ಕಂದಹಾರ್: ಆಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಅವರು ಶಾಂತಿ ಮಾತುಕತೆಯನ್ನು ಪುನರಾರಂಭಿಸುತ್ತೇವೆ ಎಂದು ಘೋಷಣೆ ಮಾಡಿರುವಾಗಲೇ ಮಿಲಿಟರಿ ಯೂನಿಫಾರ್ಮ್ ನಲ್ಲಿ ಕಂದಹಾರ್ ವಿಮಾನ ನಿಲ್ದಾಣ ಮುತ್ತಿಗೆ ಹಾಕಿ ತಾಲಿಬಾನ್ ಉಗ್ರರು ಸ್ಫೋಟ ನಡೆಸಿ 37 ಮಂದಿಯನ್ನು ಕೊಂದು ಹಾಕಿದ್ದಾರೆ.
ಮೊನ್ನೆ ಮಂಗಳವಾರ ಸಂಜೆ 6 ಗಂಟೆಗೆ ಆರಂಭವಾದ ಯುದ್ಧ ನಿನ್ನೆಯವರೆಗೆ ಮುಂದುವರಿಯಿತು. ಅನೇಕ ಕುಟುಂಬ ಸದಸ್ಯರನ್ನು ಒತ್ತೆಯಾಳಾಗಿರಿಸಲಾಗಿದೆ. ವಿಮಾನ ನಿಲ್ದಾಣದ ಹತ್ತಿರದ ಸಂಕೀರ್ಣದೆಡೆಗೂ ದಾಳಿಯನ್ನು ತಾಲಿಬಾನಿ ಉಗ್ರರು ಮುಂದುವರಿಸಿದ್ದಾರೆ.
ಕೂಡಲೇ ಸೈನಿಕರು ಕಾರ್ಯಪ್ರವೃತ್ತರಾದರು. ಸೈನಿಕರ ಕಣ್ಣೆದುರೇ ಮಹಿಳೆಯರು ಮತ್ತು ಮಕ್ಕಳು ಚೀರಾಡುತ್ತಿರುವ ದೃಶ್ಯ ಮನಕಲಕುವಂತಿತ್ತು. ದಾಳಿಯಲ್ಲಿ 9 ಮಂದಿ ಉಗ್ರರನ್ನು ಸಾಯಿಸಲಾಗಿದೆ. ಒಬ್ಬ ಗಾಯಗೊಂಡಿದ್ದು, ಮತ್ತೊಬ್ಬ ಒತ್ತೆಯಾಳಾಗಿದ್ದಾನೆ.
ದಾಳಿಯಲ್ಲಿ 37 ಮಂದಿ ಮುಗ್ಧ ಅಫ್ಘನ್ ನಾಗರಿಕರು ಬಲಿಯಾಗಿದ್ದಾರೆ. 35 ಮಂದಿ ಗಾಯಗೊಂಡಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.