ಕಾಬೂಲ್: ಅಫ್ಘಾನಿಸ್ತಾನ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಅಲ್ಲಿನ ಸಂಸತ್ ಭವನ ಉದ್ಘಾಟಿಸಿ ಮಾತನಾಡಿದ್ದು, ಪಾಕಿಸ್ತಾನಕ್ಕೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಅಫ್ಘಾನಿಸ್ತಾನ ಉದ್ಧಾರವಾಗಬೇಕಾದರೆ ಮೊದಲು ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯನ್ನು ಮತ್ತಾ ಹಾಕಬೇಕು, ಹಾಗಾದರೆ ಮಾತ್ರ ಅಫ್ಘಾನಿಸ್ತಾನ ಅಭಿವೃದ್ಧಿ ಸಾಧ್ಯ ಎಂದಿದ್ದು, ಭಾರತ- ಅಫ್ಘಾನಿಸ್ಥಾನದ ಸೌಹಾರ್ದಯುತ ಸಂಬಂಧ ವೃದ್ಧಿಯಾಗುತ್ತಿರುವುದು ಕೆಲವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪರೋಕ್ಷವಾಗಿ ಪಾಕಿಸ್ತಾನಕ್ಕೆ ಟಾಂಗ್ ನೀಡಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ಗಟ್ಟಿಗೊಳ್ಳುತ್ತಿದೆ, ಬ್ಯಾಲೆಟ್ ನಿಂದ ಬುಲೆಟ್ ನ್ನು ಸೋಲಿಸಬಹುದು ಎಂಬುದನ್ನು ಅಫ್ಘಾನಿಸ್ತಾನದ ಜನತೆ ಅರ್ಥಮಾಡಿಕೊಂಡಿದ್ದಾರೆ, ಭಯೋತ್ಪಾದನೆ, ಹಿಂಸೆ ಅಫ್ಘಾನಿಸ್ತಾನದ ಭವಿಷ್ಯವನ್ನು ರೂಪಿಸುವುದಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ. ಕೆಲವರಿಗೆ ಭಾರತ- ಅಫ್ಘಾನಿಸ್ತಾನದ ದ್ವಿಪಕ್ಷೀಯ ಸಂಬಂಧ ಉತ್ತಮಗೊಳ್ಳುವುದು ಬೇಕಿಲ್ಲ, ಆದರೆ ಭಾರತದ ಮೇಲೆ ಅಫ್ಘಾನಿಸ್ತಾನ ಹೊಂದಿರುವ ವಿಶ್ವಾಸದ ಪರಿಣಾಮ ಇವತ್ತು ಸಂಸತ್ ಭವನ ಉದ್ಘಾಟನೆಯಾಗುತ್ತಿದ್ದು ಭಾರತ-ಅಫ್ಘಾನಿಸ್ತಾನ- ಇರಾನ್ ಒಂದಾಗುವ ಅಗತ್ಯವಿದೆ ಎಂದು ಮೋದಿ ಹೇಳಿದ್ದಾರೆ.