ವಿದೇಶ

ಮೃತ ಬಿನ್ ಲಾಡೆನ್‌ಗೆ ಮಹಾತ್ಮ ಗಾಂಧಿ ಸ್ಫೂರ್ತಿಯಾಗಿದ್ರಂತೆ!

Vishwanath S
ಲಂಡನ್: ಅಮೆರಿಕದ ಮೋಸ್ಟ್ ವಾಂಟೆಡ್ ಟೆರರಿಸ್ಟ್ ಮೃತ ಒಸಾಮ ಬಿನ್ ಲಾಡೆನ್ ಅಮೆರಿಕಾ ವಿರುದ್ಧದ ದಾಳಿಗೆ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಸ್ಫೂರ್ತಿಯಾಗಿದ್ದರಂತೆ. 
ವಿಶ್ವದ ಅನೇಕ ಕಡೆ ರಕ್ತಪಾತಗಳಿಗೆ ಕಾರಣನಾದ, ಅದರಲ್ಲೂ ಅಮೆರಿಕದ ಅವಳಿ ಕಟ್ಟಡ ಧ್ವಂಸ ಘಟನೆಗೆ ಮಾಸ್ಟರ್ ಮೈಂಡ್ ಆದ ಒಸಾಮ ಬಿನ್ ಲಾಡೆನ್ ಬಗ್ಗೆ ಕುತೂಹಲದ ಸಂಗತಿಯೊಂದು ಬೆಳಕಿಗೆ ಬಂದಿದೆ. ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡಲು ಮಹತ್ವದ ಪಾತ್ರ ವಹಿಸಿದ ಮಹಾತ್ಮ ಗಾಂಧಿಯನ್ನು ಲಾಡೆನ್ ತನ್ನ ಭಾಷಣದಲ್ಲಿ ಪ್ರಸ್ತಾಪ ಮಾಡಿರುವ ವಿಷಯ ಬಹಿರಂಗಗೊಂಡಿದೆ.
ಆಫ್ಘಾನಿಸ್ತಾನದಲ್ಲಿ ಅಮೆರಿಕದ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ 1993ರಲ್ಲಿ ಭಾಷಣವೊಂದರಲ್ಲಿ ಒಬಾಮ ಕರೆ ಕೊಟ್ಟಿರುತ್ತಾನೆ. ಇದಕ್ಕೆ ಒಸಾಮ ಉದಾಹರಣೆಯಾಗಿ ನೀಡಿದ್ದು ಮಹಾತ್ಮ ಗಾಂಧಿಯವರನ್ನು. ಸೂರ್ಯ ಮುಳುಗದ ಸಾಮ್ರಾಜ್ಯ ಎಂದೇ ಖ್ಯಾತವಾಗಿದ್ದ ಬಲಿಷ್ಠ ಬ್ರಿಟಿಷರ ವಿರುದ್ಧ ಮಹಾತ್ಮ ಗಾಂಧಿ ಅಸಹಾಕಾರ ಚಳವಳಿ ನಡೆಸುತ್ತಾರೆ. 
ಬ್ರಿಟಿಷರ ವಸ್ತುಗಳನ್ನು ಬಹಿಷ್ಕರಿಸುವಂತೆ ಗಾಂಧಿಜೀ ಕರೆಕೊಡುತ್ತಾರೆ. ಜನರು ಈ ಕರೆಗೆ ಓಗೊಡುತ್ತಾರೆ. ಚಳವಳಿ ಯಶಸ್ವಿಯಾಗುತ್ತದೆ. ಬ್ರಿಟಿಷರು ಬೇರೆ ದಾರಿ ಕಾಣದೆ ವಿಚಲಿತರಾಗಿ ಭಾರತ ಬಿಟ್ಟು ಹೋಗುತ್ತಾರೆ. ಒಸಾಮ ಈ ಸಂಗತಿಯನ್ನು ನೆನಪಿಸುತ್ತಾ, ಹಿಂದೂ ಗಾಂಧಿ ಇಂಥ ಕೆಲಸ ಮಾಡುತ್ತಾರೆ. ಈಗ ನೀವೂ ಅಮೆರಿಕದ ವಸ್ತುಗಳನ್ನು ಬಹಿಷ್ಕರಿಸಿ ಎಂದು ಆಫ್ಘನ್ನರಿಗೆ ಕರೆಕೊಡುವ ಕ್ಯಾಸೆಟ್ ಗಳಲ್ಲಿ ಈ ವಿಷಯ ಪ್ರಸ್ತಾಪವಾಗಿದೆ. 
2001ರಲ್ಲಿ ಆಫ್ಘಾನಿಸ್ತಾನದ ಮೇಲೆ ಅಮೆರಿಕ ದಾಳಿ ನಡೆಸಿದಾಗ ಕಂದಹಾರ್ ನಲ್ಲಿದ್ದ ಲಾಡೆನ್ ಅಲ್ಲಿಂದ ಕಾಲ್ತೆಗೆಯುತ್ತಾನೆ. ಆಗ ಆತನ ನಿವಾಸದಲ್ಲಿದ್ದ 1500ಕ್ಕೂ ಹೆಚ್ಚು ಕ್ಯಾಸೆಟ್ ಗಳು ಮತ್ತಿತರ ವಸ್ತುಗಳು ಸಿಕ್ಕವರ ಪಾಲಾಗುತ್ತವೆ. ಅಲ್ಲಿನ ಕೆಲ ಕ್ಯಾಸೆಟ್ ಗಳು ಮಸಾಚುಸೆಟ್ಸ್ ನಲ್ಲಿರುವ ಆಫ್ಘನ್ ಮೀಡಿಯಾ ಪ್ರಾಜೆಕ್ಟ್ ನ ಕೈಸೇರುತ್ತದೆ. ಇಲ್ಲಿ ಅರೇಬಿಕ್ ಭಾಷೆ ತಜ್ಞ ಪ್ಲ್ಯಾಗ್ ಮಿಲ್ಲರ್ ಎಂಬುವವರು ಪರಿಶೀಲನೆ ನಡೆಸಿ ಒಂದು ಪುಸ್ತಕವನ್ನು ಪ್ರಕಟಿಸಿದ್ದಾನೆ. 
ದಿ ಔಡೇಷಿಯಸ್ ಅಸೆಟಿಕ್ ಎಂಬ ಈ ಪುಸ್ತಕದಲ್ಲಿ ಆತ ಲಾಡೆನ್ ಮತ್ತಿತರ ಜಿಹಾದಿಗಳ ಭಾಷಣಗಳನ್ನು ಪ್ರಸ್ತಾಪಿಸುತ್ತಾನೆ. 1960ರಿಂದ 2001ರವರೆಗೆ ಆಫ್ಘನ್ ನ ಉಗ್ರ ಮುಖಂಡರು ಮಾಡಿರುವ ಭಾಷಣಗಳ ಸಂಗ್ರಹ ಇಲ್ಲಿದೆ.
ಮಿಲ್ಲರ್ ಹೇಳುವ ಪ್ರಕಾರ, 1996ರವರೆಗೆ ಲಾಡೆನ್ ಮಾಡಿರುವ ಭಾಷಣದಲ್ಲಿ ಎಲ್ಲೂ ಹಿಂಸಾಚಾರದ ಬಗ್ಗೆ ಮಾತನಾಡಿಲ್ಲ. 1996ರಲ್ಲಿ ಲಾಡೆನ್ ನನ್ನು ಸುಡಾನ್ ನಿಂದ ಹೊರಹಾಕಿದ ಬಳಿಕ ಕ್ರೌರ್ಯದ ಉಕ್ತಿಗಳು ಬರುತ್ತವೆ ಎಂದು ಮಿಲ್ಲರ್ ಹೇಳುತ್ತಾನೆ.
SCROLL FOR NEXT