ವಿಶ್ವ ಮಹಿಳಾ ದಿನ

ಮಾಳವಿಕಾ ಅಯ್ಯರ್: ಬಾಂಬ್‌ ಸ್ಫೋಟದಲ್ಲಿ ಎರಡೂ ಅಂಗೈಗಳ ಕಳೆದುಕೊಂಡರೂ ಸಾಧನೆ ಮಾಡಿ ತೋರಿಸಿದ ಅಪರೂಪದ ಛಲಗಾತಿ.!

Srinivasamurthy VN

ಇಂದು ಅಂತಾರಾಷ್ಟ್ರೀಯ ಮಹಿಳಾ ದಿನ.. ವಿವಿಧ ರಂಗದಲ್ಲಿ ಮಹತ್ತರ ಸಾಧನೆ ಗೈದು ಇತರರಿಗೆ ಸ್ಪೂರ್ತಿಯಾಗಿ ನಿಂತಿರುವ ಮಹಿಳಾ ಮಣಿಯರನ್ನು ನೆನೆಯುವ ಮೂಲಕ ಅವರಿಗೆ ಧನ್ಯವಾದ ಹೇಳಬೇಕಿದೆ. ತಮಗೆ ಎದುರಾದ ಕಷ್ಟಗಳನ್ನು ಮೆಟ್ಟಿ ನಿಂತು ಅಪರೂಪದ ಸಾಧನೆ ಮಾಡಿದ ಸಾಧಕರಲ್ಲಿ ತಮಿಳುನಾಡು ಮೂಲದ ಮಾಳವಿಕ ಅಯ್ಯರ್ ಕೂಡ ಒಬ್ಬರು.

ಮಾಳವಿಕಾ ಅಯ್ಯರ್ ಪಾಕಪ್ರವೀಣೆ. ರುಚಿ ರುಚಿಯಾದ ತಿನಿಸುಗಳನ್ನು ಮತ್ತು ನವ ರುಚಿಗಳಲ್ಲಿ ಎತ್ತಿದ ಕೈ. ಆದರೆ ಮಾಳವಿಕಾ ಅವರಿಗೆ ಎರಡೂ ಕೈಗಳೂ ಇಲ್ಲ. ಮಾಳವಿಕ ಆವರು 13 ವರ್ಷದವರಾಗಿದ್ದಾಗಲೇ ಬಾಂಬ್ ಸ್ಫೋಟವೊಂದರಲ್ಲಿ ಎರಡೂ ಕೈಗಳನ್ನು ಕಳೆದುಕೊಂಡಿದ್ದರು. ಆದರೆ ಛಲ ಬಿಡದ ಮಾಳವಿಕಾ ಈಗ ಪಿ ಎಚ್ ಡಿ ಪದವಿ ಪಡೆದಿದ್ದಾರೆ. 

ಡಾ. ಮಾಳವಿಕಾ ಅಯ್ಯರ್. ಮೂಲತಃ ತಮಿಳುನಾಡಿನ ಕುಂಭಕೋಣಂನವರು. ಅಂತಾರಾಷ್ಟ್ರೀಯ ಮಟ್ಟದ ಭಾಷಣಕಾರ್ತಿ. ಹಲವಾರು ಹೆಗ್ಗಳಿಕೆಗೆ ಪಾತ್ರರಾದ ಮಾಳವಿಕಾ ಸದ್ಯ ಇಡೀ ವಿಶ್ವವೇ ಕುತೂಹಕಾರಿಯಾಗಿ ನೋಡುವಷ್ಟರ ಮಟ್ಟಿಗೆ ಸಾಧನೆ ಗೈದಿದ್ದಾರೆ. ಈ ಬಗ್ಗೆ ಮಾಳವಿಕಾ ಮಾಡಿರೋ ಫೇಸ್ ಬುಕ್ ಪೋಸ್ಟ್ ಕೂಡ ವೈರಲ್ ಆಗಿದೆ. ಖ್ಯಾತ ಬಾಣಸಿಗ ವಿಕಾಸ್ ಖನ್ನಾ ಕೂಡ ಮಾಳವಿಕಾ ಅವರ ಪಾಕ ಕಲೆಯನ್ನು ಮೆಚ್ಚಿಕೊಂಡಿದ್ದು, ಅವರ ಸಾಧನೆಗೆ ಶಹಬ್ಬಾಶ್ ಗಿರಿ ಕೊಟ್ಟಿದ್ದಾರೆ. ಬೆರಳುಗಳೇ ಇಲ್ಲದಿದ್ದರೂ ಮಾಳವಿಕಾ ತಮ್ಮ ಪಿ ಎಚ್ ಡಿ ಪ್ರಬಂಧವನ್ನು ಬರೆದಿದ್ದಾರೆ. ಈಗ ಡಾ.ಮಾಳವಿಕಾ ಅಯ್ಯರ್ ಎನಿಸಿಕೊಂಡಿದ್ದಾರೆ. ಮಾಳವಿಕಾ ಅವರ ಫೇಸ್ ಬುಕ್ ಪೋಸ್ಟ್ ಅನ್ನು 3000 ಕ್ಕೂ ಅಧಿಕ ಜನ ಲೈಕ್ ಮಾಡಿ ಶೇರ್ ಮಾಡಿದ್ದಾರೆ. 

ಬದುಕೇ ತಿಳಿಯದ ವಯಸ್ಸಲ್ಲಿ ಬುದಕ ಕಸಿದ ಬಾಂಬ್ ಸ್ಫೋಟ
ಜೀವನ ಎಂಬ ಪದಕ್ಕೆ ಅರ್ಥವೇ ತಿಳಿಯದ ವಯಸ್ಸಿನಲ್ಲಿ ಮಾಳವಿಕಾ ಅವರ ಜೀವನದಲ್ಲಿ ಒಂದು ದುರ್ಘಟನೆ ಸಂಭವಿಸಿತ್ತು. ಅವರು ಕೇವಲ 13 ವರ್ಷದವರಾಗಿದ್ದಾಗ ಸಂಭವಿಸಿದ್ದ ಬಾಂಬ್ ಸ್ಫೋಟ ಅವರ ಬುದಕನ್ನೇ ಕತ್ತಲೆಯಾಗಿಸಿತ್ತು. 2002ರ ಮೇ 26ರಂದು ರಾಜಸ್ಥಾನದ ಬಿಕನೇರ್‌ನಲ್ಲಿ ಸಂಭವಿಸಿದ್ದ ಬಾಂಬ್‌ ಸ್ಫೋಟದಲ್ಲಿ ಮಾಳವಿಕಾ ಅವರಿಗೆ ತೀವ್ರವಾಗಿ ಗಾಯವಾಗಿತ್ತು. ಜೀವ ಉಳಿಯುವುದೂ ಕಷ್ಟ ಎಂಬಂತಹ ಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ, ಬಾಲಕಿ ಮಾಳವಿಕಾರ ಜೀವ ಉಳಿಸಲು ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದರು. ಪರಿಣಾಮ ಮಾಳವಿಕಾ ಜೀವಕ್ಕೇನು ತೊಂದರೆ ಆಗಲಿಲ್ಲವಾದರೂ ಶಸ್ತ್ರಚಿಕಿತ್ಸೆ ವೇಳೆಯಲ್ಲಾದ ಸಣ್ಣ ತಪ್ಪಿನಿಂದಾಗಿ ಮಾಳವಿಕಾ ತನ್ನ ಎರಡೂ ಕೈಗಳ ಅಂಗೈಯನ್ನು ಕಳೆದುಕೊಳ್ಳಬೇಕಾಯಿತು.

ಸ್ಫೋಟ ಮತ್ತು ಬಳಿಕ ನಡೆದ ಘಟನೆಗಳಿಂದಾಗಿ ಮಾಳವಿಕಾ 18 ತಿಂಗಳು ಆಸ್ಪತ್ರೆಯಲ್ಲೇ ಕಳೆಯಬೇಕಾಯಿತು. ಅಂಗೈಯನ್ನು ಕಳೆದುಕೊಂಡ ಬಳಿಕ ನೊಂದು ಕುಳಿತಿದ್ದ ಮಾಳವಿಕಾ ಭರವಸೆ ಕಳೆದುಕೊಂಡಿರಲಿಲ್ಲ. ಕಷ್ಟದ ಸ್ಥಿತಿಯನ್ನು ಮೆಟ್ಟಿ ನಿಂತು ಸಾಧಿಸುವ ಹಠ ತೊಟ್ಟರು. ತಾನೇನನ್ನಾದರೂ ಸಾಧಿಸಿಯೇ ತೋರಬೇಕು ಎಂದು ಛಲ ತೊಟ್ಟರು. ಇದೇ ನೋವಲ್ಲಿ ಚೆನ್ನೈ ಮಿಡ್ಲ್ ಶಾಲೆಗೆ ಸೇರಿಕೊಂಡ ಮಾಳವಿಕಾ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದು ಉತ್ತಮ ಅಂಕ ಪಡೆದರು. ತಮ್ಮ ಅಂಗ ದೌರ್ಬಲ್ಯವನ್ನೇ ಬಲವಾಗಿ ಮಾರ್ಪಡಿಸಿಕೊಂಡ ಮಾಳವಿಕಾ ತಮ್ಮ ಕೈ ಮೂಳೆಯನ್ನೇ ಬೆರಳುಗಳಾಗಿ ಮಾರ್ಪಡಿಸಿಕೊಂಡು ಪರೀಕ್ಷೆ ಬರೆದರು. ಇದೇ ಸಂದರ್ಭದಲ್ಲಿ ಮಾಳವಿಕಾ ಅವರು ಎಪಿಜೆ ಅಬ್ದುಲ್ ಕಲಾಂರನ್ನು ಭೇಟಿ ಮಾಡಿ ಅವರಿಂದ ಸ್ಪೂರ್ತಿ ಪಡೆದಿದ್ದರು. ಆ ಭೇಟಿ ಮಾಳವಿಕಾ ಅವರ ಜೀವನದ ಚಿಂತನೆಯನ್ನೇ ಬದಲಿಸಿತ್ತು. ದೆಹಲಿಯ ಸೆಂಟ್ ಸ್ಟೀಫನ್ ಕಾಲೇಜಿನಲ್ಲಿ ಮಾಳವಿಕಾ ಪದವಿ ಪಡೆಯುತ್ತಾರೆ. 

ಬಳಿಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ತಮ್ಮ ನೋವನ್ನು ಮರೆಯಲು ಮಾಳವಿಕಾ ಪ್ರಯತ್ನಿಸುತ್ತಾರೆ. ಅದೇ ದಾರಿಯಲ್ಲಿ ಅವರು ತುಂಬಾ ಕಷ್ಟ ಪಟ್ಟು ಪಿಎಚ್ ಡಿ ಕೂಡ ಪಡೆದರು. ಮಾಳವಿಕಾ ಅವರ ಈ ಸಾಧನೆ ಗಮನಿಸಿ ಸಾಕಷ್ಟು ಸಂಸ್ಥೆಗಳು ಅವರನ್ನು ಸನ್ಮಾನಿಸಿದೆ. ಪ್ರಮುಖ ಕಾರ್ಯಕ್ರಮಗಳಲ್ಲಿ ಅವರನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಿ ಗೌರವಿಸಿದೆ. 

ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ಮಾಳವಿಕಾ ಟ್ವಿಟ್ಟರಿನಲ್ಲಿ ತಮ್ಮ ಅಂದಿನ ಘಟನೆಯನ್ನು ಮೆಲುಕು ಹಾಕಿಕೊಂಡಿದ್ದಾರೆ. ಜೊತೆಗೆ ಖುಷಿ ವ್ಯಕ್ತಪಡಿಸಿದ್ದಾರೆ. ಸದ್ಯ ಇವರ ಪೋಸ್ಟ್ ವೈರಲ್ ಆಗುತ್ತಿದೆ. 

ಇನ್ನು ಇಂತಹ ಅಪರೂಪದ ಸಾಧಕಿಗೆ ಇಂದು ಅತ್ಯುನ್ನತ ಗೌರವ ಲಭಿಸಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟರ್ ಖಾತೆಯನ್ನು ಇಂದು ನಿರ್ವಹಣೆ ಮಾಡುವ ಗೌರವಕ್ಕೆ ಪಾತ್ರರಾಗಿದ್ದಾರೆ.

SCROLL FOR NEXT