯಸ್ಸಿನಲ್ಲಿಯೇ ಮುಟ್ಟು ಹೊಂದುವ ಸಾಧ್ಯತೆಯಿದೆ. ಹೈಪೊಥಲಮಸ್ ಎಂಬ ಅಂಗವು ಹೆಣ್ಣುಮಕ್ಕಳ ಲೈಂಗಿಕ ಕ್ರಿಯೆಗೆ ಕಾರಣವಾಗುವ ಓವರೀಸ್ ಎಂಬ ಹಾರ್ಮೋನ್‍ನ್ನು ಬಿಡುಗಡೆ ಮಾಡುವ ಪಿಟ್ಯುಟರಿ ಎಂಬ ಗ್ರಂಥಿಯನ್ನು ಪ್ರಚೋದಿಸುತ್ತದೆ. ಆದರೆ ಇದು ಬೆರಳೆಣಿಕೆಯಷ್ಟು ಮಾತ್ರ ಎನ್ನುತ್ತದೆ ವೈದ್ಯ ವಿಜ್ಞಾನ.
ಇನ್ನು ಹಲವರಿಗೆ ಅನುವಂಶಿಕ ಕಾರಣಗಳೂ ಇರಬಹುದು. ತಂದೆ ಅಥವಾ ತಾಯಿಯ ಕಡೆಯಿಂದ ಬೇಗನೆ ಮುಟ್ಟಾಗುವ ಲಕ್ಷಣ ಬರಬಹುದು. ಇಂಥಹದ್ದೇ ಎಂದು ನಿರ್ದಿಷ್ಟ ಕಾರಣವನ್ನು ಹೇಳಲು ಸಾಧ್ಯವಿಲ್ಲ.
ಆದರೆ ಪೂರ್ವ ಪ್ರೌಢಿಮೆಗೆ ಮುಖ್ಯ ಕಾರಣ ಇಂದಿನ ಆಧುನಿಕ ಜೀವನಶೈಲಿ ಎನ್ನುತ್ತಾರೆ ಬೆಂಗಳೂರಿನ ದಾಸರಹಳ್ಳಿಯಲ್ಲಿರುವ ವೈದ್ಯೆ ಡಾ. ಸಿ. ಮಂಜುಳ. ಇದು ನಗರ ಪ್ರದೇಶದಲ್ಲಿ ಶೇ 75ರಷ್ಟಿದ್ದರೆ ಹಳ್ಳಿ ಭಾಗಗಳಲ್ಲಿ ಶೇ 25 ಇರುತ್ತದೆ. ನಗರ ಪ್ರದೇಶಗಳಲ್ಲಿ ಮಕ್ಕಳಿಗೆ ಶಾರೀರಿಕ ವ್ಯಾಯಾಮ ಸಿಗುವುದು ಕಡಿಮೆ. ಟಿ.ವಿ, ಕಂಪ್ಯೂಟರ್ ಮುಂದೆ ಬಹಳ ಹೊತ್ತು ಕಳೆಯುತ್ತಾರೆ, ಕೊಬ್ಬಿನಂಶವಿರುವ ಜಂಕ್‍ಫುಡ್‍ಗಳನ್ನು ಹೆಚ್ಚಾಗಿ ಸೇವಿಸುವುದರಿಂದ, ದೇಹಕ್ಕೆ ಸರಿಯಾದ ವ್ಯಾಯಾಮದ ಕೊರತೆ, ಚಿಕ್ಕ ವಯಸ್ಸಿನಲ್ಲಿಯೇ ದೇಹದಲ್ಲಿ ಬೊಜ್ಜು ತುಂಬಿಕೊಳ್ಳುವುದರಿಂದ ಬೇಗನೆ ಪ್ರೌಢರಾಗುತ್ತಾರೆ ಎನ್ನುತ್ತಾರೆ ಅವರು.
ಪತ್ತೆಹಚ್ಚುವುದು ಹೀಗೆ:
ಎಲ್ಲಾ ಹುಡುಗಿಯರಿಗೂ ಮುಟ್ಟಾದ ಪ್ರಾರಂಭದಲ್ಲಿ ಮನಸ್ಸಿಗೆ ಕಿರಿಕಿರಿಯಾಗುತ್ತದೆ. ಮಾನಸಿಕವಾಗಿ ವಿಚಲಿತರಾಗಬಹುದು. ಅದರಲ್ಲೂ ಇನ್ನೂ ಎಳವೆಯಾಗಿರುವಾಗಲೇ ಆಟವಾಡುವ ವಯಸ್ಸಿನಲ್ಲಿಯೇ ಋತುಮತಿಗಳಾಗಿಬಿಟ್ಟರೆ ಕೇಳಬೇಕೆ? ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ತಾಯಿಯಾದವಳ ಬೆಂಬಲ ಅಗತ್ಯ. ತಾಯಿಯಾದವಳು ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿರಬೇಕು. ಮಕ್ಕಳು ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆಗೆ ಬರುತ್ತಿದ್ದಾರೆ ಎಂದು ಗೊತ್ತಾಗುವುದು ಅವರ ದೈಹಿಕ ಬೆಳವಣಿಗೆಯಿಂದ. ಇದ್ದಕ್ಕಿದ್ದಂತೆ ಎತ್ತರ ಬೆಳೆಯುತ್ತಾರೆ, ಶರೀರ ದಪ್ಪವಾಗುತ್ತದೆ. ಎದೆಭಾಗದಲ್ಲಿ ಬೆಳವಣಿಗೆ ಅತ್ಯಂತ ಸಾಮಾನ್ಯ ಮತ್ತು ಸಹಜ. ದೇಹದ ವಿವಿಧ ಭಾಗಗಳಲ್ಲಿ ಕೂದಲಿನ ಬೆಳವಣಿಗೆಯೂ ಪ್ರಮುಖ ಲಕ್ಷಣ.
ಹೆಣ್ಣು ಮಕ್ಕಳು ಪ್ರೌಢರಾಗುವುದು ಎಂದರೆ ಕೇವಲ ಮುಟ್ಟಾಗುವುದು ಅಷ್ಟೇ ಅಲ್ಲ. ಅವರ ಎತ್ತರ, ತೂಕದಲ್ಲಿ ಬೆಳವಣಿಗೆಯಾಗುತ್ತದೆ. ಮೂಳೆ ಬಲಿತಿರುತ್ತದೆ. ಅವರ ವಯಸ್ಸಿನ ಮಕ್ಕಳಿಗಿಂತ ದೊಡ್ಡವರಂತೆ ಕಂಡುಬಂದರೂ ನಂತರ ಈ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ.
ಪರಿಹಾರವೇನು?
ಮಕ್ಕಳಲ್ಲಿ ಎಂಟು-ಒಂಭತ್ತು ವರ್ಷದ ಕೆಳಗೆ ದೈಹಿಕ ಬೆಳವಣಿಗೆ ಕಂಡುಬಂದರೆ ಮೊದಲು ಮಾಡಬೇಕಾದ ಕೆಲಸ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು. ಪೂರ್ವ ಪ್ರೌಢಿಮೆಯ ಲಕ್ಷಣ ಕಂಡುಬಂದರೆ ವೈದ್ಯರು ರಕ್ತದ ಅಥವಾ ಮೂತ್ರ ಪರೀಕ್ಷೆ ಮಾಡುತ್ತಾರೆ. ಕೈ-ಕಾಲುಗಳ ಮೂಳೆ ಬೆಳವಣಿಗೆ ಹೊಂದಿದೆಯೇ ಎಂದು ತಿಳಿದುಕೊಳ್ಳಲು ಎಕ್ಸ್-ರೇ ಮಾಡಬಹುದು. ಮಕ್ಕಳ ಮೆದುಳಿನಲ್ಲಿ ವ್ಯತ್ಯಾಸವಿರುವುದೇ ಎಂದು ದೃಢಪಡಿಸಲು ಸಿಟಿ ಸ್ಕಾನ್, ಎಂಆರ್‍ಐ ಮತ್ತು ಅಲ್ಟ್ರಾಸೌಂಡ್ ಪರೀಕ್ಷೆಗಳನ್ನು ನಡೆಸಬಹುದು.
ಮಕ್ಕಳನ್ನು ಹಾರ್ಮೋನ್ ಪರೀಕ್ಷಾ ತಜ್ಞರಲ್ಲಿ ಪರೀಕ್ಷಿಸುವುದು ಉತ್ತಮ. ಅಂತಹ ವೈದ್ಯರು, ಮಕ್ಕಳ ಲೈಂಗಿಕ ಹಾರ್ಮೋನ್‍ಗಳ ವೇಗವಾದ ಬೆಳವಣಿಗೆಗೆ ಔಷಧಿಗಳ ಮೂಲಕ ತಡೆಹಾಕುತ್ತಾರೆ. ಇಂತಹ ಮಕ್ಕಳಿಗೆ ಹಾರ್ಮೋನ್ ಥೆರಪಿ ಮೂಲಕ ಕೂಡ ಚಿಕಿತ್ಸೆ ನೀಡಬಹುದು ಎನ್ನುತ್ತಾರೆ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ವೈದ್ಯೆ ಡಾ. ಸುಧಾ ರವೀಂದ್ರ.
ಮಕ್ಕಳಲ್ಲಿ ಲೈಂಗಿಕ ಹಾರ್ಮೋನ್‍ಗಳ ಬೆಳವಣಿಗೆಯನ್ನು ತಡೆಯುವ ಚಿಕಿತ್ಸೆ ಎಲ್‍ಎಚ್‍ಆರ್‍ಎಚ್ ಜನಪ್ರಿಯವಾಗಿದೆ. ಇದು ದೇಹದಲ್ಲಿ ಹೆಚ್ಚು ಲೈಂಗಿಕ ಹಾರ್ಮೋನ್‍ಗಳು ಉತ್ಪತ್ತಿಯಾಗುವುದನ್ನು ತಡೆಹಿಡಿಯುತ್ತದೆ. ಇದರಿಂದ ದೇಹಕ್ಕೆ ಇತರ ಅಡ್ಡ ಪರಿಣಾಮಗಳಿರುವುದಿಲ್ಲ. ಸುರಕ್ಷಿತ ಕ್ರಮ. ಚಿಕಿತ್ಸೆ ಆರಂಭಿಸಿದ ಒಂದು ವರ್ಷದೊಳಗೆ ಫಲಿತಾಂಶ ಗೊತ್ತಾಗುತ್ತದೆ ಎನ್ನುತ್ತಾರೆ ಇವರು.
ಮಕ್ಕಳ ತಯಾರಿ:
ಋತುಮತಿ ಎನ್ನುವುದು ಹೆಣ್ಣುಮಕ್ಕಳಲ್ಲಿ ಒಂದು ಸಹಜ ಪ್ರಕ್ರಿಯೆ. ಈ ಬಗ್ಗೆ ಯಾವುದೇ ಮಡಿವಂತಿಕೆ, ಮುಚ್ಚುಮರೆ ಇಲ್ಲದೆ ಮನೆಯಲ್ಲಿ ತಾಯಿ, ಹಿರಿಯರು ಮಕ್ಕಳಿಗೆ ವಿವರಿಸುವುದು ಅತ್ಯಗತ್ಯ. ಅತ್ಯಂತ ಬಾಲ್ಯದಲ್ಲಿಯೇ ಮುಟ್ಟು ಹೊಂದಿದ ಮಕ್ಕಳಿಗೆ ಸ್ವಲ್ಪ ಸಮಾಧಾನ ಮಾಡುವುದು, ತಿಳಿ ಹೇಳುವುದು ಕಷ್ಟವೇ. ಆರಂಭದಲ್ಲಿ ಅವರಿಗೆ ಯಾವುದರಲ್ಲಿಯೂ ಉತ್ಸಾಹ ಇಲ್ಲದಿರಬಹುದು. ಶಾಲೆಯಲ್ಲಿ ಸಮಸ್ಯೆಯಾಗಬಹುದು, ಓದಿನಲ್ಲಿ ಆಸಕ್ತಿ ಇಲ್ಲದಿರಬಹುದು.